ಮಂಗಳವಾರ, ಜುಲೈ 14, 2020
27 °C

ಹಲಸಿನ ಮಂಡಳಿ ಸ್ಥಾಪನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲಸಿನ ಮಂಡಳಿ ಸ್ಥಾಪನೆಗೆ ಒತ್ತಾಯ

ಶಿರಸಿ: ~ಕೇಂದ್ರ ಸರ್ಕಾರ ನೆಲ್ಲಿ ಮಿಷನ್ ಮಾದರಿಯಲ್ಲಿ ಹಲಸಿನ ಮಿಷನ್ ಯೋಜನೆ ಪ್ರಾರಂಭಿಸಬೇಕು. ರಾಜ್ಯ ಸರ್ಕಾರ ಹಲಸು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು~ ಎಂದು ಶಿರಸಿಯಲ್ಲಿ ಆಯೋಜಿಸಿದ್ದ ಹಲಸಿನ ಮೇಳ ಒತ್ತಾಯಿಸಿದೆ.ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಎರಡು ದಿನಗಳ ಹಲಸಿನ ಮೇಳದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ಮೇಳದ ನಿರ್ಣಯಗಳನ್ನು ಮಂಡಿಸಿದರು.ಯಥೇಚ್ಛವಾಗಿ ಹಲಸು ಬೆಳೆಯುವ ರಾಜ್ಯದ ಯಾವುದಾದರೂ ಭಾಗದಲ್ಲಿ ಹಲಸು ಸಂಶೋಧನಾ ಕೇಂದ್ರ ಅಥವಾ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಸ್ಥಾಪಿಸಿ ಹಲಸಿನ ತಳಿ ಅಭಿವೃದ್ಧಿ, ಮೌಲ್ಯವರ್ಧನೆ, ತಂತ್ರಜ್ಞಾನ ಪ್ರಸರಣೆ ಕಾರ್ಯಕ್ರಮ ರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಕೊಳ್ಳಬೇಕು. ಹಲಸಿನ ಹಂಗಾಮಿನಲ್ಲಿ ಹಾಪಕಾಮ್ಸ ವತಿಯಿಂದ ಪ್ರತ್ಯೇಕ ಸಂಗ್ರಹಣಾ ಘಟಕ ಪ್ರಾರಂಭಿಸಿ ಮಾರಾಟ ವ್ಯವಸ್ಥೆಗೊಳಿಸಬೇಕು ಎಂದು ಆಗ್ರಹಿಸಲಾಯಿತು.ವಿನಾಶದ ಮತ್ತು ಅಪರೂಪದ ಹಲಸಿನ ತಳಿ ವೈವಿಧ್ಯ ಗುರುತಿಸಿ ದಾಖಲಿಸಬೇಕು. ಇಂತಹ ತಳಿಗಳ ಸಸ್ಯಗಳನ್ನು ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿ ಆಸಕ್ತ ರೈತರಿಗೆ ವಿತರಣೆ ಮಾಡಬೇಕು.ಹಲಸಿನ ಮೌಲ್ಯವರ್ಧನೆ ಕುರಿತು ವಿ.ವಿ.ಗಳು ಇನ್ನಷ್ಟು ಸಂಶೋಧನೆ ಕೈಕೊಂಡು ರೈತರಿಗೆ ತಲುಪಿಸಬೇಕು. ಹಲಸಿನ ಖಾದ್ಯಗಳನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಲು ವ್ಯವಸ್ಥಿತ ಮಾರುಕಟ್ಟೆ ಜಾಲ ಸರ್ಕಾರದ ಸಹಕಾರದೊಂದಿಗೆ ವಿಸ್ತರಣೆ ಆಗಬೇಕು. ಹಲಸಿನ ಸಂಸ್ಕರಣೆಗೆ ಬೇಕಾಗುವ ಯಂತ್ರೋಪಕರಣಗಳ ಮಾಹಿತಿ ರೈತರಿಗೆ ಲಭ್ಯವಾಗುವಂತಾಗಬೇಕು ಎಂಬ ನಿರ್ಣಯಗಳನ್ನು ಮೇಳ ಕೈಕೊಂಡಿದೆ.ಮುಖ್ಯ ಅತಿಥಿಯಾಗಿದ್ದ ಪರಿಸರ ಬರಹಗಾರ ಶಿವಾನಂದ ಕಳವೆ, ಹಲಸಿನ ತಳಿ ವೈವಿಧ್ಯಗಳ ಕೈಪಿಡಿ ರಚನೆಯಾಗಬೇಕು. ಹಲಸು ಕೃಷಿಕರ ವಿಚಾರ ವಿನಿಮಯವಾಗಬೇಕು ಎಂದರು. ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಆರ್. ವಾಸುದೇವ, `ಹಲಸಿಗೆ ಮೌಲ್ಯ ಕಟ್ಟಲು ನಮ್ಮ ಮೂಲ ಮನೋಸ್ಥಿತಿ ಬದಲಾಗಬೇಕು~ ಎಂದರು.ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ, ವಿಜ್ಞಾನಿ ಕೇಶವ ಕೊರ್ಸೆ, ಧಾರವಾಡ ಕೃಷಿ ವಿ.ವಿ.ಯ ಸಂಶೋಧನಾ ವಿಭಾಗದ ಮುಖ್ಯಸ್ಥ ಪಿ.ಎಂ.ಸಾಲಿಮಠ, ಕೃಷಿ ವಿಜ್ಞಾನ ಕೇಂದ್ರದ ಹೇಮಂತ ಹೆಗಡೆ ಉಪಸ್ಥಿತರಿದ್ದರು. ವಿನುತಾ ಮುಕ್ತಾಮಠ ನಿರೂಪಿಸಿದರು. ವಿಶ್ವೇಶ್ವರ ಭಟ್ಟ ವಂದಿಸಿದರು.ಪ್ರಾತ್ಯಕ್ಷಿಕೆ: ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಪ್ರಾಧ್ಯಾಪಕ ಎ.ಎಲ್. ಜಗದೀಶ ಹಲಸಿನ ಬೇಸಾಯ ಕುರಿತು ಮಾಹಿತಿ ನೀಡಿದರು. ಮಮತಾ ಹೆಗಡೆ ಶಮೇಮನೆ ಹಲಸಿನ ವಿವಿಧ ಅಡುಗೆಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಮಧ್ಯಾಹ್ನದ ಹಲಸಿನ ಹಳ್ಳಿ ಅಡುಗೆಮನೆಯಲ್ಲಿ ನೂರಾರು ಹಲಸು ಪ್ರಿಯರು ಹಲಸಿನ ಮೃಷ್ಟಾನ್ನ ಸವಿದರು.ಶೀಘ್ರವೇ ಹೊಸ ಉತ್ಪನ್ನ: ಹಲಸಿನ ಹಪ್ಪಳ, ಚಿಪ್ಸ್ ಖರೀದಿಸುತ್ತಿರುವ ಕದಂಬ ಮಾರ್ಕೆಟಿಂಗ್ ಸಹಕಾರಿ ಹಸಿ ಹಲಸಿನ ಬೀಜಗಳನ್ನು ಖರೀದಿಸಲಿದೆ. ಹಲಸಿನ ಹೊಸ ಉತ್ಪನ್ನಗಳನ್ನು ಸದ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ ಪ್ರಕಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.