ಸೋಮವಾರ, ಮೇ 17, 2021
21 °C

ಹಳತು-ಹೊಸತು ಸಮ್ಮಿಲನ ಈ ಮನೆ

ಚಿತ್ರ-ಲೇಖನ ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಮನೆ ಎಂದರೆ `ಮನೆ'ಯ ಹಾಗೇ ಇರಬೇಕು... ಚೆನ್ನಾಗಿ ಗಾಳಿ-ಬೆಳಕು ಬರುತ್ತಿರಬೇಕು. ಸುತ್ತಲೂ ಹಸಿರು ಚೆಲ್ಲುವ ಗಿಡಮರಗಳು ಇರಬೇಕು. ನಾವು ವಾಸಿಸುವ ಪರಿಸರದ ಜತೆಗೆ ತಾನೂ ಒಂದಾಗಿ ಮಿಳಿತಗೊಳ್ಳಬೇಕು. ಮುಖ್ಯವಾಗಿ ಮನೆಯೊಳಗೆ ಬೆಚ್ಚನೆಯ ಸ್ಪರ್ಶದ ಭಾವ ಸಿಗುವಂತಿರಬೇಕು...ಇಂಥ ಅಂಶಗಳೆಲ್ಲವೂ ಇರುವ ವಿಶಿಷ್ಟ ಶೈಲಿಯ ಮನೆ `ಸಂಪಿಗೆ', ಮೈಸೂರಿನ ಬೋಗಾದಿ ರಿಂಗ್ ರಸ್ತೆ ಹತ್ತಿರದ ಬ್ಯಾಂಕ್ ಕಾಲೊನಿಯ ಐದನೇ ಮುಖ್ಯರಸ್ತೆ 9ನೇ ಅಡ್ಡುರಸ್ತೆಯಲ್ಲಿದೆ.ಈ ಮನೆಯ ಅಂಗಳದಲ್ಲಿ ಕಣ್ಣಿಗೆ ತಂಪೆರೆವ ಹಸಿರು... ಒಳಹೊಕ್ಕರೆ ಹಕ್ಕಿಗಳ ಚಿಲಿಪಿಲಿ ಸ್ವಾಗತ... ಬಹಳ ಸುಂದರವಾದ ವಿನ್ಯಾಸ...ಮೊದಲ ನೋಟಕ್ಕೆ ಎದ್ದು ಕಾಣುವ ಮನೆಯ ಈ ಅಂಶಗಳೇ ಮನಕ್ಕೆ ಮುದ ನೀಡುತ್ತವೆ.ಒಳಹೋಗುತ್ತಿದ್ದಂತೆಯೇ ಪುಟ್ಟದಾಗಿ ತೆರೆದುಕೊಳ್ಳುವ ಮನೆಯ ಆವರಣ, ನೆಲದ ಗುಣಕ್ಕೆ ಹತ್ತಿರವಾದ ಬಣ್ಣಗಳು, ಆಕರ್ಷಕ ನೆಲಹಾಸು(ಟೈಲ್ಸ್), ಯಥೇಚ್ಛವಾಗಿ ಒಳನುಗ್ಗಿಬರುವ ಗಾಳಿ-ಬೆಳಕು, ಮೊದಲ ಮಹಡಿಯಲ್ಲಿನ ಪುಟ್ಟ ಬಾಲ್ಕನಿಗಳು, ವಿಶಾಲವಾದ ಟೆರೇಸ್, ಮನೆ ಎಂದರೆ ಕೇವಲ ಸಿಮೆಂಟು, ಇಟ್ಟಿಗೆ, ಮರಳು, ಕಬ್ಬಿಣದ ಮಿಶ್ರಣವಲ್ಲ, ಅಲ್ಲೊಂದು ಭಿನ್ನ ನೋಟ, ಹೊಸತೇ ಆದ ಭಾವ, ನೋಡುವ ಕಣ್ಣು ಮತ್ತು ಮನಸ್ಸಿಗೆ ಹಿತವಾದ ಅಂಶಗಳು.. `ಸುಂದರ ಗೃಹ'ದ ಕಲ್ಪನೆಯನ್ನು ಸಾಕಾರಗೊಳಿಸುವ ಭವನ.ನಿಸರ್ಗದತ್ತ ಗಾಳಿ-ಬೆಳಕು ಯಥೇಚ್ಛವಾಗಿ ಒಳಬರುವಂತಹ ವಿಶಾಲವಾದ ಮನೆಯನ್ನು ವಿಶೇಷವಾದ ಶೈಲಿಯಲ್ಲಿ ಕಟ್ಟಬೇಕು. ಹಾಗೆ ನಿರ್ಮಿಸುವುದೇ `ವಾಸ್ತು' ಎಂದು ಅರಿತವರು ಅಪರೂಪ. ಅಂಥ ಅಪರೂಪದವರಲ್ಲಿ ಮೈಸೂರಿನ ವಾಸ್ತುಶಿಲ್ಪಿ ಮೆರಿನಾ ಪ್ರಸಾದ್ ಒಬ್ಬರು. ಅವರ `ಸಂಪಿಗೆ' ಮನೆ ಪರಿಸರ ಸ್ನೇಹಿ.ಸಂಪಿಗೆಯ ಅಂಗಳದ ತುಂಬಾ ಹಸಿರಿಗೆ ಹೆಚ್ಚು ಅವಕಾಶವಿದೆ. ಅಲ್ಲಿನ ಗಿಡ, ಮರಗಳಲ್ಲಿ ಪುಟ್ಟ ಪಕ್ಷಿಗಳ ಚಿಲಿಪಿಲಿ ಗಾಯನವಿದೆ. 48 ಅಡಿ ಅಗಲ ಹಾಗೂ 60 ಅಡಿ ಉದ್ದದ ನಿವೇಶನದಲ್ಲಿ 1700 ಚದರಡಿಯಲ್ಲಿ ಮಾತ್ರ ಮನೆ ನಿರ್ಮಿಸಲಾಗಿದೆ. ಜಗುಲಿ ಹಾಗೂ ವರಾಂಡ ಸೇರಿದರೆ ಒಟ್ಟಾರೆ ಮನೆಯ ಆವರಣ 2400 ಚದರಡಿ ಇದೆ.ನಾಲ್ಕು ವರ್ಷಗಳ ಹಿಂದೆ  ್ಙ 20 ಲಕ್ಷ ವೆಚ್ಚದಲ್ಲಿ, ಹಳ್ಳಿ ಹಾಗೂ ನಗರ ಶೈಲಿಯನ್ನು ಮೇಳೈಸಿ ಕಟ್ಟಿದ ಮನೆ ಇದು. ದುಬಾರಿ ಇಟ್ಟಿಗೆ ಬಳಸಿಲ್ಲ. ಅಗತ್ಯವಿದ್ದಲ್ಲಿ ಮಾತ್ರ ಪ್ಲಾಸ್ಟರಿಂಗ್ ಮಾಡಲಾಗಿದೆ. ಚೆಂದದ ಬಾಹ್ಯ ನೋಟಕ್ಕಾಗಿ ಅಲ್ಲಲ್ಲಿ ಕಲ್ಲುಗಳನ್ನು ಬಳಸಲಾಗಿದೆ. ಆವರಣದ ಗೋಡೆಯಿಂದ ಹಿಡಿದು ಮನೆಯ ಹೊರಗೋಡೆಗೆ ಬಾಗಲಕೋಟೆಯಿಂದ ತರಿಸಿದ ದೊಡ್ಡ ಕಲ್ಲುಗಳನ್ನು ಬಳಸಲಾಗಿದೆ. ಅಲ್ಲಿಂದಲೇ ಆಗಮಿಸಿದ ಕಾರ್ಮಿಕರು ಮಧ್ಯೆಮಧ್ಯೆ ಸಣ್ಣ ಕಲ್ಲುಗಳನ್ನೂ ಬಳಸಿ ಕಟ್ಟಡವನ್ನು ಚೆಂದಗಾಣಿಸಿದ್ದಾರೆ.ಉತ್ತರ ಕರ್ನಾಟಕದಲ್ಲಿ ಸಿಮೆಂಟ್ ಬಳಸದೆ ಕಲ್ಲುಗಳನ್ನು ಜೋಡಿಸುತ್ತಾ ಮನೆಗಳನ್ನು ನಿರ್ಮಿಸುವುದನ್ನು ಕಂಡಿದ್ದ ಮೆರಿನಾ ಹಾಗೂ ನಿರಂತರ ರಂಗ ಸಂಸ್ಥೆಯ ಪ್ರಸಾದ್ ಕುಂದೂರು ದಂಪತಿಗೆ, ಅದೇ ಶೈಲಿಯ ಸ್ವಲ್ಪ ಅಂಶವಾದರೂ ತಮ್ಮ ಮನೆಯಲ್ಲಿ ಗೋಚರಿಸಲಿ ಎಂದು ಕಲ್ಲಿನ ಚೂರುಗಳನ್ನು ಬಳಸಿದ್ದಾರೆ.ಕಡಪಾ, ಬೇತಂಚೆರ್ಲ ಹಾಗೂ ಸಾದರಹಳ್ಳಿ ಕಲ್ಲುಗಳನ್ನೂ ಅಲ್ಲಲ್ಲಿ ಭಿನ್ನ ವಿನ್ಯಾಸಕ್ಕಾಗಿ ಬಳಸಲಾಗಿದೆ. ಮನೆಯ ಇಡೀ ಫ್ಲೋರಿಂಗ್‌ಗೆ(ನೆಲಹಾಸು) ಆತಂಗುಡಿ ಸಿಮೆಂಟ್ ಟೈಲ್ಸ್(ಮಧುರೈ ಬಳಿಯ ಕಾರೈಕುಡಿ ಹತ್ತಿರ) ಉಪಯೋಗಿಸಲಾಗಿದೆ. ಹಳದಿ, ಕೆಂಪು, ಬಿಳಿ ಹಾಗೂ ಹಸಿರು ಬಣ್ಣಗಳನ್ನು ಒಳಗೊಂಡ, ಮುಖ್ಯವಾಗಿ ಕೈಯಿಂದಲೇ ಸಿದ್ಧಪಡಿಸುವ `ಆತಂಗುಡಿ ಟೈಲ್ಸ್'ಗಳನ್ನು ನೆಲಕ್ಕೆ ಜೋಡಿಸಲಾಗಿರುವುದು ಮನೆಯ ಒಟ್ಟಾರೆ ಅಂದವನ್ನು ಹೆಚ್ಚಿಸಿದೆ. ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆಯ ಸೌಂದರ್ಯದ ಸೂಕ್ಷ್ಮ ಬಳಕೆಯೂ ಇಲ್ಲಿ ಆಗಿದೆ ಎಂಬುದು ವಿಶೇಷ.`ಈ ಬಗೆಯ ಟೈಲ್ಸ್‌ಗಳದ್ದು 500-600 ವರ್ಷಗಳ ಪರಂಪರೆ. ಈ ಬಗೆಯ ಟೈಲ್ಸ್ ಬಳಸಿದರೆ ಬೇಗ ಬಣ್ಣಗೆಡುವುದಿಲ್ಲ. ನೆಲವೂ ತಂಪಾಗಿರುತ್ತದೆ. ಆತಂಗುಡಿ ಟೈಲ್ಸ್ ಸುಂದರವಷ್ಟೇ ಅಲ್ಲ, ಕಡಿಮೆ ವೆಚ್ಚದ್ದು, ನಿರ್ವಹಣೆ ಶ್ರಮವೂ ಕಡಿಮೆ. ಮಂಗಳೂರು ಹೆಂಚು ಬಳಸಿದ್ದರಿಂದ ಬಿಸಿಲ ಝಳ ಅಷ್ಟಾಗಿ ತಾಗುವುದಿಲ್ಲ' ಎನ್ನುತ್ತಾರೆ ಪ್ರಸಾದ್ ಕುಂದೂರು.`ಸಂಪಿಗೆ' ಮನೆಗೆ ಅಗತ್ಯವಿದ್ದಲ್ಲಿ ಮಾತ್ರವೇ ಮರಮುಟ್ಟು ಬಳಸಲಾಗಿದೆ. ಮಾಸ್ಟರ್ ಬೆಡ್‌ರೂಂನಲ್ಲಿ ಮಲಗಲು ಮಂಚವಿಲ್ಲ. ಬದಲು ಸಿಮೆಂಟಿನ ಕಟ್ಟೆ ಕಟ್ಟಲಾಗಿದೆ. ದೊಡ್ಡದಾದ ಬಾಗಿಲು, ಕಿಟಕಿಗಳು ಇಲ್ಲಿಲ್ಲ. ಇರುವುದೆಲ್ಲ ಚಿಕ್ಕ ಕಿಟಕಿಗಳೇ. ತಮಿಳುನಾಡಿನ ಚೆಟ್ಟಿನಾಡು ಪ್ರದೇಶದ ಕಾರೈಕುಡಿಯಿಂದ ಹಳೆಯ ಕಂಬ, ಬೋದಿಗೆಗಳನ್ನು ತಂದು ಅಲಂಕಾರಿ ಶೈಲಿಯಲ್ಲಿ ಛಾವಣಿಗೆ ಆಧಾರವಾಗುವಂತೆ ಜೋಡಿಸಲಾಗಿದೆ. ಈ ಕಂಬಗಳನ್ನು ನಿಲ್ಲಿಸಲು ಕಲ್ಲಿನ ಪೀಠಗಳನ್ನು ಬಳಸಲಾಗಿದೆ. ಕಾರೈಕುಡಿಯಿಂದ ಕಲಾತ್ಮಕ ಬಾಗಿಲುಗಳನ್ನೂ ತಂದು ಸಿಂಗರಿಸಲಾಗಿದೆ. ಇದರಿಂದ ಸಾಂಪ್ರದಾಯಿಕ ಮನೆಗಳನ್ನು ಉಳಿಸಿದ ಹಾಗೂ ಆಗಿದೆ.ಇಡೀ ಮನೆ ಶೋಧಿಸಿದರೆ ಗೋಡೆಗಳೇ ಕಡಿಮೆ ಇವೆ ಎನಿಸುತ್ತದೆ. ಮನೆಯೊಳಗೆ ಅಲ್ಲಲ್ಲಿ ಕಲ್ಲಿನ ಕಟ್ಟೆಗಳಿವೆ. ತಾರಸಿಗೆ ಫಿಲ್ಲರ್ಸ್‌ ಸ್ಲ್ಯಾಬ್ ಮಾಡಿದ್ದಾರೆ. ಇದರಿಂದ ಬಿಸಿಲಿನ ಶಾಖ ಹೀರಲು ಸಾಧ್ಯವಾಗುತ್ತದೆ. ಟೆರ್ರಾಕೋಟ ಸ್ಪಿಟ್ ಟೈಲ್ಸ್ ಬಳಸಿದ್ದರಿಂದ ಬಿರುಕು ಹಾಗೂ ನೀರು ಸೋರಿಕೆಯಿಲ್ಲ. ಸಹಜ ಬೆಳಕಿಗೆ ಅಲ್ಲಲ್ಲಿ ಸ್ಕೈ ಲೈಟ್ ವಿನ್ಯಾಸ ಅಳವಡಿಸಿಕೊಂಡಿರುವುದರಿಂದ ಮನೆ ತುಂಬಾ ವಿವಿಧ ಕೋನಗಳಲ್ಲಿ ಬೆಳಕು ಚೆಲ್ಲುವಂತಾಗಿದೆ.ಮನೆ ಸುತ್ತ ಕೈತೋಟ. ಮನೆಗೆ ಬೇಕಾದ ತರಕಾರಿ ಇಲ್ಲಿಯೇ ಬೆಳೆಯಲಾಗುತ್ತಿದೆ. ತರಕಾರಿ ತ್ಯಾಜ್ಯ ಹಾಗೂ ಒಣಗಿದ ಎಲೆಗಳೇ ಗೊಬ್ಬರ. ಮುಂದೆ ಪಾತ್ರೆ ತೊಳೆದ ನೀರು, ಸ್ನಾನದ ಮನೆ ನೀರನ್ನು ಕೈತೋಟಕ್ಕೆ ಬಳಸುವ ಯೋಜನೆ ಮನೆ ಮಾಲೀಕರದ್ದು.`ಮನೆ ಕಟ್ಟುವ ಮುನ್ನ ಸರಿಯಾಗಿ ಯೋಜಿಸಬೇಕು. ಜಾಣತನದಿಂದ ಸಾಮಗ್ರಿ ಬಳಸಿದರೆ ವೆಚ್ಚ ಕಡಿಮೆಯಾಗುತ್ತದೆ. ಪದೇ ಪದೇ ಮನೆಯ ಯೋಜನೆ ಬದಲಾಯಿಸಬಾರದು. ನಿರ್ಮಾಣ ಹಂತದಲ್ಲಿ ಕೆಲಸಗಾರರನ್ನೂ ಬದಲಾಯಿಸಬಾರದು. ವಾಸ್ತುವಿನ ಬೆನ್ನು ಹತ್ತಬಾರದು. ಗಾಳಿ-ಬೆಳಕು ಎಲ್ಲಿಂದ ಬರುತ್ತದೆ ಎಂದು ಅರಿತು ಮನೆ ಕಟ್ಟಿಸುವುದೇ ವಾಸ್ತು' ಎನ್ನುತ್ತಾರೆ ಮೆರಿನಾ ಪ್ರಸಾದ್.ನಮ್ಮ ಬಾಲ್ಯದ ನೆನಪುಗಳು ನಾವು ಕಟ್ಟಿಸುವ ಮನೆಗಳಲ್ಲಿ ಹರಿದಾಡಬೇಕು ಎನ್ನುವುದು ಈ ದಂಪತಿಯ ನಂಬಿಕೆ. ಇದು ಚಿಕ್ಕಮನೆಯೂ ಹೌದು, ದೊಡ್ಡಮನೆಯೂ ಹೌದು. ಕಲಾತ್ಮಕತೆ ಈ ಮನೆಯ ವಿಶೇಷ. `ಹಾಗಾಗಿ ಮನೆ ನೋಡಲು ನಿತ್ಯ ವಾಸ್ತುಶಿಲ್ಪ ವಿದ್ಯಾರ್ಥಿಗಳು, ಮನೆ ಕಟ್ಟುವ ಬಯಕೆ ಉಳ್ಳವರು, ಆಸಕ್ತರು... ಹೀಗೆ ಭೇಟಿ ಮಾಡುತ್ತಲೇ ಇರುತ್ತಾರೆ' ಎನ್ನುತ್ತಾರೆ ಪ್ರಸಾದ್ ಕುಂದೂರು.ಹಳೆಯ ಕಾಲದ ಮನೆಗಳ ಬೆಚ್ಚನೆಯ ಸ್ಪರ್ಶ ಹಾಗೂ ಆಧುನಿಕ ವಾಸ್ತು ವಿನ್ಯಾಸದ ಸೌಕರ್ಯ- ಈ ಎರಡೂ ಅಂಶಗಳು ಈ ಮನೆಯಲ್ಲಿ ಹದವಾಗಿ ಬೆರೆತಿವೆ.ಆತಂಗುಡಿ ಟೈಲ್ಸ್

ಹಳದಿ, ಕೆಂಪು, ಬಿಳಿ ಹಾಗೂ ಹಸಿರು ಬಣ್ಣಗಳನ್ನು ಒಳಗೊಂಡ ಮುಖ್ಯವಾಗಿ ಕೈಯಿಂದ ಮಾಡುವ ಆತಂಗುಡಿ ಟೈಲ್ಸ್‌ಗಳನ್ನು ನೆಲಕ್ಕೆ ಹಾಕಿದ್ದು ನೋಡಲು ಸುಂದರ. `ಈ ಬಗೆಯ ಟೈಲ್ಸ್‌ಗಳನ್ನು ಬಳಸಿದ ಉದ್ದೇಶ ಯಾಕೆಂದರೆ 500-600 ವರ್ಷಗಳ ಪರಂಪರೆಯದು. ಈ ಬಗೆಯ ಟೈಲ್ಸ್ ಬಳಸಿದರೆ ಬೇಗ ಬಣ್ಣಗೆಡುವುದಿಲ್ಲ. ನೆಲ ತಂಪಾಗಿರುತ್ತದೆ. ಈಗೀಗ ಗ್ರಾನೈಟ್ ಹಾಗೂ ಮಾರ್ಬಲ್ ಶ್ರೇಷ್ಠ ಅಂದುಕೊಂಡವರೇ ಹೆಚ್ಚು. ಆದರೆ ಆತಂಗುಡಿ ಟೈಲ್ಸ್ ನಿರ್ವಹಣೆ ಕಡಿಮೆ. ದುಬಾರಿಯಲ್ಲ.ಮಂಗಳೂರು ಹೆಂಚು ಬಳಸಿದ್ದರಿಂದ ಬಿಸಿಲ ಝಳ ಅಷ್ಟಾಗಿ ತಾಗುವುದಿಲ್ಲ. ಕಟ್ಟಿಗೆಯನ್ನು ಅಗತ್ಯವಿದ್ದಲ್ಲಿ ಮಾತ್ರ ಬಳಸಿದ್ದಾರೆ. ದೊಡ್ಡ ದೊಡ್ಡ ಬಾಗಿಲು, ಕಿಟಕಿಗಳಿಲ್ಲ. ಆದರೆ ಚಿಕ್ಕ ಚಿಕ್ಕ ಕಿಟಕಿಗಳಿವೆ. ಇದರಿಂದ ಗಾಳಿ ಹೆಚ್ಚು ಬರುತ್ತದೆ. ತಮಿಳುನಾಡಿನ ಚೆಟ್ಟಿನಾಡು ಪ್ರದೇಶದ ಕಾರೈಕುಡಿಯಿಂದ ಹಳೆಯ ಕಂಬ, ಬೋದಿಗೆಗಳನ್ನು ತಂದು ಅಲಂಕರಿಸಿದ್ದಾರೆ. ಇವುಗಳನ್ನು ನಿಲ್ಲಿಸಲು ಕಲ್ಲಿನ ಪೀಠಗಳನ್ನು ಬಳಸಿದ್ದಾರೆ. ಕಲಾತ್ಮಕ ಬಾಗಿಲುಗಳನ್ನೂ ಕಾರೈಕುಡಿಯಿಂದಲೇ ತಂದು ಸಿಂಗರಿಸಿದ್ದಾರೆ. ಇದರಿಂದ ಸಾಂಪ್ರದಾಯಿಕ ಮನೆಗಳನ್ನು ಉಳಿಸಿದ ಹಾಗೂ ಹಾಗಿದೆ.ಮಾಸ್ಟರ್ ಬೆಡ್‌ರೂಂನಲ್ಲಿ ಮಲಗಲು ಮಂಚವಿಲ್ಲ. ಅದರ ಬದಲು ಸಣ್ಣ ಕಟ್ಟೆ ಕಟ್ಟಿದ್ದಾರೆ. ಇದರಿಂದ ಮಂಚದ ವೆಚ್ಚ ಕೂಡಾ ಉಳಿದಿದೆ. ಇಡೀ ಮನೆಗೆ ಗೋಡೆಗಳೇ ಕಡಿಮೆ. ಮನೆಯೊಳಗೆ ಅಲ್ಲಲ್ಲಿ ಕಲ್ಲಿನ ಕಟ್ಟೆಗಳಿವೆ. ತಾರಸಿಗೆ ಫಿಲ್ಲರ್ಸ್‌ ಸ್ಲ್ಯಾಬ್ ಮಾಡಿದ್ದಾರೆ. ಇದರಿಂದ ಬಿಸಿಲಿನ ಶಾಖ ಹೀರಲು ಸಾಧ್ಯವಾಗುತ್ತದೆ. ಟೆರ್ರಾಕೊಟ ಸ್ಲಿ ಹಾಗೂ ಸ್ಪಿಟ್ ಟೈಲ್ಸ್ ಬಳಸಿದ್ದರಿಂದ ಬಿರುಕು ಹಾಗೂ ನೀರು ಸೋರಿಕೆಯಿಲ್ಲ. ಸಹಜ ಬೆಳಕಿಗೆ ತಾರಸಿಗೆ ಸ್ಕೈ ಲೈಟ್ ಬಳಸಿದ್ದರಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ದೀಪಗಳನ್ನು ಬಳಸುವ ಅಗತ್ಯ ಅವರಿಗಿಲ್ಲ. ಬಿಸಿನೀರು ಹಾಗೂ ವಿದ್ಯುತ್ ಅಡಚಣೆಯಾದಾಗ ಅಗತ್ಯಕ್ಕೆ ಸೋಲಾರ್ ಇದೆ.

 

ಮನೆಯ ಸುತ್ತ ಕೈತೋಟವಿದೆ. ಮನೆಗೆ ಬೇಕಾದ ತರಕಾರಿ ಇಲ್ಲಿಯೇ ಬೆಳೆಯಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ವೆಚ್ಚವಿಲ್ಲ. ತರಕಾರಿ ತ್ಯಾಜ್ಯ ಹಾಗೂ ಒಣಗಿದ ಎಲೆಗಳೇ ಗೊಬ್ಬರ. ಇನ್ನು ಮುಂದೆ ಪಾತ್ರೆ ತೊಳೆದ ನೀರು ಹಾಗೂ ಬಚ್ಚಲು ಮನೆಯ ನೀರನ್ನು ಮರು ಬಳಸುವ ಯೋಜನೆ ಅವರದು.`ಮನೆ ಕಟ್ಟುವ ಮುನ್ನ ಸರಿಯಾಗಿ ಯೋಜಿಸಬೇಕು. ಜಾಣತನದಿಂದ ಸಾಮಗ್ರಿಗಳನ್ನು ಬಳಸಿದರೆ ವೆಚ್ಚ ಕಡಿಮೆಯಾಗುತ್ತದೆ. ಪದೇ ಪದೇ ಮನೆಯ ಯೋಜನೆ ಬದಲಾಯಿಸಬಾರದು. ಕೆಲಸಗಾರರನ್ನೂ ಬದಲಾಯಿಸಬಾರದು. ವಾಸ್ತುವಿನ ಭೂತ ಬೆನ್ನು ಹತ್ತಬಾರದು. ಗಾಳಿ-ಬೆಳಕು ಎಲ್ಲಿಂದ ಬರುತ್ತದೆ ಎಂದು ಅರಿತು ಮನೆ ಕಟ್ಟಿಸುವುದೇ ವಾಸ್ತು' ಎನ್ನುತ್ತಾರೆ ಮೆರಿನಾ ಪ್ರಸಾದ್.`ನಮ್ಮ ಬಾಲ್ಯದ ನೆನಪುಗಳು ನಾವು ಕಟ್ಟಿಸುವ ಮನೆಗಳಲ್ಲಿ ಹರಿದಾಡಬೇಕು ಎನ್ನುವುದು ನಮ್ಮ ನಂಬಿಕೆ. ಇದು ಚಿಕ್ಕಮನೆಯೂ ಹೌದು, ದೊಡ್ಡಮನೆಯೂ ಹೌದು. ಕಲಾತ್ಮಕತೆ ಈ ಮನೆಯ ವಿಶೇಷ. ಹಾಗಾಗಿ ಮನೆ ನೋಡಲು ನಿತ್ಯ ವಾಸ್ತುಶಿಲ್ಪ ವಿದ್ಯಾರ್ಥಿಗಳು, ಮನೆ ಕಟ್ಟುವ ಬಯಕೆ ಉಳ್ಳವರು... ಹೀಗೆ ನೂರಾರು ಜನರು ಬರುತ್ತಲೇ ಇರುತ್ತಾರೆ' ಎನ್ನುತ್ತಾರೆ ಪ್ರಸಾದ್ ಕುಂದೂರು. ಹಳೆಯ ಕಾಲದ ಮನೆಗಳ ಬೆಚ್ಚನೆ ಸ್ಪರ್ಶ ಹಾಗೂ ಆಧುನಿಕ ವಾಸ್ತು ವಿನ್ಯಾಸದ ಸೌಕರ್ಯ- ಈ ಎರಡೂ ಅಂಶಗಳು ಈ ಮನೆಯಲ್ಲಿ ಹದವಾಗಿ ಬೆರೆತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.