ಶುಕ್ರವಾರ, ಮೇ 14, 2021
29 °C

ಹಾಕಿ: ಭಾರತ ವನಿತೆಯರಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಮಹಿಳಾ ತಂಡದವರು ನ್ಯೂಜಿಲೆಂಡ್‌ನಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಪದಕ ಪಡೆಯದೆ ನಿರಾಸೆ ಅನುಭವಿಸಿದರು. ಆಕ್ಲೆಂಡ್‌ನ ಹಾರ್ಬರ್ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮೆರಿಕ 2-1 ಗೋಲುಗಳಿಂದ ಭಾರತವನ್ನು ಮಣಿಸಿತು.ನಿಗದಿತ ಅವಧಿಯಲ್ಲಿ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು. ಇದರಿಂದ ವಿಜೇತರ ನಿರ್ಣಯಕ್ಕೆ ಹೆಚ್ಚುವರಿ ಸಮಯದ ಮೊರೆ ಹೋಗಲಾಯಿತು. ಈ ಅವಧಿಯ ಮೂರನೇ ನಿಮಿಷದಲ್ಲಿ ಅಮೆರಿಕಕ್ಕೆ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ತಂಡದ ನಾಯಕಿ ಲಾರೆನ್ ಕ್ರಾಂಡಾಲ್ `ಗೋಲ್ಡನ್ ಗೋಲು~ ಗಳಿಸಿ ಅಮೆರಿಕದ ಗೆಲುವಿಗೆ ಕಾರಣರಾದರು.ಈ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ಆರಂಭದಿಂದಲೇ ರಕ್ಷಣೆಗೆ ಹೆಚ್ಚು ಒತ್ತು ನೀಡಿದವು. ಇದರಿಂದ ಮೊದಲ ಅವಧಿ ಗೋಲುರಹಿತ   ವಾಗಿತ್ತು. ಆದರೆ 47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಶಾನನ್ ಟೇಲರ್ ಅಮೆರಿಕಕ್ಕೆ ಮೇಲುಗೈ ತಂದಿತ್ತರು. ಮರುಹೋರಾಟ ನಡೆಸಿದ ಭಾರತ 56ನೇ ನಿಮಿಷದಲ್ಲಿ ಚಂಚನ್ ತಾಕ್‌ಚೊಮ್ ಗಳಿಸಿದ ಗೋಲಿನ ನೆರವಿನಿಂದ ಸಮಬಲ ಸಾಧಿಸಿತು.ಆ ಬಳಿಕ ಅಮೆರಿಕ ತಂಡಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದವು. ಆದರೆ ಒಂದರಲ್ಲೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇದರಿಂದ ಪಂದ್ಯ ಹೆಚ್ಚುವರಿ ಅವಧಿಗೆ ಮುಂದುವರಿಯಿತು.ನ್ಯೂಜಿಲೆಂಡ್‌ಗೆ ಚಿನ್ನ: ಆತಿಥೇಯ ನ್ಯೂಜಿಲೆಂಡ್ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಫೈನಲ್‌ನಲ್ಲಿ ಕಿವೀಸ್ ವನಿತೆಯರು 3-2 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರು.ನಾಲ್ಕು ರಾಷ್ಟ್ರಗಳ ನಡುವಿನ ಎರಡನೇ ಹಂತದ ಟೂರ್ನಿ ಏಪ್ರಿಲ್ 18 ರಿಂದ 22ರ ವರೆಗೆ ನಡೆಯಲಿದೆ. ಬುಧವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಅಮೆರಿಕವನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.