ಮಂಗಳವಾರ, ಮೇ 17, 2022
28 °C

ಹಾಡು ಕೋಗಿಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಯನ ಗಂಗಾ ಟ್ರಸ್ಟ್: ಶನಿವಾರ ಹಾಡು ಕೋಗಿಲೆ ಗೀತೋತ್ಸವ. ಯಶವಂತ ಹಳಿಬಂಡಿ, ಮೃತ್ಯುಂಜಯ ದೊಡ್ಡವಾಡ, ಮಾಲಿನಿ ಕೇಶವಪ್ರಸಾದ್, ಕೆ. ಛಾಯಾಪತಿ, ರಂಜಿತಾ, ರೋಹಿಣಿ ಮೋಹನ್, ಶಮಿತಾ ಮಲ್ನಾಡ್, ಆನಂದ ಮಾದಲಗೆರೆ, ಪ್ರವೀಣ್‌ಕುಮಾರ್, ದೀಪಿಕಾ ಮತ್ತು ಸ್ಪರ್ಶಾ ಅವರಿಂದ ಇಂದೂ ವಿಶ್ವನಾಥ್ ಸಂಯೋಜನೆಯ ಗೀತೆಗಳ ಗಾಯನ. ಶಶಿಧರ್ (ಸ್ವರಮಣಿ), ಶಿವಲಿಂಗು (ಕೊಳಲು), ಅಭಿಷೇಕ್ (ಲಯವಾದ್ಯ), ರಾಘವೇಂದ್ರ ಜೋಷಿ (ತಬಲಾ).ಗಾಯಕಿ, ಸಂಗೀತ ನಿರ್ದೇಶಕಿ ಇಂದೂ ವಿಶ್ವನಾಥ್ ಅವರಿಗೆ `ಸ್ವರ ಸಾಮ್ರಾಟ್~ ಪ್ರಶಸ್ತಿ ಪ್ರದಾನ. ಅತಿಥಿಗಳು: ವೈ.ಕೆ. ಮುದ್ದುಕೃಷ್ಣ, ಡಾ.ಬೈರಮಂಗಲ ರಾಮೇಗೌಡ, ಸತೀಶ ಹಂಪಿಹೊಳಿ, ಭಗಿನಿ ವನಿತಾ, ಡಾ.ವೇಮಗಲ್ ನಾರಾಯಣಸ್ವಾಮಿ, ಬಾಗೂರು ಮಾರ್ಕಂಡೇಯ, ಕೆ.ಆರ್.ರಂಗನಾಥ್. ಅಧ್ಯಕ್ಷತೆ: ಬಿ.ಆರ್.ಲಕ್ಷ್ಮಣರಾವ್. ಸ್ವರ ಸಾಮ್ರೋಟ್

ಭಾವಗೀತೆಯೆಂಬ ಮಧುರವಾದ ಪ್ರಕಾರವೊಂದನ್ನು ಅಭಿಮಾನಿಗಳ ಹೃದಯ, ಮನಕ್ಕೆ ಅಪ್ಯಾಯಮಾನವೆಂಬಂತೆ ಉಣಬಡಿಸಿ ನಮ್ಮ ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಇಂದೂ ವಿಶ್ವನಾಥ್.ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಅವಿರತವಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಬಂದಿರುವ ಮಹಿಳೆಯರಲ್ಲಿ ಗುರುತಿಸಿ ಹಿರಿಮೆಯಿಂದ ಹೇಳಬಹುದಾದ ಸಾಧಕಿ ಅವರು. ಓದಿದ್ದು ಬಿ.ಕಾಂ. ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ  ಹಿನ್ನೆಲೆ ಗಾಯಕಿಯಾಗಿ ಡಿಪ್ಲೊಮಾ ಪದವಿ ಪಡೆದವರು.

 

ಕರ್ನಾಟಕ ಮತ್ತು ಹಿಂದುಸ್ತಾನಿ ಎರಡೂ ಪ್ರಕಾರದ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದು, ಆಕಾಶವಾಣಿ ಮತ್ತು ದೂರದರ್ಶನಗಳ ಎ  ಗ್ರೇಡ್ ಸುಗಮ ಸಂಗೀತ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ.ಮಹಿಳೆಯರು ಸಂಗೀತ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವುದು ಕಡಿಮೆಯೆಂದರೆ ತಪ್ಪಾಗದೇನೋ. ಅಲ್ಲದೆ ಭಾವಗೀತೆಯೆಂಬ ಈ ಪ್ರಕಾರದಲ್ಲಿ ಸ್ವರಸಂಯೋಜನೆಯನ್ನು ಮಾಡಿ ಹಾಡಿ, ಹಾಡಿಸುವವರು ಬೆರಳಣಿಕೆಯಷ್ಟು ಮಾತ್ರ. ಹೀಗಿರುವಾಗ ಇಂದೂ ಅವರ ಸ್ವರಸಂಯೋಜನೆಗಳು ಮಾಧುರ್ಯ ಪ್ರಧಾನವಾಗಿರುವುದು ವಿಶೇಷವೆಂದು ಗುರುತಿಸಬಹುದು. ಕೇಳುಗನನ್ನು ತೇಲಿಸುವ, ಭಾವಪರವಶಗೊಳಿಸುವ ಪಾಂಡಿತ್ಯವು ಇವರಿಗೆ ಸಿದ್ಧಿಸಿದೆ.

 ವೈಶಾಖದ ದಿನಗಳು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವುದರ ಮೂಲಕ ಚಲನಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ ಪ್ರಪ್ರಥಮ ಮಹಿಳೆ ಅವರು. 100ಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ಹಾಡಿದ್ದಾರೆ. 35ಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.ಇವರ ಸಂಗೀತ ನಿರ್ದೇಶನದಲ್ಲಿ ಮೇರು ಗಾಯಕರುಗಳಾದ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ವಾಣಿ ಜಯರಾಂ, ಕವಿತಾ ಕಷ್ಣಮೂರ್ತಿ, ಮನು ಮುಂತಾದವರು ಹಾಡಿರುವುದು ದಾಖಲಾರ್ಹ. ಮಹಿಳೆ ಎಂಬ ಕಾರಣಕ್ಕೋ ಏನೋ ಇವರಿಗೆ ಸಿಗಬಹುದಾದ ಮಾನ್ಯತೆಗಳು, ಪುರಸ್ಕಾರಗಳು ಸಿಕ್ಕಿಲ್ಲ. ಇವರು ರಾಗ ಸಂಯೋಜನೆ ಮಾಡಿದ ಗೀತೆಗಳನ್ನು ಬೇರೆ ಸಂಗೀತ ನಿರ್ದೇಶಕರು ವೇದಿಕೆಗಳಲ್ಲಿ ಹಾಡಿಸುವ ದೊಡ್ಡತನ ತೋರಿದ್ದು ಕಡಿಮೆ.ಇಂಥ ಪರಿಸ್ಥಿತಿಯಲ್ಲೂ ಗಾಯನ ಗಂಗಾ ಸಂಗೀತ ಸಂಸ್ಥೆಯು ಮೆಚ್ಚತಕ್ಕ ಕೆಲಸವನ್ನು ಮಾಡುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಮಹಿಳೆಯಾಗಿ ಸಾಧನೆ ಮಾಡಿದ ಅವರಿಗೆ `ಸ್ವರ ಸಾಮ್ರೋಟ್~  ಬಿರುದಿನಿಂದ ಗೌರವಿಸುತ್ತಿದೆ. ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ,  ಜಿ.ವಿ ಅತ್ರಿ ಯುವ ಪ್ರಶಸ್ತಿ ಮುಂತಾದವುಗಳು ಅವರನ್ನು ಅಲಂಕರಿಸಿವೆ.ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ. ಸಂಜೆ  5.30.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.