ಹಾಡು ತೋರಿದ ಹಾದಿ; ನೆನಪಾದ 80ರ ದಶಕ
ಮೈಸೂರು: ಪ್ರೇಮಿ ಆಗದವನು ಬಂಡಾಯಗಾರ ಆಗುವುದಿಲ್ಲ. ಕವಿತೆಗಳೂ ಹುಟ್ಟುವುದಿಲ್ಲ ಎಂದು ಕವಿ. ಡಾ. ಸಿದ್ದಲಿಂಗಯ್ಯ ಹೇಳಿದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಏಕತಾರಿ ಆಯೋಜಿಸಿದ್ದ ‘ಹಾಡು ತೋರಿದ ಹಾದಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಅಂತರ್ಜಾತಿ ವಿವಾಹವಾದವರು ಋಷಿಗಳು ಮತ್ತು ದೇವರುಗಳು ಇದ್ದಂತೆ. ಕೃಷ್ಣ, ವಸಿಷ್ಠ ಎಲ್ಲರೂ ಅಂತರ್ಜಾತಿ ವಿವಾಹವಾದವರೇ! ಆದರೆ, ದೇವರನ್ನು ಆರಾಧಿಸುವ ಭಕ್ತರು ನೋಡಿ, ಸ್ವಜಾತಿ ಪ್ರೇಮಿಗಳು. ದೈವ ದ್ರೋಹಿಗಳು ಎಂದು ಅಭಿಪ್ರಾಯಪಟ್ಟರು.
ತತ್ವಪದಗಳು ಕೇವಲ ಧಾರ್ಮಿಕತೆಯನ್ನು ಹೇಳುವುದಿಲ್ಲ. ಕ್ರಾಂತಿಯನ್ನೂ ಧ್ವನಿಸುತ್ತವೆ. ಕೈವಾರ ತಾತಯ್ಯ ಅವರ ತತ್ವಪದಗಳು ಇದಕ್ಕೆ ಉದಾಹರಣೆ. ಹೋರಾಟದ ದೊಂದಿಯನ್ನು ಮೊದಲು ಹಚ್ಚಿದವರು ತತ್ವಪದಕಾರ ರಾಗಿದ್ದಾರೆ ಎಂದು ಹೇಳಿದ ಅವರು, ಬಡವರಿಗೆ ಹೋರಾಟವೇ ಅಸ್ತ್ರ. ಅದನ್ನು ಕಳೆದುಕೊಂಡರೆ ನಿರ್ಗತಿಕರಾಗುತ್ತಾರೆ. ಶ್ರೇಣಿಕೃತ, ಜಾತಿ ಕೇಂದ್ರಿತ ಸಮಾಜ ಇರುವವರೆಗೂ ಹೋರಾಟ ನಿಲ್ಲಿಸಬಾರದು ಎಂದು ಕರೆ ನೀಡಿದರು.
ತಮ್ಮ ಕವಿತೆ ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಪದ್ಯ ಸೃಷ್ಟಿಯಾದ ಸನ್ನಿವೇಶವನ್ನು ನೆನೆದ ಅವರು, ಕಾಳೇಗೌಡ ನಾಗವಾರ ಮತ್ತು ನಾನು ಹಾಸನದ ಪೇಟೆಯಲ್ಲಿ ಬರುತ್ತಿದ್ದಾಗ, ಕಾಫಿ ತೋಟದ ಕೆಲಸಗಾರರ, ದಲಿತರ ಮೆರವಣಿಗೆ ಹೊರಟಿತ್ತು.
ಅಂತಹ ಸಂದರ್ಭದಲ್ಲಿ ಈ ಹಾಡಿನ ಸಾಲುಗಳು ಹೊಳೆದವು. ದಲಿತ ಸಂಘರ್ಷ ಸಮಿತಿ ಮತ್ತು ಜನ್ನಿ ಈ ಹಾಡನ್ನು ಸಂಘಟನೆ, ಚಳವಳಿಗಳಲ್ಲಿ ಹಾಡಿ ನನ್ನನ್ನು ಕವಿಯಾಗಿಸಿದರು. ನಂತರ ಕಿ.ರಂ. ನಾಗರಾಜ್ ಮತ್ತು ಡಿ.ಆರ್. ನಾಗರಾಜ್ ಅವರಿಂದ ಈ ಹಾಡುಗಳು ‘ಹೊಲೆಮಾದಿಗರ ಹಾಡು’ ಆಗಿ ಪುಸ್ತಕ ರೂಪ ಪಡೆಯಿತು ಎಂದರು.
‘ಬದುಕೆಲ್ಲಾ ಕಷ್ಟಗಳು ಚಂದಮಾಮ, ಗುಂಡಿಗೆ ತುಂಬಾ ಗಾಯಗಳು ಚಂದಮಾಮ’ ಎಂಬ ಕವಿತೆಯ ಸಾಲುಗಳನ್ನು ನೆನೆದ ಪ್ರೊ.ಕೆ.ಬಿ. ಸಿದ್ದಯ್ಯ ಅವರು, ದಲಿತರ ನೋವಿನ ಗಾಯಗಳು ಇನ್ನೂ ಮಾಯವಾಗಿಲ್ಲ. ಮತ್ತೆ ಮತ್ತೆ ಆ ಗಾಯಗಳು ಹೊಸ ರೂಪವನ್ನು ಪಡೆದು ನೋಯಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಶೋಷಿತರ ನೋವುಗಳಿಗೆ ಮದ್ದಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ ಮಾತನಾಡಿ, ನಾನು ದನ ಕಾಯುತ್ತ ಸಿನಿಮಾ ಹಾಡುಗಳನ್ನು ಮಾತ್ರ ಹಾಡುತ್ತಿದ್ದೆ, ಕೋಟಿಗಾನಹಳ್ಳಿ ರಾಮಯ್ಯ, ಗದ್ದರ್ ಅವರೊಂದಿಗಿನ ಒಡನಾಟ ಇಲ್ಲಿಗೆ ತಂದು ನಿಲ್ಲಿಸಿದೆ. ಹಾಡುಗಳು ತೋರಿದ ದಾರಿ ಇದಾಗಿದೆ ಎನ್ನುತ್ತಾ ಸಿದ್ದಯ್ಯ ಅವರ ‘ಈ ನಾಡ ಮಣ್ಣಿನಲ್ಲಿ’ ಗೀತೆಯನ್ನು ಹಾಡಿದರು.
ಎಚ್. ಜನಾರ್ದನ್, ಡಾ.ಸಿದ್ದಲಿಂಗಯ್ಯ ಅವರ ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಗೀತೆ ಹಾಡಿದಾಗ ಇಡೀ ಸಭಾಂಗಣದಲ್ಲಿ ಮಿಂಚಿನ ಸಂಚಾರವಾಯಿತು. ಏಕತಾರಿ ತಂಡದ ಚಿಂತನ್ ವಿಕಾಸ್ ಕುವೆಂಪು ಅವರ ‘ಅನಿಕೇತನ ಪದ್ಯವನ್ನು ಹಾಡಿದರು.
ಹುರುಗಲವಾಡಿ ರಾಮಯ್ಯ, ಗೊಲ್ಲಳ್ಳಿ ಶಿವಪ್ರಸಾದ್, ರಾಜಪ್ಪ ಕೋಲಾರ, ದೇವಾನಂದ ವರಪ್ರಸಾದ್ ಹಲವು ಹೋರಾಟದ ಹಾಡುಗಳನ್ನು ಹಾಡಿದರು. ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್. ತುಕಾರಾಂ, ಸಾಹಿತಿ ಅರವಿಂದ ಮಾಲಗತ್ತಿ ಇದ್ದರು.
‘ಅಪ್ಪಿಕೋ ಗೆಳತಿ’ ಎದುರಾದ ಪ್ರತಿಭಟನೆ
ತಮ್ಮ ಎಪ್ಪತ್ತರ ದಶಕಗಳ ಕವಿತೆಗಳನ್ನು ನೆನೆದ ಸಿದ್ದಲಿಂಗಯ್ಯ ಅವರು, ‘ಇಕ್ಕರ್ಲಾ ಒದಿರ್ಲಾ ಎಂದು ಕವಿತೆ ಆರಂಭಿಸಿದ ನಾನು, ಪುಟ್ಟಣ್ಣ ಕಣಗಾಲರ ಸಿನಿಮಾಕ್ಕೆ ‘ಗೆಳತಿ... ಓ ಗೆಳತಿ, ಅಪ್ಪಿಕೋ ಎನ್ನ ಅಪ್ಪಿಕೋ’ ಗೀತೆಯನ್ನು ‘ಆದಿತ್ಯ’ ಎನ್ನುವ ಹೆಸರಿನಲ್ಲಿ ಬರೆದೆ. ಅದಕ್ಕೆ ಪ್ರಶಸ್ತಿ ಬಂದಾಗ ನನ್ನ ಮುಖ ಬಯಲಾಯಿತು. ಮಹಿಳೆಯರಿಂದ, ಹೋರಾಟಗಾರರಿಂದ ಪ್ರತಿಭಟನೆಯನ್ನೂ ಎದುರಿಸಬೇಕಾಯಿತು ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.