ಬುಧವಾರ, ಏಪ್ರಿಲ್ 21, 2021
23 °C

ಹಾರ್ನ್ ರಹಿತ ಸೋಮವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸಂಚಾರ ಪೊಲೀಸ್, ಮಾರುತಿ ಕಾರುಗಳ ಮಾರಾಟ ಸಂಸ್ಥೆಯಾದ `ಪ್ರಥಮ್ ಮೋಟಾರ್ಸ್~-ಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಇನ್ನು ಮುಂದೆ ಪ್ರತಿ ಸೋಮವಾರವನ್ನು `ಹಾರ್ನ್ ರಹಿತ ದಿನ~ವನ್ನು ಆಚರಿಸಲು ನಿರ್ಧರಿಸಿದೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂಡಳಿಯ ಅಧ್ಯಕ್ಷ ಡಾ.ವಾಮನಾಚಾರ್ಯ, `ಕೋರಮಂಗಲದಲ್ಲಿ ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಈಗಾಗಲೇ ಜಾರಿಗೆ ತಂದಿರುವ ಹಾರ್ನ್ ರಹಿತ ಸೋಮವಾರ ಆಂದೋಲನವು ಯಶಸ್ವಿಯಾಗಿದೆ. ಇದೀಗ ನಗರದ ಎಲ್ಲೆಡೆ ವಿಸ್ತರಿಸಲಾಗುತ್ತಿದೆ~ ಎಂದರು.`ಮಂಡಳಿ ನಡೆಸಿದ ಅಧ್ಯಯನದ ಪ್ರಕಾರ ನಗರದ ಜನವಸತಿ ಪ್ರದೇಶಗಳಲ್ಲಿ ಶಬ್ದದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿ ಅಂದರೆ 70ರಿಂದ 75 ಡೆಸಿಬಲ್‌ಗಳಷ್ಟು ಇದೆ. ಆರೋಗ್ಯಕರ ಶಬ್ದದ ಮಟ್ಟವೆಂದರೆ 55 ಡೆಸಿಬಲ್‌ಗಿಂತ ಕಡಿಮೆ ಇರಬೇಕು.ವಾಣಿಜ್ಯ ಪ್ರದೇಶಗಳಲ್ಲಿ ಸರಾಸರಿ 90ರಿಂದ 95 ಡೆಸಿಬಲ್‌ಗಳಷ್ಟು ಶಬ್ದ ಹೊರಹೊಮ್ಮುತ್ತಿದೆ. ಇದು 65 ಡೆಸಿಬಲ್‌ಗಿಂತ ಕಡಿಮೆ ಇರಬೇಕಿತ್ತು~ ಎಂದು ಅವರು ತಿಳಿಸಿದರು.ನಗರದಲ್ಲೇ ಹೆಚ್ಚು ಶಬ್ದ ಮಾಲಿನ್ಯ ಇರುವ ಕೋರಮಂಗಲದಲ್ಲಿ ಹಾರ್ನ್ ರಹಿತ ಸೋಮವಾರ ಆಂದೋಲನ ಆರಂಭಿಸಿದ ಮೇಲೆ ಶಬ್ದ ಮಾಲಿನ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ~ ಎಂದು ಹೇಳಿದ ಅವರು, `ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಜಾಗೃತಿ ಉಂಟು ಮಾಡುವುದು ಹಾಗೂ ಹಾರ್ನ್‌ನ ಅನಿಯಮಿತ ಬಳಕೆ ತಡೆಯಲು ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಆಂದೋಲನದ ಉದ್ದೇಶ ಎಂದರು.`ಆಸ್ಪತ್ರೆ ಮತ್ತು ಇತರ ನಿಶ್ಯಬ್ದ ವಲಯಗಳಲ್ಲಿ ಸುಮಾರು 500 ಮೀಟರ್ ಪ್ರದೇಶದಲ್ಲಿ ಹಾರ್ನ್ ರಹಿತ ಪ್ರದೇಶವೆಂದು ಜಾಗೃತಿ ಮೂಡಿಸಬೇಕು. ಜತೆಗೆ ಸಿಗ್ನಲ್‌ಗಳಲ್ಲಿ ಹಾರ್ನ್ ಮಾಡುವ ವಾಹನ ಸವಾರರಿಗೆ ಎಚ್ಚರಿಕೆ ನೀಡಬೇಕು~ ಎಂದು ಅಭಿಪ್ರಾಯಪಟ್ಟರು.ಹೆಚ್ಚು ಶಬ್ದ ಮಾಡುವ ವಾಹನಗಳ ವಿರುದ್ಧ ಕ್ರಮ ಜರುಗಿಸುವ ಕಾರ್ಯಾಚರಣೆ ನಡೆಸಲು ಸಂಚಾರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ~ ಎಂದು ಅವರು ಹೇಳಿದರು.ಪ್ರಥಮ್ ಮೋಟಾರ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ (ಸಿಇಒ) ಸಮರ್ ವಿಕ್ರಮ್ ಭಾಸಿನ್ ಮಾತನಾಡಿ, `ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಈ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ~ ಎಂದರು.ಕೋರಮಂಗಲದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ನಿತಿನ್ ಶೇಷಾದ್ರಿ ಮಾತನಾಡಿ `ಹಾರ್ನ್ ರಹಿತ ಸೋಮವಾರ ಆಚರಣೆಯಿಂದಾಗಿ ನಮ್ಮ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ಕಡಿಮೆಯಾಗಿದೆ~ ಎಂದು ತಿಳಿಸಿದರು.ದೂಳು: ಮೆಟ್ರೊಗೆ ಸೂಚನೆ

`ನಮ್ಮ ಮೆಟ್ರೊ~ದ ಕಾಮಗಾರಿ ನಡೆದಿರುವ ಪ್ರದೇಶಗಳಲ್ಲಿ ಎದ್ದಿರುವ ಮತ್ತು ಏಳುವ ದೂಳಿನ ಹಾವಳಿಯನ್ನು ಕಡಿಮೆ ಮಾಡುವಂತೆ `ಬೆಂಗಳೂರು ಮೆಟ್ರೊ ರೈಲು ನಿಗಮ~ಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು  ವಾಮನಾಚಾರ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಮೆಟ್ರೊ ಕಾಮಗಾರಿಯಿಂದ ಪರಿಸರದ ಮೇಲಾಗುವ ಪರಿಣಾಮದ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿಯವರ ಸಲಹೆಗಾರ ಎ.ರವೀಂದ್ರ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಅದರಲ್ಲಿ ಮಂಡಳಿಯ ಪ್ರತಿನಿಧಿಯೂ ಇದ್ದಾರೆ. ಈ ಸಮಿತಿಯು ಮೆಟ್ರೊ ನಿಗಮಕ್ಕೆ ಸೂಚನೆಗಳನ್ನು ನೀಡುತ್ತದೆ~ ಎಂದು ಅವರು ಹೇಳಿದರು.`ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಅದು ಮೆಟ್ರೊ ಕಾಮಗಾರಿಗಳಿಗೂ ಅನ್ವಯವಾಗುತ್ತದೆ~ ಎಂದು ಅವರು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.