ಭಾನುವಾರ, ಮಾರ್ಚ್ 7, 2021
18 °C
ಜೆಎಸ್‌ಎಸ್ ಕಾಲೇಜಿನಲ್ಲಿ ವಿಶ್ವ ಹಾವುಗಳ ದಿನಾಚರಣೆ

ಹಾವು ಹಿಡಿದು ಸಂಭ್ರಮಿಸಿದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವು ಹಿಡಿದು ಸಂಭ್ರಮಿಸಿದ ವಿದ್ಯಾರ್ಥಿಗಳು

ಧಾರವಾಡ: ಇಡೀ ಸಭಾಭವನವೆಲ್ಲ ಭಯ ಭೀತಿಯಿಂದ ಕೂಡಿತ್ತು.. ಎಲ್ಲೆಲ್ಲೂ ವಿದ್ಯಾರ್ಥಿಗಳ ಕೂಗಾಟ, ಕಿರುಚಾಟ, ಭಯದ ವಾತಾವರಣ.. ಆ ಭಯದಲ್ಲೂ ಒಂದು ರೀತಿಯ ರೋಮಾಂಚನ.. ಕಾಡಿನಲ್ಲಿ ಹರಿದಾಡಿದಂತೆ ನಾನಾ ವಿಧದ ಹಾವುಗಳು ಸಭಾಭವನದಲ್ಲಿ ಹರಿದಾಡುತ್ತಿದ್ದರೆ, ವಿದ್ಯಾರ್ಥಿಗಳ ಕೂಗಾಟ, ಕಿರುಚಾಟ ಮುಗಿಲು ಮುಟ್ಟಿತ್ತು.ಅರೆರೆ..! ಇದೇನು ಹಾವುಗಳು ಕಾಡಿನಲ್ಲಿ, ಹೊಲ, ಗದ್ದೆಗಳಲ್ಲಿ ಇರುವುದು ಬಿಟ್ಟು ನಗರದಲ್ಲಿರುವ ಸಭಾಭವನಕ್ಕೆ ಏಕೆ ಬಂದಿದ್ದವು? ಎಂದು ಪ್ರಶ್ನಿಸಬೇಡಿ. ಮಂಗಳವಾರ ವಿಶ್ವ ಹಾವುಗಳ ದಿನಾಚರಣೆ. ಆದ್ದರಿಂದ ಇಲ್ಲಿಯ ಜೆಎಸ್‌ಎಸ್ ಕಾಲೇಜಿನ ಉತ್ಸವ ಸಭಾಭವನದಲ್ಲಿ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಗ್ರೀನ್ ಆರ್ಮಿ ಹಾಗೂ ಹುಬ್ಬಳ್ಳಿ- ಧಾರವಾಡ ನಾಗರಿಕ ಪರಿಸರ ಸಮಿತಿ ವತಿಯಿಂದ ಮಂಗಳವಾರ ಹಾವುಗಳ ಕುರಿತು ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.ನಾಗರಹಾವು, ಕೇರಿ ಹಾವು, ರಸಲ್‌ವೈಫರ್ ಹಾಗೂ ತೋಳ ಹಾವು ಸೇರಿದಂತೆ ಸುಮಾರು ಏಳು ಜಾತಿಯ ಹಾವುಗಳನ್ನು ಸಭಾಭವನದಲ್ಲಿ ಇಡಲಾಗಿತ್ತು. ಒಂದೊಂದು ಹಾವು ಕೂಡ ಮತ್ತೊಂದಕ್ಕಿಂತ ವಿಷಕಾರಿ. ಆದರೂ ಉರಗ ತಜ್ಞರಾದ ಗಂಗಾಧರ ಕಲ್ಲೂರ, ಶಿವಕುಮಾರ ಪಾಟೀಲ, ಸುರೇಶ ಹೆಗ್ಗೇರಿ, ಯಲ್ಲಪ್ಪ ಜೋಡಳ್ಳಿ ಅವರು ಹಾವುಗಳನ್ನು ಹಿಡಿದು ಅವುಗಳ ಕುರಿತು ವಿವರಣೆ ಮಾಡುತ್ತಿದ್ದರು. ಇತ್ತ ಹಾವುಗಳನ್ನು ನೋಡಿ ವಿದ್ಯಾರ್ಥಿಗಳು ಹೋ.. ಹೋ.. ಎಂದು ಕೂಗುತ್ತಿದ್ದರು.ಉರಗ ತಜ್ಞರು ವಿದ್ಯಾರ್ಥಿಗಳ ಕೈಯಲ್ಲಿಯೇ ಹಾವುಗಳನ್ನು ಕೊಟ್ಟು ಅವುಗಳ ಕುರಿತು ಮಾಹಿತಿ ನೀಡಿದರು. ಕೆಲವೊಂದಿಷ್ಟು ವಿದ್ಯಾರ್ಥಿಗಳು ಹಾವನ್ನು ಮುಟ್ಟದೇ ಮಾರುದ್ದ ಹೋಗಿ ನಿಂತರೆ, ಇನ್ನು ಕೆಲವು ವಿದ್ಯಾರ್ಥಿಗಳು ಹಾವುಗಳನ್ನು ಹಿಡಿಯಲು ಭಯದಲ್ಲಿಯೇ ಮುಂದೆ ಬರುತ್ತಿದ್ದರು. ಹಾವುಗಳ ಕುರಿತು ತಮಗಿದ್ದ ಸಮಸ್ಯೆಗಳನ್ನು, ಗಂಗಾಧರ ಕಲ್ಲೂರ ಅವರಿಂದ ಕೇಳಿ ಬಗೆಹರಿಸಿಕೊಂಡ ವಿದ್ಯಾರ್ಥಿಗಳು, ನಂತರ ಹಾವುಗಳನ್ನು ಹಿಡಿದು ಸಂತೋಷಪಟ್ಟರು.`ಭಾರತದಲ್ಲಿ ಇದೂವರೆಗೆ 354 ಜಾತಿಯ ಹಾವುಗಳು ಪತ್ತೆಯಾಗಿವೆ. ಇದರಲ್ಲಿ ಕೆಲವೇ ಕೆಲವು ವಿಷಪೂರಿತ ಹಾವುಗಳಿದ್ದು, ಉಳಿದವೆಲ್ಲ ವಿಷರಹಿತ ಹಾವುಗಳು ಇವೆ. ಜನರಲ್ಲಿ ಹಾವುಗಳ ಬಗ್ಗೆ ವಿವಿಧ ತರಹದ ಮೂಢ ನಂಬಿಕೆಗಳಿವೆ. ಅವುಗಳನ್ನೆಲ್ಲ ಅಳಿಸಿ ಹಾಕಲು ಈ ರೀತಿಯ ಕಾರ್ಯಕ್ರಮಗಳು ಅವಶ್ಯಕ' ಎಂದು ಹಾವುಗಳ ಪ್ರಾತ್ಯಕ್ಷಿಕೆ ಮೂಲಕ ಪ್ರೊ. ಗಂಗಾಧರ ಕಲ್ಲೂರ ತಿಳಿಸಿದರು.`ಅನಾದಿ ಕಾಲದಿಂದಲೂ ಭಾರತೀಯರು ಹಾವುಗಳಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಅವುಗಳ ಬಗ್ಗೆ ಆಳವಾದ ಅಧ್ಯಯನ ಆಗಿಲ್ಲ. ಮೂಢ ನಂಬಿಕೆಗಳಿಗೆ ಬಲಿಯಾಗಿ ಹಲವಾರು ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಹಾವುಗಳ ಪ್ರಬೇಧ, ಕಚ್ಚಿದಾಗ ವಹಿಸುವ ಪ್ರಥಮ ಚಿಕಿತ್ಸೆ ಬಗ್ಗೆ ತಿಳಿವಳಿಕೆ ನೀಡುವ ಅಗತ್ಯತೆ ಇದೆ' ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ ಹೇಳಿದರು.ಪ್ರಾಚಾರ್ಯ ಡಾ. ಅಜಿತ ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಆರ್.ಬಿ. ತಿಮ್ಮಾಪುರ ಇದ್ದರು. ನಿಖಿತಾ ಹಿರೇಮಠ ಪ್ರಾರ್ಥಿಸಿದರು. ಪ್ರಕಾಶ ಗೌಡರ ಸ್ವಾಗತಿಸಿದರು. ಮಹಾವೀರ ಉಪಾಧ್ಯೆ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.