ಭಾನುವಾರ, ಮೇ 9, 2021
18 °C

ಹಾಸನದ ಹೈಕಮಾಂಡ್ ಪಂಚಾಯಿತಿಗಳು

ಉದಯ ಯು. Updated:

ಅಕ್ಷರ ಗಾತ್ರ : | |

ಹೆಸರಿನ ಮುಂದೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಅಥವಾ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಂದು ನಮೂದಿಸಬಹುದು ಎಂಬುದನ್ನು ಬಿಟ್ಟರೆ ಹಾಸನ ಜಿಲ್ಲೆಯಲ್ಲಿ ಈ ಹುದ್ದೆಗಳನ್ನು ‘ಅಲಂಕರಿಸಿದವರು’ ಹೇಳಿಕೊಳ್ಳು­ವಂಥ ಸಾಧನೆ ಮಾಡಿದ್ದು ವಿರಳ. ಹಾಸನ ಜಿಲ್ಲೆಯ ಮಟ್ಟಿಗೆ ಈ ಎರಡೂ ಹುದ್ದೆಗಳು ಅಷ್ಟಕ್ಕೇ ಸೀಮಿತ. ಜಿಲ್ಲೆಯ ಬಲಿಷ್ಠ ರಾಜಕೀಯ ಹಿನ್ನೆಲೆಯೂ ಇದಕ್ಕೆ ಕಾರಣವಾಗಿದೆ.ಹಾಸನ ಜಿಲ್ಲಾ ಪಂಚಾಯಿತಿಯ ಒಟ್ಟು 40 ಸ್ಥಾನಗಳಲ್ಲಿ 34ರಲ್ಲಿ ಜೆಡಿಎಸ್‌, ನಾಲ್ಕರಲ್ಲಿ ಬಿಜೆಪಿ ಹಾಗೂ ಉಳಿದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಜೆಡಿಎಸ್‌ ಹೊರತಾದ ಪಕ್ಷಗಳಿಂದ ಗೆದ್ದವರಲ್ಲೂ ಕೆಲವರು ಒಂದಿಲ್ಲ ಒಂದು ಬಾರಿ ಆ ಪಕ್ಷದ ಕದ ತಟ್ಟಿ ಬಂದವರು ಅಥವಾ ನಾಲ್ಕಾರು ದಿನ ಆ ಮನೆಯಲ್ಲಿ ಇದ್ದು ಬಂದವರು. ಇಂಥ ಸ್ಥಿತಿಯಲ್ಲಿ ವಿರೋಧ ಪಕ್ಷದವರ ಮಾತಿಗೆ ಜಿ.ಪಂ.ನಲ್ಲಿ ಸಿಗುವ ಬೆಲೆ ಅಷ್ಟಕ್ಕಷ್ಟೇ.ಜೆಡಿಎಸ್‌ ಒಳಗೆ ಇರುವವರಿಗೂ ‘ಹೈಕಮಾಂಡ್‌’ ಮಾತು ಕೇಳುವುದು, ಅಲ್ಲಿಂದ ಬಂದ ತೀರ್ಮಾನಗಳನ್ನು ಯಥಾವತ್‌ ಜಾರಿ ಮಾಡುವುದು ಮತ್ತು ‘ನಾಯಕ’ ಹೇಳಿದಲ್ಲಿಗೆ ಹೇಳಿದಷ್ಟು ಅನುದಾನ ಕೊಡುವುದನ್ನು ಬಿಟ್ಟರೆ ಬೇರೆ ಅಧಿಕಾರ ಇಲ್ಲ.ಇಂಥ ಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತೇನೆ ಎನ್ನುವುದಕ್ಕಿಂತ ‘ಮಾಜಿ ಅಧ್ಯಕ್ಷ’ ಎನ್ನಿಸಿಕೊಳ್ಳುತ್ತೇನೆ ಎಂಬುದೇ ಸದಸ್ಯರಿಗಿರುವ ಸಂಭ್ರಮ, ಸಮಾಧಾನ. ಈ ಒಂದೇ ಉದ್ದೇಶಕ್ಕೆ ಪಕ್ಷಾಂತರಗಳೂ ಆಗಿದ್ದಿದೆ.ಸದಸ್ಯರ ಅಭಿಲಾಷೆಯನ್ನು ಮನಗಂಡ ಹೈಕಮಾಂಡ್‌ ಕಳೆದ ಹಲವು ವರ್ಷಗಳಿಂದ ಅಧಿಕಾರ ಹಂಚಿಕೆ ನೆಪದಲ್ಲಿ ಎಲ್ಲರಿಗೂ ಮುಕ್ತವಾಗಿ ಅವಕಾಶ ನೀಡುತ್ತಿದೆ. ಒಂದು ಅವಧಿಯಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ 5 ಮಂದಿ ಅಧ್ಯಕ್ಷರಾಗಿದ್ದಿದೆ. ಸದಸ್ಯನೊಬ್ಬ ಆ ಹುದ್ದೆಗೆ ಏರುವಾಗಲೇ ಯಾವತ್ತು ರಾಜೀನಾಮೆ ನೀಡಬೇಕು ಎಂಬುದೂ ನಿಗದಿಯಾಗಿರುತ್ತದೆ. ಪಕ್ಷದೊಳಗೆ ಅದನ್ನು ‘ಆಂತರಿಕ ಒಪ್ಪಂದ’ ಎಂದು ಕರೆಯಲಾಗುತ್ತದೆ. ತಮ್ಮ ಎಂಟು – ಹತ್ತು ತಿಂಗಳ ಅವಧಿಯಲ್ಲಿ ಎರಡೋ ಮೂರೋ ಸಾಮಾನ್ಯ ಸಭೆ ನಡಸಿದರೆ ಅದೇ ಹೆಚ್ಚು. ಇಂಥ ಸಭೆಗಳನ್ನೂ ಅನೇಕ ಸಂದರ್ಭದಲ್ಲಿ ಶಾಸಕರೇ ನಿಯಂತ್ರಿಸಿ, ಬೇಕಾದಂತೆ ನಿರ್ಣಯಗಳನ್ನು ಮಾಡಿಸಿ ಹೋಗುತ್ತಾರೆ. ಆದ್ದರಿಂದ ಅಧ್ಯಕ್ಷರಿಗೆ ಸಾಮಾನ್ಯ ಸಭೆಯಲ್ಲೂ ಕೆಲಸ ಕಡಿಮೆಯೇ.ಜಿಲ್ಲಾ ಪಂಚಾಯಿತಿಯ 29 ಇಲಾಖೆಗಳಲ್ಲಿ ಯಾವ್ಯಾವ ಯೋಜನೆಗಳಿವೆ, ಅವು ಎಷ್ಟರಮಟ್ಟಿಗೆ ಜಾರಿಯಾಗುತ್ತವೆ ? ಅನುದಾನ ಎಷ್ಟು ಬಳಕೆಯಾಗುತ್ತದೆ, ಯಾವ ತಾಲ್ಲೂಕು ಅಥವಾ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಡಬೇಕು... ಇಂಥ ಯಾವ ವಿಚಾರಗಳೂ ಅನೇಕ ಸಂದರ್ಭಗಳಲ್ಲಿ ಅಧ್ಯಕ್ಷರಿಗೆ ತಿಳಿದಿರುವುದಿಲ್ಲ. ಉದ್ಯೋಗ ಖಾತರಿ, ಕೃಷಿ ಇಲಾಖೆ, ತೋಟಗಾರಿಕೆ, ಕುಡಿಯುವ ನೀರು ಸರಬರಾಜಿನಂಥ ಕೆಲವೇ ಕೆಲವು ಇಲಾಖೆಗಳನ್ನು ಬಿಟ್ಟರೆ ಹೊಸ ಯೋಜನೆಗಳ ಬಗ್ಗೆ ಜಿಲ್ಲಾ ಪಂಚಾಯಿತಿಯಲ್ಲಿ ಚರ್ಚೆ ನಡೆಯುವುದಿಲ್ಲ.ಜಿಲ್ಲೆಯಲ್ಲಿ ಈ ಬಾರಿ ಮೊದಲ ಅವಧಿಯಲ್ಲಿ  ಬಿಎಸ್‌ಸಿ ಪದವೀಧರ ಹಾಗೂ ಅಭಿವೃದ್ಧಿಯ ಬಗ್ಗೆ ಕೆಲವು ಕನಸುಗಳನ್ನಿಟ್ಟುಕೊಂಡಿದ್ದ ಕೃಷಿಕ ಬಿ.ಆರ್‌ ಸತ್ಯನಾರಾಯಣ ಅಲ್ಪ ಅವಧಿಗೆ ಅಧ್ಯಕ್ಷರಾಗಿದ್ದರು. ಆ ಕೆಲವು ತಿಂಗಳಲ್ಲಿ ಗಮನಾರ್ಹವಾದ ಒಂದೆರಡು ಯೋಜನೆಗಳು ರೂಪುಗೊಂಡವು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬೀದಿ ದೀಪಗಳಿಗೆ ಸ್ವಯಂಚಾಲಿತ ಸ್ವಿಚ್‌ ಅಳವಡಿಸಿ ವಿದ್ಯುತ್‌ ಉಳಿಸುವುದು... ಇಂಥ ಕೆಲವು ಪ್ರಯೋಗಗಳು ನಡೆದವು.ಹಾಸನ ತಾಲ್ಲೂಕು ಬೈಲಹಳ್ಳಿಯ ರೈತರೊಬ್ಬರ ಜಮೀನಿನಲ್ಲಿ ಸುಮಾರು 30ಸಾವಿರ ರೂಪಾಯಿ ವೆಚ್ಚದಲ್ಲಿ ಮಳೆನೀರು ಮರುಪೂರಣ ಯೋಜನೆ ಜಾರಿ ಮಾಡಿ ಯಶಸ್ಸು ಸಾಧಿಸಿದರು. ಪವನ ಮತ್ತು ಸೌರ ವಿದ್ಯುತ್‌ನಿಂದ ಹತ್ತು ಮನೆಗಳಿಗೆ ಖರ್ಚಿಲ್ಲದೆ ಉಚಿತ ವಿದ್ಯುತ್‌ ಒದಗಿಸಿದರು. ಜಿಲ್ಲೆಯ ಇನ್ನೂ ಹಲವು ಕಡೆ ಇಂಥ ಯೋಜನೆಗಳನ್ನು ಜಾರಿ ಮಾಡಿ ರೈತರ ನೋವು ನೀಗಿಸಬೇಕು ಎಂಬ ಯೋಜನೆ ರೂಪಿಸಲಾಯಿತು. ಕೇಂದ್ರ ಸರ್ಕಾರಕ್ಕೆ ಪತ್ರವೂ ರವಾನೆಯಾಗಿತ್ತು ಅಷ್ಟರಲ್ಲೇ ‘ಆಂತರಿಕ ಒಪ್ಪಂದ’ದಂತೆ ಸತ್ಯನಾರಾಯಣ ಅವರ ಅವಧಿ (ಎಂಟು ತಿಂಗಳು ಮಾತ್ರ) ಮುಗಿಯಿತು. ಅಲ್ಲಿಗೆ ಅವರ ರೂಪಿಸಿದ್ದ ಯೋಜನೆಗಳೂ ನೆಲ ಕಚ್ಚಿದವು.ಇತ್ತ ಹಾಸನ ತಾಲ್ಲೂಕು ಪಂಚಾಯಿತಿಯ ಸ್ಥಿತಿಯೂ ಇದೇ ರೀತಿ ಇದೆ. ಒಟ್ಟಾರೆ ಇರುವ 25 ಸ್ಥಾನಗಳಲ್ಲೂ ಜೆಡಿಎಸ್‌ ಸದಸ್ಯರೇ ಇರುವುದರಿಂದ ತಾ.ಪಂ.ನಲ್ಲಿ ವಿರೋಧ ಪಕ್ಷವೇ ಇಲ್ಲ. ಪಕ್ಷ ಎಲ್ಲರಿಗೂ ಅಧಿಕಾರ ಕೊಡಲೇಬೇಕು. ಅದಕ್ಕಾಗಿ ಇಲ್ಲಿಯೂ ‘ಆಂತರಿಕ ಒಪ್ಪಂದ’ಕ್ಕೆ ಮೊರೆ ಹೋಗಿದೆ. ಒಂದೇ ಪಕ್ಷದ ಆಡಳಿತ ಹಾಗೂ ಸದಸ್ಯರ ಮೇಲೆ ಹೈಕಮಾಂಡ್‌ ಬಿಗಿ ಹಿಡಿತ ಇರುವುದರಿಂದ ಅಧಿಕಾರ ಹಂಚಿಕೆ ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಲೇ ಇದೆ.2006 ರಿಂದ 2010ರವರೆಗಿನ ಅವಧಿಯಲ್ಲಿ ಹಾಸನ ತಾ.ಪಂ.ಗೆ 6 ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಆ ಸಮುದಾಯದ ಎಷ್ಟು ಮಂದಿ ಸದಸ್ಯರಿದ್ದಾರೆ ಎಂದು ಲೆಕ್ಕ ಹಾಕಲಾಗುತ್ತದೆ. ಇರುವ 20 ತಿಂಗಳ ಅವಧಿಯನ್ನು ಅಷ್ಟೂ ಮಂದಿಗೆ ಸಮನಾಗಿ ಹಂಚಲಾಗುತ್ತದೆ. ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿಯಲ್ಲಿ ಕಳೆದ ಬಾರಿ ಕೊನೆಯ ಅಧ್ಯಕ್ಷರಿಗೆ ಸಿಕ್ಕಿದ್ದು ನಾಲ್ಕು ತಿಂಗಳ ಅವಧಿ ಮಾತ್ರ. ಇಂಥ ಹಲವು ಉದಾಹರಣೆಗಳು ಜಿಲ್ಲೆಯಲ್ಲಿ ಲಭಿಸುತ್ತವೆ.ಜಿಲ್ಲೆಯಾದ್ಯಂತ ಈ ಸ್ಥಿತಿ ಇರುವಾಗ ಅವಿಶ್ವಾಸ ನಿರ್ಣಯ ಎಂಬ ಮಾತೇ ಬರುವುದಿಲ್ಲ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸಿದ್ಧ ಮಾದರಿ ಇದು. ಆಂತ­ರಿಕ ಒಪ್ಪಂದದ ಪ್ರಕಾರ ತನ್ನ ಅವಧಿ ಮುಗಿಯು­ತ್ತಿದ್ದಂತೆ, ‘ಸ್ವಇಚ್ಛೆ­ಯಿಂದ ರಾಜೀ­ನಾಮೆ’ ಎಂಬ ಮೂರು ಸಾಲು­ಗಳ ಪತ್ರವನ್ನು ಕಳುಹಿ­ಸ­­­ಲಾಗುತ್ತದೆ. ನಂತರ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆ­ಯುತ್ತದೆ. ಹೊಸ  ಅಧ್ಯ­ಕ್ಷರು ಅವಿರೋಧ­ ಆಯ್ಕೆ ಯಾ­ಗುತ್ತಾರೆ. ಇದೇ ಮಾದರಿ ಗ್ರಾಮ ಪಂಚಾ­ಯಿತಿಗಳಲ್ಲೂ ಜಾರಿಯಲ್ಲಿದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.