ಸೋಮವಾರ, ಏಪ್ರಿಲ್ 19, 2021
33 °C

ಹಾಸನಾಂಬಾ ದೇಗುಲ: ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಮಧ್ಯಾಹ್ನ 12.30ಕ್ಕೆ ಗ್ರಾಮದೇವತೆ ಹಾಸನಾಂಬಾ ದೇವಸ್ಥಾನದ ಬಾಗಿಲನ್ನು ತೆರೆದು ಪ್ರಸಕ್ತ ಸಾಲಿನ ದರ್ಶನಕ್ಕೆ ಚಾಲನೆ ನೀಡಲಾಯಿತು.ನಗರದಲ್ಲಿ ಬುಧವಾರದಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ, ಬಾಗಿಲು ತೆರೆಯುವುದಕ್ಕೂ ಹಲವು ಗಂಟೆಗಳ ಮೊದಲೇ ಭಕ್ತರು ದೇವಸ್ಥಾನದ ಹೊರಗೆ ಸಾಲುಗಟ್ಟಿ ನಿಂತಿದ್ದರು. ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದ್ದವು.ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ತಳವಾರ ವಂಶಸ್ಥರು ಸಂಪ್ರದಾಯದಂತೆ ಗರ್ಭಗುಡಿಯ ಮುಂಭಾಗದಲ್ಲಿ ನೆಟ್ಟಿದ್ದ ಬಾಳೆಯ ಕಂದನ್ನು ಕಡಿ–ದರು. ವರ್ಷವಿಡೀ ಮುಚ್ಚಿದ್ದ ಬಾಗಿಲು ತೆರೆದಾಗ ದೇವಿಯ ದೃಷ್ಟಿ ನೇರವಾಗಿ ಭಕ್ತರ ಮೇಲೆ ಬೀಳುವುದು ಶುಭವಲ್ಲ ಎಂಬ ನಂಬಿಕೆ ಇರುವುದರಿಂದ ಬಾಳೆಯ ಕಂದನ್ನು ಕಡಿದು ಅಮಂಗಳ ನಿವಾರಣೆ ಮಾಡುವುದು ಸಂಪ್ರದಾಯ.ದೇವಸ್ಥಾನದ ಬಾಗಿಲು ತೆರೆದ ಬಳಿಕ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, ಶಾಸಕ  ಎಚ್.ಎಸ್. ಪ್ರಕಾಶ್, ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್,  ತಹಶೀಲ್ದಾರ ಮಂಜುನಾಥ್ ಮುಂತಾದವರಿಗೆ ಮೊದಲ ದರ್ಶನದ ಅವಕಾಶ ನೀಡಲಾಯಿತು.ಮುಂಜಾನೆಯಿಂದಲೇ ದೇವಸ್ಥಾನದ ಸಮೀಪ ಬಂದು ಸಾಲುಗಟ್ಟಿ ನಿಂತಿದ್ದವರನ್ನು ಆವರಣದೊಳಗೆ ಬಿಟ್ಟಿರಲಿಲ್ಲ. ಆದರೆ ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು, ಅವರ ಸ್ನೇಹಿತರು ಹೀಗೆ ನೂರಾರು ಜನರು ಹೇಗೋ ಆವರಣದೊಳಗೆ ಬಂದಿದ್ದರು. ಇನ್ನೂ ಕೆಲವರು ದೇವಸ್ಥಾನದ ಹಿಂಭಾಗದಿಂದ ಕಾಂಪೌಂಡ್ ಜಿಗಿದು ಬಂದಿದ್ದರು.

ಈ ಬಾರಿ ನ.15ರವರೆಗೆ ದೇವಿ ದರ್ಶನಕ್ಕೆ ಅವಕಾಶವಿದ್ದು, 15ರಂದು ಮಧ್ಯಾಹ್ನ 2.30ಕ್ಕೆ ಬಾಗಿಲು ಮುಚ್ಚಲಾಗುತ್ತದೆ.ಬೆಳಗುತ್ತಿದ್ದ ದೀಪ: ದೇವಸ್ಥಾನದ ಬಾಗಿಲು ಮುಚ್ಚುವಾಗ ಗರ್ಭಗುಡಿಯೊಳಗೆ ಹಚ್ಚಿಡುವ ದೀಪ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ಉರಿಯುತ್ತಿರುತ್ತದೆ, ದೇವಿಗೆ ಅರ್ಪಿಸಿದ್ದ ಹೂವುಗಳು ಬಾಡುವುದಿಲ್ಲ ಹಾಗೂ ನೈವೇದ್ಯ ಕೆಟ್ಟಿರುವುದಿಲ್ಲ ಎಂಬುದು ಇಲ್ಲಿನ ನಂಬಿಕೆ. ಅದರಂತೆ ಈ ವರ್ಷವೂ ಬಾಗಿಲು ತೆರೆದಾಗ ದೀಪ ಉರಿಯುತ್ತಿದ್ದುದನ್ನು ಗಮನಿಸಿದ ಭಕ್ತರು ದೇವಿಯ ದರ್ಶನ ಪಡೆದು ಧನ್ಯತಾ ಭಾವ ಮೆರೆಯುತ್ತಿದ್ದರು.ಈ ಅಚ್ಚರಿಯನ್ನು ನೋಡುವ ಸಲುವಾಗಿಯೇ ಜಿಲ್ಲೆ, ಪರಜಿಲ್ಲೆಗಳಿಂದ ದೇವಸ್ಥಾನದ ಬಾಗಿಲು ತೆರೆಯುವ ದಿನವೇ ಸಾವಿರಾರು ಭಕ್ತರು ಬರುತ್ತಿದ್ದಾರೆ. ಈ ಬಾರಿಯೂ ಸಾಕಷ್ಟು ಮುಂಚಿತವಾಗಿ, ಕೆಲವರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಸರತಿ ಸಾಲು ದೇವಸ್ಥಾನದ ಆವರಣವನ್ನು ದಾಟಿ ಇನ್ನೂರು ಮೀಟರ್‌ಗಿಂತ ಮುಂದೆ ಸಾಗಿತ್ತು.

ಬದಲಾಗಿಲ್ಲ ಸ್ಥಿತಿ

ಕಳೆದ ವರ್ಷ ಎದುರಾದ ಸಮಸ್ಯೆಗಳು ಬರಬಾರದೆಂಬ ಉದ್ದೇಶದಿಂದ ಈ ಬಾರಿ ವಿಶೇಷ ವ್ಯವಸ್ಥೆ ಮಾಡಿದ್ದೇವೆ ಎಂದು ಜಿಲ್ಲಾಡಳಿತ  ಹೇಳಿದ್ದರೂ ಮೊದಲ ದಿನದ ಸ್ಥಿತಿಯಲ್ಲಿ ಅಂಥ ಯಾವುದೆ ವ್ಯತ್ಯಾಸ ಗೋಚರಿಸಲಿಲ್ಲ.

ಇತ್ತ ಸುಭಾಸ್ ವೃತ್ತದಿಂದಲೇ ಪೊಲೀಸರ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ಪೊಲೀಸರು ಅನಗತ್ಯ ಎಂಬಷ್ಟು ಕಟ್ಟುನಿಟ್ಟು ಪ್ರದರ್ಶಿಸಿದ್ದು ಕಿರಿಕಿರಿ ಉಂಟುಮಾಡಿತು.ಬಾಗಿಲು ತೆರೆದು ಅರ್ಚಕರು, ಅಧಿಕಾರಿ, ಜನಪ್ರತಿನಿಧಿಗಳು ದರ್ಶನ ಮಾಡಿ ಹೊರಗೆ ಬರುತ್ತಿದ್ದಂತೆ ಗರ್ಭಗುಡಿ ಹೊರಗೆ ನೂಕು ನುಗ್ಗಲುಂಟಾಯಿತು. ಸಮವಸ್ತ್ರದಲ್ಲಿದ್ದ ಅನೇಕ ಪೊಲೀಸರೇ ಸಾರ್ವಜನಿಕರಂತೆ ದರ್ಶನ ಪಡೆ ಯಲು ನೂಕು ನುಗ್ಗಲು ಉಂಟುಮಾಡುತ್ತಿದ್ದರು. ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತವರ ಸ್ಥಿತಿ ಹಾಗೆಯೇ ಇತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.