ಗುರುವಾರ , ಮೇ 6, 2021
31 °C

ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟಕ್ಕೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜ ಮಾರಾಟ ಬೆಲೆ ವಿವಾದ ತಾರಕಕ್ಕೇರಿದ್ದು, ಜಿಲ್ಲೆಯಲ್ಲಿ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ವ್ಯಾಪಾರಿಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.ಬಿತ್ತನೆ ಬೀಜದ ಬೆಲೆ ಕಡಿಮೆ ಮಾಡುವಂತೆ ವ್ಯಾಪಾರಿಗಳ ಮನವೊಲಿಸಲು ಬುಧವಾರ ನಗರದಲ್ಲಿ ಆಯೋಜಿಸಿದ್ದ ಸಭೆ ವಿಫಲವಾಗಿದೆ.ಆಲೂಗೆಡ್ಡೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರತಿ ವರ್ಷ ಪಂಜಾಬ್‌ನಿಂದ ಬಿತ್ತನೆಬೀಜ ತರಿಸಲಾಗುತ್ತಿದೆ. ಕಳೆದ ವರ್ಷ ಕ್ವಿಂಟಲ್‌ಗೆ  ರೂ  800ರಿಂದ 900ವರೆಗೆ ಬಿತ್ತನೆ ಬೀಜ ಮಾರಾಟವಾಗಿದ್ದರೆ, ಈ ಬಾರಿ ವ್ಯಾಪಾರಿಗಳು ರೂ1600 ನಿಗದಿ ಮಾಡಿದ್ದು ರೈತರಲ್ಲಿ ಆತಂಕ ಉಂಟುಮಾಡಿತ್ತು. ಬೆಲೆ ಕಡಿಮೆ ಮಾಡುವಂತೆ ರೈತರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಮೊರೆಹೋದ ಹಿನ್ನೆಲೆಯಲ್ಲಿ ವ್ಯಾಪಾರಿಗಳು, ರೈತ ಪ್ರತಿನಿಧಿಗಳು, ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಸಭೆ ಕರೆಯಲಾಗಿತ್ತು.`ಅಂಗಮಾರಿ ರೋಗದಿಂದಾಗಿ ರೈತರು ಕಳೆದ ಹಲವು ವರ್ಷಗಳಿಂದ ನಷ್ಟಕ್ಕೊಳಗಾಗಿದ್ದಾರೆ. ಬಿತ್ತನೆ ಬೀಜದ ದರವನ್ನೂ ಹೆಚ್ಚಿಸಿದರೆ ರೈತರು ಕೈ ಸುಟ್ಟುಕೊಳ್ಳಬೇಕಾಗುತ್ತದೆ. ಪ್ರಸಕ್ತ ಸಾಲಿನ ಮೊದಲ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆಲೂಗೆಡ್ಡೆ ಬೆಳೆಗಾರರಿಗೆ ನಷ್ಟ ಸಾಧ್ಯತೆಯೇ ಹೆಚ್ಚಿದೆ.

 

ತೋಟಗಾರಿಕೆ ಇಲಾಖೆ ಹಾಗೂ ವಿಜ್ಞಾನಿಗಳ ಅಧ್ಯಯನ ಪ್ರಕಾರ ಪಂಜಾಬ್‌ನಿಂದ ತರಿಸಿದ ಬಿತ್ತನೆ ಬೀಜಕ್ಕೆ ಗರಿಷ್ಠ ಎಂದರೂ ಕೆ.ಜಿಗೆ  ರೂ 9.30 ದರ ಬೀಳುತ್ತದೆ. ಅದೇ ಬೆಲೆಗೆ ಮಾರಾಟ ಮಾಡಬೇಕು~ ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಪಂಜಾಬ್‌ನಿಂದ ಬಂದಿದ್ದ ವ್ಯಾಪಾರಿಗಳು ಇದಕ್ಕೆ ಒಪ್ಪದೆ, `ನಮಗೇ ಕೆ.ಜಿ.ಗೆ ರೂ 16.80 ಬೀಳುತ್ತಿದೆ. ಅದಕ್ಕಿಂತ ಕಡಿಮೆಗೆ ಮಾರಲು ಸಾಧ್ಯವಿಲ್ಲ~ ಎಂದು ಹಟಹಿಡಿದರು. ವ್ಯಾಪಾರಿಗಳ ಈ ನಿಲುವನ್ನು ರೈತರು ವಿರೋಧಿಸಿದರು.ಕೊನೆಗೆ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, ಬಿತ್ತನೆ ಬೀಜ ಮಾರಾಟಕ್ಕೆ ಜಿಲ್ಲೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.`ಈ ಬಾರಿ ಜೋಳ ಬೆಳೆಯುವಂತೆ ರೈತರಿಗೆ ಸಲಹೆ ನೀಡಿದ್ದೇವೆ. ಪ್ರಚಾರ ಕಾರ್ಯ ಇನ್ನಷ್ಟು ಚುರುಕುಗೊಳಿಸುತ್ತೇವೆ. ಅಗತ್ಯಬಿದ್ದರೆ ತಮಿಳುನಾಡಿನಿಂದ ಜೋಳದ ಬಿತ್ತನೆ ಬೀಜ ತರಿಸಿ ರೈತರಿಗೆ ನೀಡುತ್ತೇವೆ. ಯಾವ ಕಾರಣಕ್ಕೂ ರೈತರ ಭವಿಷ್ಯವನ್ನು ವ್ಯಾಪಾರಿಗಳೇ ನಿರ್ಧರಿಸುವಂಥ ವ್ಯವಸ್ಥೆಗೆ ಅವಕಾಶ ನೀಡುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.ಸಭೆಯಲ್ಲಿದ್ದ ರೈತರೂ ಜಿಲ್ಲಾಧಿಕಾರಿ ತೀರ್ಮಾನವನ್ನು ಸ್ವಾಗತಿಸಿದರು. ಈ ಬಾರಿ ಜೋಳವನ್ನೇ ಬೆಳೆಯುತ್ತೇವೆ ಎಂದು ಭರವಸೆ ನೀಡಿ ಸಭೆಯಿಂದ ಹೊರನಡೆದರು.ಜಿಲ್ಲೆಯಲ್ಲಿ ಹಿಂದೆ 40 ಸಾವಿರ ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿತ್ತು. ಅಂಗಮಾರಿ ರೋಗದಿಂದಾಗಿ ಸತತ 3 ವರ್ಷ ಬೆಳೆ ನಷ್ಟವಾದ ಪರಿಣಾಮ ಈಗ 20 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ 10 ಲಕ್ಷ ಟನ್  ಬಿತ್ತನೆ ಬೀಜ ಮಾರಾಟವಾಗುತ್ತಿದ್ದು, ಸದ್ಯ ಹಾಸನದ 7 ಶೈತ್ಯಾಗಾರಗಳಲ್ಲಿ 5 ಲಕ್ಷ ಟನ್ ಬಿತ್ತನೆ ಬೀಜ ಸಂಗ್ರಹವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.