ಗುರುವಾರ , ಮೇ 13, 2021
24 °C

ಹಾಸ್ಟೆಲ್ ಪಡಿತರ ಸರಬರಾಜು ಗುತ್ತಿಗೆ ಅಕ್ರಮ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಿಗೆ ಪಡಿತರ ಸರಬರಾಜು ಮಾಡಲು ನೀಡಲಾಗಿರುವ ಗುತ್ತಿಗೆಯಲ್ಲಿ ನಡೆದಿರಬಹುದಾದ ಅಕ್ರಮಗಳ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಬಿ.ಮಲ್ಲಿಕಾರ್ಜುನ್ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶನಿವಾರ ನಡೆದ ಮುಂದುವರಿದ ಸಾಮಾನ್ಯಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿನಿಲಯಗಳಿಗೆ ಆಹಾರ ಸರಬರಾಜು ಗುತ್ತಿಗೆ ಕ್ರಮಬದ್ಧತೆ ಬಗ್ಗೆ ಸೂಕ್ತ ತನಿಖೆಯಾಗಬೇಕು. ಅಲ್ಲದೇ,ಯಾರು ಗುತ್ತಿಗೆ ಪಡೆದಿರುತ್ತಾರೋ ಅವರೇ ನೇರವಾಗಿ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪಾದಾರ್ಥಗಳು ಹಾಗೂ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡಬೇಕು ಎಂದು ಅವರು ಸೂಚಿಸಿದರು.ಶಿವಮೊಗ್ಗ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಿಗೆ ಆಹಾರ ಸರಬರಾಜು ಮಾಡಲು ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಹಾಗೂ ಈ ಹಿಂದೆ ಟೆಂಡರ್ ಕರೆಯಲಾಗಿದ್ದು, ಕನಿಷ್ಠ ದರ ನಿಗದಿಪಡಿಸಿದವರಿಗೆ ಸರಬರಾಜು ಮಾಡಲು ಅವಕಾಶ ನೀಡದೆ ನಿಯಮ ಉಲ್ಲಂಘಿಸಲಾಗಿದೆ ಎಂದು ಸದಸ್ಯ ಹೊನಗೋಡು ರತ್ನಾಕರ್, ಕೃಷ್ಣೇಗೌಡ, ಹಾರೋಗುಳಿಗೆ ಪದ್ಮನಾಭ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಆರೋಪಿಸಿ ಸ್ಪಷ್ಟನೆ ಬಯಸಿದರು.ಟೆಂಡರ್ ಕರೆಯಲು ಚುನಾವಣೆ ನೀತಿ ಸಂಹಿತೆ ಅಡ್ಡಿ ಬಂದಿದ್ದರಿಂದ ಹಾಗೂ ರಾಜ್ಯಮಟ್ಟದಲ್ಲಿಯೇ ಟೆಂಡರ್ ಕರೆಯುವುದಾಗಿ ನಿರ್ದೇಶನ ಇದ್ದುದರಿಂದ ಹೊಸದಾಗಿ ಟೆಂಡರ್ ಕರೆಯಲಿಲ್ಲ. ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಗೆ ತೊಡಕಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ಪಾರದರ್ಶಕ ಕಾಯ್ದೆ ಮಾರ್ಗಸೂಚಿಯಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಈ ಹಿಂದೆ ಸರಬರಾಜು ಮಾಡಿದವರಿಗೆ ಹಿಂದಿನ ದರದಂತೆಯೇ ಮುಂದುವರಿಸಿರುವುದಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಇಲಾಖಾಧಿಕಾರಿ ನಜುಬುಲ್ಲಾ ಖಾನ್ ಸ್ಪಷ್ಟನೆ ನೀಡಿದರು.ಇದಕ್ಕೆ ಒಪ್ಪದ ಸದಸ್ಯ ಕೃಷ್ಣೇಗೌಡ ಸಭಾತ್ಯಾಗ ಮಾಡಿದರು. ಐದು ನಿಮಿಷ ಸಭೆ ಮುಂದೂಡಿದ ಅಧ್ಯಕ್ಷರು, ತದನಂತರ ಸಭೆ ಸೇರಿದಾಗ, ಈ ಪ್ರಕರಣ ಕುರಿತು ತನಿಖೆ ನಡೆಸುವ ಭರವಸೆ ನೀಡಿದರು.ವಿಸ್ತರಣೆಗೆ ಪ್ರಸ್ತಾವನೆ : ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಷ್ಟೇ ತೆರೆದಬಾವಿಗಳನ್ನು ನಿರ್ಮಿಸಲು ಸಾಧ್ಯ ಇರುವುದರಿಂದ ಆರ್ಥಿಕ ವರ್ಷವನ್ನು ಮಾರ್ಚ್‌ಗೆ ಬದಲಾಗಿ ಮೇ 15ರವರೆಗೂ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.ಮಾರ್ಚ್ 30ಕ್ಕೆ ಆರ್ಥಿಕ ವರ್ಷ ಕೊನೆಗೊಳ್ಳುವುದರಿಂದ ಯೋಜನಾ ಶೀರ್ಷಿಕೆಯಲ್ಲಿ ಬಿಡುಗಡೆಯಾದ ಹಣ ಬಳಕೆಯಾಗದಿದ್ದರೆ ಅದನ್ನು ವಾಪಸು ಕಳಿಸಬೇಕಿದೆ. ಆದರೆ, ಕುಡಿಯುವ ನೀರಿನ ಯೋಜನೆಯಾದ ಮಲೆನಾಡು ಪ್ರದೇಶದ ಗ್ರಾಮೀಣ ಭಾಗದಲ್ಲಿ ತೆರೆದ ಬಾವಿ ಕಾಮಗಾರಿಗಳು ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ, ಈ ವಿಷಯಕ್ಕೆ ಸಂಬಂಧಿಸಿದಂತೆ ಮೇ ತಿಂಗಳವರೆಗೂ ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಸದಸ್ಯೆ ಶುಭಾ ಕೃಷ್ಣಮೂರ್ತಿ ಆಗ್ರಹಿಸಿದರು.ತೆರೆದಬಾವಿ ನಿರ್ಮಿಸುವ ಯೋಜನೆಯಲ್ಲಿ ಕೆಲವು ಖಾಸಗಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇಂತಹ ಬಿಲ್ಲುಗಳನ್ನು ಪಾಸು ಮಾಡಲು ಅವಕಾಶವಿಲ್ಲ ಎಂಬ ಪಂಚಾಯತ್‌ರಾಜ್ ಎಂಜಿಯರಿಂಗ್ ಇಲಾಖೆಯ ಹೇಳಿಕೆಗೆ ಸಿಇಒ ಸಸಿಕಾಂತ್ ಸೆಂಥಿಲ್, ಯಾವುದೇ ಕಾರಣಕ್ಕೂ ನಿಯಮ ಮೀರಿ ಯೋಜನೆಗಳನ್ನು ಅನುಷ್ಠಾನ ಮಾಡುವುದು ಸರಿಯಲ್ಲ. ಒಂದು ವೇಳೆ ಖಾಸಗಿ ಜಾಗದಲ್ಲಿ ಬಾವಿ ನಿರ್ಮಿಸಿದ್ದರೆ ಅದನ್ನು ಸರ್ಕಾರದಿಂದ ಸಾರ್ವಜನಿಕ ಸ್ವತ್ತಾಗುವಂತೆ ಮಂಜೂರು ಮಾಡಿಸಿಕೊಳ್ಳಬಹುದು ಎಂದರು.ಸಭೆಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ವರದಿ ಮಂಡಿಸಲಾಯಿತು. ಅಂಗನವಾಡಿ ಕಟ್ಟಡಗಳ ಕಾಮಗಾರಿ, ಶಿಕ್ಷಣ ಇಲಾಖೆಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಉಪಾಧ್ಯಕ್ಷೆ ಹೇಮಾ ಪಾವನಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.