ಶನಿವಾರ, ಜನವರಿ 18, 2020
20 °C

ಹುಣ್ಣಿಮೆ ಚಂದ್ರನಿಗೇಕೆ ಕಳಂಕ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರಿಕ್ಷದ ವಿದ್ಯಮಾನಗಳೆಲ್ಲವು ವಿಸ್ಮಯ ತರುವಂತಹದ್ದು. ಮನುಷ್ಯ ವಿವೇಚನೆಯನ್ನು ಸದಾ ಚುರುಕುಗೊಳಿಸುವ ಗುಣ ಅದರಲ್ಲಿದೆ. ನಭೋಮಂಡಲದಲ್ಲಿ ನಿರಂತರವಾಗಿ ಚಟುವಟಿಕೆಗಳು ನೆರವೇರುತ್ತಲೇ ಇರುವುದು.ಅಲ್ಲಿರುವ ವಸ್ತುಗಳ ಸ್ಥಿತಿ, ವೇಗ, ಪ್ರಖರತೆಗಳ ಅಪಾರ ಶಕ್ತಿಯನ್ನು ಅರ್ಥಮಾಡಿಕೊಳ್ಳುವ ಹವ್ಯಾಸ, ಅಧ್ಯಯನದ ಪ್ರಯತ್ನಗಳ ಮೂಲವು ಗುರುತಿಸಲಾರದಷ್ಟು ಹಳೆಯದು. ಆ ಬಗ್ಗೆ ಅದೆಷ್ಟು ಮಾಹಿತಿಗಳು ಲಭ್ಯವಿದೆಯೋ ಅಷ್ಟೇ ತಿಳಿಯಲಾಗದ ವಿಷಯಗಳು, ಗೊಂದಲಗಳು ಇವೆ.ಸೂರ್ಯ ಗ್ರಹದ ಬಗ್ಗೆ ಇರುವ ಸದಭಿಪ್ರಾಯ ಚಂದ್ರಗ್ರಹದ ಬಗ್ಗೆ ಇಲ್ಲ. ಚಂದ್ರ ಗ್ರಹಕ್ಕೂ ಮನಸ್ಸಿಗೂ ಅದೆಂತಹುದೋ ಭಾವನಾತ್ಮಕ ಸಂಪರ್ಕವಿದೆ ಎನ್ನುವ ನಂಬಿಕೆ ಬಹಳ ಹಳೆಯದ್ದು. ಮಾನಸಿಕ ಗೊಂದಲಗಳು ಅಮಾವಾಸ್ಯೆ, ಹುಣ್ಣಿಮೆಯ ದಿನಗಳಲ್ಲಿ ಹೆಚ್ಚು ಎನ್ನುವ ನಂಬಿಕೆಯು ಜನಸಾಮಾನ್ಯರಲ್ಲಿ ಮಾತ್ರವಲ್ಲದೆ ವೈದ್ಯರು, ತಜ್ಞರನೇಕರಲ್ಲೂ ಇದೆ. ಹುಣ್ಣಿಮೆಯ ಚಂದ್ರನಿಂದ ರೋಮಾಂಚನವಂತೂ ಖಂಡಿತ.

 

ಮನದ ಹಿತವನ್ನು ಪಡೆಯುವ ಬೆಳಕದು ಎನ್ನುವವರೇ ಹೆಚ್ಚು. ಹೀಗಿದ್ದರೂ ಮಾನಸಿಕ ಅಸಮತೋಲನ ಹುಣ್ಣಿಮೆಯಂದು ಹೆಚ್ಚೆಂದು ನಂಬುವವರಲ್ಲಿ ವೈದ್ಯಕೀಯ ಸಮುದಾಯದವರೂ ಸೇರಿರುತ್ತಾರೆ ಎನ್ನುತ್ತವೆ ಅಧ್ಯಯನಗಳು. ವಿಶೇಷವಾಗಿ ಮಾನಸಿಕ ಆರೋಗ್ಯದ ಶುಶ್ರೂಷಕರಲ್ಲಿ ಇದು ಹೆಚ್ಚಾಗಿರುವುದು ಕಂಡುಬಂದಿದೆ.

ಜಡತ್ವಕ್ಕಲ್ಲಿ ಮಹತ್ವವಿಲ್ಲ...

ನಭೋಮಂಡಲ ಸದಾ ಬಿರುಸಿನ ಚಟುವಟಿಕೆಗಳಿಂದ ಕೂಡಿರುತ್ತದೆ. ಅಲ್ಲಿ ಜಡತ್ವಕ್ಕೆ ಮಹತ್ವವಿಲ್ಲ; ಚಲನೆಯೇ ಅಲ್ಲಿನ ರೀತಿ. ಈ ರೀತಿಗೆ ನಮ್ಮ ನೆಚ್ಚಿನ ಚಂದ್ರಮನೂ ಹೊರತಲ್ಲ. ಭೂಮಿತಾಯಿಗೆ ಚಂದ್ರನೇ ಮಾಮ ಇರಬಹುದೇನೋ? ಇದು ಕೆಲವು ಸಂಸ್ಕೃತಿಗಳಲ್ಲಿ ಚಂದ್ರಗಹದ ಬಗ್ಗೆ ಇರುವಂತಹ ಜನಪ್ರಿಯ ಭಾವನೆ.ನಭೋಮಂಡಲದಲ್ಲಿರುವ ಸಾವಿರಾರು ಗ್ರಹ-ಉಪಗ್ರಹಗಳಲ್ಲಿ ಚಂದ್ರನೂ ಒಂದು. ಭೂಮಿಗೂ ಅದಕ್ಕೂ ಹತ್ತಿರದ ನಂಟು. ಭೂಮಿಯ ಸುತ್ತುವಿಕೆಯಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಿತಿ. ಸರಾಸರಿ ಪ್ರತಿ 29.53 ದಿನಗಳಿಗೊಮ್ಮೆ ಅದರ ಪ್ರಖರತೆಯ ಬೆಳಕು ಭೂಮಿಯ ಮೇಲೂ ಚೆಲ್ಲುತ್ತದೆ. ಅಂತರಿಕ್ಷದಲ್ಲಿ ಜರುಗುವ ಸಾವಿರಾರು ಘಟನೆಗಳಲ್ಲಿ ಇದೇನು ಮಹತ್ವದ್ದಲ್ಲ. ಆದರೆ, ಈ ಘಟನೆಯು ಮನುಷ್ಯನ ಮಾನಸಿಕ ಸ್ಥಿತಿಗಳ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ ಎನ್ನುತ್ತಾರೆ ಕೆಲ ಮನಸ್ಸಿನ ಅಧ್ಯಯನಕಾರರು.ಉದಾಹರಣೆಗೆ ಹೇಳುವುದಾದರೆ- ಆತ್ಮಹತ್ಯೆಯ ಪ್ರಕರಣ, ಭೀಕರ ರಸ್ತೆ ಅವಘಡ, ಕಳ್ಳತನ, ವಿಚಿತ್ರ ವರ್ತನೆಗಳು, ಮಾನಸಿಕ ಅನಾರೋಗ್ಯ, ಹಿಡಿತಕ್ಕೆ ಬರದ ಕುಡಿತ, ಪ್ರಾಣಿಗಳ ಅಟ್ಟಹಾಸ, ಜನನ ಪ್ರಮಾಣಗಳು ಪೂರ್ಣಚಂದ್ರನಿರುವ ದಿನದಲ್ಲಿಯೇ ಹೆಚ್ಚಾಗಿ ಸಂಭವಿಸುವುದು ಜನಸಾಮಾನ್ಯರಿಗೂ ತಿಳಿದಿರುವಂತಹದ್ದೇ.

ಹುಣ್ಣಿಮೆ ರಾತ್ರಿಯಲ್ಲಿ ಗಸ್ತು!

ಅಪರಾಧದ ಪ್ರಕರಣಗಳು ಹೆಚ್ಚಾಗಿ ಕಂಡುಬಂದಂತಹ ದಿನಗಳಲ್ಲಿ ಪೊಲೀಸ್ ಬಂದುಬಸ್ತು ಚುರುಕುಗೊಳಿಸುವುದು ಸಾಮಾನ್ಯ. ಆದರೆ, ಅಮಾವಾಸ್ಯೆ, ಹುಣ್ಣಿಮೆಯ ದಿನಗಳಲ್ಲಿ ಜರಗುವ ಅಪರಾಧಕ್ಕೂ ಚಂದ್ರನ ಚಲನಗೆ ಕಾರಣವಿದೆ ಎನ್ನುವ ಅಂದಾಜಿನ ಮೇಲೆ ಹುಣ್ಣಿಮೆಯ ರಾತ್ರಿಗಳಲ್ಲಿ ಪೊಲೀಸ್ ಗಸ್ತು ಹೆಚ್ಚಾಗಿ ಇರಬೇಕೆಂಬ ನಿರ್ಣಯವನ್ನು 2007ರಲ್ಲಿ ಇಂಗ್ಲೆಂಡ್ ಒಂದು ಪ್ರಾಂತ್ಯದ ಆಡಳಿತ ತೆಗೆದುಕೊಂಡಿತಂತೆ.ಎಷ್ಟೋ ಸಲ ವೈದ್ಯಕೀಯ ಮತ್ತು ಪೊಲೀಸು ವೃತ್ತಿಯಲ್ಲಿರುವ ಕೆಲವು ವ್ಯಕ್ತಿಗಳ ಸ್ವಂತ ಅಭಿಪ್ರಾಯವು ಸಹ ಇಂತಹ ನಂಬಿಕೆಗಳನ್ನೇ ಬಲಪಡಿಸಿರಬಲ್ಲದು. ಹೀಗಾಗಿ, ಹುಣ್ಣಿಮೆಯ ದಿವಸದೊಂದು ಅಪಘಾತ, ಅಪರಾಧ ಮತ್ತು ಅಸ್ವಸ್ಥತೆಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ ಎನ್ನುವ ಅಭಿಪ್ರಾಯ ಆಕಸ್ಮಿಕವಷ್ಟೇ ಎನ್ನುತ್ತವೆ ಸಮೀಕ್ಷೆ, ಸಂಶೋಧನೆಯ ಅಧ್ಯಯನಗಳು. ಹೀಗಾಗಿ ಚಂದ್ರನ ಚಲನವಲನಗಳ ಧಾಟಿಯಿಂದಲೇ ಮನೋವಿಕಾರಗಳು, ದುಷ್ಟತನ ಅಥವಾ ಅಪರಾಧಗಳು ಜರುಗುತ್ತವೆ ಎನ್ನುವುದು ಕೇವಲ ಮೂಢನಂಬಿಕೆಯಷ್ಟೆ.

ಚಂದ್ರ ಎಷ್ಟರಮಟ್ಟಿಗೆ ಚೋದಕ?

ಚಂದ್ರನ ಪ್ರಭಾವವು ಮನಸ್ಸು ಮತ್ತು ಶರೀರದ ಮೇಲಾಗುತ್ತದೆ ಎನ್ನುವ ವಿಷಯದ ಬಗ್ಗೆ ಸಾಕಷ್ಟು ವೈದ್ಯಕೀಯ ಸಂಶೋಧನೆಗಳಾಗಿವೆ. ಇಂತಹ ಸಂಶೋಧನೆಗಳ ಪ್ರಯತ್ನದಿಂದಾಗಿ ಮನಸ್ಸಿನ ಮೇಲೆ ಚಂದ್ರನ ಪ್ರಭಾವವಾಗುವುದನ್ನು `ಟ್ರಾನ್ಸಿಲ್ವನಿಯನ್ ಪರಿಣಾಮ~ ಎನ್ನುತ್ತಾರೆ. ಹುಣ್ಣಿಮೆಯ ದಿನಗಳಲ್ಲಿ ಮನಸ್ಸು ಹದಗೆಡುವುದುಂಟು ಎನ್ನುವುದು ಅನಾದಿಯಿಂದಲೂ ಮುಂದುವರೆದಿರುವ ನಂಬಿಕೆ. ಇದು ತಪ್ಪು ಎಂದು ಪ್ರತಿಪಾದಿಸುತ್ತದೆ ನೂರಾರು ಸಂಶೋಧನೆಗಳು. ಕೆಲವು ವಿವರಣೆಗಳಂತೆ ಚಂದ್ರನ ಬೆಳಕಿನ ಪ್ರಖರತೆಯು ನಿದ್ದೆಯ ಲಯವನ್ನು ಕೆಡಿಸುವುದು.ಲಯಕೆಟ್ಟ ನಿದ್ದೆಯ ಪರಿಣಾಮವು ಶರೀರದ ಚಟುವಟಿಕೆಯ ಮೇಲಷ್ಟೇ ಅಲ್ಲದೇ ಮನಸ್ಸಿನ ಮೇಲೂ ಆಗುವುದು. ಆದರೆ, ನಾಗರೀಕತೆಯ ಬೆಳವಣಿಗೆಯೊಂದಿಗೆ ಪ್ರಕೃತಿಯೊಂದಿಗಿದ್ದ ನಿಕಟ ಸಂಪರ್ಕ ಸಂಪೂರ್ಣವಾಗಿ ಅಳಿಸಿಹೋಗಿದೆ. ಹೀಗಿದ್ದಾಗ್ಯೂ ಅಂದಿನ ಪ್ರಭಾವಗಳ ನೆನಪೇ ಚಂಚಲ ಮನಸ್ಸಿರುವವರಲ್ಲಿ ಮಾನಸಿಕ ಗೊಂದಲಗಳನ್ನು ಉಂಟುಮಾಡಬಲ್ಲದು.

 

ಮನೋವೈದ್ಯ ಲೀಬರ್ ಎಂಬಾತ ವರ್ತನೆ ಮತ್ತು ಹುಣ್ಣಿಮೆಯ ನಡುವೆ ಇರುವ ಸಹಸಂಬಂಧದ ಬಗ್ಗೆ ಕೆಲವು ವಿವರಣೆಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಮನುಷ್ಯನ ಶರೀರದಲ್ಲಿ ನೀರಿನ ಅಂಶ ಹೆಚ್ಚಾಗಿರುವಂತೆ ಭೂಮಿಯ ಹೆಚ್ಚಿನ ಭಾಗವು ನೀರಿನಿಂದಲೇ ಆವರಿಸಿರುತ್ತದೆ. ಅಂತೆಯೇ ಮನುಷ್ಯ ಶರೀರದಲ್ಲಿರುವ ನೀರಿನ ಅಂಶವು ಹುಣ್ಣಿಮೆಯ ದಿನಗಳಲ್ಲಿ ಚೋದಿತಗೊಂಡು ಮಿದುಳಿನ ಚಟುವಟಿಕೆಗಳನ್ನು ಏರುಪೇರು ಮಾಡಬಲ್ಲದಂತೆ.ಹುಣ್ಣಿಮೆಯ ದಿನದಂದು ಸಾಗರದ ಅಲೆಗಳ ಅಬ್ಬರ ಹೆಚ್ಚಾಗುವುದಕ್ಕೂ ಚಂದ್ರನ ಪ್ರಭಾವವಿದೆ ಎನ್ನುವ ರೀತಿಯಲ್ಲಿ. ಆದರೆ, ಭೂವಿಜ್ಞಾನದ ತತ್ವಗಳು ಹೇಳುವುದೇನೆಂದರೆ ಸಾಗರದಲ್ಲೇಳುವ ಅಲೆಗಳ ಅಬ್ಬರಕ್ಕೆ ಚಂದ್ರ ಮತ್ತು ಭೂಮಿಯ ನಡುವೆ ಇರುವ ಅಂತರದ ಪ್ರಭಾವದಿಂದಾಗುವ ಗುರುತ್ವಾಕರ್ಷಣೆ. ಇದು ಹುಣ್ಣಿಮೆ ದಿನದಲ್ಲಿರುವಂತೆಯೇ ಅಮಾವಾಸ್ಯೆ ಮತ್ತು ನಂತರದಲ್ಲಿಯೂ ಇರುವುದು.ಮಾರ್ಟಿನ್ ಮತ್ತು ಸಂಗಡಿಗರು 1992ರಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ ಗುರುತಿಸಿದ ಅಂಶವೆಂದರೆ- ಆತ್ಮಹತ್ಯೆ ಪ್ರಕರಣಗಳು ಹುಣ್ಣಿಮೆ, ಅಮಾವಾಸ್ಯೆಯ ದಿನಗಳಲ್ಲಿ ಹೆಚ್ಚುತ್ತದೆ ಎನ್ನುವ ಅಭಿಪ್ರಾಯಕ್ಕೆ ಆಧಾರವಿಲ್ಲ. ವಿವಿಧ ಸಂಖ್ಯಾಶಾಸ್ತ್ರದ ವಿಧಾನಗಳನ್ನು ಬಳಸಿಕೊಂಡು ಆತ್ಮಹತ್ಯೆ ಜರುಗಿದ ದಿನ, ಘಳಿಗೆಗಳನ್ನು ಗಮನಿಸಿದಾಗ ಗೊತ್ತಾದಂತಹ ಅಂಶವಿದು. ಇದಲ್ಲದೇ ಬೇರೆಯ ದಿನಗಳಲ್ಲಿ ಉಂಟಾದ ಆತ್ಮಹತ್ಯೆಯ ರೀತಿಗೂ ಹುಣ್ಣಿಮೆ ದಿನಗಳಂದು ಜರುಗಿದಂತಹ ಪ್ರಕರಣಗಳಿಗೂ ಎದ್ದುಕಾಣಿಸುವ ವ್ಯತ್ಯಾಸವೇನೂ ಇಲ್ಲವೆನ್ನುವ ಅಭಿಪ್ರಾಯವನ್ನೇ ಬಹುತೇಕ ಅಧ್ಯಯನಗಳು ಸೂಚಿಸುತ್ತವೆ.ಇದೇ ರೀತಿಯ ಇನ್ನೊಂದು ಸಮೀಕ್ಷೆಯಲ್ಲಿ ಮ್ಯಾಕ್ಮಾನ್ ಎಂಬಾಕೆ, ಅಮೆರಿಕದಲ್ಲಿ ಸಂಭವಿಸಿದ ಸುಮಾರು ಎರಡು ಲಕ್ಷ ಆತ್ಮಹತ್ಯೆ ಪ್ರಕರಣಗಳ ಇತಿಹಾಸವನ್ನು ಸಂಗ್ರಹಿಸಿ ವಿಶ್ಲೇಷಣೆ ನಡೆಸಿದಾಗಲೂ ಗೋಚರಿಸಿದ ಅಂಶವು ಹುಣ್ಣಿಮೆ, ಅಮಾವಾಸ್ಯೆಯ ದಿನಗಳಂದು ಆತ್ಮಹತ್ಯೆಯಿಂದಾದ ಸಾವು ಅಥವಾ ಆತ್ಮಹತ್ಯೆ ಪ್ರಯತ್ನದ ಪ್ರಕರಣಗಳ ಸಂಖ್ಯೆಯೂ ವಿಶೇಷವಾದದ್ದನ್ನೇನು ಸೂಚಿಸಲಿಲ್ಲ. ಅಂದರೆ, ಆತ್ಮಹತ್ಯೆಯ ಕಾರಣಗಳಲ್ಲಿ ಹುಣ್ಣಿಮೆಯ ಚಂದ್ರನ ಪಾತ್ರ ವಿಶೇಷವಾಗಿ ಇರುವುದಿಲ್ಲ.ಜರ್ಮನಿಯ ಮಧ್ಯ ಫ್ರಾಂಕೋನಿಯದಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ, 1998ರಿಂದ 2003ರವರೆಗೆ ನಡೆದ ಸುಮಾರು 900 ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆ ಸಂಗ್ರಹಿಸಿದಾಗ ತಿಳಿದು ಬಂದದ್ದೇನೆಂದರೆ ಚಂದ್ರನ ಸುತ್ತುವಿಕೆಗೂ ಆತ್ಮಹತ್ಯೆಯ ಮೂಲಕ ಬರುವ ಸಾವಿಗೂ ಯಾವ ಸಂಬಂಧವೂ ಇಲ್ಲದಿರುವುದು. ಕೆಲವರಲ್ಲಿ ಹುಣ್ಣಿಮೆ, ಅಮಾವಾಸ್ಯೆಯ ದಿನಗಳಲ್ಲಿ ಕೋಪ, ಆವೇಶ, ಆಕ್ರೋಶವು ಹೆಚ್ಚಾಗಿದ್ದು ಹಿಂಸಾತ್ಮಕ ಪ್ರವೃತ್ತಿ ತಡೆಯಲಾರದಷ್ಟು ಏರಿರುತ್ತದೆ ಎನ್ನುವ ಅಭಿಪ್ರಾಯವೂ ಹುರುಳಿಲ್ಲದ್ದು ಎನ್ನುತ್ತವೆ ಸಂಶೋಧನೆಗಳು.

ಮಾನಸಿಕ ಅಸಮತೋಲನ ಮತ್ತು ಹುಣ್ಣಿಮೆ

ಇಂತಹದೊಂದು ಪ್ರಶ್ನೆಗೆ ಬಾಯಿಮಾತಿನ ಉತ್ತರ ಸರಿಬರದು. ವೈಜ್ಞಾನಿಕ ವಿವರಣೆಗಳ ಮೂಲಕವೇ ತೃಪ್ತಿದಾಯಕ ಉತ್ತರ ಶೋಧಿಸಬೇಕು. ಇದುವರೆವಿಗೂ ಲಭ್ಯವಿರುವ ಸಂಶೋಧನೆಯ ಮಾಹಿತಿಗಳ ಅನ್ವಯ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ಮನುಷ್ಯ ವರ್ತನೆಯ ಸಮತೋಲನವನ್ನು ಅಲ್ಲಾಡಿಸುವುದು ಎನ್ನುವುದನ್ನು ಖಚಿತವಾಗಿ ತಿರಸ್ಕರಿಸುತ್ತದೆ. ಒಂದು ವೇಳೆ ಹುಣ್ಣಿಮೆಯೇ ಏರಿದ ಉನ್ಮಾದ, ಉದ್ವೇಗಗಳಂತಹ ಮನೋಸ್ಥಿತಿಗೆ ಕಾರಣವಾಗಿದ್ದಲ್ಲಿ ಅದೇಕೆ ಮನುಷ್ಯರೆಲ್ಲರಲ್ಲೂ ಕಾಣಿಸಿಕೊಳ್ಳುವುದಿಲ್ಲ?

ಹಾಗೆಯೇ, ಶರೀರದ ರೋಗಗಳಿಗೂ ಏಕೆ ವಿಸ್ತಾರಗೊಳ್ಳುವುದಿಲ್ಲ ಎನ್ನುವಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಒಂದು ವೇಳೆ ಚಂದ್ರನ ಚಲನವಲನಗಳೇ ಮನಸ್ಸಿನ ಏರುಪೇರುಗಳಿಗೆ ಕಾರಣವೆನ್ನುವುದು ಖಚಿತವಾಗಿ ಗೊತ್ತಾದರಂತೂ ಅಸ್ವಸ್ಥತೆ, ಅಪರಾಧಗಳಂತಹ ಸಮಸ್ಯೆಗಳ ನಿರ್ವಹಣೆಯ ಸೂತ್ರಗಳನ್ನು ಕಂಡುಕೊಂಡು ಜನತೆಗಾಗುವ ನೋವು, ಭಯ, ಆತಂಕಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದು.

(ಲೇಖಕರು ಮನೋವಿಜ್ಞಾನಿ)

ಪ್ರತಿಕ್ರಿಯಿಸಿ (+)