ಭಾನುವಾರ, ಜನವರಿ 26, 2020
28 °C

ಹುಲಿ ಮೈಸೂರು ನೋಡಬೇಕು ಅಂತ ಬರೊಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿಯಲ್ಲಿ ನಡೆಯಲಿರುವ ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿರುವ ನಾ. ಡಿಸೋಜ ಅವರಿಗೆ ಮಕ್ಕಳನ್ನು ಕಂಡರೆ ಇನ್ನಿಲ್ಲದ ಪ್ರೀತಿ. ಸಮ್ಮೇಳನದ ಅಧ್ಯಕ್ಷರಾಗಿ ಡಿಸೋಜ ಅವರು ಆಯ್ಕೆಯಾಗಿದ್ದೇ ತಡ, ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳು ಫೋನ್‌ ಮಾಡಿದರು. ಅಭಿನಂದನೆ ಹೇಳುವುದರ ಜೊತೆಗೆ ಹಲವು ಪ್ರಶ್ನೆಗಳನ್ನೂ ಕೇಳಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಹಿರಿಯ ಸಾಹಿತಿ ಪ್ರೀತಿಯಿಂದ ಉತ್ತರಿಸಿದರು. ಈ ಸಂವಾದದಲ್ಲಿ ನಾಟಕದ ಮೇಷ್ಟ್ರು ಸಂತೋಷ್‌ ಗುಡ್ಡಿಯಂಗಡಿ ಮಕ್ಕಳ ಜೊತೆಗಿದ್ದರು. ದೂರವಾಣಿ ಮೂಲಕ ಡಿಸೋಜ ಅಂಕಲ್‌ ಜೊತೆಗೆ ಮಕ್ಕಳು ನಡೆಸಿದ ಸಂವಾದದ ಸಂಗ್ರಹ ರೂಪ ಇಲ್ಲಿದೆ.

*ಎಚ್.ಎಚ್. ಆಶಾ : ನಮಸ್ಕಾರ ಸರ್, ಮಕ್ಕಳಿಗಾಗಿ ಸತತವಾಗಿ ಕತೆಗಳನ್ನು ಬರೀತಾ ಇದ್ದೀರಿ. ಮಕ್ಕಳ ಸಾಹಿತ್ಯ ಮತ್ತು ದೊಡ್ಡವರ ಸಾಹಿತ್ಯ ಅಂತ ಬೇರೆ ಬೇರೆ ಇದ್ಯಾ?

ನಾ.ಡಿ.: ಇದೆಯಮ್ಮ ಇದೆ. ಈಗ ದೊಡ್ಡವರಿಗೆ ನಾವು ಏನನ್ನು ಹೇಳ್ತೇವೆ ಅದೆಲ್ಲವನ್ನೂ ಮಕ್ಕಳಿಗೆ ಹೇಳ್ಲಿಕ್ಕೆ ಆಗುವುದಿಲ್ಲ. ನಿಮ್ಮ ವಯಸ್ಸಿಗೆ ವಿಷಯಗಳ ಬಗ್ಗೆ ಇರುವಂತ ಆಸಕ್ತಿ, ಕುತೂಹಲ, ತಿಳ್ಕೋಬೇಕೂ ಅನ್ನುವ ಉತ್ಸಾಹ ಇದು ಬೇರೆ ರೀತಿ ಇರುತ್ತೆ. ದೊಡ್ಡವರ ರೀತಿ ಬೇರೆ, ಮಕ್ಕಳ ರೀತಿ ಬೇರೆ ಇರುತ್ತೆ ಅಲ್ವಾ. ಈಗ ನಕ್ಷತ್ರ ನೋಡಿದ್ರೆ ನಮಗೆ ಸಂತೋಷ ಆಗುವುದಿಲ್ಲ. ನಕ್ಷತ್ರವನ್ನ ಪ್ರಾರಂಭದಿಂದ ನೋಡ್ತಾ ಬಂದಿದೀವಿ. ಆದರೆ ಒಂದು ಮಗು ನಕ್ಷತ್ರ ನೋಡಿದಾಗ ಆ ಮಗುವಿಗೆ ಬಹಳ ಸಂತೋಷ ಆಗುತ್ತೆ. ಯಾಕಂದ್ರೆ ಅದಕ್ಕೆ ನಕ್ಷತ್ರ ಹೊಸದಾಗಿರುತ್ತೆ. ಅಂತಹದ್ಯಾವುದನ್ನೂ ಅದು ನೋಡಿರುವುದಿಲ್ಲ. ಅದರ ಬಗ್ಗೆ ಒಂತರ ಕುತೂಹಲ ಇರುತ್ತೆ. ಅದರ ಮಿಣುಕಾಟ ಕಂಡಾಗ ಮಗುವಿಗೆ ಬಹಳ ಆನಂದ ಆಗುತ್ತೆ. ಈ ಕಾರಣಕ್ಕೋಸ್ಕರ ಮಕ್ಕಳಿಗೋಸ್ಕರ ಬರೆಯುವುದೇ ಬೇರೆ, ಹಿರಿಯರಿಗೋಸ್ಕರ ಬರೆಯುವುದೇ ಬೇರೆ. ವಿಚಿತ್ರ ಏನೂಂದ್ರೆ ಮಕ್ಕಳಿಗೋಸ್ಕರ ನಾವು ಏನನ್ನ ಬರೀತೇವೆ ಅದನ್ನ ಹಿರಿಯರೆಲ್ಲ ಓದುತ್ತಾರೆ; ಆದರೆ ಹಿರಿಯರಿಗೆ ಬರದಿದ್ದನ್ನ ಮಕ್ಕಳಿಗೆ ಓದ್ಲಿಕ್ಕೆ ಆಗುವುದಿಲ್ಲ, ಅರ್ಥವಾಗುವುದಿಲ್ಲ. ಹೀಗಾಗಿ ಮಕ್ಕಳ ಸಾಹಿತ್ಯವೇ ಬೇರೆ. ಇರಬೇಕು; ಇದೇ ಅದು.

*ಎಚ್.ಎಂ. ರೋಹಿತ್ ಕುಮಾರ್ : ತೀರಾ ಚಿಕ್ಕವರಿಗಾಗಿ ಮತ್ತು ದೊಡ್ಡವರಿಗಾಗಿ ಕತೆಗಳು ಪದ್ಯಗಳು ಇದೆ ಸರ್. ಆದರೆ ನಮ್ಮಂತಹ ಹೈಸ್ಕೂಲು ವಯಸ್ಸಿನವರಿಗಾಗಿ ಕತೆ, ಪದ್ಯಗಳು ಇದ್ಯಾ, ಬರೀತಾ ಇದ್ದಾರಾ ಸರ್?ನಾ. ಡಿ. :
ಇದ್ಯೆಪ್ಪ ಇದೆ. ನಮ್ಮ ಜಿ.ಪಿ. ರಾಜರತ್ನಂ ಅವರು, ಹೊಯ್ಸಳ ಅಂತೊಬ್ಬ ಕವಿ, ಪುಟ್ಟಪ್ಪ ಅಂತ ದೊಡ್ಡ ಕವಿಗಳು ಬಹಳ ಜನ ಸಣ್ಣ ಮಕ್ಕಳಿಗೂ ಬರ್ದಿದ್ದಾರೆ. ಶಿಶುಪ್ರಾಸ ಅಂತ ಸಣ್ಣ ಸಣ್ಣ ಮಕ್ಕಳಿಗೆ ಬರೀತಾರೆ. ಹಾಗೇನೆ, ಸ್ವಲ್ಪ ವಯಸ್ಸಾದವರಿಗೆ ಅಂತ ಬೇರೆ ಸಾಹಿತ್ಯಾನೂ ಇದೆ ನಮ್ಮಲ್ಲಿ. ಅದನ್ನ ನೀವು ಓದ್ಬಹುದು.

*ಎಚ್.ಆರ್. ಮಧುರ : ನೀವು ಮಕ್ಕಳಿಗಾಗಿಯೇ ಹೆಚ್ಚು ಕತೆಯನ್ನು ಬರೆಯಲು ಸ್ಫೂರ್ತಿ ಏನು ಸರ್?ನಾ. ಡಿ. :
ಮಕ್ಕಳೇ ನನಗೆ ಸ್ಫೂರ್ತಿ. ಮಕ್ಕಳ ಜೊತೆಗೆ ಒಡನಾಡೋದು, ಮಕ್ಕಳು ಏನು ಮಾಡ್ತಾರೆ – ಏನು ಮಾತಾಡ್ತಾರೆ ಅನ್ನೋದನ್ನ ಗಮನಿಸೋದು. ಕೊನೆಗೆ ಮಕ್ಕಳಿಗೆ ಏನನ್ನ ಹೇಗೆ ಹೇಳಬಹುದು ಅನ್ನೋದನ್ನ ಯೋಚನೆ ಮಾಡೋದು. ಈಗ ನಾವು ದೊಡ್ಡವರಿಗೆ ಹೇಳಿದ ಹಾಗೆ ಮಕ್ಕಳಿಗೆ ಹೇಳುವುದಕ್ಕೆ ಆಗುವುದಿಲ್ಲ. ಇದೆಲ್ಲ ನಾನು ಶಾಲೆಗಳಿಗೆ ಹೋದಾಗ, ಬಹಳ ಜನ ಮಕ್ಕಳೊಂದಿಗೆ ಬೆರೆತಾಗ ನನಗೆ ಮಕ್ಕಳ ಸ್ವಭಾವ ಗುಣ ಗೊತ್ತಾಗುತ್ತೆ. ಅದಕ್ಕೆ ತಕ್ಕ ಹಾಗೆ ಬರೆಯುವ ಯತ್ನವನ್ನು ಮಾಡ್ತೇನೆ.

*ಎಚ್.ಕೆ. ಮಣಿಕಂಠ : ಮಕ್ಕಳ ಜೊತೆಗೆ ನಿಮಗೆ ಪರಿಸರವೂ ಮುಖ್ಯ ಏಕೆ ಸರ್?ನಾ. ಡಿ. :
ಬಹಳ ಒಳ್ಳೆಯ ಪ್ರಶ್ನೆ ಕೇಳಿದೆ ನೀನು. ಈಗ ನಿಮ್ಮ ಮನೆ ಮುಂದೆ ಒಂದು ಮರವಿದೆಯಪ್ಪ, ಆ ಮರವನ್ನು ನೀವು ಕಡಿದ್ರೆ ನಿಮ್ಮ ಮನೆಯೊಳಗಡೆಯೆಲ್ಲ ಬಿಸಿಲು ಸೆಕೆ ಧಗೆ ಎಲ್ಲಾ ಬಂದು ತುಂಬಿಕೊಳ್ಳುತ್ತೆ. ಆ ಮರವನ್ನ ನೀನು ಹಾಗೇ ಬಿಟ್ರೆ ತಂಪಾದ ಗಾಳಿ ಬೀಸುತ್ತಾ ಇರುತ್ತೆ, ನೀನು ಸಂತೋಷವಾಗಿರಬಹುದು ಅಲ್ಲಿ. ಹೀಗೆ ಪರಿಸರವನ್ನು ನಾವು ರಕ್ಷಣೆ ಮಾಡಿದ್ರೆ ಆ ಪರಿಸರ ನಮ್ಮನ್ನು ಕಾಪಾಡುತ್ತೆ. ಹಾಗೇನೆ ನಮ್ಮ ಮಕ್ಕಳ ಮನೋಭಾವವನ್ನು ಅರ್ಥಮಾಡಿಕೊಂಡು ಅದನ್ನು ಬೆಳೆಸಿದ್ರೆ ನಮಗದರಿಂದ ಸಂತೋಷ ಸಿಗುತ್ತೆ; ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯುತ್ತಾರೆ ನಾಳೆ. ಪರಿಸರ ಮತ್ತು ಮಕ್ಕಳು ನನ್ನ ದೃಷ್ಟಿಯಲ್ಲಿ ಎರಡೂ ಒಂದೇನೆ. ಪರಿಸರವನ್ನೂ ನಾವು ಕೆಡಿಸಬಾರದು; ಮಕ್ಕಳ ಮನಸ್ಸನ್ನೂ ಕೆಡಿಸಬಾರದು.

*ಎಚ್.ಎಂ. ಮಾಲತಿ : ಸರ್, ನಮ್ಮೂರಿಗೆ ಮೊನ್ನೆ ಎಂಟು ಆನೆಗಳು ಬಂದಿದ್ವು. ಕಾಡು ಪ್ರಾಣಿಗಳು ಪದೇ ಪದೇ ನಾಡಿಗೆ ಬರ್ತಿವೆ. ಯಾಕೆ?ನಾ. ಡಿ. :
ತಪ್ಪು ನಮ್ದೇನೆ. ಕಾಡಿನಲ್ಲಿ ನಾವಿವತ್ತು ಏನ್ ಮಾಡ್ತಾ ಇದ್ದೇವೆ? ಹೆದ್ದಾರಿಗಳನ್ನ ನಿರ್ಮಾಣ ಮಾಡ್ತಾ ಇದ್ದೇವೆ, ಅಣೆಕಟ್ಟುಗಳನ್ನು ಕಟ್ತಾ ಇದ್ದೇವೆ, ಕಾರ್ಖಾನೆಗಳನ್ನ ತೆಗಿತೀವಿ. ಕಾಡಲ್ಲಿ ಎಲ್ಲಾ ಗದ್ದಲಗಳನ್ನ ಎಲ್ಲಾ ಗಲಾಟೆಗಳನ್ನ ಎಲ್ಲಾ ಅನಾಹುತಗಳನ್ನ ಮಾಡ್ತಾ ಇದ್ದೇವೆ. ಅಂದಮೇಲೆ ಆ ಕಾಡಿನಲ್ಲಿಯೇ ಬದುಕಿರುವಂಥ ಪ್ರಾಣಿಗಳು ಎಲ್ಲಿ ಹೋಗಬೇಕು ಹೇಳು? ಆನೆಗಳು ಎಲ್ಲಿ ಹೋಗಬೇಕು, ಹುಲಿಗಳು ಎಲ್ಲಿ ಹೋಗಬೇಕು? ಅವು ಏನು ಮಾಡ್ತಾವೆ. ಹತ್ತಿರದಲ್ಲಿರುವ ಊರಿಗೆ ಬರ್ತಾವೆ. ಅವಕ್ಕೇನು ಊರು ನೋಡುವ ಹುಚ್ಚಿಲ್ಲ. ಹುಲಿ ಮೈಸೂರು ನೋಡಬೇಕು ಅಂತ ಬರುವುದಿಲ್ಲ. ಮನುಷ್ಯ ಮಾಡ್ತಾನದಕ್ಕೆ ಪೇಟೆಗೆ ಬರುವ ಹಾಗೆ. ತನ್ನನ್ನು ತಿನ್ನುವ ಹಾಗೆ ಮನುಷ್ಯನೇ ಮಾಡ್ತಾನೆ. ಇದು ಮನುಷ್ಯಂದೇ ತಪ್ಪು. ಪ್ರಾಣಿಗಳದ್ದು ಏನೂ ತಪ್ಪಿಲ್ಲ. ಅವಕ್ಕೆ ಬದುಕಲಿಕ್ಕೆ ಬೇಕಾದ ವಾತಾವರಣವನ್ನ ನಾವು ಸೃಷ್ಟಿ ಮಾಡಿದ್ರೆ ಅವು ಸಂತೋಷವಾಗಿ ತಮ್ಮ ಕಾಡಿನಲ್ಲಿ ಇರ್ತವೆ.

*ಎಸ್.ಎಂ. ಮನೋಜ : ಶಾಲೆಗಳು ಹೇಗಿರಬೇಕು ಅನ್ಸುತ್ತೆ ಸರ್ ನಿಮಗೆ?ನಾ. ಡಿ. :
ಸಾಯಂಕಾಲ ನಾಲ್ಕು ಗಂಟೆ ಆದ ಕೂಡಲೆ ಕೊನೆ ಬೆಲ್ ಹೊಡಿಯತ್ತಲ್ಲ. ಆಗ ನೀವೆಲ್ಲ ಪಾಟಿಚೀಲವನ್ನು ಹೊತ್ತುಕೊಂಡು ಹೋ ಅಂತ ಕೂಗ್ತಾ ಹೊರಗೆ ಓಡ್ತೀರಲ್ಲ. ಯಾಕೆ ಓಡಿ ಹೋಗ್ತೀರಿ ನೀವೆಲ್ಲ? ನಿಮಗೆ ಒಂದು ಬಿಡುಗಡೆ ಸಿಗುತ್ತೆ, ಮನೆಗೆ ಹೋಗಬಹುದು ಅನ್ನೋ ಖುಷಿ ಸಿಗುತ್ತೆ ನಿಮಗೆ. ಆ ಖುಷಿ ನಮ್ಮ ಶಾಲೆಗಳಲ್ಲಿ ಸಿಗುತ್ತಿಲ್ಲ. ನಾಲ್ಕು ಗೋಡೆ ಒಳಗಡೆ ಮೇಷ್ಟ್ರು ಏನೋ ಕೊರೀತಾ ಇರ್ತಾರೆ. ಅದನ್ನ ತಪ್ಪಿಸಿಕೊಳ್ಳಲು ನಾವು ಕೊನೆ ಬೆಲ್ಲನ್ನ ಕಾಯ್ತಾ ಇರ್ತೇವೆ. ಶಾಲೆ ಅಂದರೆ ಇಂದು ಬಂಧನ ಆಗಿದೆ. ಶಾಲೆ ಒಳ್ಳೆಯ ರೀತಿಯಲ್ಲಿರಬೇಕು. ಬೆಳಿಗ್ಗೆ ಎದ್ದಕೂಡಲೆ ಮಕ್ಕಳು ಶಾಲೆಗೆ ಹೋಗುವ ಉತ್ಸಾಹ ತೋರಿಸಬೇಕು. ಹಾಗೆ ಉತ್ಸಾಹ ತೋರಿಸುವಂತೆ ನಮ್ಮ ಶಿಕ್ಷಣ ಇರಬೇಕು, ನಮ್ಮ ಉಪಾಧ್ಯಾಯರಿರಬೇಕು, ಶಾಲೆಗಳನ್ನು ನಡೆಸುವಂತಹ ಸರ್ಕಾರ ಇರಬೇಕು.

*ಅಂಜಲಿ : ಸರ್, ನಾವೂ ಕತೆಗಳನ್ನು ಬರೀತಾ ಇದ್ದೀವಿ. ನಮ್ಮದು ‘ಅಳ್ಳೀಮರ’ ಪತ್ರಿಕೆ ಇದೆ. ಕತೆ ಬರಿಯೋಕೆ ಏನೇನು ಬೇಕು ಸರ್?ನಾ. ಡಿ. :
  ಕತೆ ಬರೀಲಿಕ್ಕೆ ಮೊದಲನೆಯದಾಗಿ ಭಾಷೆ ಬೇಕು. ಆ ಭಾಷೆ ಎಲ್ಲಿ ಸಿಗುತ್ತೆ? ಅಂಗಡಿಯಲ್ಲಿ ಸಿಗುತ್ತಾ? ಇಲ್ಲ. ಆ ಭಾಷೆ ನಿಮಗೆ ಸಿಗಬೇಕಾದ್ರೆ ಪುಸ್ತಕಗಳನ್ನ ಓದಬೇಕು. ನಿನಗೆ ಕತೆ ಬರೀಬೇಕು ಅನ್ನೋ ಆಸೆ ಇದ್ರೆ ನೀನು ಮತ್ತೊಬ್ರು ಬರೆದ ಕತೆಗಳನ್ನು ಓದಬೇಕು. ಅವರು ಹೇಗೆ ಬರೆದಿದ್ದಾರೆ, ಯಾಕೆ ಹಾಗೆ ಬರೆದಿದ್ದಾರೆ, ಸಂಭಾಷಣೆ ಹೇಗಿದೆ, ಪ್ರಾರಂಭ ಹೇಗೆ ಮಾಡಿದ್ದಾರೆ, ಮುಕ್ತಾಯ ಹೇಗೆ ಮಾಡಿದ್ದಾರೆ ಇದನ್ನೆಲ್ಲಾ ನೀನು ತಿಳಕೋಬೇಕು. ತಿಳ್ಕೊಂಡ ಮೇಲೆ ನೀನು ಕತೆ ಬರೀಲಿಕ್ಕೆ ಪ್ರಾರಂಭ ಮಾಡಬೇಕು. ನಿನಗೊಂದು ವಸ್ತು ಸಿಗುತ್ತೆ ಅಂತಿಟ್ಟುಕೊ, ಬೇಡ, ನೀನೇನೂ ಕಷ್ಟಪಡಬೇಡ. ನಿಮ್ಮಜ್ಜಿ ಹತ್ತಿರ ಒಂದು ಕತೆ ಕೇಳು. ಅಜ್ಜಿ ಇದ್ದಾರಾ ನಿಂಗೆ?*ಅಂಜಲಿ : ಇದ್ದಾರೆ ಸಾನಾ. ಡಿ. :
ಅಜ್ಜಿ ಹತ್ತಿರ ಕತೆ ಕೇಳು. ಅಜ್ಜಿ ಹೇಳಿದ ಕತೇನಾ ನಿನ್ನದೇ ವಾಕ್ಯದಲ್ಲಿ ನೀನು ಕುತ್ಕೊಂಡು ಬರಿ. ಅದೇ ಕತೆ, ಅದೇ ಕತೆಯನ್ನ ನಿನ್ನದೇ ಸ್ಟೈಲ್‌ನಲ್ಲಿ ನಿನ್ನದೇ ವಾಕ್ಯದಲ್ಲಿ ಬರೆ. ಹಾಗೆ ಕತೆಗಳನ್ನ ಬರೀತಾ ಬರೀತಾ ಅಭ್ಯಾಸ ಮಾಡಬಹುದು, ಕತೆಗಳನ್ನ ಬರೆಯುವ ಕಲೆಯನ್ನ ನಾವು ಸಾಧಿಸಿಕೋಬಹುದು. ನನ್ನಲ್ಲಿ ಬರೆಯುವ ಸಾಧ್ಯತೆ ಇದೆ, ನಾನು ಖಂಡಿತಾ ಬರೀತೇನೆ ಅಂತ ಹಟ ಹಿಡಿದುಕೊಂಡು ಬರೆದರೆ ನೀನೂ ಕೂಡ ದೊಡ್ಡ ಲೇಖಕಿ ಆಗ್ತೀಯ.

*ಎಚ್.ಎಸ್. ಶೇಖರ : ಸರ್, ಈಗಿನ ಕವನಗಳು ಹಾಡುವುದಕ್ಕೇ ಆಗ್ತಿಲ್ಲ. ಯಾಕಿಂಗೆ ಸರ್?ನಾ. ಡಿ. : 
ಒಳ್ಳೆಯ ಪ್ರಶ್ನೆ ಕೇಳಿದ್ಯಪ್ಪ. ಏನಾಗಿದೆ ಅಂದ್ರೆ, ಈಗಿನ ಕವಿತೆಗಳೆಲ್ಲ ಬೇರೆ ದೇಶದ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಬರೀತಾ ಇದ್ದಾರೆ. ಇಂಗ್ಲಿಷ್ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿ ಕವಿತೆಗಳನ್ನ ಬರೀತಾ ಇದ್ದಾರೆ. ನಮ್ಮ ಲೇಖಕರಲ್ಲಿ ಮತ್ತೊಂದು ನಂಬಿಕೆ ಏನಂದ್ರೆ, ಹಾಡುವ ಕವಿತೆ ಬೇರೆ ಓದುವ ಕವಿತೆ ಬೇರೆ ಅಂತ. ಹೀಗಾಗಿ ಬಹಳ ಜನ ಇವತ್ತು ಹಾಡುವ ಕವಿತೆಗಳನ್ನ ಬರೆಯುವುದಿಲ್ಲ. ಹಾಡು ಅಂದ್ರೆ ಕವಿತೆ ಅಲ್ಲ, ಅದು ಹಾಡು ಅಂತ ಅವರು ಹೇಳ್ತಾರೆ. ಇದು ತಪ್ಪು ಕಲ್ಪನೆ. ಹಾಡಿನ ಮೂಲಕವೂ ಕವಿತೆಯ ಸತ್ವವನ್ನ ಹೇಳಬಹುದು. ನಮ್ಮ ಪಾಡಿಗೆ ನಾವು ಬರೆದರೆ ಆಯ್ತು. ಗೋಪಾಲಕೃಷ್ಣ ಅಡಿಗರಂತಹ ಕವಿಗಳ ಕವಿತೆಗಳನ್ನ ಇವತ್ತೂ ಹಾಡ್ತಾ ಇದ್ದಾರೆ.

*ಎಚ್.ಜಿ.ಕುಸುಮ : ಸರ್, ನೀವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ನಿಮಗೆ ಹೇಗನ್ನಿಸ್ತು ಸಾರ್?ನಾ. ಡಿ. :
ಏನೂ ಅನ್ಸುದಿಲ್ಲ. ಸ್ವಲ್ಪ ಸಂತೋಷ ಆಗುತ್ತೆ. ನಾನು ಸುಮಾರು ಐವತ್ತು ವರ್ಷಗಳಿಂದ ಬರೀತಾ ಬಂದಿದ್ದೇನೆ ಕನ್ನಡದಲ್ಲಿ. ನಾನು ಬರೆದ ಕತೆಗಳು, ಕಾದಂಬರಿಗಳು, ಮಕ್ಕಳ ಪುಸ್ತಕಗಳನ್ನ ಬಹಳ ಜನ ಓದಿದ್ದಾರೆ. ಹೀಗೆ ಓದಿದವರಿಗೆ ನನ್ನನ್ನ ಅಧ್ಯಕ್ಷ ಮಾಡಬೇಕು ಅನ್ನಿಸಿದೆ; ಅದೊಂದು ಸಂಪ್ರದಾಯ ನಮ್ಮಲ್ಲಿ. ಬಹಳ ದೊಡ್ಡ ಲೇಖಕರನ್ನು ಅಧ್ಯಕ್ಷ ಅಂತ ಕರೆದು, ಗೌರವಿಸಿ, ಅವರ ಮಾತುಗಳನ್ನು ಕೇಳುವುದು, ಸಾವಿರಾರು ಜನ ಸೇರುವುದು ಒಂದು ಸಂಪ್ರದಾಯ ನಮ್ಮಲ್ಲಿ. ಹಾಗಾಗಿ ನನ್ನನ್ನೂ ಕೂಡ ಈ ಸಲ ಅಧ್ಯಕ್ಷ ಅಂತ ಮಾಡಿದ್ದಾರೆ. ಜನವರಿ ತಿಂಗಳಲ್ಲಿ ಮಡಿಕೇರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ನಾನು ಅಧ್ಯಕ್ಷ ಅಂತ ನೇಮಕವಾಗಿದ್ದೇನೆ.

*ಎಚ್.ಕೆ. ಸಿದ್ಧ : ಒಬ್ಬ ಸಾಹಿತಿ ಹೇಗಿರಬೇಕು ಸಾರ್?ನಾ. ಡಿ. :
ಸಾಹಿತಿಯಾದವನು ಸರಳವಾಗಿರಬೇಕು. ನಾನು ಬರೆದಿದ್ದು ನಿಮಗೆ ಹೇಗೆ ಅರ್ಥವಾಗುತ್ತೋ, ಹಾಗೆ ನಾನೂ ಕೂಡ ನಿಮಗೆ ಅರ್ಥವಾಗಬೇಕು. ಅಲ್ಲಿ ದೊಡ್ಡಸ್ತಿಕೆ ಗಿಡ್ಡಸ್ತಿಕೆ ಏನೂ ಇಲ್ಲ. ದೊಡ್ಡವರ ಹತ್ತಿರ ಮಾತ್ರ ಮಾತಾಡಬೇಕು, ಚಿಕ್ಕವರ ಹತ್ತಿರ ಮಾತಾಡಬಾರದು ಅಂತೇನೂ ಇಲ್ಲ. ಅದು ಕೆಲವರ ಸ್ವಭಾವ. ಕೆಲವರು ಬಹಳ ಗಂಭೀರವಾಗಿ ಕುಳಿತಿರ್ತಾರೆ, ಕೆಲವರು ನಗ್ತಾ ನಗ್ತಾ ಇರ್ತಾರೆ. ಅದು ಅವರವರ ಸ್ವಭಾವಕ್ಕೆ ಬಿಟ್ಟಿದ್ದು. 

ಪ್ರತಿಕ್ರಿಯಿಸಿ (+)