ಶನಿವಾರ, ಮೇ 15, 2021
22 °C

ಹೆಚ್ಚುವರಿ ಭೂಸ್ವಾಧೀನ ಅಧಿಸೂಚನೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣದ ಸಂಬಂಧ 372 ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆಯನ್ನು ಹೈಕೋರ್ಟ್ ಗುರುವಾರ ರದ್ದು ಮಾಡಿದೆ.ಭೂಸ್ವಾಧೀನ ಪ್ರಶ್ನಿಸಿ ಗೌರಮ್ಮ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್, 2010ರ ಆಗಸ್ಟ್ 27ರಂದು ಬಿಡಿಎ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು. ಶುಲ್ಕ ವಸೂಲಿ ಕೇಂದ್ರ ಸೇರಿದಂತೆ ಇತರೆ ಬಳಕೆಗಾಗಿ ಈ ಭೂಮಿ ಸ್ವಾಧೀನಕ್ಕೆ ಬಿಡಿಎ ಮುಂದಾಗಿತ್ತು.ಬಿಡಿಎ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮೂರು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಮೂಲ ನಕ್ಷೆ ಮತ್ತು ಯೋಜನೆಯ ವ್ಯಾಪ್ತಿಯ ಹೊರತಾಗಿ ಮೂರನೇ ಅಧಿಸೂಚನೆ ಪ್ರಕಟಿಸಲಾಗಿತ್ತು. ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೇ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾದ ಬಿಡಿಎ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.`ಹೆಚ್ಚುವರಿಯಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಯೋಜನೆ ಇಲ್ಲದೆ ಮಾಡಿದ ಕೆಲಸ. ರಸ್ತೆ ನಿರ್ಮಾಣದ ಬಗ್ಗೆ ಸರಿಯಾದ ತಯಾರಿಯೇ ಇಲ್ಲದೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ~ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.`ಬಿಡಿಎ ಕೆಲಸವಲ್ಲ~: `ಮೂಲ ಕಾಯ್ದೆಯ ಪ್ರಕಾರ ರಸ್ತೆ, ಹೆದ್ದಾರಿ, ವರ್ತುಲ ರಸ್ತೆಗಳನ್ನು ನಿರ್ಮಿಸುವ ಕೆಲಸ ಬಿಡಿಎ ಜವಾಬ್ದಾರಿಯಲ್ಲ. ಈ ವಿಷಯಗಳಲ್ಲಿ ಪ್ರಾಧಿಕಾರ ನೈಪುಣ್ಯ ಮತ್ತು ವೃತ್ತಿಪರತೆಯನ್ನೂ ಹೊಂದಿಲ್ಲ. ಇಂತಹ ಕೆಲಸಗಳಲ್ಲಿ ಬಿಡಿಎ ಅಸಮರ್ಥ ಎಂಬುದು ಹಿಂದೆ ಹಲವು ಬಾರಿ ಸಾಬೀತಾಗಿದೆ. ಇಂತಹ ಕೆಲಸಗಳನ್ನು ವೃತ್ತಿಪರ ಇಲಾಖೆಗಳಿಗೆ ವಹಿಸುವುದೇ ಉತ್ತಮ~ ಎಂಬ ಅಭಿಪ್ರಾಯವನ್ನು ನ್ಯಾ.ಶೈಲೇಂದ್ರಕುಮಾರ್ ಆದೇಶದಲ್ಲಿ ವ್ಯಕ್ತಪಡಿಸಿದರು.`ಇನ್ನೂ ಹೆಚ್ಚಿನ ಬಡಾವಣೆಗಳನ್ನು ನಿರ್ಮಿಸುವಂತಹ ಕಾರ್ಯಕ್ಕೆ ಪ್ರಾಧಿಕಾರ ಆದ್ಯತೆ ನೀಡಬೇಕು. ಹೊರಗುತ್ತಿಗೆ ಮೂಲಕ ರಸ್ತೆ ನಿರ್ಮಿಸುವ ಕೆಲಸಕ್ಕೆ ಕೈಹಾಕುವುದು ಉಚಿತವಲ್ಲ. ಈ ಯೋಜನೆ ಕೂಡ ಅಂತಹ ಕ್ರಮಗಳಲ್ಲಿ ಒಂದು~ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.