ಗುರುವಾರ , ಮೇ 19, 2022
23 °C

ಹೆಬ್ಬಾವು, ನಾಗರ ಹಾವಿನ ಮರಿಗಳು ಕಾಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಹೆಬ್ಬಾವಿನ 32 ಮರಿಗಳನ್ನು ಮತ್ತು ನಾಗರ ಹಾವಿನ 24 ಮರಿಗಳನ್ನು ಉರಗ ತಜ್ಞ ಗುರುರಾಜ್ ಸನಿಲ್ ಅವರು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬಂದಿದ್ದು, ಈ ಮೂಲಕ ಎರಡು ಮನೆಗಳಲ್ಲಿ ನೆಲೆಸಿದ್ದ ಆತಂಕವನ್ನು ದೂರ ಮಾಡಿದ್ದಾರೆ.ಉಡುಪಿ ಸಮೀಪದ ನಯಂಪಳ್ಳಿಯ ಸುಂದರಿ ಆಚಾರ್ಯ ಎಂಬುವರ ಮನೆಯ ದನದ ಕೊಟ್ಟಿಗೆಯ ಹುಲ್ಲಿನ ಮೆದೆಯ ಸಮೀಪ ಹೆಬ್ಬಾವು ಕಾಣಿಸಿಕೊಂಡಿತ್ತು. ಇದರಿಂದ ಆತಂಕಗೊಂಡಿದ್ದ ಅವರು ಗುರುರಾಜ್ ಅವರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಅವರು ಪರಿಶೀಲನೆ ನಡೆಸಿದಾಗ ಹೆಬ್ಬಾವು ಮೊಟ್ಟೆಗಳನ್ನಿಟ್ಟು ಕಾವು ನೀಡುತ್ತಿರುವುದು ಗೊತ್ತಾಗಿತ್ತು.ಹೆಬ್ಬಾವು ಕಾವು ನೀಡುವಾಗ ಅದಕ್ಕೆ ತೊಂದರೆ ನೀಡಿದರೆ ಹೊರಟು ಹೋಗುತ್ತದೆ. ಅಲ್ಲದೆ ಕಾವು ನೀಡುವ ಸಂದರ್ಭದಲ್ಲಿ ಹೆಬ್ಬಾವು ಜನರಿಗೆ ತೊಂದರೆ ನೀಡುವುದಿಲ್ಲ ಎಂದು ಅವರು ಮನೆಯೊಡತಿಗೆ ಮನವರಿಕೆ ಮಾಡಿಕೊಟ್ಟರು. ಆದರೂ ಭಯದ ವಾತಾವರಣ ಇದ್ದ ಕಾರಣ ಹಾವು ಹಿಡಿದು ಅರಣ್ಯಕ್ಕೆ ಬಿಡುವಂತೆ ಅವರು ಮನವಿ ಮಾಡಿದ್ದರು.ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟ ಗುರುರಾಜ್ ಅವರು ಮೊಟ್ಟೆಗಳನ್ನು ಕೊಂಡೊಯ್ದು ಅವುಗಳಿಗೆ ಕೃತಕ ಕಾವಿನ ವ್ಯವಸ್ಥೆ ಮಾಡಿದ್ದರು. ಎಲ್ಲ ಮೊಟ್ಟೆಗಳು ಒಡೆದು ಮರಿ ಹೊರಗೆ ಬಂದಿದ್ದವು. ಮರಿಗಳನ್ನೂ ಅವರ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.ಮಲ್ಪೆಯ ಪಡುಕೆರೆಯ ಸಮೀಪ ಇರುವ ವಸಂತ್ ಮೆಂಡನ್ ಎಂಬುವರ ಮನೆಯ ಸಮೀಪ ನಾಗರ ಹಾವಿನ 24 ಮರಿಗಳನ್ನು ಪತ್ತೆ ಮಾಡಿ ಅವುಗಳನ್ನೂ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಶೌಚಾಲಯದ ಸಮೀಪ ಇರುವ ಇಲಿಯ ಬಿಲದಲ್ಲಿ ಹಾವು ಕಾಣಿಸಿಕೊಂಡ ನಂತರ ವಸಂತ್ ಅವರು ಗುರುರಾಜ್ ಅವರಿಗೆ ಕರೆ ಮಾಡಿ ಹಾವು ಹಿಡಿಯುವಂತೆ ಮನವಿ ಮಾಡಿದ್ದರು. ಅಲ್ಲಿಗೆ ತೆರಳಿ ಪರೀಕ್ಷಿಸಿದಾಗ ಬಿಲದಲ್ಲಿ ನಾಗರಹಾವು ಮತ್ತು 24 ಮರಿಗಳು ಪತ್ತೆಯಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.