ಬುಧವಾರ, ಜುಲೈ 15, 2020
22 °C

ಹೇಮಾಮಾಲಿನಿಗೆ ನಿರೀಕ್ಷಿತ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೇಮಾಮಾಲಿನಿಗೆ ನಿರೀಕ್ಷಿತ ಜಯಬೆಂಗಳೂರು: ರಾಜ್ಯಸಭೆಯ ಒಂದು ಸ್ಥಾನಕ್ಕೆ ಗುರುವಾರ ನಡೆದ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯಾದ ಬಾಲಿವುಡ್‌ನ ‘ಕನಸಿನ ಕನ್ಯೆ’ ಹೇಮಾಮಾಲಿನಿ ಜಯಶಾಲಿಯಾಗುವ ಮೂಲಕ ಎರಡನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರು.ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಡಾ.ಕೆ.ಮರುಳಸಿದ್ದಪ್ಪ ವಿರುದ್ಧ 12 ಮತಗಳ ಅಂತರದಿಂದ ಜಯಗಳಿಸಿದ ಅವರು ಚಲಾವಣೆಯಾದ ಒಟ್ಟು 205 ಮತಗಳ ಪೈಕಿ 106 ಮತಗಳನ್ನು ಪಡೆದರು. ಮರುಳಸಿದ್ದಪ್ಪ 94 ಮತ  ಪಡೆದರೆ, 5 ಮತಗಳು ತಿರಸ್ಕೃತಗೊಂಡಿವೆ.ಜೆಡಿಎಸ್‌ನ ಎಂ.ರಾಜಶೇಖರಮೂರ್ತಿ ಅವರ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಬಿಜೆಪಿ ಹೊರಗಿನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ‘ಸ್ವಾಭಿಮಾನ’ದ ಹೆಸರಿನಲ್ಲಿ ತಾತ್ವಿಕ ಹೋರಾಟ ನಡೆಸುವ ದೃಷ್ಟಿಯಿಂದ ಕಣಕ್ಕೆ ಇಳಿದಿದ್ದ ಮರುಳಸಿದ್ದಪ್ಪ ಸೋಲು ಅನುಭವಿಸಿದರು.ರಾಜ್ಯಸಭೆಯಲ್ಲಿ ಜೆಡಿಎಸ್ ಹೊಂದಿದ್ದ ಏಕೈಕ ಸ್ಥಾನ ಬಿಜೆಪಿ ಪಾಲಾಗಿದ್ದು, 2012ರ ಏಪ್ರಿಲ್ 2ರವರೆಗೆ ಹೇಮಾಮಾಲಿನಿ  ಅವರ ಅವಧಿ ಇದೆ. 2004ರಲ್ಲಿ ರಾಜ್ಯಸಭೆಗೆ ನಾಮಕರಣಗೊಂಡ ನಂತರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಸ್ಪೀಕರ್ ಕೆ.ಜಿ.ಬೋಪಯ್ಯ, ಪಕ್ಷೇತರ ಅಭ್ಯರ್ಥಿ ವರ್ತೂರು ಪ್ರಕಾಶ್ ಸೇರಿ ಬಿಜೆಪಿಯ 106 ಶಾಸಕರು ಮತ ಚಲಾಯಿಸಿದರು. ಕಾಂಗ್ರೆಸ್‌ನ 71 ಮತ್ತು ಜೆಡಿಎಸ್‌ನ 27 ಮಂದಿ ಮತ ಚಲಾಯಿಸಿದರು. ಒಬ್ಬ ಶಾಸಕ ಎರಡೂ ಅಭ್ಯರ್ಥಿಗಳಿಗೆ ಮತ ಹಾಕಿದ್ದರೆ, ಇಬ್ಬರು ಶಾಸಕರು ಅಭ್ಯರ್ಥಿಗಳ ಹೆಸರಿನ ಮುಂದೆ ರೈಟ್ ಮಾರ್ಕ್ ಮಾಡಿದ್ದಾರೆ. ಒಬ್ಬ ಶಾಸಕ ಮತಪತ್ರವನ್ನು ‘ತೂತು’ ಮಾಡಿರುವುದು ಬಿಟ್ಟರೆ ಯಾರಿಗೂ ಮತ ಹಾಕಿಲ್ಲ. ಮತ್ತೊಬ್ಬ ಶಾಸಕ, ಹೇಮಾಮಾಲಿನಿ ಹೆಸರಿನ ಮುಂದೆ ಓದಲಾಗದ ರೀತಿಯಲ್ಲಿ ಏನನ್ನೋ ಬರೆದಿದ್ದರು.ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಎಲ್ಲ ಸಚಿವರು, ಶಾಸಕರು ಮತ ಚಲಾಯಿಸಿದರು. ಸಂಜೆ 5ಕ್ಕೆ ಮತ ಎಣಿಕೆ ಆರಂಭವಾದಾಗ ಮೊದಲ ಸುತ್ತಿನಲ್ಲಿಯೇ ಹೇಮಾಮಾಲಿನಿ ಜಯಶಾಲಿಯಾದರು.ಬಿಜೆಪಿಯ ಶಾಸಕರೊಬ್ಬರು ಹೇಮಾಮಾಲಿನಿ ಹೆಸರಿನ ಮುಂದೆ ‘1’ ಎಂದು ಗುರುತಿಸುವ ಬದಲು  ರೈಟ್ ಗುರುತು ಹಾಕಿದ್ದರು. ಹೀಗಾಗಿ ಅವರ ಮತ ತಿರಸ್ಕೃತಗೊಂಡಿದೆ. ಇನ್ನುಳಿದಂತೆ ಕಾಂಗ್ರೆಸ್, ಜೆಡಿಎಸ್‌ನ ಒಟ್ಟು ನಾಲ್ಕು ಮತಗಳು ತಿರಸ್ಕೃತಗೊಂಡಿವೆ.ಕೃತಜ್ಞತೆ: ಅಧಿಕೃತವಾಗಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಹರ್ಷ ವ್ಯಕ್ತಪಡಿಸಿದ ಹೇಮಾಮಾಲಿನಿ  ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಲು ಸಹಕರಿಸಿದ ಬಿಜೆಪಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಬಿಜೆಪಿಯ ಸಂಘಟನೆ ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.‘ನನ್ನ ಅವಧಿ ಕೇವಲ ಒಂದು ವರ್ಷವಿದೆ ಎಂಬ ಅರಿವು ಇದೆ. ಸೀಮಿತವಾದ ಅವಧಿಯಲ್ಲಿ ಆಗಾಗ್ಗೆ ರಾಜ್ಯಕ್ಕೆ ಭೇಟಿ ನೀಡುತ್ತೇನೆ. ರಾಜ್ಯದ ಸಮಸ್ಯೆಗಳನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸುತ್ತೇನೆ. ನಾನು ಕಲಾವಿದೆಯಾಗಿದ್ದು, ಎಲ್ಲ ರಾಜ್ಯಗಳಿಗೂ ಸೇರಿದವಳಾಗಿದ್ದೇನೆ. ಕರ್ನಾಟಕದ ಕೆಲವರು ನನ್ನ ಸ್ಪರ್ಧೆಗೆ ಯಾಕೆ ವಿರೋಧ ವ್ಯಕ್ತಪಡಿಸಿದರು ಎಂಬುದು ಗೊತ್ತಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ಹೇಮಾಮಾಲಿನಿ ಅವರು ರಾಜ್ಯದ ಸಮಸ್ಯೆಗಳಿಗೆ ಮತ್ತು ಪಕ್ಷದ ಸಂಘಟನೆಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವ್ಯಕ್ತಪಡಿಸಿದರು.‘ಬಿಜೆಪಿಯ ಅಂತಃಸಾಕ್ಷಿಯನ್ನು ಚುಚ್ಚಬೇಕು ಎಂಬ ದೃಷ್ಟಿಯಿಂದ ಕಣಕ್ಕೆ ಇಳಿದಿದ್ದೆ. ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇನೆ. ಅವರು ಮತ ಹಾಕುವುದಿಲ್ಲ ಎಂದು ಗೊತ್ತಿತ್ತು’ ಎಂಬುದಾಗಿ ಮರುಳಸಿದ್ದಪ್ಪ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.