ಶನಿವಾರ, ಮೇ 8, 2021
26 °C

ಹೈಕೋರ್ಟ್‌ಗೆ ಬಿಗಿ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಕೋರ್ಟ್‌ಗೆ ಬಿಗಿ ಭದ್ರತೆ

ಬೆಂಗಳೂರು: `ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು ವಕೀಲರು, ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿ ಸಹಕಾರ ನೀಡಬೇಕು~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಮನವಿ ಮಾಡಿದ್ದಾರೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿ ಭಾವಚಿತ್ರ ಇರುವ ಗುರುತಿನ ಚೀಟಿ ಪ್ರದರ್ಶಿಸಬೇಕು. ಎಲ್ಲರನ್ನೂ ಪೊಲೀಸರು ತಪಾಸಣೆಗೆ ಒಳಪಡಿಸುತ್ತಾರೆ. ಆದ್ದರಿಂದ ಪೊಲೀಸರಿಗೆ ಸಹಕಾರ ನೀಡಬೇಕು~ ಎಂದು ಅವರು ಹೇಳಿದರು.`ನ್ಯಾಯಮೂರ್ತಿಗಳು, ಹಿರಿಯ ಪ್ರಾಸಿಕ್ಯೂಟರ್‌ಗಳು, ಉನ್ನತ ಅಧಿಕಾರಿಗಳು ದ್ವಾರ ಸಂಖ್ಯೆ ಎರಡರ ಮೂಲಕ ಪ್ರವೇಶಿಸಬೇಕು. ಅಧೀನ ಅಧಿಕಾರಿಗಳು, ಲಿಪಿಕ ಸಿಬ್ಬಂದಿ ದ್ವಾರ ಸಂಖ್ಯೆ ಮೂರರಿಂದ ಪ್ರವೇಶಿಸಬೇಕು. ವಕೀಲರು, ಕಕ್ಷಿದಾರರು ಹಾಗೂ ಇತರರು ಕಬ್ಬನ್ ಉದ್ಯಾನದ ಪ್ರೆಸ್ ಕ್ಲಬ್ ಮಾರ್ಗವಾಗಿ ಕೆಜಿಐಡಿ ಕಚೇರಿ ಮೂಲಕ ನ್ಯಾಯಾಲಯದೊಳಗೆ ಪ್ರವೇಶಿಸಬೇಕು~ ಎಂದರು.`ನ್ಯಾಯಾಲಯದ ಆವರಣದ ದಕ್ಷಿಣ ಕಡೆ ಇರುವ ಸೆಲ್ಲಾರ್ ಒಳಗೆ 20 ಕಾರುಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿದೆ. ಕಟ್ಟಡದ ಮುಂಭಾಗದಲ್ಲಿರುವ ಹುಲ್ಲುಹಾಸಿನಲ್ಲಿ 100 ಕಾರುಗಳನ್ನು ನಿಲ್ಲಿಸಬಹುದು. ಇದು ನ್ಯಾಯಮೂರ್ತಿಗಳು, ನ್ಯಾಯಾಧೀಶರು, ರಿಜಿಸ್ಟ್ರಾರ್, ಉನ್ನತ ಅಧಿಕಾರಿಗಳಿಗೆ ಮಾತ್ರ~ ಎಂದು ಸ್ಪಷ್ಟಪಡಿಸಿದರು.`ಅಧೀನ ಅಧಿಕಾರಿಗಳು, ಲಿಪಿಕ ಸಿಬ್ಬಂದಿ ನ್ಯಾಯಾಲಯದ ಹಿಂಭಾಗ ಇರುವ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು. ದ್ವಾರ ಸಂಖ್ಯೆ ಮೂರರಿಂದ ಪ್ರವೇಶಿಸುವ ವಕೀಲರೂ ಕಟ್ಟಡದ ಹಿಂದೆ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ರೆಸ್ ಕ್ಲಬ್ ಮತ್ತು ಕೆಜಿಐಡಿ ಕಟ್ಟಡದ ಕಡೆಯಿಂದ ಬರುವ ವಕೀಲರು ಹಳೇ ಕೆಜಿಐಡಿ ಕಟ್ಟಡದ ಬಳಿ ವಾಹನ ನಿಲ್ಲಿಸಬೇಕು~ ಎಂದರು.`ನ್ಯಾಯಾಲಯಕ್ಕೆ ಬರುವ ಅಂಗವಿಕಲರಿಗೆ ಈಗಾಗಲೇ ಮೀಸಲಾಗಿರುವ ಜಾಗದಲ್ಲಿ ವಾಹನ ನಿಲ್ಲಿಸಲು ಅವಕಾಶ ಇದೆ (ಪಿ 3 ಪ್ರದೇಶ). `ನ್ಯಾಯಾಲಯದ ಆವರಣದಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ, ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗುತ್ತದೆ~ ಎಂದು ಮಾಹಿತಿ ನೀಡಿದರು.ಬಸ್ ವ್ಯವಸ್ಥೆ: `ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಹೈಕೋರ್ಟ್‌ಗೆ ಬರುವ ವಕೀಲರಿಗೆಂದು ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಎಲ್ಲರೂ ಇದರ ಉಪಯೋಗ ಪಡೆಯಬೇಕು~ ಎಂದರು. `ನಗರದಲ್ಲಿ ಸಹ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು ಸಾರ್ವಜನಿಕರು ನಿರ್ಭೀತಿಯಿಂದ ಇರಬೇಕು~ ಎಂದು ಮನವಿ ಮಾಡಿದರು.ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ. ಸುನಿಲ್ ಕುಮಾರ್ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ. ಸಲೀಂ ಉಪಸ್ಥಿತರಿದ್ದರು.ಗೃಹ ಸಚಿವರಿಂದ ಪರಿಶೀಲನೆ

ಬೆಂಗಳೂರು:
ಗೃಹ ಸಚಿವ ಆರ್.ಅಶೋಕ ಮತ್ತು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಗುರುವಾರ ಬೆಳಿಗ್ಗೆ ಹೈಕೋರ್ಟ್‌ಗೆ ಭೇಟಿ ನೀಡಿ ಭದ್ರತೆ ಕುರಿತು ಪರಿಶೀಲನೆ ನಡೆಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಅವರನ್ನೂ ಈ ಸಂದರ್ಭದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.ದೆಹಲಿ ಹೈಕೋರ್ಟ್‌ನಲ್ಲಿ ಬುಧವಾರ ಬಾಂಬ್ ಸ್ಫೋಟ ನಡೆದಿರುವ ಹಿನ್ನೆಲೆಯಲ್ಲಿ ಸಚಿವರು ಹೈಕೋರ್ಟ್‌ನ ಭದ್ರತೆ ಪರಿಶೀಲಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಂ ಅಚ್ಯುತರಾವ್, ನಗರ ಪೊಲೀಸ್ ಕಮಿಷನರ್ ಕೆ.ಜ್ಯೋತಿಪ್ರಕಾಶ್ ಮಿರ್ಜಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ನ್ಯಾಯಾಲಯದ ಕಲಾಪ ಆರಂಭವಾಗುವ ಮುನ್ನವೇ ಕೋರ್ಟ್ ಆವರಣಕ್ಕೆ ಬಂದ ಸಚಿವರು, ಇಡೀ ಕಟ್ಟಡವನ್ನು ಒಂದು ಸುತ್ತು ಪರಿಶೀಲಿಸಿದರು. ಅಷ್ಟರಲ್ಲೇ ಕೋರ್ಟ್ ಆವರಣದಲ್ಲಿದ್ದ ವಾಹನಗಳನ್ನು ಹೊರಕ್ಕೆ ಕಳುಹಿಸಿದ ಪೊಲೀಸರು, ನ್ಯಾಯಮೂರ್ತಿಗಳ ವಾಹನಗಳಿಗೆ ಮಾತ್ರ ಒಳಗೆ ಪ್ರವೇಶ ನೀಡಿದರು. ಸಚಿವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನ್ಯಾಯಾಲಯದ ಆವರಣದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದು, ಎಲ್ಲ ಭಾಗಗಳಲ್ಲೂ ಪಹರೆ ವ್ಯವಸ್ಥೆ ಮಾಡಲಾಗಿದೆ.ವಕೀಲರೊಂದಿಗೆ ವಾಗ್ವಾದ:ಸಚಿವರು ಪರಿಶೀಲನೆ ನಡೆಸುತ್ತಿದ್ದ ಅವಧಿಯಲ್ಲಿ ಹೈಕೋರ್ಟ್‌ನ ಎರಡೂ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯದ ಒಳಕ್ಕೆ ಪ್ರವೇಶ ಮತ್ತು ವಾಹನ ನಿಲುಗಡೆಗೆ ಸಂಬಂಧಿಸಿದಂತೆ ವಕೀಲರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.