ಗುರುವಾರ , ಮಾರ್ಚ್ 4, 2021
18 °C

ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ವಿರೋಧ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ವಿರೋಧ: ಪ್ರತಿಭಟನೆ

ಮಡಿಕೇರಿ: ಮೈಸೂರು–ಕೊಯಿಕ್ಕೋಡ್‌ 400 ಕೆವಿ ಹೈಟೆನ್ಷನ್‌ ವಿದ್ಯುತ್‌ ಮಾರ್ಗ ನಿರ್ಮಾಣಕ್ಕಾಗಿ ದಕ್ಷಿಣ ಕೊಡಗಿನಲ್ಲಿ ನಡೆಯುತ್ತಿರುವ ಮರಗಳ ಹನನವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ  ಕಾವೇರಿ ಬಚಾವ್‌ ಆಂದೋಲನ ಹಾಗೂ ಕಾವೇರಿ ಸೇನೆ ನೇತೃತ್ವದಲ್ಲಿ ರೈತ ಸಂಘ, ಹಸಿರು ಸೇನೆ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರದ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಗರದ ಜನರಲ್‌ ತಿಮ್ಮಯ್ಯ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಕೋಟೆ ಆವರಣ­ದಲ್ಲಿರುವ ಜಿಲ್ಲಾಧಿಕಾರಿ­ಯವರ ಕಚೇರಿ ಎದುರು ಧರಣಿ ನಡೆಸಿದರು.ರೈತ ಸಂಘದ ಮುಖಂಡ ಕೆ.ಎಸ್‌. ನಂಜುಂಡೇಗೌಡ ಮಾತನಾಡಿ, ದಕ್ಷಿಣ ಕೊಡಗಿನ ಭಾಗದಲ್ಲಿ ಮರಗಳನ್ನು ಕಡಿದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುವ ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಕೊಡಗು, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಪೂರೈಕೆಯಾಗುವ ಕುಡಿಯುವ ನೀರಿನ ಪ್ರಮಾಣದ ಮೇಲೂ ಪರಿಣಾಮ ಉಂಟಾಗಲಿದೆ ಎಂದು ಹೇಳಿದರು.ಕಾವೇರಿ ನದಿಯ ಮೂಲವನ್ನು ಉಳಿಸುವುದು ಕೇವಲ ಕೊಡಗಿನವರ ಜವಾಬ್ದಾರಿಯಲ್ಲ, ಈ ನೀರನ್ನು ಬಳಸುತ್ತಿರುವ ಎಲ್ಲ ಜಿಲ್ಲೆಗಳ ಜನರ ಜವಾಬ್ದಾರಿ. ಕೊಡಗಿನವರು ನಡೆಸುತ್ತಿರುವ ಕಾವೇರಿ ಬಜಾವ್‌ ಆಂದೋಲನಕ್ಕೆ ನಾವು ಸಹಕಾರ ನೀಡಲು ಸಿದ್ಧ ಎಂದು ಅವರು ತಿಳಿಸಿದರು.ಕಾವೇರಿ ಬಜಾವ್‌ ಆಂದೋಲನದ ಮುಖಂಡ ಡಾ.ಬಿ.ಸಿ. ನಂಜಪ್ಪ ಮಾತ­ನಾಡಿ,  ಕೊಡಗಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇವತ್ತು ಕಾವೇರಿ ನದಿ ಬತ್ತಿಹೋಗುವ ಪರಿಸ್ಥಿತಿ ಎದುರಾಗಿದೆ. ಕೊಡಗಿನ ಪರಿಸರ ಸಂರಕ್ಷಣೆ ಕುರಿತಂತೆ ವಿಧಾನಸಭೆಯಲ್ಲಿ ಪಕ್ಕದ ಜಿಲ್ಲೆಯ ಶಾಸಕರ ಮೂಲಕ ಪ್ರಶ್ನೆ ಕೇಳಿಸುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.ಕಾವೇರಿ ಸೇನೆಯ ಸಂಚಾಲಕ ರವಿ ಚೆಂಗಪ್ಪ ಮಾತನಾಡಿ, ಟಿಂಬರ್‌ ಮಾಫಿಯಾ, ಮರಳು ಮಾಫಿಯಾ, ವೋಟ್‌ ಬ್ಯಾಂಕ್‌ ರಾಜಕಾರಣ, ರಿಯಲ್‌ ಎಸ್ಟೇಟ್‌/ರೆಸಾರ್ಟ್‌ ಮಾಫಿಯಾ, ಗಣಿ ಮಾಫಿಯಾದಿಂದ ಕೊಡಗಿನ ಪರಿಸರ ಆತಂಕ ಎದುರಿಸುತ್ತಿದೆ ಎಂದರು.ರೈತ ಸಂಘದ ಮುಖಂಡರಾದ ಕೊಣಸಾಲೆ ನರಸರಾಜು, ಸಂಬಳ್ಳಿ ಸುರೇಶ್‌, ನಾಗೇಂದ್ರ ಬಡಗಲಪುರ, ರಾಜೇಗೌಡ, ಕೊಡಗು ಜಿಲ್ಲೆಯ ಮುಖಂಡರಾದ ಮಾಚಿಮಾಡ ಎಂ. ರವೀಂದ್ರ, ಕರ್ನಲ್‌ (ನಿವೃತ್ತ) ಮುತ್ತಣ್ಣ, ರಘು ಮಾಚಯ್ಯ, ಶಂಕರ, ಇತರರು ಪಾಲ್ಗೊಂಡಿದ್ದರು.

ಸುಮಾರು 300–350 ಜನರು ಭಾಗವಹಿಸಿದ್ದ ಪ್ರತಿಭಟನೆಯಲ್ಲಿ ನಗರದಲ್ಲೆಡೆ ಬಿಗಿಪೊಲೀಸ್‌ ಬಂದೋ­ಬಸ್ತ್‌ ಮಾಡಲಾಗಿತ್ತು.ಏನಿದು ಯೋಜನೆ: ತಮಿಳುನಾಡಿನ ಕೂಡಂಕುಳಂ ಅಣು ವಿದ್ಯುತ್‌ ಸ್ಥಾವರದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಪಾಂಡಿಚೇರಿ ಹಾಗೂ ಕೇರಳ ರಾಜ್ಯಗಳಿಗೆ ರವಾನಿಸಲು ಕೇಂದ್ರ ಸರ್ಕಾರದ ಅಂಗಸಂಸ್ಥೆಯಾಗಿರುವ ಪವರ್‌ಗ್ರೀಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ 400 ಕೆವಿ ಹೈಟೆನ್ಷನ್‌ ವಿದ್ಯುತ್‌ ತಂತಿ ಮಾರ್ಗವನ್ನು ನಿರ್ಮಿಸುತ್ತಿದೆ.ಇದರ ಭಾಗವಾಗಿ ಮೈಸೂರು–ಕೊಡಗು–ಕೇರಳದ ಕೊಯಿಕ್ಕೋಡ್‌ಗೆ ತಂತಿ ಮಾರ್ಗ ನಿರ್ಮಿಸಲಾಗುತ್ತಿದೆ. ಈಗಾಗಲೇ ಮೈಸೂರಿನಿಂದ ಕೊಡಗಿನ ಗಡಿಭಾಗದವರೆಗೆ ಹಾಗೂ ಕೇರಳದ ಕೊಯಿಕ್ಕೋಡ್‌ನಿಂದ ಕೊಡಗಿನ ಗಡಿಭಾಗದವರೆಗೆ ತಂತಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮಧ್ಯೆದ ಭಾಗವಾಗಿರುವ ಕೊಡಗಿನ ಸುಮಾರು 50 ಕಿ.ಮೀ.ದಲ್ಲಿ ಈಗ ಕಾಮಗಾರಿ ನಡೆಯುತ್ತಿದೆ.

ಇಲ್ಲಿ ಕಾಮಗಾರಿ ಕೈಗೊಂಡರೆ ಸಾವಿರಾರು ಮರಗಳು ಹನನವಾಗುತ್ತವೆಂದು ವಿರೋಧ ವ್ಯಕ್ತವಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.