ಮಂಗಳವಾರ, ಜೂನ್ 15, 2021
25 °C

ಹೊಸತನದ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ಒಂದು ದಶಕದಲ್ಲಿ ಮಂಡಿಸಲಾದ ರೈಲ್ವೆಬಜೆಟ್‌ಗಳ ಮೇಲೆ ಕಣ್ಣಾಡಿಸಿದರೆ ಅವುಗಳೆಲ್ಲವೂ ಜನಪ್ರಿಯತೆಯ ಹಳಿಯಲ್ಲಿಯೇ ಸಾಗಿಬಂದದ್ದನ್ನು ಕಾಣಬಹುದು. ಈ ಅವಧಿಯಲ್ಲಿ ಸಚಿವರಾದವರು ಹೆಚ್ಚುವರಿಯಾಗಿ ಸಂಪನ್ಮೂಲವನ್ನು ಕ್ರೋಡೀಕರಿಸಿ ರೈಲ್ವೆ ಇಲಾಖೆಯನ್ನು ಸಶಕ್ತಗೊಳಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯಿಂದ ಬಜೆಟ್ ಮಂಡಿಸಲೇ ಇಲ್ಲ.ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವೇ ಅವರಿಗೆ ಮುಖ್ಯವಾಗಿತ್ತು. ಇವರಲ್ಲಿ ಹೆಚ್ಚಿನ ಸಚಿವರು ಪ್ರಾದೇಶಿಕ ಪಕ್ಷಗಳ ನಾಯಕರೇ ಆಗಿದ್ದ ಕಾರಣ ಬಜೆಟ್‌ಗಳು ಕೂಡಾ ಪ್ರಾದೇಶಿಕ ಪಕ್ಷಪಾತತನದಿಂದ ಕೂಡಿದ್ದವು. ಈ ಕಾರಣದಿಂದಾಗಿ ಸದಾ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದ ರೈಲ್ವೆ ಇಲಾಖೆಗೆ ಪ್ರಯಾಣಿಕರಿಗೆ ಹೆಚ್ಚು ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ.

 

ಅದು ಸರ್ಕಾರದ ಸಹಾಯಧನವನ್ನೇ ನಂಬಿದ್ದ ಪರಾವಲಂಬಿ ಇಲಾಖೆಯಾಗಿ ಹೋಗಿದೆ. ಈ ಸವೆದ ದಾರಿಯನ್ನು ತುಳಿಯಲು ಹೋಗದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು  ಹೊಸದಾರಿಯಲ್ಲಿ ಹೆಜ್ಜೆ ಇಡುವ ಪ್ರಯತ್ನ ಮಾಡಿದ್ದಾರೆ. ಒಂಬತ್ತು ವರ್ಷಗಳ ನಂತರ ಇದೇ ಮೊದಲ ಬಾರಿ ಅವರು ಎಲ್ಲ ವರ್ಗಗಳ ಪ್ರಯಾಣಿಕ ದರವನ್ನು ಹೆಚ್ಚಿಸುವ ದಿಟ್ಟತನದ ನಿರ್ಧಾರ ಕೈಗೊಂಡಿದ್ದಾರೆ.

 

ಪ್ರಯಾಣಿಕರ ತಲೆಯ ಮೇಲೆ ಹೊರಲಾಗದಷ್ಟು ಭಾರದ ಹೊರೆಯನ್ನು ಹೊರಿಸಲು ಹೋಗದೆ  ಪ್ರತಿ ಕಿ.ಮೀ.ಗೆ ಎರಡರಿಂದ ಮೂವತ್ತು ಪೈಸೆವರೆಗೆ ಪ್ರಯಾಣ ದರವನ್ನು ಅವರು ಹೆಚ್ಚಿಸಿದ್ದಾರೆ.ಬಡವಾಗಿ ಹೋಗಿರುವ ರೈಲ್ವೆ ಇಲಾಖೆಯ ಆರೋಗ್ಯ ಸುಧಾರಣೆಗೆ ಈ ಪ್ರಮಾಣದ ದರ ಏರಿಕೆ ಅನಿವಾರ್ಯವಾಗಿತ್ತು.ಕಳೆದ ಒಂದು ದಶಕದಲ್ಲಿ ಸಾಮಾನ್ಯ ಜನತೆಯ ಇನ್ನೊಂದು ಪ್ರಮುಖ ಸಂಚಾರ ಸಾಧನವಾಗಿರುವ ಬಸ್‌ಗಳ ಪ್ರಯಾಣ ದರ ಹಲವು ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣ ದರ ದುಬಾರಿ ಎಂದು ಗೊಣಗಾಡುವವರ ಸಂಖ್ಯೆ ಬಹಳ ಇಲ್ಲ. ರೈಲಿನಲ್ಲಿ ಪ್ರಯಾಣಿಸುವವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ರೈಲ್ವೆ ಸಂಪರ್ಕದ ಕೊರತೆಯೇ ಹೊರತು ಪ್ರಯಾಣ ದರ ಹೆಚ್ಚಳ ಅಲ್ಲ.

 

ಪ್ರಯಾಣ ದರವನ್ನು ಸ್ವಲ್ಪ ಹೆಚ್ಚಿಸಿ ಆ ಹಣವನ್ನು ರೈಲ್ವೆ ಸಂಪರ್ಕದ ಸುಧಾರಣೆಗೆ ಬಳಸುವುದನ್ನು ಯಾರೂ ವಿರೋಧಿಸಲಾರರು. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವರ ನಿರ್ಧಾರ ಸ್ವಾಗತಾರ್ಹ.

 

ಆದರೆ ಜನಪ್ರಿಯ ರಾಜಕಾರಣವನ್ನೇ ಮಾಡುತ್ತಾ ಬಂದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಯಾಣದರ ಹೆಚ್ಚಳ ಪಥ್ಯೆ ಆಗಿಲ್ಲ. ಹಟಕ್ಕೆ ಬಿದ್ದಿರುವ ಅವರು ತಮ್ಮ ಪಕ್ಷಕ್ಕೆ ಸೇರಿರುವ ಸಚಿವರೇ ಮಂಡಿಸಿರುವ ಬಜೆಟ್‌ಅನ್ನು ವಿರೋಧಿಸುವ ಮೂಲಕ ರಾಜಕೀಯ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ. ಈ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯದೆ ಸಚಿವ ದಿನೇಶ್ ತ್ರಿವೇದಿ ಅವರ ಬೆಂಬಲಕ್ಕೆ ನಿಲ್ಲಬೇಕು.ಈ ಮೂಲಕ ಜನಪ್ರಿಯ ಬಜೆಟ್‌ಗಳ ಹಾವಳಿಯಿಂದ ಸೊರಗಿಹೋಗಿರುವ ರೈಲ್ವೆಯನ್ನು ಬಲಗೊಳಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕರ್ನಾಟಕಕ್ಕೆ ಬಜೆಟ್ ಅನ್ಯಾಯವನ್ನೇನೂ ಮಾಡಿಲ್ಲ. ಮುಖ್ಯವಾಗಿ ವೆಚ್ಚ ಹಂಚಿಕೆಯ ಅನೇಕ ಯೋಜನೆಗಳಿಗೆ ಇಲಾಖೆ ಒಪ್ಪಿಕೊಂಡಿದೆ.

 

ಐದು ಹೊಸಮಾರ್ಗಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. ಆದರೆ ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳಿಗೆ ಸುಮಾರು 600 ಕೋಟಿ ರೂಪಾಯಿಗಳನ್ನಷ್ಟೇ ನೀಡಿರುವುದು ನಿರಾಶೆ ಉಂಟುಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.