ಮಂಗಳವಾರ, ಜೂನ್ 15, 2021
22 °C

ಹೊಸಪೇಟೆ ನಗರಸಭೆ ಕಾಂಗ್ರೆಸ್‌ ತೆಕ್ಕೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿನ ನಗರಸಭೆ ಅಧ್ಯಕ್ಷ­ರಾಗಿ 34ನೇ ವಾರ್ಡಿನ ಕಾಂಗ್ರೆಸ್‌ ಪಕ್ಷದ ಸದಸ್ಯೆ ಕಣ್ಣೆ ಉಮಾದೇವಿ ಹಾಗೂ ಉಪಾಧ್ಯಕ್ಷರಾಗಿ 17ನೇ ವಾರ್ಡಿನ  ಸದಸ್ಯೆ ಕಾಂಗ್ರೆಸ್‌ ಪಕ್ಷದ ಗೌಸಿಯಾ ಗುಜ್ಜರಿ ಷಾಶಾವಲಿ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾದರು.ಈ ಮೂಲಕ ಮೀಸಲಾತಿ ಗೊಂದಲ­ದಿಂದ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಕಗ್ಗಂಟು ಕೊನೆಗೂಂಡಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದವು. ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಹಾಗೂ ನಾಮಪತ್ರಗಳು ಕ್ರಮ ಬದ್ಧವಾಗಿರುವ ಕಾರಣ ಚುನಾವಣಾ ಅಧಿಕಾರಿಯೂ ಆಗಿರುವ ಉಪ­ವಿಭಾಗಾಧಿಕಾರಿ ಪಿ.ಸುನೀಲಕುಮಾರ್‌ ಅವರು ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ 20 ಸದಸ್ಯರ ಬಲ ಹೊಂದಿದ್ದು, 12 ಪಕ್ಷೇತರ, 2 ಬಿಜೆಪಿ ಹಾಗೂ 1 ಜೆಡಿಸ್‌ ಸದಸ್ಯ ಬಲ ಹೊಂದಿವೆ. ಕಾಂಗ್ರೆಸ್‌ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಇವರಿಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಇವರ ಅವಿರೋಧ ಆಯ್ಕೆ ಸುಗಮವಾಯಿತು.ಕಣ್ಣೆ ಉಮಾದೇವಿ ಹಾಗೂ ಗೌಸಿಯಾ ಪಾಷಾವಲಿ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ­ವಾಗಿ ಆಯ್ಕೆಯಾಗು­ತ್ತಿದ್ದಂತೆ ನಗರ­ಸಭೆ ಕಚೇರಿ ಎದುರು ಜಮಾಯಿಸಿದ್ದ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ತಹಶೀಲ್ದಾರ್‌ ರಮೇಶ್‌ ಕೋನರಡ್ಡಿ ಹಾಜರಿದ್ದರು.ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆ ಕಣ್ಣೆ ಉಮಾದೇವಿ ಅವರು, ‘ನಗರದ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವುದು ನನ್ನ ಮೊದಲ ಗುರಿಯಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ನೆನಗುದಿಗೆ ಬಿದ್ದಿರುವ ಹಲವಾರು ಕಾರ್ಯಗಳನ್ನು ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಪೂರ್ಣಗೊಳಿಸಲು ಶ್ರಮಿಸಲಾಗುವುದು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.