ಭಾನುವಾರ, ಏಪ್ರಿಲ್ 18, 2021
24 °C

ಹೊಸ ಪಕ್ಷ ರಚನೆಗೆ ಕೇಶುಭಾಯಿ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್ (ಪಿಟಿಐ): ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಬಂಡೆದ್ದಿರುವ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಮತ್ತು ಅವರ ಬೆಂಬಲಿಗರು ಬಿಜೆಪಿಯನ್ನು ತೊರೆದು ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕುವುದು ಬಹುತೇಕ ಖಚಿತವಾಗಿದೆ.ಎಲ್ಲವೂ ನಿರೀಕ್ಷೆಯಂತೆ ನಡೆದದ್ದೇ ಆದಲ್ಲಿ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆಗಳು ನಿಚ್ಚಳವಾಗತೊಡಗಿವೆ. ಆಡಳಿತಾರೂಢ ಬಿಜೆಪಿ ಮತ್ತು ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ಜತೆ ಕೇಶುಭಾಯಿ ಪಟೇಲ್ ಅವರ ಹೊಸ ಪಕ್ಷ ಅಖಾಡಕ್ಕೆ ಇಳಿಯುವ ನಿರೀಕ್ಷೆಯಿದೆ. ಹೊಸ ಪಕ್ಷ ರಚನೆಗೆ ಭರದ ಸಿದ್ಧತೆ ನಡೆದಿದ್ದು, ಈ ತಿಂಗಳ ಅಂತ್ಯದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ಸುಳಿವನ್ನು ಪಟೇಲ್ ಅವರ ಬೆಂಬಲಿಗರು ನೀಡಿದ್ದಾರೆ. `ಕೇಶುಭಾಯಿ ಹೊಸ ಪಕ್ಷ ಕಟ್ಟುವುದು ನೂರಕ್ಕೆ ನೂರರಷ್ಟು ಖಚಿತವಾಗಿದ್ದು, ಪಕ್ಷ ಎಲ್ಲ 182 ಸ್ಥಾನಗಳಿಗೂ ಸ್ಪರ್ಧಿಸಲಿದೆ. ರಾಜ್ಯ ತ್ರಿಕೋನ ಸ್ಪರ್ಧೆ ನೋಡಲಿದೆ~ ಎಂದು ಪಟೇಲ್ ಕಟ್ಟಾ ಬೆಂಬಲಿಗ ಗೋರ್ಧಾನ್ ಝಡಾಫಿಯಾ ಹೇಳಿದ್ದಾರೆ.ದೇಶದ ಉಳಿದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಾಢ್ಯವಾದಾಗಲೂ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಗಾಢ ಪ್ರಭಾವವಿರುವ ಗುಜರಾತ್‌ನಲ್ಲಿ ಮಾತ್ರ ಎಂದಿಗೂ ಪ್ರಾದೇಶಿಕ ಪಕ್ಷಗಳು ಯಶಸ್ವಿಯಾದ ನಿದರ್ಶನಗಳಿಲ್ಲ. ಆದರೆ ಪ್ರಾದೇಶಿಕ ಪಕ್ಷಗಳು ಗುಜರಾತ್ ರಾಜಕೀಯದಲ್ಲಿ ಹೊಸತಲ್ಲ. ಅನೇಕ ಪಕ್ಷಗಳು ಹುಟ್ಟಿದ ಬೆನ್ನಲ್ಲೇ ಕಣ್ಮುಚ್ಚಿವೆ. ಗಟ್ಟಿಯಾಗಿ ಉಳಿದುಕೊಂಡಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ.ಈ ಹಿಂದೆ 1980ರಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಿಮನ್‌ಭಾಯಿ ಪಟೇಲ್ ಅವರು ಜನತಾ ಮೋರ್ಚಾ ಎಂಬ ಪ್ರಾದೇಶಿಕ ಪಕ್ಷವನ್ನು ಹುಟ್ಟು ಹಾಕಿದ್ದರು. ಆದರೆ ಗುಜರಾತ್ ಜನರು ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕುವುದಿಲ್ಲ ಎಂಬುವುದನ್ನು ಅರಿತ ಅವರು ಮರಳಿ ಕಾಂಗ್ರೆಸ್‌ಗೆ ಸೇರಿದ್ದರು.1986ರಲ್ಲಿ ರಾಷ್ಟ್ರೀಯ ಜನತಾದಳ ಸ್ಥಾಪಿಸಿದ್ದ ಬಿಜೆಪಿ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ ಅವರು ಕೇವಲ ನಾಲ್ಕು ಸ್ಥಾನ ಗಳಿಸಲು ಮಾತ್ರ ಸಫಲರಾಗಿದ್ದರು. ನಂತರ ಅವರು ಕಾಂಗ್ರೆಸ್ ಸೇರಿದರು. ದಶಕಗಳ ಹಿಂದೆ ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಅವರ ಸಂಸ್ಥಾ ಕಾಂಗ್ರೆಸ್ ಇತರ ನಾಲ್ಕು ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತ್ತು ಅದನ್ನು ಹೊರತುಪಡಿಸಿದರೆ ರಾಜ್ಯದ ಜನತೆ ಎಂದಿಗೂ ಪ್ರಾದೇಶಿಕ ಪಕ್ಷಗಳತ್ತ ಒಲವು ತೋರಿದ ಉದಾಹರಣೆಗಳಿಲ್ಲ. ಈ ಎಲ್ಲ ಇತಿಹಾಸವನ್ನು ಬಲ್ಲ ಕೇಶುಭಾಯಿ ಪಟೇಲ್ ಇದೀಗ ಚಿಮನ್‌ಭಾಯಿ ಪಟೇಲ್, ಶಂಕರ್‌ಸಿಂಗ್ ವಘೇಲಾ ಹಾದಿಯಲ್ಲಿಯೇ ಹೋಗುತ್ತಿದ್ದಾರೆ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.