ಶನಿವಾರ, ಫೆಬ್ರವರಿ 27, 2021
31 °C

ಹೊಸ `ಮನೆ'ಗೆ ಭಿನ್ನ ಗ್ರಾಹಕ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ `ಮನೆ'ಗೆ ಭಿನ್ನ ಗ್ರಾಹಕ ವರ್ಗ

ಭಾರತದ ಆರ್ಥಿಕ ಪರಿಸ್ಥಿತಿ, ಜೀವನಶೈಲಿ, ಖರೀದಿ ಮನೋಭಾವದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಅಭಿವೃದ್ಧಿಯ ಹಾದಿಯಲ್ಲಿರುವ ದೇಶ ಎನಿಸಿಕೊಂಡಿದ್ದ ಭಾರತ, ಈಗಾಗಲೇ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಳ್ಳುವ ಮಟ್ಟಕ್ಕೆ ಪರಿವರ್ತನೆಗೊಳ್ಳುತ್ತಿದೆ. ಇವೇ ವೇಳೆ, ಇನ್ನೊಂದೆಡೆ ಮಹಾ ನಗರಗಳಲ್ಲಿ ಹೊಸತೇ ಆದ ಸಿರಿವಂತ ವರ್ಗ ಸೃಷ್ಟಿಯಾಗಿದೆ. ಕಡಿಮೆ ವಯಸ್ಸಿನವರೇ ಹೆಚ್ಚಾಗಿರುವ ಈ ವರ್ಗ ಮಹಾ ನಗರಗಳಲ್ಲಿನ ರಿಯಲ್ ಎಸ್ಟೇಟ್ ಅಭಿವೃದ್ಧಿ ಉದ್ಯಮದ ಗಮನ ಸೆಳೆಯುತ್ತಿದೆ, ಭಿನ್ನವಾಗಿ ಆಲೋಚಿಸುವಂತೆಯೂ ಪ್ರೇರಣೆ ನೀಡುತ್ತಿದೆ...ಇದು ಇತ್ತೀಚೆಗೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುರಿತು ನಡೆದ ಚರ್ಚಾಗೋಷ್ಠಿಯಲ್ಲಿ ಕೇಳಿಬಂದ ಮುಖ್ಯವಾದ ಮಾತುಗಳು...ಐಶಾರಾಮಿ ಜೀವನಶೈಲಿ ಮೆಚ್ಚುವ, ಹೊಸಬಗೆ ವಸ್ತು-ಸಾಧನಗಳಿಗೆ ಬೇಡಿಕೆ ಮುಂದಿಡುತ್ತಿರುವ ವರ್ಗ ಇದಾಗಿದೆ. ಈ ನವ ಧನಿಕ ವರ್ಗ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಢಿಗತವಾಗಿರುವ ಅಭಿರುಚಿಗಳಿಂದ ಬಹಳ ಪ್ರಭಾವಿತವಾಗಿದೆ. ಹಾಗಿದ್ದೂ ಭಾರತೀಯ ಅಸ್ಮಿತೆಯನ್ನು(ಐಡೆಂಟಿಟಿ) ಉಳಿಸಿಕೊಂಡೇ ಭಿನ್ನ ಜೀವನಶೈಲಿ ರೂಢಿಸಿಕೊಂಡಿದೆ. ಆ ಮೂಲಕವೇ ದೇಶದ ಮಾರುಕಟ್ಟೆಗೆ ಹೊಸತಾದ ವ್ಯಾಖ್ಯಾನವನ್ನೇ ನೀಡುತ್ತಿದೆ. ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರ, ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಷ್ಟೇ ಅಲ್ಲ, ವಿವಿಧ ಸೌಲಭ್ಯಗಳ, ಸರಕುಗಳ ಮಾರಾಟಗಾರರಲ್ಲಿಯೂ ಭಾರೀ ಪರಿವರ್ತನೆಗೆ ಕಾರಣವಾಗಿದೆ ಎಂಬುದನ್ನು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾರುಕಟ್ಟೆ ಪಂಡಿತರೂ ಭಿನ್ನ ರೀತಿಯಲ್ಲಿಯೇ ಬಿಡಿಸಿಟ್ಟರು.ಐಟಿ, ಬಿಟಿ, ಬಿಪಿಒ ಕ್ಷೇತ್ರದ ತಂತ್ರಜ್ಞರು, ಹೊಸತಾದ ವಿವಿಧ ಸೇವಾ ಕ್ಷೇತ್ರಗಳ ನೌಕರರು, ಸ್ವಂತವಾಗಿಯೇ ಉದ್ಯಮ ಆರಂಭಿಸಿದವರು ಮೊದಲಾದವರನ್ನು ಒಳಗೊಂಡಂತೆಯೇ ಈ ಹೊಸ ಸಿರಿವಂತ ವರ್ಗ ಸೃಷ್ಟಿಯಾಗಿದೆ.ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಪ್ರಕಾರ ಭಾರತದಲ್ಲಿ ಈ ನವ ಸಿರಿವಂತ ವರ್ಗ 1.30 ಕೋಟಿಯಷ್ಟಿದೆ.ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ರೂಪುಗೊಂಡಿರುವ ಈ ಭಿನ್ನ ಸಿರಿವಂತ ಶ್ರೇಣಿಯು ತಂತ್ರಜ್ಞಾನದ ಬಗೆಗೆ ಭಾರಿ ಆಕರ್ಷಣೆ, ಮೇಲ್ಮಟ್ಟದ ಅಭಿರುಚಿ ಮತ್ತು ವೈಶಿಷ್ಟ್ಯಪೂರ್ಣ ಜೀವನಶೈಲಿ ರೂಢಿಸಿಕೊಂಡಿದೆ. ತನ್ನದೇ ಆದ ವಿಶಿಷ್ಟ ವಿನ್ಯಾಸದ ಮನೆಯಲ್ಲಿ, ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳೊಡನೆ ಬದುಕು ರೂಪಿಸಿಕೊಂಡಿದೆ. ಈ ಅಂಶಗಳೆಲ್ಲವೂ ಮಾರುಕಟ್ಟೆ ತಜ್ಞರು ಮತ್ತು ಜೀವನಶೈಲಿ ಸಾಧನಗಳ ತಯಾರಕರ ನಡುವಿನ ಚರ್ಚೆಯ ವಿಚಾರಗಳಾಗಿವೆ ಎಂಬುದು ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪೆನಿ ಆಯೋಜಿಸಿದ್ದ ಈ ಚರ್ಚಾಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಾಗಿವೆ.ಈ ಚರ್ಚೆಯಲ್ಲಿ ಸಂಶೋಧನೆ, ಮಾರುಕಟ್ಟೆ, ರಿಯಲ್ ಎಸ್ಟೇಟ್ ಮತ್ತು ಗ್ರಾಹಕ ವಸ್ತು ಹಾಗೂ ಬ್ರಾಂಡ್ ವಿಶ್ಲೇಷಣೆ ಕ್ಷೇತ್ರದ ತಜ್ಞರು ಭಾಗವಹಿಸಿದ್ದರು.ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞ ಹರಿಕೇಶ್ ಅವರ ಪ್ರಕಾರ, ಈ ಹೊಸ ಸಿರಿವಂತ ವರ್ಗವೇ ದೇಶದ ವಸತಿ ನಿರ್ಮಾಣ ಉದ್ಯಮದ ಬಹುಮುಖ್ಯ ಚಾಲನಾ ಶಕ್ತಿಯಾಗಿದೆ. ಈ ವರ್ಗದ ಜನರು ಬಹಳ ದೊಡ್ಡ ಆಶಯಗಳನ್ನು ಹೊಂದಿದವರಾಗಿದ್ದಾರೆ ಮತ್ತು ಐಶಾರಾಮಿ ಬದುಕು ಹೊಂದಲು ಇಚ್ಛಿಸುವವರಾಗಿದ್ದಾರೆ.ಇವರಲ್ಲಿ ಬಹಳಷ್ಟು ಮಂದಿ ಹಲವು ಬಾರಿ ವಿದೇಶ ಯಾತ್ರೆ ಕೈಗೊಂಡವರು, ವಿವಿಧ ದೇಶಗಳಲ್ಲಿ ಕೆಲ ಕಾಲ ನೌಕರಿ ಅಥವಾ ಉದ್ಯಮದ ಹಿನ್ನೆಲೆಯಲ್ಲಿ ಉಳಿದಿದ್ದವರೇ ಆಗಿದ್ದಾರೆ. ಹಾಗಾಗಿಯೇ ಈ ನವ ಸಿರಿವಂತ ವರ್ಗ ತನ್ನದೇ ಆದ ಭಿನ್ನ ರೀತಿಯ ಆಕಾಂಕ್ಷೆಗಳೊಂದಿಗೆ ಬೇರೆಯದೇ ಜೀವನಶೈಲಿಯ ಬದುಕು ಕಟ್ಟಿಕೊಳ್ಳಲು ಬಯಸುತ್ತಿದೆ.ಈ ಹೊಸ ತಲೆಮಾರು ಎಲ್ಲಿಂದ ಬಂದಿತು? ಈ ಹೊಸ ಶ್ರೇಣಿಯ ಸಮುದಾಯ ಹೇಗೆ ಸೃಷ್ಟಿಯಾಯಿತು? ಇದು ಭಾರತದ ಸಮಾಜದಲ್ಲಿ ಹೇಗೆ ಭಿನ್ನ ಜೀವನಶೈಲಿಯನ್ನು ಹುಟ್ಟುಹಾಕುತ್ತಿದೆ? ಎಂಬುದನ್ನು ಅವಲೋಕಿಸುತ್ತಾ ಹೋದರೆ ಅಚ್ಚರಿಯಾಗುತ್ತದೆ. ಆದರೆ, ಈ ವರ್ಗದ ಜನ ಹೊಸ ಟ್ರೆಂಡ್ ಹುಟ್ಟುಹಾಕುತ್ತಿರುವ ವೈಖರಿಯನ್ನು ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರದ ಕಂಪೆನಿಗಳು ಗಂಭೀರವಾಗಿಯೇ ಪರಿಗಣಿಸಬೇಕಿದೆ ಎನ್ನುವುದು ಹರಿಕೇಶ್ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.ಹೊಸ ತಲೆಮಾರಿನ ಧನವಂತ ವರ್ಗದ ಖರೀದಿ ಮನೋಭಾವದಲ್ಲಿ ಹೇಗೆ ಮತ್ತು ಯಾವ ಬಗೆ ಬದಲಾವಣೆಗಳು ಆಗಿವೆ ಎಂಬುದನ್ನೂ ಗಮನಿಸಬೇಕಿದೆ. ಉತ್ತಮ ಬ್ರಾಂಡ್ ಉತ್ಪನ್ನವೂ ಆಗಿರಬೇಕು, ತಾವು ಕೊಡುವ ಹಣಕ್ಕೆ ತಕ್ಕ ಮೌಲ್ಯದ ಸರಕೂ ಬೇಕು ಹಾಗೂ ಮುಖ್ಯವಾಗಿ ಅದು ಕೈಗೆಟುವಂತಹ ದರದಲ್ಲಿಯೂ ಇರಬೇಕು ಎಂಬುದೇ ಈಗಿನ ನವರ ಅಭಿಮತವಾಗಿದೆ ಎನ್ನುವುದು ಮಾರುಕಟ್ಟೆ ಮತ್ತು ಬ್ರಾಂಡ್ ತಜ್ಞ ಹರೀಶ್ ಬಿಜೂರ್ ಅನುಭವದ ಮಾತು.ಹೊಸ ಸಿರಿವಂತ ಸಮುದಾಯ ನಗರ ಜೀವನದ ದಿಕ್ಕನ್ನೇ ಬದಲಾಯಿಸುತ್ತಿದೆ. ಹೊಸ ಬಗೆ ಚಿಂತನೆಗಳೊಂದಿಗೆ ಬದುಕು ಮತ್ತು ವಾಸಸ್ಥಳ ಎಂಬ ಕಟ್ಟಡ ಎರಡರಲ್ಲೂ ಬದಲಾವಣೆ ತರುತ್ತಿದೆ. ಇದೆಲ್ಲದರ ಪರಿಣಾಮವಾಗಿ ಹೊಸ ಬಗೆ ಸರಕು, ಅವಕಾಶ, ಮಾರುಕಟ್ಟೆ ಸೃಷ್ಟಿಯಾಗುತ್ತಿವೆ ಎಂಬುದು ಸಮಾಜ ವಿಜ್ಞಾನ ಕ್ಷೇತ್ರದ ಸಂಶೋಧಕ ಪ್ರೊ. ಬಿನೊ ಪೌಲ್ ಅವರ ವಿಶ್ಲೇಷಣೆ.ಕುಷ್‌ಮನ್ ಅಂಡ್ ವೇಕ್‌ಫೀಲ್ಡ್ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಸಂದೀಪ್ ತ್ರಿವೇದಿ ಪ್ರಕಾರ, ನಗರ ಪ್ರದೇಶಗಳಲ್ಲಿ ಈಗ 27ರಿಂದ 45 ವರ್ಷ ವಯೋಮಾನದ ದುಡಿಯುವ ವರ್ಗದ ಸಂಖ್ಯೆ ಹೆಚ್ಚುತ್ತಿದೆ. ಇದು ಈಗಿನ ಬದಲಾವಣೆಗಳಿಗೂ ಕಾರಣವಾಗುತ್ತಿದೆ. ಹೊಸ ಮನೆಗಳನ್ನು ಖರೀದಿಸುವ ಗ್ರಾಹಕರರಲ್ಲಿಯೂ ಬಹಳಷ್ಟು ಮಂದಿ ಕಡಿಮೆ ವಯಸ್ಸಿನವರಾಗಿದ್ದಾರೆ. ಈಗಂತೂ ಮೊದಲ ಬಾರಿಗೆ ಮನೆ ಖರೀದಿಸುವ ಗ್ರಾಹಕರ ಸರಾಸರಿ ವಯೋಮಾನ 28ರಿಂದ 32 ವರ್ಷವಾಗಿದೆ ಎಂಬುದು ಗಮನಿಸಬೇಕಾದ ಅಂಶ. ಈ ಸಮುದಾಯವೇ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಬಗೆಯ ಚಿಂತನೆಗೆ ಹಾಗೂ ಬದಲಾವಣೆಗೆ ಕಾರಣವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.