ಭಾನುವಾರ, ಜೂನ್ 13, 2021
22 °C

ಹೋಳಿ ಹಬ್ಬ: ಸೌಹಾರ್ದದಿಂದ ಆಚರಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಅತ್ಯಂತ ವಿಜೃಂಭಣೆಯಿಂದ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸಲು ಭಾನುವಾರ ಇಲ್ಲಿನ ಶಹರ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಸಭಾಭವನದಲ್ಲಿ ನಡೆದ ಶಾಂತಿ ಪಾಲನಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.ಎಲ್ಲ ಸಮಾಜದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದತೆಯಿಂದ ಆಚರಿಸುವ ಭರವಸೆ ನೀಡಿದರು.ಪೊಲೀಸ್ ಆಯುಕ್ತ ಡಾ. ಕೆ.ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿ, ಹೋಳಿ ಹಬ್ಬದಲ್ಲಿ ಅನೇಕ ಗಲಭೆಗಳು ಹುಟ್ಟಿಕೊಳ್ಳುತ್ತಿದ್ದವು. ಆದರೆ ಕಳೆದ ವರ್ಷ ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿ ಯಾವ ಗೊಂದಲಗಳು ನಡೆಯದಂತೆ ಸಾರ್ವಜನಿಕರು ಪೊಲೀಸರಿಗೆ ಸಹಕರಿಸಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಲಭೆಗಳು ಉಂಟಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸಹೋದರತ್ವದ ಭಾವನೆಯಿಂದ ಈ ಹಬ್ಬವನ್ನು ಆಚರಿಸಬೇಕು. ಏನಾದರೂ ಗೊಂದಲದ ವಾತಾವರಣ ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಾರ್ವನಿಕರಲ್ಲಿ ವಿನಂತಿಸಿದರು.ಶಾಸಕಿ ಸೀಮಾ ಮಸೂತಿ ಮಾತನಾಡಿ, ಹೋಳಿ ಹಬ್ಬದಲ್ಲಿ ಗೂಂಡಾ ವರ್ತನೆಯಾಗಬಾರದು ಎಂಬ ಉದ್ದೇಶದಿಂದ ಈ ಶಾಂತಿಪಾಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಬ್ಬವನ್ನು ಎಲ್ಲ ಸಮಾಜದವರು  ಆಚರಿಸಬೇಕು.ಇಂತಹ ಹಬ್ಬ ಹರಿದಿನಗಳು ಒಡೆದು ಹೋದ ಸಂಬಂಧಗಳನ್ನು ಮತ್ತೆ ಕೂಡಿಸುವ ಪ್ರತೀಕಗಳಾಗಿವೆ. ಪರೀಕ್ಷೆಗಳು ನಡೆದಿದ್ದು, ಆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಈ ಹಬ್ಬವನ್ನು ಆಚರಿಸಬೇಕು ಎಂದರು.ಹೋಳಿ ಹಬ್ಬ ಸಮಿತಿಯ ಅಧ್ಯಕ್ಷ ಯಲ್ಲಪ್ಪಗೌಡ ಪಾಟೀಲ ಉದ್ಘಾಟಿಸಿ, ಈ ಹಬ್ಬ ಐತಿಹಾಸಿಕವಾದ ಮಹತ್ವವವನ್ನು ಪಡೆದುಕೊಂಡಿದೆ. ಇದನ್ನು ಎಲ್ಲ ಸಮಾಜದವರು ಒಗ್ಗಟ್ಟಿನಿಂದ ಕೂಡಿ ಆಚರಿಸಬೇಕು ಎಂದು ಸಲಹೆ ನೀಡಿದರು.ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾತನಾಡಿ, ಯಾರಿಗೆ ಬಣ್ಣವನ್ನು ಆಡುವ ಮನಸ್ಸಿರುವುದಿಲ್ಲವೋ ಅಂಥವರಿಗೆ ಒತ್ತಾಯ ಪೂರ್ವಕವಾಗಿ ಬಣ್ಣ ಹಚ್ಚುವ ಪ್ರಯತ್ನ ಮಾಡಬಾರದು. ಓಕಳಿ ಹಬ್ಬವು ಶುಕ್ರವಾರವೇ ಬಂದಿದೆ. ಅಂದು ಮುಸಲ್ಮಾನ ಬಾಂಧವರು ನಮಾಜ್‌ಗೆ ತೆರಳುವ ಸಂದರ್ಭದಲ್ಲಿ ಯಾವುದೇ ಗಲಾಟೆಗಳಾಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದರು.ಡಿ.ಬಿ.ನವಲಗುಂದ, ರಾಜೇಶ್ವರಿ ಸುಂಕದ ಮಾತನಾಡಿದರು. ಪಾಲಿಕೆ ಸದಸ್ಯರಾದ ಗಾಯತ್ರಿ ಕನವಳ್ಳಿ, ಯಾಸೀನ್ ಹಾವೇರಿಪೇಟ, ಅಶೋಕ ನಿಡವಣಿ, ಪ್ರಕಾಶ ಗೊಡಬೋಲೆ, ಡಿಸಿಪಿ ಎಂ.ಎಸ್. ಪ್ರತಾಪನ್, ವೇದಿಕೆಯಲ್ಲಿದ್ದರು.

ಎಸಿಪಿ ಡಾ. ಸಂಜೀವ ಪಾಟೀಲ ಸ್ವಾಗತಿಸಿದರು. ಬಿ.ಆರ್.ಕಂದಗಲ್ ನಿರೂಪಿಸಿದರು. ಎಸಿಪಿ ಎನ್.ಎಸ್.ಪಾಟೀಲ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.