ಶನಿವಾರ, ಜನವರಿ 25, 2020
16 °C

‘ಆನೆಗಳ ರಕ್ಷಣೆ: ಜೀವ ವೈವಿಧ್ಯದ ಉಳಿವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನೆಗಳನ್ನು ರಕ್ಷಿಸುವುದರ ಮೂಲಕ ನಮ್ಮ ಕಾಡುಗಳಲ್ಲಿನ ಜೀವ ವೈವಿಧ್ಯವನ್ನು ಉಳಿಸಬಹುದು ಎಂದು  ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಭಾಗದ ಪ್ರಾಧ್ಯಾಪಕ ರಾಮನ್‌ ಸುಕುಮಾರ್ ಹೇಳಿದರು.‘ರೊಷಾ ಇಂಡಿಯಾ’, ಏಷ್ಯಾ ಪರಿಸರ ಸಂರಕ್ಷಣಾ ಸಂಸ್ಥೆ ಹಾಗೂ ವನ್ಯ­ಜೀವಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರಗಳ ಜಂಟಿ ಸಹಯೋಗದಲ್ಲಿ ಸೋಮ­ವಾರ ಏರ್ಪಡಿಸಿದ್ದ ಡಾ.ವಿಜಯ್ ಆನಂದ್ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ  ‘ಸೈನ್ಸ್ ಆಫ್ ಎಲಿಫೆಂಟ್ ಇನ್ ಸಿಲಿಕಾನ್ ಸಿಟಿ’ ಪುಸ್ತಕವನ್ನು  ಬಿಡುಗಡೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.‘ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿ­ರುವ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷವನ್ನು ನಿಯಂತ್ರಿಸು­ವುದು ಒಂದು ದೊಡ್ಡ ಸವಾಲು.  ಜೈವಿಕ ವ್ಯವಸ್ಥೆಯ ಮಹತ್ವದ ಅಂಗಗಳಾಗಿರುವ ಆನೆಗಳ ವರ್ತನೆಯನ್ನು ಅರಿತುಕೊಂಡರೆ ಈ ಸಂಘರ್ಷವನ್ನು ಹತೋಟಿಗೆ ತರಬಹುದು. ಈಚೆಗೆ ಮಖ್ನಾ (ದಂತ­ವಿಲ್ಲದ ಸಲಗ)ಗಳ ಸಂಖ್ಯೆ ಹೆಚ್ಚುತ್ತಿದ್ದು ವಿಕಾಸದ ಹಾದಿಯಲ್ಲಿ ಮುಂದೊಂದು ದಿನ ಮಖ್ನಾಗಳೇ ಉಳಿಯಬಹುದು’ ಎಂದು ಅವರು ಅಭಿಪ್ರಾಯಪಟ್ಟರು.ಪುಸ್ತಕವನ್ನು ಬಿಡುಗಡೆ ಮಾಡಿದ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಅವರು ಮಾತನಾಡಿ, ‘ಕಳೆದ 25 ವರ್ಷಗಳ ಅವಧಿಯಲ್ಲಿ ಆನೆ ಚಲಿಸುವ ಪ್ರದೇಶದ ಅರಣ್ಯ ಪ್ರದೇಶವು ಮಾನವನ ತೀವ್ರ ಚಟುವಟಿಕೆಗಳಿಂದ ಕುಗ್ಗುತ್ತಾ ಬಂದಿವೆ.ವೇಗದ ಬದಲಾ­ವಣೆಗೆ ಹೊಂದಿಕೊಳ್ಳುವಲ್ಲಿ ಆನೆಗಳು ತೊಂದರೆ ಎದುರಿಸುತ್ತಿವೆ. ದೊಡ್ಡ ದೇಹದ ಪ್ರಾಣಿಗೆ ವಿಶಾಲವಾದ ಅವಾಸ ಸ್ಥಾನದ ಅಗತ್ಯವಿರುತ್ತದೆ ಎಂಬುದನ್ನು ನಾವು ಅರಿತುಕೊಳ್ಳುವ ನಿಟ್ಟಿನಲ್ಲಿ ಈ ಪುಸ್ತಕವು ಮಾರ್ಗದರ್ಶಿಯಾಗುತ್ತದೆ’ ಎಂದರು.ವನ್ಯಜೀವಿ ಕಾರ್ಯಕರ್ತೆ ಬೃಂದಾ ನಂದಕುಮಾರ್ ಮಾತನಾಡಿ ಅಂಕಿ ಅಂಶ­ಗಳು ಮತ್ತು ದಾಖಲೆಗಳ ಆಧಾರ­ವಿಲ್ಲದೆ  ವನ್ಯಜೀವಿ ಸಂರಕ್ಷಣೆ ಯಲ್ಲಿ ಯಾವೊಂದು ಯೋಜನೆಯನ್ನು ಶಿಫಾರಸು ಮಾಡಲಾಗದು ಎಂದರು. ರೊಷಾ ಇಂಡಿಯಾದ ಮುಖ್ಯಸ್ಥ ರೆವೆರೆಂಡ್ ಪ್ರೇಮ್ ಮಿತ್ರ ಮತ್ತು ಇತರರು ಕಾರ್ಯಕ್ರಮದಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)