ಸೋಮವಾರ, ಮಾರ್ಚ್ 8, 2021
31 °C

‘ಕೈ’ ಹಿಡಿದ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೈ’ ಹಿಡಿದ ಮಹಿಳೆಯರು

‘ರಾಜಕಾರಣದ ನಯಮೆತ್ತ ಅಬಲಾ­ಜನದೊಂದು ಬುದ್ಧಿಯೆತ್ತ’ ಎಂದು ಪಂಪಭಾರತದ ದ್ರೌಪದಿ ಹೇಳಿದ ಮಾತು ಇಂದಿನ ದಿನಕ್ಕೂ ಹಲವು ರೀತಿಯಲ್ಲಿ ಅನ್ವಯವಾಗು­ವುದು ಸುಳ್ಳಲ್ಲ. ಮಹಿಳೆಯರು ರಾಜಕಾರಣದಲ್ಲಿ ಎದ್ದು ಕಾಣು­ವುದೂ ಇಲ್ಲ, ಮತಬ್ಯಾಂಕ್ ಎಂದು ಪರಿಗಣಿತವಾಗುವುದೂ ಇಲ್ಲ. ರಾಜ್ಯದ ರಾಜಕೀಯರಂಗದಲ್ಲಿ ಅವರು ‘ಶೋಭಿ­ಸುವ’ ಕಾಲ ಎಂದು ಬರುತ್ತದೋ  ಅವರಿಗೆ ‘ರಮ್ಯಚೈತ್ರಕಾಲ’ ಎಂದು ಒದಗುವುದೋ ತಿಳಿಯುತ್ತಿಲ್ಲ. ಒಟ್ಟಿ­ನಲ್ಲಿ ಇತಿಹಾಸದ ಹಾಗೆ ರಾಜ­ಕಾರಣವೂ ಅಪ್ಪಟ ಪೌರುಷಮಯ.ಮಹಿಳೆಯರನ್ನು ಮತಗಟ್ಟೆಗೆ ಸೆಳೆ­ಯುವುದೇ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿ­ಗಳ ಮುಂದಿರುವ ಬಹಳ ದೊಡ್ಡ ಸವಾಲು; ಆದರೂ ಮಹಿಳೆಯರು ಒಂದು ಮತಸಮೂಹ ಆಗುವ ಶಕ್ತಿ ಪಡೆಯಲಾಗದ ವಿಪರ್ಯಾಸ ನಮ್ಮಲ್ಲಿದೆ. ರಾಜಕೀಯದಲ್ಲಿ ಮಹಿಳೆ­ಯರ ಪ್ರಾತಿನಿಧ್ಯ ಖಚಿತಪಡಿಸುವ ಮೀಸಲಾತಿ ಮಸೂದೆಯಂತೂ ಯಾರಿಗೂ ಬೇಡದ ಕೂಸಾಗಿದೆ. ಈ ಪ್ರತಿಕೂಲ ಪರಿಸ್ಥಿತಿಯ ಹಿನ್ನೆಲೆಯಿದ್ದೂ ಮಹಿಳೆಯರು ಮನಸ್ಸು ಮಾಡಿದರೆ ರಾಜಕೀಯದಲ್ಲಿ ಏನನ್ನಾದರೂ ಮಾಡ­ಬಲ್ಲರು ! ಆದರೆ ಅಷ್ಟು ಮಾಡಲು– ಮೊದಲು ಅವರು ಮನೆ ಬಿಟ್ಟು ಮತಗಟ್ಟೆಗೆ ಬರಬೇಕಷ್ಟೆ.‘ಪ್ರಜಾವಾಣಿ’ ಮತಗಟ್ಟೆ ಸಮೀಕ್ಷೆಯ ಫಲಿತಾಂಶದಲ್ಲಿ ಮತದಾರರು ಯಾವ ಪಕ್ಷಕ್ಕೆ ಎಷ್ಟು ಮತ ಹಾಕಿದ್ದಾರೆ ಎಂಬುದರ ವಿವರ­ಗಳನ್ನು ಲಿಂಗಾಧಾರಿತವಾಗಿ ವಿಶ್ಲೇಷಿಸಿ­ದರೆ, ರಾಜ್ಯದ ಮಹಿಳೆಯರು ಮತ­ಪೆಟ್ಟಿಗೆಯ ಮೇಲೆ ತಮ್ಮ ಕೈ ಇಟ್ಟಿ­ರುವುದು ಎದ್ದು ಕಾಣುತ್ತದೆ. ರಾಜ್ಯ­ದಲ್ಲಿ ಇಪ್ಪತ್ತೆಂಟು ಲೋಕಸಭಾ ಸ್ಥಾನಗಳ ಪೈಕಿ ಹದಿನೆಂಟರಲ್ಲಿ ಬಿಜೆಪಿ ಸಂಸದರಿದ್ದರು. ಆದರೆ ಸಮೀಕ್ಷೆಯ ಪ್ರಕಾರ, ಮತ ಚಲಾಯಿಸಿದ ಒಟ್ಟು ಮಹಿಳೆಯರ ಪೈಕಿ ಶೇ. 44 ರಷ್ಟು ಮಂದಿ ಕಾಂಗ್ರೆಸ್‌ನ ‘ಕೈ’ ಹಿಡಿದಿದ್ದಾರೆ. ಬಿಜೆಪಿಗೆ ಅವರು ಕೊಟ್ಟಿರುವುದು ಶೇ. 41.6. ಜೆಡಿಎಸ್ ಗೆ ಸಿಕ್ಕಿರುವುದು  ಶೇ. 11.6.ರಾಜ್ಯದ ಮಹಿಳೆಯರು ಕಾಂಗ್ರೆಸ್ ಪಕ್ಷದ ಬಗ್ಗೆ ಹೆಚ್ಚು ಒಲವು ತೋರಿಸಿರುವುದಕ್ಕೆ ಕಾರಣಗಳ ಪೈಕಿ, ಕಾಂಗ್ರೆಸ್ ಗೆ ಮತ ಹಾಕುವುದು ಅವರ ಕುಟುಂಬಗಳಲ್ಲಿ ಮೊದಲಿನಿಂದ ಬಂದ ಅಭ್ಯಾಸ ಆಗಿರಬಹುದು. ಸಮೀಕ್ಷೆ­ಯಲ್ಲಿ ಮತದಾರರ ವಯಸ್ಸು ಹೆಚ್ಚಿದ ಹಾಗೆ ಕಾಂಗ್ರೆಸ್‌ಗೆ ಬೆಂಬಲ ಹೆಚ್ಚಿರು­ವುದನ್ನು ಗಮನಿಸಿದರೆ ಇದನ್ನು ನಂಬಬಹುದು. ಸಮೀಕ್ಷೆಯ ಫಲಿ­ತಾಂಶ­ದಲ್ಲಿ ರಾಜ್ಯದ 18–35 ವಯೋಮಾನದ ಗುಂಪಿನಲ್ಲಿ ಬಿಜೆಪಿಗೆ ಶೇ. 54.8 ರಷ್ಟು ಅಧಿಕ ಬೆಂಬಲ ಗಮನಾರ್ಹವಾಗಿದೆ. ಹಾಗಾದರೆ, ಇದರಲ್ಲಿನ ಯುವತಿಯರಿಗೆ ಯುವಕ ರಾಹುಲ್‌ಗಿಂತ ನರೇಂದ್ರ ಮೋದಿ ಇಷ್ಟವಾದರೇ? ಅಥವಾ ಪಬ್ ದಾಳಿ ಅವರಿಗೆ ಮರೆತುಹೋಯಿತೇ?ಮಹಿಳೆಯರಿಗೆ ಮತ ಹಾಕಲು ಯಾವ ಮಾನದಂಡಗಳಿರಬಹುದು? ಮಹಿಳೆಯರು ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು? ಬಹುತೇಕ ಕುಟುಂಬಗಳಲ್ಲಿ ಹೆಂಗಸರ ಆಯ್ಕೆ­ಯನ್ನು ಗಂಡಸರೇ ತೀರ್ಮಾನಿಸ­ಬಹುದು. ಜಾತಿ ನೋಡಿಕೊಂಡು ಮತ ಹಾಕುವುದು ಅವರಿಗೆ ಗೊತ್ತೇ ಎಂಬುದು ಅಸ್ಪಷ್ಟ. ಇನ್ನು ಆಮಿಷಗಳ ಪೈಕಿ, ಹಂಚಿದ ಹಣ ಮತ್ತು ಹೆಂಡ ಎಂದಿದ್ದರೂ ಗಂಡಸರ ಪಾಲು. ದೂರದ ಸೂರತ್ ನಿಂದ ತಂದು ಹಂಚಿದ ಅಗ್ಗದ ಸೀರೆ ರವಿಕೆಗಳು, ಮೂಗುಬೊಟ್ಟು ಮುಂತಾದುವು ಮಾತ್ರ ಪುಣ್ಯಕ್ಕೆ ಇವರಿಗೇ ಉಳಿದಿರಬಹುದು

.

ಮತದಾರ ಮಹಿಳೆಯರ ಸಾಮಾಜಿಕ ಸ್ಥಾನಮಾನವೂ ಬಹಳ ಮುಖ್ಯ. ಗ್ರಾಮೀಣ ಪ್ರದೇಶದಲ್ಲಿ ಬಸವಳಿಯುವ, ನಗರ ಪ್ರದೇಶದಲ್ಲಿ ಬೆವರು ಸುರಿಸುವ ಬಡಮಹಿಳೆಯರು ಯಾವ ಕಾರಣಕ್ಕೆ ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದು ಅವರಿಗೇ ಗೊತ್ತಿಲ್ಲದಿರಬಹುದು. ಒಟ್ಟಿನಲ್ಲಿ ದೇಶದೆಲ್ಲೆಡೆ ಇದ್ದಂತೆ, ರಾಜ್ಯದಲ್ಲೂ 2014ರ ಚುನಾವಣೆಯಲ್ಲಿ ಗಂಡಸರ ಗಂಟಲ ದನಿಯೇ ಕೇಳಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.