ಸೋಮವಾರ, ಜೂನ್ 21, 2021
23 °C
ಪತ್ರಕರ್ತರ ಗುಂಪುಗಾರಿಕೆಗೆ ಎಚ್ಚರಿಕೆ

‘ಜವಾಬ್ದಾರಿ ಮರೆತರೆ ನಡುಬೀದಿಯಲ್ಲಿ ಏಟು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಪತ್ರಕರ್ತರಲ್ಲಿನ ಗುಂಪು­ಗಾರಿಕೆ ನೋಡಿದರೆ ಸಮಾಜ ಅಸಹ್ಯಪಟ್ಟುಕೊಳ್ಳುತ್ತಿದೆ. ಜವಾಬ್ದಾರಿ ಮರೆತು ಹೀಗೇ ಮುಂದುವರಿದರೆ ಜನ ನಡುಬೀದಿಯಲ್ಲಿ ನಿಂತು ಹೊಡೆಯುವ ಸಾಧ್ಯತೆಯಿದೆ ಎಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಬಿ.ವೆಂಕಟಸಿಂಗ್‌ ಎಚ್ಚರಿಸಿದರು.ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಸೋಮವಾರ ಅವರು ಮಾತನಾಡಿದರು.ಪತ್ರಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಮಾಜದ ಹುಳುಕು ಎತ್ತಿ ತೋರಿಸುವ ನಮ್ಮನ್ನು ಸಮಾಜವೂ ಅದೇ ರೀತಿ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ನಮ್ಮ ಲೋಪ­ಗಳನ್ನೂ ಹುಡುಕುತ್ತದೆ. ಆದ್ದರಿಂದ ಮೇಲೆ ಹೇಳಿದ ಸನ್ನಿವೇಶಕ್ಕೆ ಅವಕಾಶ ಕೊಡಬಾರದು. ಎಲ್ಲರೂ ಒಂದಾಗಿ ಕ್ಷೇತ್ರದ ಘನತೆ ಗೌರವ ಕಾಪಾಡಬೇಕು ಎಂದು ಜಿಲ್ಲೆಯ ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಗ್ರಾಮೀಣ ಪತ್ರಿಕೋದ್ಯಮದ ಮೇಲೆ ದೇಶ ನಿಂತಿದೆ. ಗ್ರಾಮೀಣ ಪತ್ರಕರ್ತರಿಗೆ ಹೊಣೆಗಾರಿಕೆಯಿದೆ. ಆದ್ದರಿಂದ ಕೀಳರಿಮೆ ಬೇಡ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಲು ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತದೆ, ಅಕ್ರಮ ಸದಸ್ಯತ್ವ ರದ್ದುಗೊಳಿಸಿ ಅರ್ಹ ಪತ್ರ­ಕರ್ತರಿ­ಗಷ್ಟೇ ಸದಸ್ಯತ್ವ ನೀಡಲಾ­ಗು­ವುದು. ಅಲ್ಲದೇ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಕುರಿತು ಪ್ರಯತ್ನಿಸಲಾ­ಗುವುದು ಎಂದು ಹೇಳಿದರು.ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಮಾತನಾಡಿ, ಕ್ರಿಯಾಶೀಲತೆ ಉಳ್ಳವರು ಸ್ಪರ್ಧಾತ್ಮಕ ಯುಗದಲ್ಲಿ ಬೇಗನೆ ಮೇಲೆ ಬರುತ್ತಾರೆ. ಗ್ರಾಮೀಣ ವರದಿಗಾರರಿಗೆ ಜಿಲ್ಲೆಗೆ ಸೀಮಿತವಾದ ಬಸ್‌ ಪಾಸ್‌ ಸೌಲಭ್ಯ ಕೊಡಬೇಕು. ಪತ್ರಕರ್ತರಿಗೆ ಮೀಸಲಾದ ಆಪತ್‌ಧನ ಬಳಕೆಗೆ ಸಂಬಂಧಿಸಿದ ನಿಯಮಾವಳಿ­ಗಳು ಸರಳವಾಗಬೇಕು. ದೌರ್ಜನ್ಯ ತಡೆ ಸಮಿತಿಯೂ ಕ್ರಿಯಾಶೀಲವಾಗಬೇಕು ಎಂದು ಆಶಿಸಿದರು.ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂ ಮಾತನಾಡಿ, ವ್ಯಕ್ತಿಯ ಪರಿ­ಶ್ರಮಕ್ಕೆ ಪ್ರಶಸ್ತಿ ಸಿಕ್ಕಾಗ ಸಂತಸವೆನಿ­ಸುತ್ತದೆ. ಸ್ಫೂರ್ತಿ ಸಿಗುವ ಜತೆಗೆ ಜವಾಬ್ದಾರಿಯೂ ಹೆಚ್ಚುತ್ತದೆ ಎಂದು ಹೇಳಿ ಅಭಿನಂದಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಸ್‌.ಗೋನಾಳ್‌, ಪ್ರಧಾನ ಕಾರ್ಯದರ್ಶಿ ಎಂ.ಸಾದಿಕ್‌ ಆಲಿ, ಪತ್ರಕರ್ತರಾದ ಹರೀಶ್‌, ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು. ಎನ್‌.ಎಂ.ದೊಡ್ಡಮನಿ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.