ಬುಧವಾರ, ಜೂನ್ 16, 2021
22 °C

‘ನಕಾರ’ದ ಸ್ವೀಕಾರ ನಾಯಕನಿಗೆ ಅಗತ್ಯ: ಜೇಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ಸಾಕಷ್ಟು ಸವಲತ್ತುಗಳನ್ನು ಅನುಭವಿಸಿದ ಬಳಿಕ ಹಾಗೂ ಅವರ ನಿಷ್ಠೆಯ ಪರೀಕ್ಷೆ ನಡೆದಾಗ ನಾಯಕರು ‘ಇಲ್ಲ’ ಎಂಬುದನ್ನು ಕೆಲವು ಬಾರಿ ಸ್ವೀಕರಿಸಬೇಕಾಗುತ್ತದೆ’ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷ ಟಿಕೆಟ್‌ ನಿರಾಕರಿಸಿದ್ದರಿಂದ ಮುನಿಸಿಕೊಂಡಿರುವ ಬಿಜೆಪಿ  ಮುಖಂಡ ಜಸ್ವಂತ್ ಸಿಂಗ್‌, ಬಾರ್ಮೇರ್‌ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು  ಸಿದ್ಧತೆ ನಡೆಸಿರುವ ಬೆನ್ನಲ್ಲೇ ಜೇಟ್ಲಿ ಅವರು ಹೀಗೆ ತಮ್ಮ ವೆಬ್‌ಸೈಟ್‌ನಲ್ಲಿ  ಬರೆದುಕೊಂಡಿದ್ದಾರೆ.

‘ರಾಜಕೀಯ ಪಕ್ಷದ ಸದಸ್ಯತ್ವ ಒಂದು ಗೌರವ. ಸ್ವಯಂ ಹೊರೆಯೂ ಹೌದು. ಇಲ್ಲಿ ವೈಯಕ್ತಿಕ ಅಭಿಪ್ರಾಯ ಹಾಗೂ ಮಹತ್ವಾಕಾಂಕ್ಷೆಗಳು  ಪಕ್ಷದ ಸಾಮೂಹಿಕ ವಿವೇಚನೆಗೆ ಒಳಪಟ್ಟಿರುತ್ತವೆ. ಪಕ್ಷವು ನಾಯಕರಿಗೆ ಕೆಲವು ಸಲ ಸಾಕಷ್ಟು ಸವಲತ್ತು ಹಾಗೂ ಸ್ಥಾನಗಳನ್ನು ನೀಡಬಹುದು. ಮತ್ತೆ ಕೆಲ ಸಂದರ್ಭಗಳಲ್ಲಿ ನಾಯಕನ ಇಚ್ಛೆಗೆ ‘ಇಲ್ಲ’ ಎಂಬ ಉತ್ತರ ದೊರಕಬಹುದು’ ಎಂದು ಜೇಟ್ಲಿ ಬರೆದುಕೊಂಡಿದ್ದಾರೆ.

ಟಿಕೆಟ್‌ ನಿರಾಕರಿಸಿದರೇ ರಾಜಕಾರಣಿ ಅಥವಾ ನಾಯಕ ಆ ನಿರ್ಧಾರವನ್ನು  ‘ನಗು’ವಿನಿಂದ ಸ್ವಾಗತಿಸಬೇಕು ಎಂದು ಜಸ್ವಂತ್‌ ಹೆಸರು ಪ್ರಸ್ತಾಪಿಸದೇ ಜೇಟ್ಲಿ ಕುಟುಕಿದ್ದಾರೆ.

‘ಇದು ಅವರ ನಿಷ್ಠೆ ಹಾಗೂ ಶಿಷ್ಟಾಚಾರದ ಪರೀಕ್ಷೆ ಎನಿಸುತ್ತದೆ. ಸಂಯಮ ಹಾಗೂ ಮೌನ ಯಾವಾಗಲೂ ಮತ್ತೊಂದಕ್ಕೆ ಅವಕಾಶ ನೀಡುತ್ತವೆ. ಅತಿರಂಜಿತ ಪ್ರತಿಕ್ರಿಯೆ ದುಡುಕಿನ ನಿರ್ಧಾರವಾಗುತ್ತದೆ. ಮೌನ ಯಾವಾಗಲೂ ತುಂಬಾನೇ ಗೌರವಯುತ ಹಾಗೂ ಹರ್ಷದಾಯಕವಾಗಿರುತ್ತದೆ’  ಎಂದಿದ್ದಾರೆ.

‘ಲಕ್ಷಾಂತರ ಕಾರ್ಯಕರ್ತರ ಬೆಂಬಲದ ಮೇಲೆ ಒಂದು ರಾಜಕೀಯ ಪಕ್ಷ ಸ್ಥಾಪನೆಯಾಗಿರುತ್ತದೆ. ಚುನಾಯಿತ ಕಚೇರಿಯಲ್ಲಿ ಆರೂಢರಾಗುವ ಅಪೇಕ್ಷೆಗಳಿಲ್ಲದೇ ಕಾರ್ಯಕರ್ತರು ತಮ್ಮ ಸಮಯ ಹಾಗೂ ಶಕ್ತಿಯನ್ನು ತ್ಯಾಗ ಮಾಡಿರುತ್ತಾರೆ. ಒಂದು ಯಶಸ್ವಿ ರಾಜಕೀಯ ಜೀವನದ ಬಳಿಕ ಪಕ್ಷ ಅವನಿಗೆ ಒಂದು ಬಾರಿ ಅವಕಾಶ ನೀಡಲು ಸಾಧ್ಯವಾಗದಿದ್ದರೇ ಓರ್ವ ರಾಜಕಾರಣಿ ಏನು ಮಾಡುತ್ತಾನೆ? ಆಗ ಅವನ ನಿಷ್ಠೆ ಹಾಗೂ ಸಂಯಮದ ಪರೀಕ್ಷೆ ನಡೆಯುತ್ತದೆ’ ಎಂದು ರಾಜಸಭಾ ವಿರೋಧ ಪಕ್ಷದ ನಾಯಕರೂ ಆಗಿರುವ ಜೇಟ್ಲಿ ಬರೆದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.