ಶುಕ್ರವಾರ, ಫೆಬ್ರವರಿ 26, 2021
19 °C

‘ನಮ್ಮ ಕಾರು ಸತ್ತುಹೋಗಿದ್ದು...’

ಸುಕನ್ಯಾ ಕಳಸ Updated:

ಅಕ್ಷರ ಗಾತ್ರ : | |

‘ನಮ್ಮ ಕಾರು ಸತ್ತುಹೋಗಿದ್ದು...’

ಮೂರನೆಯ ಬಹುಮಾನ: ಸಂಕ್ರಾಂತಿ ಸಂಭ್ರಮ ಲಲಿತ ಪ್ರಬಂಧ ಸ್ಪರ್ಧೆ -2016ಶೀರ್ಷಿಕೆ ಓದಿದ ಕೂಡಲೇ “ಕಾರು ಎಲ್ಲಾದ್ರೂ ಸಾಯುತ್ತಾ?! ಸಾಯೋಕೆ ಅದೇನು ಕಾರೇ ಅಥ್ವಾ ಎಮ್ಮೆ ಕರುವೇ?’’ ಅಂತ ಗಂಟು ಮುಖ ಮಾಡಿಕೊಳ್ಳಬೇಡಿ ಮಾರಾಯ್ರೇ... ಗಂಟುಮುಖ ಮಾಡಿಕೊಂಡಷ್ಟೂ ಅದು ನಮ್ಮ ಆರೋಗ್ಯ ಮತ್ತು ದುಡ್ಡಿನ ಗಂಟು ಎರಡನ್ನೂ ಕರಗಿಸುತ್ತೆ-ಒಂದು ಕರಗಿದರೆ ಇನ್ನೊಂದು ಕರಗುವುದು ಫ್ರೀ! ಅದಕ್ಕೇ ಈ ಲೇಖನ ಪೂರ್ತಿ ಓದಿ ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳೋದು ಆರ್ಥಿಕ ದೃಷ್ಟಿಯಿಂದಲೂ ಲಾಭಕರ!ಆ ಕಾರು ನಾಲ್ಕು ಕಾಲಿಟ್ಟು ಅಂಬೆಗಾಲ ಮಗುವಿನಂತೆ ನಿಧಾನವಾಗಿ ನಮ್ಮನೆ ಕಾಂಪೌಡಿನೊಳಗೆ ಬಂದಿತ್ತು. ಹದಿನಾಲ್ಕು ವರ್ಷಗಳ ಹಿಂದಿನ ಕಥೆ. ಯಜಮಾನ್ರು ಆಗಷ್ಟೇ ಡ್ರೈವಿಂಗ್‌ ಕಲಿತಿದ್ರು. ಆ ಕಾರು ಬಾಲಕೃಷ್ಣನಂತೆ ಮೆಲ್ಲಮೆಲ್ಲನೆ ಅಂಬೆಗಾಲಿಕ್ಕಿ ಬರದೆ ರೇಸ್‌ ಕಾರಿನಂತೆ ರೊಂಯ್ಯನೆ ಬರಲಿಕ್ಕೆ - ಅದೂ ಹೊಚ್ಚ ಹೊಸಾssಕಾರು-ಸಾಧ್ಯವೇ ಇರಲಿಲ್ಲ ಅನ್ನಿ! ಕಾರು ಬಂತು. ಯಜಮಾನರು ನಿದ್ದೆಗಣ್ಣಲ್ಲೂ ಸಮರೋಪಾದಿಯಲ್ಲಿ ಕಲಿತಿದ್ದ ಕಾರ್ವಿದ್ಯೆಗಳೆಲ್ಲಾ ಪ್ರಯೋಗವಾಗತೊಡಗಿದವು.ಕ್ರಮೇಣ ಪುಟ್ಟಕಾರು ಹೆದರೀ ಹೆದರೀ ರಸ್ತೆ ಬದಿ ಬದಿಗೇ ಹೋಗುತ್ತಿದ್ದ ಮಗುವಿನ ಬುದ್ಧಿ ಬಿಟ್ಟು ಮಗಳೊಡನೆ ಶಾಲೆಗೆ, ಕಾಲೇಜಿಗೆ, ನನ್ನೊಡನೆ ಆಫೀಸಿಗೆ ಮನೆಯ ಯಜಮಾನ ಕಂ ತನ್ನ ಯಜಮಾನ ಪೋಷಕ ಆಲ್‌ ಇನ್‌ ಒನ್‌ ಆದ ನಮ್ಮವರ ಜತೆ ಹೊಂದಿಕೊಂಡು ನಮಗೆ ಹೊಂದಿಕೊಂಡು ಹೋಗತೊಡಗಿತು. ಕ್ರಮೇಣ ಅದರ ಕೆಲಸ ಕಾರ್ಯಗಳೂ ವಿಸ್ತೃತಗೊಳ್ಳತೊಡಗಿದವು.ನನ್ನನ್ನು ಹೊತ್ತುಕೊಂಡು ಇಡೀ ಊರಿನ ನರ್ಸರಿ ಗಾರ್ಡನ್‌ಗಳನ್ನೆಲ್ಲಾ ಸಂದರ್ಶಿಸುವುದು, ನಾನು ಹೇರುತ್ತಿದ್ದ ಹೂವಿನ ಕುಂಡಗಳು, ಹೂವಿನ ಗಿಡಗಳ ಹೊರೆ, ರೋಸ್‌ಮಿಕ್ಸ್, ಅಲಂಕಾರಿಕ ಕಲ್ಲುಗಳು (ನನ್ನ ಅನೇಕಾನೇಕ ಖಯಾಲಿಗಳನ್ನು ಸಹಿಸಿಕೊಂಡು), ಕಮಕ್‌ ಕಿಮಕ್‌ ಅನ್ನದೆ ನನ್ನ ಅಕ್ವೇರಿಯಂ ಮೀನುಗಳು, ಅದರ ಸಲಕರಣೆಗಳು, ರಾಶಿರಾಶಿ ಪುಸ್ತಕಗಳು, ಅಸಂಖ್ಯಾತ ಸೀರೆಗಳು, ಬಟ್ಟೆ ಗಂಟುಗಳು, ಹೊಸರುಚಿಯ ಪ್ರಯೋಗಗಳ ಮಧ್ಯವರ್ತಿ - ಹೀಗೆ ನನ್ನ ಎಲ್ಲಾ ಅಸಂಖ್ಯಾತ ಕೈಂಕರ್ಯಗಳಿಗೆ ಪಾಪ! ಆ ಕಾರು ಗುರುಗುಟ್ಟದೇ ಸಹಕರಿಸತೊಡಗಿತ್ತು.ಮೊದಮೊದಲು ಬರೀ ರಾಜಮಾರ್ಗದಲ್ಲಿ ಮಾತ್ರ ನಡೆಯುತ್ತಿದ್ದ ಅದನ್ನು ಪುಸಲಾಯಿಸಿ ನಾನು ‘ವಾಮಮಾರ್ಗ’ದಲ್ಲೂ ಪಳಗುವಂತೆ ಮಾಡಿಬಿಟ್ಟಿದ್ದೆ. ಹಾಗಾಗಿ ಅದು ಕ್ರಮೇಣ ಸಂದುಗೊಂದುಗಳಲ್ಲೆಲ್ಲಾ ನಡೆದಾಡಿ ನನ್ನ ಆಶಯಗಳನ್ನೆಲ್ಲಾ ಪೂರೈಸತೊಡಗಿತು! ಅಂದರೆ - ನಾನು ಅಮ್ಮನ ಮನೆಗೆ ಹೋದಾಗ ‘ಅಂಬಾತೀರ್ಥ’ ಎಂಬ ಅತ್ಯದ್ಭುತ ಹೊಳೆಯಿಂದ ಲಪಟಾಯಿಸಿದ ಉರುಟುರುಟು ಬೆಳ್ಳ ಬಿಳೀ ಕಲ್ಲುಗಳನ್ನು, ಅಣ್ಣನ ಮಗ ಹೊರಿಸಿದ ಎರೆಗೊಬ್ಬರ ಮೂಟೆಗಳನ್ನು, ಅಮ್ಮನ ಮನೆಯ ಕಾಫಿಪುಡಿ ಪ್ಯಾಕೆಟ್‌ಗಳನ್ನು, ನನ್ನ ಆರ್ಕಿಡ್‌ ಅಂಥೂರಿಯಂ ಗಿಡಗಳಿಗೆಂದು ತರುವ ಅಡಿಕೆ ಸಿಪ್ಪೆ ರಾಶಿಗಳನ್ನು, ನಮ್ಮ ಕಾಫಿತೋಟ ಸುತ್ತಿ ತರುವ ಮರಕೆಸು,ಸೀತಾಳದಂಡೆ, ಗೌರಿಹೂ, ಕರಿ ಕೆಸು ಇತ್ಯಾದಿ ಅಸಂಖ್ಯಾತ ಗಿಡಬಳ್ಳಿಗಳನ್ನು, ಜತೆಗೆ ಅವುಗಳನ್ನು ಕಾಪಾಡಲಿಕ್ಕೆಂದು ಹೇರುವ ಗೊಬ್ಬರ, ಜೀವಾಮೃತದ ಕೊಡಪಾನ, ಹೂವಿನಬೀಜ, ತರಕಾರಿ ಬೀಜಗಳ ಗಂಟುಗಳನ್ನು - ಹೀಗೆ ಮುಗಿಯದ ಬಾಲವಾಗುವ ಹೇರುವಿಕೆಗಳನ್ನು ಒಡಲೊಳಗೆ ಹಾಕಿಕೊಂಡು ನನ್ನ ಸಕಲ ಅಪರಾಧಗಳನ್ನು ಹೊಟ್ಟೆಗೆ ಹಾಕಿಕೊಂಡಂತೆ ನಗುನಗುತ್ತಾ ಮನೆಗೆ ನಮ್ಮಜತೆ ಬರುತ್ತಿತ್ತು ಪಾಪ! ಬಹುಶಃ ಕೃಷಿಪ್ರೇಮಿಗಳ ಮನೆ ಸೇರಬಾರದೆಂದು ಅದಕ್ಕೆ ಎಷ್ಟೋ ಸಲ ಅನ್ನಿಸಿರಬಹುದು ಏಕೆಂದರೆ ನನ್ನ ಹಾಗೆ ಯಾರೂ ಕಾರಿನಂಥಕಾರಿನಲ್ಲಿ ಸಗಣಿ ಬುಟ್ಟಿ, ಹಟ್ಟಿಗೊಬ್ಬರ ಮೂಟೆಗಳನ್ನು ತವರಿನ ಕಾಣಿಕೆಯಾಗಿ ನೂರಾರು ಕಿಲೋಮೀಟರ್‌ಗಟ್ಲೆ ಹೊರಿಸಿ ತಂದದ್ದು ಅದರ ವಂಶಾವಳಿಯಲ್ಲೇ ಇರಲಿಕ್ಕಿಲ್ಲ - ಕ್ಷಮಯಾಕಾರಿತ್ರಿ!ಅಂಥಾ ವಿಧೇಯ ಕರುಣಾಮಯಿ, ತ್ಯಾಗಮಯಿ, ಕಷ್ಟಸಹಿಷ್ಣು ಮತ್ತು ಅಪಾರ ತಾಳ್ಮೆಯುಳ್ಳ ಕಾರು ಪಾಪ! ಎಷ್ಟು ನರಳುತ್ತಿತ್ತೋ ಅಂತ ಈಗ - ಅದು ಸತ್ತು ಹೋದ ಮೇಲೆ ‘ಪಾಪಪ್ರಜ್ಞೆ’ ಕಾಡುತ್ತಿದೆ! ಒಮ್ಮೆಯಂತೂ ನನ್ನ ಬಂಧುಗಳು ಬಂದಾಗ ‘ಮಲ್ಪೆ ಬೀಚಿಗೆ ಹೋಗೋಣ, ಗಂಗೆ ಬಾರೆ, ಯಮುನೆ ಬಾರೆ, ತುಂಗಭದ್ರೆ ತಾಯಿ ಬಾರೆ’ ಅಂತ ಮಾರುತಿ 800 ಎಂಬ ಆ ಪುಟ್ಟಕಾರಿನಲ್ಲಿ ಎಲ್ಲರನ್ನೂ ಅಕ್ಷರಶಃ ‘ತುಂಬಿಕೊಂಡು’ ಅಲ್ಲಲ್ಲಿ ಮೆಂದುಕೊಂಡು  ನಾವು 10 ಜನ ಹೆಂಗೆಳೆಯರೊಡನೆ ಚಕ್ರೇಶ್ವರ ಮಹಾಬಲೇಶ್ವರರಾದ ನಮ್ಮ ಕಾರೊಡೆಯನ ಜತೆ ಮಲ್ಪೆಗೆ ಹೋಗಿದ್ದು ಅವಿಸ್ಮರಣೀಯ.ಪಾಪ, ನಮ್ಮ ಪುಟ್ಟ ಕಾರು ತನ್ನ ಶಕ್ತಿಮೀರಿ ಪ್ರಯತ್ನಿಸಿದರೂ ಮರಳಿನಲ್ಲಿ ಹೂತುಹೋಗಿ ಚಕ್ರಗಳನ್ನು ಗಿರ್ರನೆ ತಿರುಗಿಸುತ್ತಾ ‘ಅಭಿಮನ್ಯು ಪರಾಕ್ರಮ’ ಮೆರೆದಾಗ ನಾವೆಲ್ಲರೂ ಅರೆಮನಸ್ಸಿನಿಂದ ಕೆಳಗಿಳಿದು ಕಡೆಗೂ ಅದು ನಮ್ಮನ್ನು ಹೊತ್ತು  ಮನೆಗೆ ಬಂದಿತ್ತು! ಅಂದಿನಿಂದ ನಮ್ಮ ಕಾರೊಡೆಯರೂ ಸ್ವಲ್ಪ ‘ತಲೆ ಓಡಿಸಿ’ ನಾನು ‘ಗಂಗೆ ಬಾರೆಯಮುನೆ ಬಾರೆ’ ಹಾಡುವ ಮೊದಲೇ ಗಡಿಬಿಡಿ ಮಾಡಿ ನನ್ನನ್ನು ಕಾರೊಳಗೆ ‘ತುರುಬಿ’ ಮುಂದೆ ಆಗಬಹುದಾಗಿದ್ದ ಅನಾಹುತಗಳನ್ನು ತಪ್ಪಿಸುವ ಪ್ರಯತ್ನ ಮಾಡತೊಡಗಿದರು. ಆದರೂ ಛಲ ಬಿಡದ ತ್ರಿವಿಕ್ರಮಿಯಾದ ನನ್ನನ್ನು ಏಮಾರಿಸುವುದು ಅಷ್ಟೇನೂ ಸುಲಭವಲ್ಲವಾದ ಕಾರಣ ನನ್ನ ‘ಕಾರ್ ಸೇವಾ ದೀಕ್ಷೆ’ ಮುಂದುವರಿದೇ ಇತ್ತು.ನಿರಂತರ ಕೃಷಿಸೇವೆಯ ಜತೆಗೆ ನಮ್ಮಕಾರು ಸಾಹಿತ್ಯ ಸೇವೆಯಲ್ಲೂ ಅವಿರತವಾಗಿ ತೊಡಗಿಕೊಂಡಿತ್ತು; ನಮ್ಮಲ್ಲಿ ಪುಸ್ತಕ ರಾಶಿಯನ್ನು ಹೊಟ್ಟೆಗೆ ಹಾಕಿಕೊಳ್ಳುವುದಲ್ಲದೆ ಅದು ಪಾಪ - ತನ್ನ ಪ್ರಯಾಣದುದ್ದಕ್ಕೂ ನಮ್ಮ ಸಾಹಿತಿ ಬಳಗ ಇದ್ದಾಗೆಲ್ಲಾ ಅದಕ್ಕೆ ಇನಿತೂ ಒಗ್ಗದಿದ್ದ ಸಾಹಿತ್ಯ ಸಂವಾದ, ಸಾಹಿತ್ಯದ ಪರಿಭಾಷೆ, ಮೀಮಾಂಸೆ, ಮಣ್ಣುಮಶಿ.... ಎಲ್ಲವನ್ನೂ ಅನಿವಾರ್ಯವಾಗಿ ಕೇಳಿಸಿಕೊಳ್ಳಲೇ ಬೇಕಾಗಿತ್ತು;ಕೆಲವೊಮ್ಮೆ ಸಾಹಿತ್ಯ ಸಂವಾದ ತಾರಕಕ್ಕೇರಿ, ಸಂವಾದ ವಿವಾದಕ್ಕೆಡೆಯಾಗಿ ಕಾರಿನ ಸೂರು ಹಾರಿಹೋಗದೆ ಉಳಿದದ್ದೇ ಪವಾಡ! ಅದನ್ನು ಮನಗಂಡು ಪರಿಹಾರ ಕ್ರಮವಾಗಿ- ನಾವು ಬಾಯಿಮುಚ್ಚಿಕೊಂಡು ಹಳೇ ಹಾಡುಗಳನ್ನು ಉಣಬಡಿಸಿ ನಮ್ಮ ಕಾರನ್ನು ಸಮಾಧಾನಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದ್ದೆವು. ಆದರೂ ಘಟ್ಟದ ಗಟ್ಟಿ ಗಂಟಲಿನ ನಮ್ಮ ಹುಟ್ಟುಗುಣ - ಘಟ್ಟ ಹತ್ತಿದೊಡನೆ ಗುಡುಗು ಮಳೆ ಮಿಂಚುಗಳ ಹಾಗೆ ಅಂಕೆ ಮೀರಿ ಆರ್ಭಟಿಸುತ್ತಿದ್ದುದೇ ಜಾಸ್ತಿ.ನನ್ನ ಪ್ರಾಣಿ ದಯೆ ಕಾರಿನಲ್ಲಿ ಕುಳಿತೊಡನೆ ಉಕ್ಕೇರಿ ಹರಿಯುತ್ತಿತ್ತು. ಹಾಗಾಗಿ ದಾರಿಯಲ್ಲಿ - ನೆನೆದು ಬಿರುಗಾಳಿ ಮಳೆಯಲ್ಲಿ ಮುದುಡಿದ್ದ ಪುಟ್ಟ ನಾಯಿ ಮರಿಗಳು ನಮ್ಮ ಮನೆಸೇರಿ ‘ಶ್ಯಾಮಿಲಿ’, ಕನ್ನಡ ರಾಜ್ಯೋತ್ಸವಕ್ಕೆ ಸಿಕ್ಕಿದ್ದಕ್ಕೆ ‘ಭುವನೇಶ್ವರಿ’ - ಹೀಗೆ ಬಿರುದಾಂಕಿತಗೊಂಡು ನಮ್ಮ ‘ಪಶುಪಕ್ಷಿ ಪ್ರಾಣಿಸುತೆ ಆಲಯ’ದ ಋಣಾನುಬಂಧಕ್ಕೆ ಬಂದವು. ಜತೆಗೆ ರಾಜ್ಯದ ನಾನಾದಿಕ್ಕುಗಳಿಂದ ಹರಿದು ಬಂದ ಮಾಯಾ ಮಾರ್ಜಾಲ ಮೋಹಿನಿಯರನ್ನು, ಮತ್ಸ್ಯಕನ್ನಿಕೆಯರನ್ನು, ಕೋಕಿಲಾದಿ ಕೂಜನಗಳನ್ನು ತನ್ನ ಉದರದೊಳಗೆ ಕಾಪಿಟ್ಟುಕೊಂಡು ಬಂದ ಮಹಾತಾಯಿ ನಮ್ಮ ಕಾರ್‌ಮಾತೆ!ಬಾಳೆ, ಪಪ್ಪಾಯಿ, ತೆಂಗು, ಹಲಸು, ದಿವಿಗುಜ್ಜೆ, ಪನ್ನೇರಳೆ, ಕಸಿ ಅಮಟೆ... ಹೀಗೆ ನಮ್ಮ ಫಲಗಳನ್ನು ನಮ್ಮ ಹಿತೈಷಿ ಬಳಗಕ್ಕೆ ತಲುಪಿಸಿದ್ದಲ್ಲದೆ ನನ್ನ ಅನೇಕಾನೇಕ ‘ಹೊಸರುಚಿ’ ಗಳ ಪರಿಮಳ ಮಾತ್ರ ಆಸ್ವಾದಿಸಿದ ಕರ್ಮಫಲ ಅವಳದ್ದು! ಅದಕ್ಕೇ ಹೇಳುವುದು ‘ನೀರಿನಋಣ ಮತ್ತು ಮೀನಿನ ಋಣ’ ಅಂತ; ಮೀನು ತಿನ್ನದ ಸ್ತ್ರೀ ಮಹಾಮಾತೆ ನನಗಾಗಿ ನಿಷ್ಠೆಯಿಂದ ಬಣ್ಣಬಣ್ಣದ ಮೀನುಗಳನ್ನು ಜೋಪಾನ ಮಾಡಿ ಮನೆ ಮುಟ್ಟಿಸಿ ಕೃತಾರ್ತತೆ ಮೆರೆದಿದ್ದ ‘ನಿಸ್ವಾರ್ಥಿ’, ಪಾಪ!ಹಾಗೆಂದ ಮಾತ್ರಕ್ಕೆ ನಾವು ನಮ್ಮ ಕಾರ್‌ಮಾತೆಗೆ ಬರೀ ಸೊಪ್ಪು ಸದೆ, ನಾಯಿ, ಬೆಕ್ಕು, ಮೀನು, ಪಕ್ಷಿ, ಗಿಡಗೊಬ್ಬರಗಳ ಅಲಂಕಾರ ಮಾಡಿದ ಕೃತಘ್ನರು ಅಂತ ನೀವು ಭಾವಿಸಿದ್ದರೆ ನಿಮ್ಮ ಊಹೆ ನೂರಕ್ಕೆ ನೂರು ತಪ್ಪು ಅನ್ನ, ‘ಚಿನ್ನ’ ಕೊಟ್ಟ ನನ್ನ ಅಂಚೆ ಇಲಾಖೆ ಸಂಪ್ರೀತಗೊಂಡಾಗೆಲ್ಲಾ ನಾನು ನಮ್ಮ ಕಾರ್ಮಾತೆಗೆ ಮುತ್ತುರತ್ನ ಹವಳಗಳನ್ನು ಕೋದಚಿನ್ನದ ಹಾರಗಳನ್ನೂ ಆಭರಣಗಳನ್ನು ಹೊರಿಸಿ ಕೃತಾರ್ಥಳಾಗಿದ್ದೇನೆ! ಕಳ್ಳರಿಗೆ ಹೆದರಿ ಅವನ್ನೆಲ್ಲಾ ಅವಳೇ ಬ್ಯಾಂಕಿನ ಸೇಫ್ ಲಾಕರಿನಲ್ಲಿಟ್ಟು ಬಿಟ್ಟಿದ್ದರೆ ಅದರಲ್ಲಿ ನನ್ನ ತಪ್ಪು ಏನೇನೂ ಇಲ್ಲ ಬಿಡಿ!ಎಲ್ಲಾಕಾರ್-ವಾರಸುದಾರರಂತೆ ನಮ್ಮವರೂ ಸಂಪ್ರದಾಯದ ಪ್ರಕಾರ ಮೊದಮೊದಲು ತಮ್ಮ ಕಾರು ಮುಟ್ಟಿದರೆ ಮಾಸುತ್ತದೆಯೋ ಎಂಬಂತೆ ತೀವ್ರ ಕಟ್ಟೆಚ್ಚರದಲ್ಲಿ ‘ಕಾರ್-ಕೇರಿಗ’ರಾಗಿದ್ದವರು ಆಗಾಗ ಕಟ್ಟೆಗಳಿಗೆ ತುಟಿಗಳನ್ನು ಗುದ್ದಿಸಿ ಸಿಪ್ಪೆ ಸುಲಿಸಿಕೊಂಡರೂ ಆ ಕಾರಿನ ತುಟಿಗಳಿಗೆ ರಂಗು ಬಳಿಸದೆ ಕ್ರಮೇಣ ನಿರ್ಲಕ್ಷ್ಯ ವಹಿಸತೊಡಗಿದ್ದು  ಅಕ್ಷಮ್ಯ ಅಪರಾಧವಾಗಿ ಕಂಡಿದ್ದಂತೂ ಸತ್ಯ. ‘ಕಾರು ಹಳೆಯದಾದರೇನು ಕಾರ್ಯ ನವನವೀನ’ ಎಂಬಂತೆ ನಮ್ಮ ಕಾರ್ ಮಾತೆ ನಮ್ಮವರ ತಾತ್ಸಾರವನ್ನೆಲ್ಲಾ ಕ್ಷಮಿಸಿದ್ದು ನಮ್ಮಅಜ್ಜ-ಅಜ್ಜಿ, ದೇಶದ ಸಕಲ ಹಿರಿಯರ ಪುಣ್ಯದಿಂದಲೇ ಇರಬೇಕು; ಇಲ್ಲದಿದ್ದರೆ ಅದು ತನ್ನ ಕೊನೇ ಉಸಿರಿನ ತನಕ ನಮ್ಮ ಅಪರಾಧ ಸಹಸ್ರಂಗಳ ಮನ್ನಿಸಲು ಎಲ್ಲಿ ಸಾಧ್ಯವಿತ್ತು?ಈಗ ಮುಖ್ಯ ವಿಷಯಕ್ಕೆ ಅಂದರೆ ನಮ್ಮ ಕಾರು ಸಾಯುವ ಕ್ಷಣಗಳ ಫ್ಲಾಶ್ ಬ್ಯಾಕ್‌ಗೆ ಹೋಗೋಣ. ನಮ್ಮ ಸುತೆ ಮಹಾಶ್ವೇತೆ ಬೆಂಗಳೂರು ಎಂಬ ಮಹಾ ನಗರಿಯಿಂದ ದೀಪಾವಳಿ ಹಬ್ಬದ ಆಚರಣೆಗೆಂದು ಮನೆಗೆ ಬರುವವಳಿದ್ದಳು. ಅವಳು ‘ತನ್ನ’ ತವರಿಗೆ ಬಂದರೆ ಸಾಕೇ ಅಂತ ನಾನೂ ನನ್ನ ತವರೂರಾದ ಕಳಸಕ್ಕೆ ಹೋದರೆ ಆಗದೇ ಅಂತ ರಾಗತೆಗೆದು ನಾವೆಲ್ಲರೂ ಕಳಸದ ನಮ್ಮಮ್ಮನ ಮನೆಗೆ ಹೊರಡುವುದೆಂದು ನೀಲಿನಕಾಶೆ ಸಿದ್ಧಪಡಿಸಿದೆವು. ‘ತಿರುವು ಮುರುವಾದ ರಸ್ತೆಗಳಿವೆ ಎಚ್ಚರ’ ಅಂತ ಎಚ್ಚರಿಸುವ ರಸ್ತೆ ಫಲಕಗಳು ಕನಸಿನಲ್ಲೂ ಕಾಡಿ ನಮ್ಮ ಕಾರ್‌ ಮಾತೆಗೆ ಸರ್ವಿಸ್ ಮಾಡಿಸಿದೆವು.ಬಳಿಕ ಮನೆಯಂಗಳಕ್ಕೆ ಬಿಜಯಂಗೈದ ಕಾರ್ ಮಾತೆಗೆ ಸ್ವಲ್ಪ ಶೀತ ಆದಂತಿತ್ತು. ‘ಕಾರ್ ಮುಖದಿಂದ ಆಗಾಗ ನೀರು ಹನಿಯುತ್ತಿದೆ’ ಅಂತ ಸಾವಿರ ಕಾರುಗಳಿಗೆ ಮಜ್ಜನ ಮಾಡಿಸಿದ ದಾಖಲೆಯ ಸರ್ವಿಸ್ ಸರದಾರರಿಗೆ ಫೋನಾಯಿಸಿದರೆ ಅವರು ‘ದೀಪಾವಳಿ ಸ್ಪೆಷಲ್ ಸ್ನಾನ ಅಲ್ವಾ! ಸ್ವಲ್ಪಎಂಜಾಯ್ ಮಾಡಲಿ!’ ಅಂದರಂತೆ! ಸರಿ, ನಮ್ಮ ಕಾರೊಡೆಯರು ಆಂಬೊಡೆ ಕರಿಯುತ್ತಿದ್ದ ನನ್ನಬಳಿ ಅದನ್ನು ಬಿತ್ತರಿಸಿದಾಗ ಕೆಲಸದ ಒತ್ತಡದಲ್ಲಿ ನಾನು ‘ಮರುತನಿಖೆಗೆ ಒತ್ತಾಯಿಸದೆ’ ತೆಪ್ಪಗಾಗಿದ್ದೆ; - ಅದೇ ನಾನು ಮಾಡಿದ ತಪ್ಪು ಅಂತ ಜ್ಞಾನೋದಯವಾಗಿದ್ದು ಬೆಳಗಾದ ಮೇಲೆ, ನಮ್ಮ ಕಾರು ಸತ್ತ ಮೇಲೇ!

ಮುಂಜಾನೆ ಮಗಳನ್ನು ಅವಳ ಬೆಂಗಳೂರು ನಗರದ ಅಪಾರ ಭಂಡಾರಗಳ ಬೃಹತ್ ಬ್ಯಾಗಿನ ಸಮೇತ ಬಸ್‌ಸ್ಟ್ಯಾಂಡಿನಿಂದ ಎಂದಿನಂತೆ ಕಾರ್‌ ಮಾತೆಯ ಮಡಿಲಿಗೊಪ್ಪಿಸಿ ಮನೆಗೆ ಮರಳಿದ ನಮ್ಮ ಚಕ್ರೇಶ್ವರರು ಮನೆ ಹತ್ತಿರವಾಗುತ್ತಿದ್ದಂತೆ ‘ಎಲ್ಲೋ ಸಣ್ಣಗೆ ಕರಕಲು ವಾಸನೆ ನಾಸಿಕದೊಳಗೆ ನುಸುಳಿತು’ ಅಂತ ಕುಮಾರಿ ಕಂಠೀರವೆ ಹೇಳಿದರೂ ‘ದಾರಿಯ ಬದಿಯಲ್ಲಿಯಾರೋ ಮಾಮೂಲಿನಂತೆ ಕಸ ಸುಟ್ಟಿರಬೇಕು’ ಅಂದು ಕೊಂಡರಂತೆ. ಕಾರ್ ಮಾತೆಯನ್ನು ನಮ್ಮ ಮನೆಯ ಕಾಂಪೌಂಡಿನಿಂದಾಚೆ ನಿಲ್ಲಿಸಿ ಗೇಟ್‌ ತೆಗೆಯಲು ಬರುತ್ತಿದ್ದಂತೆ ಅದು ಸ್ವಲ್ಪ ಹೊಗೆ ಕಾರತೊಡಗಿತಂತೆ.ನಮ್ಮ ಕುಮಾರಿ ಕಂಠೀರವೆ ತನ್ನ ಅಗಾಧ ಭಾರದ ಬ್ಯಾಗ್ ಸಮೇತ ಕೆಳಗಿಳಿವ ಹೊತ್ತಿಗೆ ಹೊಗೆಯ ಪ್ರಮಾಣ ಜಾಸ್ತಿಯಾಗತೊಡಗಿತ್ತಂತೆ. ‘ಮಗಳು ಮರಳಿ ಬಂದಳು’ ಅಂತ ಸ್ವಾಗತದ ಸಿದ್ಧತೆಯಲ್ಲಿದ್ದ ನನಗೆ ಹೊಗೆಯ ಕತೆ ಉಸುರಿದ ಯಜಮಾನರು ಫೈರ್‌ ಎಂಜಿನ್‌ನವರಿಗೆ ಫೋನಾಯಿಸಲು ಮಗಳಿಗೆ ಹೇಳಿ ಕಾರಿನೆಡೆಗೆ ಓಡಿದರು. ನಾನು ನೀರಿನ ಪೈಪಿನೊಂದಿಗೆ ಜತೆಗೆ! ಕಾರು ಥೇಟ್ ನನ್ನ ಹಾಗೇ ಬುಸುಗುಡುತ್ತಾ ಹೊಗೆ ಕಾರುತ್ತಿತ್ತು! ಅದನ್ನು ಹೇಗೆ ಸಮಾಧಾನಿಸುವುದು ಎಂದು ಅರ್ಥವಾಗದೆ ತಲೆಯ ಮೇಲೆ ಕೈ ಹೊತ್ತ ಎಲ್ಲಾ ಬಡಪಾಯಿ ಗಂಡಂದಿರ ಪ್ರತೀಕವಾಗಿದ್ದ ಪತಿದೇವರನ್ನೂ ‘ಕೇರಿಸದೆ’ ನಾನು ಬುಸಗುಡುತ್ತಿದ್ದ ಬಾನೆಟ್ ಮೇಲೆ ಅವಿರತವಾಗಿ  ‘ವರ್ಷಧಾರೆ’ ಪೈಪಿಸತೊಡಗಿದೆ. ಆ ಗಳಿಗೆಯಲ್ಲಿ ‘ನೀರು ಬಿದ್ದರೆ, ಪೆಟ್ರೋಲ್‌ ಜತೆಗೆ ಮಿಕ್ಸ್‌ ಆದರೆ ಅನಾಹುತ ಆದೀತು’ ಅಂತ ಗೊತ್ತಿದ್ದರೂ ಬೇರೇನೂ ಉಪಾಯವಿರಲಿಲ್ಲ.ನಮ್ಮ ಕಾರ್‌ ಮಾತೆ ಹದಿನಾಲ್ಕು ವರುಷ ನಾವು ಅವಳಿಗೆ ಮಾಡಿದ್ದ ದ್ರೋಹ, ಮೋಸ, ಮಾಡಿಸಿದ್ದ ವನವಾಸ, ಉಪವಾಸ, ನೀಡಿದ್ದ ಕಷ್ಟಕೋಟಳೆ ಅಪರಾಧ ಸಹಸ್ರಂಗಳ ಮನ್ನಿಸಿದ್ದ ಸೀತಾ ಮಾತೆಯಂತಿದ್ದವಳು ತನ್ನೆಲ್ಲಾ ದುಃಖ ದುಮ್ಮಾನಗಳನ್ನು ಕಡೆಗೂ ಹೊರಗೆಡವುತ್ತಾ ‘ಹೊಗೆಗೆಡವುತ್ತಿದ್ದಳು’. ಅವಳ ಸರ್ವಿಸ್ ಮಾಡಿದವರು ಆ ಬೆಳ್ಳಂಬೆಳಿಗ್ಗೆ ಹಬ್ಬದ ಮಬ್ಬಿನಿಂದ ಇನ್ನೂ ಹೊರಬರದಿದ್ದರೂ ಫೋನಾಯಿಸಿದಾಗ ‘ಬರುತ್ತೇವೆ ಸರ್’ ಅಂದವರು ಹಲ್ಲುಜ್ಜಿ ಮುಖತೊಳೆದು ಬರುವುದು ಯಾವಾಗಲೋ! ಅಗ್ನಿಶಾಮಕ ದಳದವರಿಗೆ ಮಗಳು ಫೋನಾಯಿಸಿದರೆ ಅವರು ಸುತ್ತ ಎಷ್ಟು ಮಂದಿ ಇದ್ದಾರೆ. ಪ್ರಾಣಹಾನಿಯ ಪ್ರಮಾಣ ಎಷ್ಟಾಗಬಹುದು’ ಇತ್ಯಾದಿ ಜನಗಣತಿ ತೆಗೆಯತೊಡಗಿದ್ದರಂತೆ. ಅವರಿಗೆ ಫೋನಾಯಿಸಿದ್ದ ಮಗಳು.ರಾತ್ರಿಯಿಡೀ ಬೆಂಗಳೂರಿಂದ ನಿದ್ರೆಗೆಟ್ಟು ಪ್ರಯಾಣಿಸಿ ಬಂದವಳಿಗೆ ತನ್ನನ್ನು ಹೊತ್ತುತಂದ ಪ್ರೀತಿಯ ಕಾರ್‌ ಮಾತೆಯ ದುಃಸ್ಥಿತಿ, ಒಂದು ವೇಳೆ ಅವಳು ಸ್ಫೋಟಿಸಿದರೆ... ಎಂಬ ಭೀತಿ.... ಎಲ್ಲಾ ಕಲಸುಮೇಲೋಗರವಾಗಿ ಕಡೆಗೆ ಹತಾಶ ಸ್ಥಿತಿಯಿಂದ ಮೇಲಕ್ಕೇರಿ ಸಿದ್ಧಿ ಸಮಾಧಿಗೆ ತಲುಪಿ ಬುದ್ಧನಂತೆ ಕಾಂತವದನೆಯಾಗಿ ‘ನೀವು ಬರೋದಾದ್ರೆ ಬನ್ನಿ ಕಾರು ಫೈರು...’ ಅಂದಳಂತೆ! ನಮಗೆ ನಗುವುದೋ ಅಳುವುದೋ, ಅವಳ ಸ್ಥಿತಪ್ರಜ್ಞತೆಯನ್ನು ಹೊಗಳುವುದೋ ಗೊತ್ತಾಗದೆ ಮತ್ತಷ್ಟು ವೇಗವಾಗಿ ಹೊಗೆ ಕಾರುತ್ತಿದ್ದ ಕಾರು ಎಂಬ ಅಂಡಷಿಂಡ ಬ್ರಹ್ಮಾಂಡವನ್ನು ಕಣ್ತುಂಬಿಕೊಳ್ಳತೊಡಗಿದೆವು ಅದು ಕಾರುತ್ತಿದ್ದ ಹೊಗೆಗೆ ಕಣ್ಣು, ಮನಸ್ಸು, ಮೆದುಳು ಮಂಜುಮಂಜಾಗುತ್ತಿದ್ದಂತೆಯೇ ನೆರೆಮನೆಯವರು ಕೆಲವರು ಬರತೊಡಗಿದರು.ಪ್ರಶ್ನೆಗಳಿಗೆ ಉತ್ತರಿಸುವ ಮನಸ್ಥಿತಿ ನಮ್ಮದಾಗಿರದಿದ್ದರೂ ಅವರೂ ಪಾಪ ನಮ್ಮೊಡನೆ ಸಮಾನ ದುಃಖಿಗಳಾದರು. ನಮಗೋ ಭಯ ಎಲ್ಲಾದರೂ ಕಾರು ಸ್ಫೋಟಗೊಂಡುಬಿಟ್ಟರೆ, ಎಲೆಕ್ಟ್ರಿಸಿಟಿ, ಟಿವಿ ಕೇಬಲ್, ಟೆಲಿಫೋನ್ ನವರ ನೇತಾಡುತ್ತಿರುವ ಕಾಲುಬಾಲಗಳನ್ನು ನಾವು ಕರಟಿಸಿದ ಅಪರಾಧಿಗಳಾಗಿಬಿಟ್ಟರೆ ಅಂತ ಅನಾಹುತಗಳ ಪಟ್ಟಿ ಹನುಮಂತನ ಬಾಲವಾಗುತ್ತಿತ್ತು. ಅತ್ಯಂತ ಭಯಭಕ್ತಿಯಿಂದ ಪೈಪ್ ಜಲಪ್ರೋಕ್ಷಣೆ ನಡೆಯುತ್ತಲೇ ಇತ್ತು. ‘ಕಾರ್‌ಮೋಡ’ ಸುತ್ತಲೂ ಮುಸುಕಿ ನಮ್ಮ ಮನಸ್ಥಿತಿಯನ್ನು ಬಣ್ಣಿಸಲು ‘ಪದಗಳೇ ಸಿಗುತ್ತಿಲ್ಲ’ ಆಗಿತ್ತು. ನಾವು ಓದಿದ ಚಂದಮಾಮ ಕಥೆಗಳ ನೋಡಿದ ಚಲನಚಿತ್ರಗಳ ಹಾರರ್ ನೆನಪು ಹಾರಿ ಹಾರಿಕೊಂಡು ಬಂದು ತಲೆಯೊಳಗೆ ಪ್ರೇತನೃತ್ಯ ಮಾಡತೊಡಗಿದವು.ಕಾರು ‘ಗಗನದೆತ್ತರ ಮುಗಿಲಬಿತ್ತರ’ ಕಾರ್ಗಪ್ಪು ಹೊಗೆ ಕಾರುತ್ತಲೇ ಇತ್ತು. ಆದರೆ ಇದ್ದಕ್ಕಿದ್ದಂತೆ ಅದರ ಪಾರ್ಕಿಂಗ್ ಲೈಟ್‌ಗಳು ಭೂತಚೇಷ್ಟೆಯಿಂದ ಉರಿಯತೊಡಗಿದವು! ಕೆಲವೇ ನಿಮಿಷಗಳಲ್ಲಿ ಇನ್ನೊಂದು  ಷಾಕ್ ನಮಗೆ - ಅದರ ಲೈಟ್‌ಗಳು ಝಗ್ಗನೆ ತಮ್ಮಷ್ಟಕ್ಕೇ ಹೊತ್ತಿಕೊಂಡವು! ಥೇಟ್ ಹಾರರ್ ಷೋ! ಮತ್ತೆ ಕೆಲವು ನಿಮಿಷಗಳಲ್ಲಿ ನಮಗೆ ಇನ್ನೊಂದು ಷಾಕ್ - ಲಾಕ್ ಮಾಡಿದ್ದ ನಮ್ಮ ಕಾರು ಥೇಟ್ ಹಾರರ್ ಫಿಲ್ಮ್‌ಗಳಲ್ಲಿದ್ದಂತೆ ‘ಅಪನೀ ಆಪ್’ ಸ್ಟಾರ್ಟ್ ಆಗಿ ನಮ್ಮ ಗೇಟ್‌ ಕಡೆಗೆ ಮುಖ ಮಾಡಿತು! ಅಯ್ಯಯ್ಯೋ ಎನ್ನುವಷ್ಟರಲ್ಲಿ ಯಾರೋ ಮಂತ್ರವಾದಿಯ ಆಣತಿಯಂತೆ ವರ್ತಿಸುತ್ತಿದೆಯೋ ಎಂಬಂತೆ ಚಾಲೂ ಆಗಿ ಸೀದಾ ನಮ್ಮ ಕಾಂಪೌಂಡಿನತ್ತ ರೊಂಯ್ಯನೆ ಸಾಗತೊಡಗಿತು! ಮುಗೀತು ಕಥೆ ‘ಕಾಂಪೌಂಡ್‌ ಕೆಡವಿ ಸೀದಾ ನಮ್ಮ ಬಾವಿಯೊಳಗೆ ಧುಮುಕುತ್ತೆ’ ಅಂತ ಥರಗುಡುತ್ತಿದ್ದ ನಮಗೆ ಅಚ್ಚರಿ ಕಾದಿತ್ತು.ಸೀದಾ ನಮ್ಮ ‘ಭೂಮಿಗೀತ’ ಮನೆಫಲಕಕ್ಕೆ ಮುತ್ತಿಟ್ಟಿದ್ದೇ ನಮ್ಮ ಕಾರು ಅತ್ಯಂತ ವಿನಯ ವಿಧೇಯತೆಗಳಿಂದ ಥಟ್ಟನೆ ನಿಂತುಬಿಟ್ಟಿತು. ಹೊಗೆ ಸಾರುವುದು ಕ್ಷೀಣವಾಗುತ್ತಾ ಆಗುತ್ತಾ ನಮ್ಮ ಭೂಮಿಗೀತಕ್ಕೆ ಮುತ್ತಿಕ್ಕಿಯೇ ನಮ್ಮ ಕಾರು ಸತ್ತು ಹೋಗಿತ್ತು! ನಮಗೆ ದುಃಖ ಸಂಕಟದಿಂದ ಕಣ್ತುಂಬಿ ಬಂದಿತ್ತು. ದಾರಿಯಲ್ಲಿ ಎಲ್ಲಾದರೂ ಅದು ಹೀಗೆ ಹೊಗೆ ಕಾರಿದ್ದರೆ, ಸ್ಫೋಟಗೊಂಡಿದ್ದರೆ... ಕಣ್ಣೆದುರು ಬದುಕು ಕರಕಲಾಗಿದ್ದವರ ಭೀಕರ ಚಿತ್ರ ಮೂಡಿತು. ಕೊನೆಯ ಉಸಿರಿನವರೆಗೂ ನಮ್ಮನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡ ಕಡೆಗೂ ಸುರಕ್ಷಿತವಾಗಿ ತನ್ನನ್ನು ನಂಬಿದವರನ್ನು ಮನೆಗೆ ಮುಟ್ಟಿಸಿ ತನ್ನ ಮನೆಯಂಗಳದಲ್ಲಿ ಜೀವತೊರೆದ ನಮ್ಮ ಪ್ರೀತಿಯ ಕಾರಿಗೆ ಆತ್ಮ, ಮನಸ್ಸು ಖಂಡಿತಾ ಇರಲೇಬೇಕು!ನನಗೆ ಆಗ ನನ್ನ ಮಡಿಲಲ್ಲೇ ಮಲಗಿ, ಬಿಟ್ಟ ಕಣ್ಣುಗಳಿಂದ ನನ್ನತ್ತ ನೋಡುತ್ತಲೇ ಜೀವತೊರೆದಿದ್ದ ನನ್ನ ಸಾಕು ಬೆಕ್ಕು, ನಾಯಿಗಳ ನೆನಪಾಗಿ ಗಂಟಲುಬ್ಬಿ ಬಂದಿತ್ತು! ಎಲ್ಲಾ ಮುಗಿದ ಮೇಲೆ ಸರ್ವಿಸ್ ಸೆಂಟರ್‌ನವರು ಬಂದರು, ಪೋಸ್ಟ್ ಮಾರ್ಟಮ್ ಮಾಡಿದರು, ಹೊಸ ವ್ಯಾಗನ್‌ಆರ್ ವ್ಯವಸ್ಥೆಯಾಯಿತು! ಆದರೆ ನಮ್ಮನ್ನು ಸೇರಿ ನಮ್ಮೆಲ್ಲಾ ಕಷ್ಟಸುಖಗಳನ್ನು ಹಂಚಿಕೊಂಡ ಕರುಣಾಳು ಕಾರನ್ನು ಹೇಗೆ ಮರೆಯುವುದು? ಅದು ನಮ್ಮ ಜೀವ ಉಳಿಸಿ ತಾನು ಜೀವತೆತ್ತದ್ದನ್ನು ಹೇಗೆ ಹೇಗೆ ಮರೆಯುವುದು? ನೀರಿನ ಋಣದಂತೆ ನಮಗೆ ಆ ಕಾರಿನ ಋಣವಿತ್ತು ಅಂದುಕೊಳ್ಳಬೇಕು ಅಷ್ಟೇ.ತೀರ್ಪುಗಾರರ ಮಾತು

ಆಯ್ಕೆಗೆ ಕಾರಣ:
ನಮ್ಮ ಕಾರು ಸತ್ತು ಹೋಗಿದ್ದು.... ಪ್ರಬಂಧ ನೂರಕ್ಕೆ ನೂರರಷ್ಟು ಆಧುನಿಕವೆನ್ನಬಹುದಾದ ವರ್ತಮಾನದ ವಸ್ತುವಿನ ಬಗ್ಗೆ ಬರೆದ ಪ್ರಬಂಧವಾಗಿದೆ.  ಇದನ್ನು ಓದುತ್ತಿದ್ದಂತೆ ಫ್ರೆಂಚ್ ಚಲನಚಿತ್ರಗಳ ಪ್ರಸಿದ್ಧ ನಿರ್ದೇಶಕ ಗೊಡಾರ್ಡ್‌ನ ಚಲನ ಚಿತ್ರ ನೋಡಿದ ಅನುಭವವಾಗುತ್ತದೆ.  ಅಷ್ಟರಮಟ್ಟಿಗೆ ಇದು ನಮ್ಮ ಕಾಲದ ಕಾರಿನ ಕಥೆಯಾಗಿದೆ.  ಇಲ್ಲಿಯ ಭಾಷಾ ಪ್ರಯೋಗದಲ್ಲಿಯೂ ಹೊಸತನವಿದೆ. ಭಾಷೆಯಲ್ಲಿಯ ವಿಟ್, ವ್ಯಂಗ್ಯ ಓದುಗನನ್ನು ಆಕರ್ಷಿಸುತ್ತವೆ.  ಕಾರು ಕೂಡ ಒಂದು ಮನುಷ್ಯ ಜೀವವಾಗಿ, ಅನುಭವಿಸಬಾರದ ಎಲ್ಲ ಕಷ್ಟಗಳನ್ನೂ ಅನುಭವಿಸಿ, ಮನುಷ್ಯರ ಜೊತೆ ಸಮಾನ ರೂಪದ ಭಾವನೆಗಳನ್ನೇ ಹಂಚಿಕೊಂಡು, ಮನುಷ್ಯರಾದವರು ಕೊಟ್ಟ ಎಲ್ಲ ಹಿಂಸೆಗಳನ್ನು ಸಹಿಸಿ, ಕೊನೆಗೆ ಮನುಷ್ಯರೇ ಸಾಯುವಂತೆ ಸಾಯುವ ದೃಶ್ಯ ಪ್ರಬಂಧದ ಒಟ್ಟು ಸಂವೇದನೆ ಮುಟ್ಟಿದ ಒಂದು ಅನನ್ಯವಾದ ಪರಾಕಾಷ್ಠತೆಯನ್ನು ಕಟ್ಟಿಕೊಡುತ್ತದೆ. ಇದು ಅದ್ಭುತವಾಗಿದೆ ಎಂದು ಒತ್ತಿ ಹೇಳಲೇಬೇಕು. ಎಂತಹ ಸಣ್ಣ ಬರಹವಾದರೂ  ತನ್ನ ವಿಷಯಕ್ಕೆ ತಕ್ಕಂತೆ ಭಾಷಾ ಶೈಲಿ ಸೃಷ್ಟಿಸಿ ಕೊಳ್ಳಬೇಕಾಗುತ್ತದೆ.  ಆ ವಿಷಯ ಹಾಗು ಭಾಷೆ ಒಂದರೊಳಗೊಂದು ಕರಗಿ ಅಲ್ಲಿ ಹುಟ್ಟಿ ಬರುವ ದೃಶ್ಯಾವಳಿಗಳು ಬದುಕಿನ ವಾಸ್ತವದ ಕವಾಯತಿನಂತೆ ಕಾಣಿಸುತ್ತವೆ.  ಬದುಕಿನ ಎಲ್ಲ ಸರಂಜಾಮು, ಸರಕು, ನುಡಿಗಟ್ಟುಗಳು ಈ ಪ್ರಬಂಧದಲ್ಲಿವೆ.  ಕಾರಿನ ಬಗೆಗಿನ ವ್ಯಕ್ತಿಗತ ಅನುಭವಗಳನ್ನು ಹೇಳುತ್ತಲೇ, ಅವೆಲ್ಲಾ ಸಾರ್ವತ್ರಿಕ ಅನುಭವದ ನೆಲೆಗೆ ಮುಟ್ಟಿದ್ದು ಈ ಪ್ರಬಂಧದ ಹೆಗ್ಗಳಿಕೆಯಾಗಿದೆ. 

ಪ್ರಬಂಧದ ಒಂದು ಕಡೆ, ‘ನಿರಂತರ ಕೃಷಿ ಸೇವೆಯ ಜತೆಗೆ ನಮ್ಮ ಕಾರು ಸಾಹಿತ್ಯ ಸೇವೆಯಲ್ಲೂ ಅವಿರತವಾಗಿ ತೊಡಗಿಕೊಂಡಿತ್ತು; ನಮ್ಮಲ್ಲಿ ಪುಸ್ತಕ ರಾಶಿಯನ್ನು ಹೊಟ್ಟೆಗೆ ಹಾಕಿಕೊಳ್ಳುವುದಲ್ಲದೆ ಅದು ಪಾಪ- ತನ್ನ ಪ್ರಯಾಣದುದ್ದಕ್ಕೂ ನಮ್ಮ ಸಾಹಿತಿ ಬಳಗ ಇದ್ದಾಗೆಲ್ಲಾ ಅದಕ್ಕೆ ಇನಿತೂ ಒಗ್ಗದಿದ್ದ ಸಾಹಿತ್ಯ ಸಂವಾದ, ಸಾಹಿತ್ಯದ ಪರಿಭಾಷೆ, ಮೀಮಾಂಸೆ, ಮಣ್ಣುಮಶಿ. ಎಲ್ಲವನ್ನೂ ಅನಿವಾರ್ಯವಾಗಿ ಕೇಳಿಸಿಕೊಳ್ಳಲೇಬೇಕಾಗಿತ್ತು;ಕೆಲವೊಮ್ಮೆ ಸಾಹಿತ್ಯ ಸಂವಾದ ತಾರಕಕ್ಕೇರಿ, ಸಂವಾದ ವಿವಾದಕ್ಕೆಡೆಯಾಗಿ ಕಾರಿನ ಸೂರು ಹಾರಿ ಹೋಗದೆ ಉಳಿದದ್ದೇ ಪವಾಡ,’ ಎನ್ನುವಲ್ಲಿಯ ವ್ಯಂಗ್ಯ, ವಾಸ್ತವದ ಸ್ಥಿತಿಗೆ ಒಮ್ಮೆಲೇ ಸ್ಪಾಟ್‌ಲೈಟ್ ಚೆಲ್ಲಿದಂತಾಗಿದೆ.  ಈ ಪ್ರಬಂಧದಲ್ಲಿಯ ಹಲವಾರು ಘಟನೆಗಳು ಓದುಗನ ಜೊತೆ ಆಪ್ತವಾಗಿ ಉಳಿಯುತ್ತವೆ.  ಘಟನಾವಳಿಗಳ ಜೊತೆಗಿನ ತರ್ಕ ಕೂಡ ಓದುಗನನ್ನು ತಟ್ಟುತ್ತಲೇ, ವಾಸ್ತವದ ಸಾವಿನಂಥ ಒಂದು ಕ್ಲೈಮಾಕ್ಸ್ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದೆ. 

-ಎಸ್.ಎಫ್.ಯೋಗಪ್ಪನವರ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.