ಶುಕ್ರವಾರ, ಜನವರಿ 24, 2020
16 °C

‘ನಾನೊಬ್ಬ ರಾಜಕೀಯ ಕಾರ್ಯಕರ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ನಾನು ಸಾಮಾಜಿಕ ಕಾರ್ಯಕರ್ತನಲ್ಲ. ಬದಲಿಗೆ, ಅಪ್ಪಟ ರಾಜಕೀಯ ಕಾರ್ಯಕರ್ತ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಸೋಮವಾರ ಇಲ್ಲಿ ತಿಳಿಸಿದರು.‘ರಾಜಕೀಯ ಚಳವಳಿಗಳ ಬಗ್ಗೆ ನನಗೆ ಒಲವು ಇದೆ. ಆದರೆ ರಾಜಕೀಯ ಪಕ್ಷಗಳ ಬಗ್ಗೆ ಆಸಕ್ತಿ ಇಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಲೋಕನಾಯಕ ಜಯಪ್ರಕಾಶ್‌ ನಾರಾಯಣ್‌, ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರಿಂದ ಪ್ರೇರೇಪಿತನಾಗಿ ಚಳವಳಿಗೆ ಇಳಿದಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.‘ದೆಹಲಿಯಲ್ಲಿ ಹೊಸದಾಗಿ ರೂಪುಗೊಂಡಿರುವ ಅರವಿಂದ್‌ ಕೇಜ್ರಿವಾಲ್ ನೇತೃತ್ವದ  ಆಮ್‌ ಆದ್ಮಿ ಪಕ್ಷ ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಅಭಿನಂದನೀಯ ಎಂದ ಅವರು, ಆರಂಭಿಕ ಹಂತದಲ್ಲೇ ಉತ್ತಮ ಫಲಿತಾಂಶ ಗಳಿಸಿರುವ ಆ ಪಕ್ಷಕ್ಕೆ ನನ್ನ ಬೆಂಬಲಿವಿದೆ’ ಎಂದರು.ನ್ಯಾಯಾಲಯಕ್ಕೆ ಹೋಗುವುದಿಲ್ಲ: ‘ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅಳಿಯ ಸಿದ್ಧಾರ್ಥ ಬೆಂಗಳೂರು ಹೊರ ವಲಯದಲ್ಲಿರುವ ಬಿಡಿಎ ಒಡೆತನದ 1.39 ಎಕರೆ ಜಮೀನು ಕಬಳಿಕೆ ಆರೋಪಕ್ಕೆ ನ್ಯಾಯಾಲಯದ ಮೊರೆ ಹೋಗುವಂತೆ ಕೃಷ್ಣ ಸಲಹೆ ಮಾಡಿದ್ದಾರೆ. ಆದರೆ, ಕಾರ್ಯಾಂಗ ಅಕ್ರಮದ ಬಗ್ಗೆ ಗಮನ ಹರಿಸಬೇಕಿದೆ. ಕಾರ್ಯಾಂಗದ ಮೇಲಿನ ನಂಬಿಕೆ ದೂರವಾಗದಿರಲಿ ಎಂಬ ಉದ್ದೇಶದಿಂದಲೇ ನಾನು ನ್ಯಾಯಾಲಯದ ಮೊರೆ ಹೋಗದಿರಲು ನಿರ್ಧರಿಸಿದ್ದೇನೆ’ ಎಂದರು.‘ಭೂ ಕಬಳಿಕೆ ಕುರಿತಂತೆ, ಸಾಮಾನ್ಯ ನಾಗರಿಕನಾಗಿ ನಾನು ಸಂವಿಧಾನದ ಹಕ್ಕಿಗೆ ಅನುಗುಣವಾಗಿ ದನಿ ಎತ್ತಿದ್ದೇನೆ. ಆ ಹಕ್ಕಿನ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಕರ್ತವ್ಯ ಕಾರ್ಯಾಂಗದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.ಎಚ್ಚರಿಕೆಯ ಗಂಟೆ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿಂತೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಬಿಐನ ನಡೆ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ ಕಂಪೆನಿ ಹಾಗೂ ಹೊಸಪೇಟೆಯ ಬಲ್ಟೋಟಾ ಸಮೂಹದ ಎಂಎಸ್‌ಪಿಎಲ್‌ ಕಂಪೆನಿಗಳಿಗೆ ಎಚ್ಚರಿ­ಕೆಯ ಗಂಟೆಯಾಗಿದೆ.ಅಕ್ರಮ ಗಣಿಗಾರಿಕೆಯಿಂದ ಹೊರತೆಗೆದಿರುವ 40 ಲಕ್ಷಕ್ಕೂ ಅಧಿಕ ಮೆಟ್ರಿಕ್‌ ಟನ್‌ ಅದಿರಿನಲ್ಲಿ 20 ಲಕ್ಷ ಮೆಟ್ರಿಕ್‌ ಟನ್‌ ಅದಿರು ವಿದೇಶಗಳಿಗೆ ರಫ್ತಾಗಿದ್ದರೆ, ಮಿಕ್ಕ 20 ಲಕ್ಷ ಮೆಟ್ರಿಕ್‌ ಟನ್‌ ಅದಿರು ಸ್ಥಳೀಯವಾಗಿಯೇ ಬಳಕೆಯಾಗಿದೆ. ಸ್ಥಳೀ­ಯವಾಗಿ ಬಳಕೆಯಾಗಿರುವ ಅದಿರನ್ನು ಖರೀದಿ­ಸಿದವರ ಪೈಕಿ ಜೆಎಸ್‌ಡಬ್ಲ್ಯೂ ಸಂಸ್ಥೆ ಸಿಂಹಪಾಲನ್ನು ಹೊಂದಿದೆ. ಅತಿಯಾಸೆಯಿಂದ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತ ಹೊರಟಿರುವ ಜೆಎಸ್‌ಡಬ್ಲ್ಯೂ ಸಮೂಹದ ಮಾಲೀಕ ಸಜ್ಜನ್‌ ಜಿಂದಾಲ್‌ ಈ ಕುರಿತು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಐ.ಜಿ. ಪುಲ್ಲಿ, ಸಂಡೂರಿನ ಶಿವಕುಮಾರ್ ಸೇರಿದಂತೆ ಇತರರಿದ್ದರು.

ಪ್ರತಿಕ್ರಿಯಿಸಿ (+)