‘ನೆನಪಿನೋಕುಳಿ’ಗೆ ಭಂಗ: ಕಲಾವಿದರು ಕೆಂಡ

ಬೆಂಗಳೂರು: ರವೀಂದ್ರ ಕ್ಷೇತ್ರದ ಸುವರ್ಣ ಸಂಭ್ರಮದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ನೆನಪಿನೋಕುಳಿ’ ಕಾರ್ಯಕ್ರಮವನ್ನು ಸೂಚನೆ ನೀಡದೆ ಏಕಾಯೇಕಿ ಮುಂದೂಡಿದ್ದಕ್ಕೆ ಆಹ್ವಾನಿತ ಕಲಾವಿದರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.
ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಜಮಾಯಿಸಿದ್ದ ನೂರಕ್ಕೂ ಅಧಿಕ ಕಲಾವಿದರು ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರದಿಂದ ಒಂದು ವಾರ ಕಾರ್ಯಕ್ರಮ ನಡೆಯಬೇಕಿತ್ತು. ಮಂಗಳವಾರ ರಾತ್ರಿ 11 ಗಂಟೆ ವೇಳೆಗೆ ಮುಂದೂಡುವ ಬಗ್ಗೆ ಮಾಹಿತಿ ನೀಡಲಾಯಿತು. ಇದರಿಂದಾಗಿ ದೂರದ ಊರುಗಳಿಂದ ಬಂದಿದ್ದ ಕಲಾವಿದರು ತೊಂದರೆ ಅನುಭವಿಸುವಂತಾಯಿತು.
‘ಸ್ಪಷ್ಟ ಕಾರಣ ನೀಡದೆ ಕಾರ್ಯಕ್ರಮವನ್ನು ಮುಂದೂಡುವ ಮೂಲಕ ಕಲಾವಿದರನ್ನು ಅವಮಾನ ಮಾಡಲಾಗಿದೆ. ರಾಜ್ಯದ ಬೀದರ್, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಚಾಮರಾಜನಗರ ಸೇರಿದಂತೆ ಎಲ್ಲ ಜಿಲ್ಲೆಗಳಿಂದ 500ಕ್ಕೂ ಹೆಚ್ಚಿನ ಕಲಾವಿದರು ಬಂದಿದ್ದರು. ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಲೆಯ ಮೇಲಿನ ನಿಷ್ಠೆಯಿಂದ ಇಲ್ಲಿಗೆ ಬಂದವರು ನಿರಾಸೆಯಿಂದ ವಾಪಸ್ ಹೋಗುವಂತಾಗಿದೆ’ ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದರು.
ಯಕ್ಷಗಾನ ಕಲಾವಿದ ಆರ್.ಕೆ. ಭಟ್ ಮಾತನಾಡಿ, ‘ನೆನಪಿನೋಕುಳಿ ಕಾರ್ಯಕ್ರಮದ ದಿನಾಂಕವನ್ನು 2–3 ಬಾರಿ ಬದಲಾಯಿಸಲಾಗಿದೆ. ಜುಲೈ 15ರಂದು ಕಾರ್ಯಕ್ರಮ ಮಾಡುತ್ತೇವೆ ಎಂದವರು ಜು.6ಕ್ಕೆ ನಿಗದಿ ಮಾಡಿದ್ದಾರೆ. ಜುಲೈ 15ಕ್ಕೆ ಕಾರ್ಯಕ್ರಮ ನೀಡುವಂತೆ ಕಲಾವಿದರ ಜತೆ ಮೊದಲೇ ಮಾತುಕತೆ ನಡೆಸಿದ್ದೆವು. ದಿನಾಂಕ ಬದಲಾಗಿದ್ದರಿಂದ ಕಲಾವಿದರ ಮನವೊಲಿಸಿ ಕರೆತರಬೇಕಾಯಿತು. ಈಗ ಪುನಃ ಕಾರ್ಯಕ್ರಮವನ್ನು ಮುಂದೂಡಿರುವುದರಿಂದ ಕಲಾವಿದರ ಕೆಂಗಣ್ಣಿಗೆ ನಾವು ಗುರಿಯಾಗಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕಲಾವಿದ ಬೇಗಾರು ಶಿವಕುಮಾರ್ ಅವರು, ‘ವೃತ್ತಿಪರ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡಲು ಒಂದೆರಡು ತಿಂಗಳ ಮೊದಲೇ ಬುಕ್ಕಿಂಗ್ ಆಗಿರುತ್ತಾರೆ. ಕಾರ್ಯಕ್ರಮ ಮುಂದೂಡುವುದರಿಂದ ಕಲಾವಿದರಿಗೆ ತೀವ್ರ ತೊಂದರೆ ಉಂಟಾಗುತ್ತದೆ’ ಎಂದರು.
‘ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಊಟ, ವಸತಿ ಸೌಕರ್ಯ ಒದಗಿಸಿದ್ದಾರೆ. ಟಿಎ, ಡಿಎ ನೀಡುವುದಾಗಿ ಹೇಳಿದ್ದಾರೆ’ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಆಂಜನೇಯ ಕಲಾ ಸಂಘದ ರಂಗಯ್ಯ ಅವರು, ‘ಈ ಕಾರ್ಯಕ್ರಮ ಮುಂದೂಡಲು ಉಮಾಶ್ರೀ ಅವರೇ ಕಾರಣ. ನಾವು ನಮ್ಮ ಎಲ್ಲ ಜಂಜಾಟಗಳನ್ನು ಬಿಟ್ಟು ಇಲ್ಲಿಗೆ ಬಂದಿದ್ದೇವೆ. ಆದರೆ, ಕಾರ್ಯಕ್ರಮ ಮಾಡದೆ ವಾಪಸ್ ಹೋಗುತ್ತಿರುವುದಕ್ಕೆ ಬೇಸರವಾಗುತ್ತಿದೆ. ಕಲಾವಿದರಿಗಷ್ಟೇ ಅಲ್ಲ, ರಂಗಭೂಮಿಗೆ ಸರ್ಕಾರ ಮಾಡಿದ ದೊಡ್ಡ ದ್ರೋಹ’ ಎಂದು ಕಿಡಿಕಾರಿದರು.
‘ಮನೆ ಮಠ ಬಿಟ್ಟು ಬಂದಿದ್ದೇವೆ. ನಮಗೆ ಟಿ.ಎ, ಡಿ.ಎ.ಗಿಂತ ಕಲೆ ಮುಖ್ಯ. ಅದಕ್ಕೋಸ್ಕರ 600 ಕಿ.ಮೀ. ದೂರದಿಂದ ಬಂದಿದ್ದೇವೆ. ಆದರೆ, ಕಲಾ ಪ್ರದರ್ಶನ ನೀಡದೆ ವಾಪಸ್ ಹೋಗುತ್ತಿರುವುದಕ್ಕೆ ನೋವಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಉಮಾಶ್ರೀ ರಾಜೀನಾಮೆ ನೀಡಲಿ: ‘ಕಲಾವಿದರಿಗೆ ಅಪಮಾನ ಮಾಡಿದ ಸಚಿವೆ ಉಮಾಶ್ರೀ ಅವರು ರಾಜೀನಾಮೆ ನೀಡಬೇಕು’ ಎಂದು ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಕುಮಾರ್ ಆಗ್ರಹಿಸಿದರು.
‘ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ ಶ್ರೀನಿವಾಸ ಜಿ.ಕಪ್ಪಣ್ಣ ಅವರನ್ನೇ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ. ನೈಜ ಕಲಾವಿದರನ್ನು ಬಿಟ್ಟು ನಕಲಿ ಕಲಾವಿದರಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ದೂರಿದರು.
ವಾಪಸ್ ಹೋದ ಗಣ್ಯರು: ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ, ನಾಡೋಜ ಪುಟ್ಟಮಲ್ಲೇಗೌಡ ಅವರು ಬುಧವಾರ ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರಕ್ಕೆ ಬಂದಿದ್ದರು. ಕಾರ್ಯಕ್ರಮ ಮುಂದೂಡಿರುವ ವಿಷಯದ ತಿಳಿದು ವಾಪಸ್ ಹೋದರು. 80 ವರ್ಷದ ಚಿಟ್ಟಾಣಿ ಅವರು ಉತ್ತರ ಕನ್ನಡದಿಂದ ಇಲ್ಲಿಗೆ ಬಂದು ವಾಪಸ್ ಹೋಗುವಂತಾಗಿದ್ದು, ಕಲಾವಿದರ ಬೇಸರಕ್ಕೆ ಕಾರಣವಾಗಿದೆ.
‘ಸ್ಪಷ್ಟ ಕಾರಣ ಗೊತ್ತಿಲ್ಲ’
‘ಕಾರ್ಯಕ್ರಮ ಮುಂದೂಡುವಂತೆ ಸಚಿವೆ ಉಮಾಶ್ರೀ ಅವರು ಸೂಚಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ಮುಂದೂಡಿ’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಂದ ಮಂಗಳವಾರ ರಾತ್ರಿ 9 ಗಂಟೆಗೆ ಸೂಚನೆ ಬಂದಿತು. ಅವರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ ಹೇಳಿದರು.
‘ಈ ವಿಷಯವನ್ನು ಕಲಾ ತಂಡಗಳ ಸಂಯೋಜಕರಿಗೆ ತಿಳಿಸಿದ್ದೇವೆ. ಅಲ್ಲದೆ, ಕಾರ್ಯಕ್ರಮ ಸಂಘಟಕರು ಖುದ್ದು ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದಾರೆ. ಕಾರ್ಯಕ್ರಮ ಮುಂದೂಡಿರುವುದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ’ ಎಂದು ಅವರು ಹೇಳಿದರು.
ಬುಧವಾರ ಬೆಳಿಗ್ಗೆ 8 ಗಂಟೆಗೆ ಸಚಿವೆ ಉಮಾಶ್ರೀ ಅವರ ಮನೆಗೆ ಹೋಗಿ ಈ ಬಗ್ಗೆ ಚರ್ಚಿಸಿದೆವು. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮಾಡೋಣ ಎಂದಷ್ಟೇ ಹೇಳಿದರು. ಕಾರಣ ಗೊತ್ತಿಲ್ಲ
-ಜೋಗಿಲ ಸಿದ್ದರಾಜು, ಸಂಚಾಲಕ, ಸಾಂಸ್ಕೃತಿಕ ಸಮಿತಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.