ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ಕ್ರೀಡಾ ಶಕ್ತಿಯಾಗಿ ಬೆಳೆಯುತ್ತಿದೆ’

10 ಕೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಒಲಿಂಪಿಯನ್‌ ಪೆರೆಕ್‌ ಮನದ ಮಾತು
Last Updated 15 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತ ಕ್ರೀಡಾಭಿವೃದ್ಧಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದೆ. ಹೀಗಾಗಿಯೇ ಇಲ್ಲಿನ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಎತ್ತರದ ಸಾಧನೆ ಮಾಡುತ್ತಿದ್ದಾರೆ. ಇದು ಈ ರಾಷ್ಟ್ರ  ವಿಶ್ವ ಮಟ್ಟದಲ್ಲಿ  ದೊಡ್ಡ  ಕ್ರೀಡಾ ಶಕ್ತಿಯಾಗಿ ಬೆಳವಣಿಗೆ ಹೊಂದುತ್ತಿರುವುದಕ್ಕೆ ನಿದ ರ್ಶನ’ ಎಂದು ಒಲಿಂಪಿಕ್ಸ್‌ನಲ್ಲಿ ಮೂರು ಬಂಗಾರ ಗೆದ್ದಿರುವ ಓಟಗಾರ್ತಿ ಫ್ರಾನ್ಸ್‌ನ ಮೇರಿ ಜೋ ಪೆರೆಕ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ನಡೆಯುವ ವಿಶ್ವ 10ಕೆ ಓಟದ ರಾಯಭಾರಿಯಾಗಿರುವ  ಮೇರಿ ಜೋ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ನಮ್ಮ ಕುಟುಂಬದ ಯಾರೊಬ್ಬರಿಗೂ ಕ್ರೀಡೆಯ ಬಗ್ಗೆ ಆಸಕ್ತಿ ಇರಲಿಲ್ಲ. ನಾನು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದು ತೀರ ಆಕಸ್ಮಿಕ. ಒಮ್ಮೆ  ನಾನು ಸುಮ್ಮನೆ ಒಂದು ಕೂಟದಲ್ಲಿ ಭಾಗವಹಿಸಿ ಓಡಿದೆ. ಆ ದಿನ  ನನ್ನಲ್ಲಿ ಒಂದು ಬಗೆಯ ಚೈತನ್ಯ ಮೂಡಿತು. ನನಗೆ ಅರಿವಿಲ್ಲದ ಹಾಗೆ ನಾನು ಓಟದತ್ತ ಆಕರ್ಷಿತಳಾದೆ. ಹೀಗೆ ನನ್ನ ಪಯಣ ಮುಂದುವರಿಯಿತು’ ಎಂದು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಮೇರಿ 1996ರಲ್ಲಿ ನಡೆದ ಅಟ್ಲಾಂಟ ಒಲಿಂಪಿಕ್ಸ್‌ನ 200 ಮತ್ತು 400ಮೀ ಓಟದ ಸ್ಪರ್ಧೆಗಳಲ್ಲಿ ಬಂಗಾರ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು. ಇದರ ಜತೆಗೆ ವಿಶ್ವ ಚಾಂಪಿ ಯನ್‌ಷಿಪ್‌ ಮತ್ತು ಯೂರೋಪಿಯನ್‌ ಚಾಂಪಿಯನ್‌ಷಿಪ್‌ ಗಳಲ್ಲೂ ತಲಾ ಎರಡು ಸ್ವರ್ಣ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ.

‘ಪ್ರತಿಯೊಬ್ಬರೂ  ನಿತ್ಯ ಮುಂಜಾನೆ ಎದ್ದು ಕನಿಷ್ಠ ಅರ್ಧ ಗಂಟೆ ಕಾಲ ಓಡುವ ಅಥವಾ ದೇಹ ದಂಡಿಸುವ ಯಾವು ದಾದರೂ 
ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಜತೆಗೆ ದಿನದ ಎಲ್ಲಾ ಕೆಲಸಗಳನ್ನು ತುಂಬಾ ಹುಮ್ಮಸ್ಸಿನಿಂದ ಮಾಡಿ ಮುಗಿಸಬಹುದು’ ಎಂದು ಫಿಟ್ನೆಸ್‌ ಬಗ್ಗೆ ಸಲಹೆ ನೀಡಿದರು.

ಉದ್ಯಾನ ನಗರಿಯ ಭೇಟಿ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು ‘ ಇಲ್ಲಿನ ವಾತವಾರಣ ನನಗೆ ತುಂಬಾ ಹಿಡಿಸಿತು. ಇಲ್ಲಿನ ಪರಿಸ್ಥಿತಿ ಅಥ್ಲೀಟ್‌ಗಳಿಗೆ ಬಹಳ ಅನುಕೂಲಕರವಾಗಿದೆ. ಭಾನುವಾರದ ಓಟದಲ್ಲಿ ಎಲ್ಲಾ ವಯೋಮಾನದ ಸ್ಪರ್ಧಿಗಳು ಭಾಗವಹಿಸುತ್ತಾರೆ. ಹೀಗಾಗಿ ಆ ದಿನ ಮನರಂಜನೆಗೆ ಎಳ್ಳಷ್ಟು ಕೊರತೆ ಇರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಸ್ಪರ್ಧಿಗಳಾದ ಕರ್ನಾಟಕದ ಬಿ.ಸಿ. ತಿಲಕ್‌, ಕೇತಾರಾಮ್‌, ಮಾನ್‌ ಸಿಂಗ್‌, ಮೋನಿಕಾ ಅಥಾರೆ ಮತ್ತು  ಎಲ್‌. ಸೂರ್ಯ ತಮ್ಮ ಅನುಭವಗಳನ್ನು ಹಂಚಿಕೊಂಡರು.

‘ಹೋದ ಬಾರಿ ಕಠಿಣ ಸ್ಪರ್ಧೆ ಎದುರಾಗಿತ್ತು. ಇದನ್ನು ಮೆಟ್ಟಿನಿಂತು ನಾನು  ಚಾಂಪಿಯನ್‌ ಆಗಿದ್ದೆ . ಈ ಬಾರಿಯೂ ಅತ್ಯುತ್ತಮ ಓಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಸ್ಪರ್ಧೆ ಇನ್ನಷ್ಟು ಕಠಿಣವಾಗಿರಲಿದೆ ಎಂಬ ಭಾವನೆ ನನ್ನದು’ ಎಂದು ಹಾಲಿ ಚಾಂಪಿಯನ್‌ ತಿಲಕ್‌ ನುಡಿದರು.

ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದ ಮೋನಿಕಾ ಮಾತನಾಡಿ ‘ಈ ಬಾರಿ ನಾನು ಸೂಕ್ತ ತರಬೇತಿ ಪಡೆದಿಲ್ಲ. ನನ್ನ ಸಾಮರ್ಥ್ಯದ ಬಗ್ಗೆ ಪೂರ್ಣ ನಂಬಿಕೆ ಇದ್ದು  ಪ್ರಶಸ್ತಿ ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT