ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CSK VS PBKS | ಜಡೇಜ ಆಲ್‌ರೌಂಡ್ ಆಟಕ್ಕೆ ಒಲಿದ ಜಯ

Published 5 ಮೇ 2024, 16:24 IST
Last Updated 5 ಮೇ 2024, 16:24 IST
ಅಕ್ಷರ ಗಾತ್ರ

ಧರ್ಮಶಾಲಾ: ರವೀಂದ್ರ ಜಡೇಜ ಅವರ ಆಲ್‌ರೌಂಡ್ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ಹಿಮಾಚಲ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 28 ರನ್‌ಗಳಿಂದ ಆತಿಥೇಯ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. 

ಟಾಸ್ ಗೆದ್ದ ಪಂಜಾಬ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಪಿನ್ನರ್ ರಾಹುಲ್ ಚಾಹರ್ (23ಕ್ಕೆ3) ಮತ್ತು ವೇಗಿ ಹರ್ಷಲ್ ಪಟೇಲ್ (24ಕ್ಕೆ3) ಅವರು ಚೆನ್ನೈ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಬೌಲರ್‌ಗಳ ಪಾರಮ್ಯದ ನಡುವೆಯೂ ಚೇತೋಹಾರಿ ಆಟವಾಡಿದ ಜಡೇಜ (43; 26ಎ) ಚೆನ್ನೈ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 167 ರನ್‌ ಗಳಿಸಲು ಕಾರಣರಾದರು. ನಾಯಕ ಋತುರಾಜ್ ಗಾಯಕವಾಡ (32; 21ಎ) ಮತ್ತು ಡ್ಯಾರಿಲ್ ಮಿಚೆಲ್ (30; 19ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬರಲಿಲ್ಲ. 

ಮಹೇಂದ್ರಸಿಂಗ್ ಧೋನಿ ಅವರು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟಾದರು. 

ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡವನ್ನು ಜಡೇಜ (20ಕ್ಕೆ3) ತಮ್ಮ ಎಡಗೈ ಸ್ಪಿನ್ ಮೂಲಕ ಕಾಡಿದರು.  ಇದರಿಂದಾಗಿ ಆತಿಥೇಯ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 139 ರನ್ ಗಳಿಸಿತು. 

ಇನಿಂಗ್ಸ್‌ನ ಎರಡನೇ ಓವರ್‌ ಹಾಕಿದ ಚೆನ್ನೈ ವೇಗಿ ತುಷಾರ್ ದೇಶಪಾಂಡೆ  ಆಘಾತ ನೀಡಿದರು. ಅದೊಂದೇ ಓವರ್‌ನಲ್ಲಿ ರೀಲಿ ರುಸೊ ಹಾಗೂ ಜಾನಿ ಬೆಸ್ಟೊ ವಿಕೆಟ್‌ಗಳನ್ನು ಕಬಳಿಸಿದರು. ಪ್ರಭಸಿಮ್ರನ್ ಸಿಂಗ್ (30; 23ಎ)ಹಾಗೂ ಶಶಾಂಕ್ ಸಿಂಗ್ (27 ರನ್) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 53 ರನ್‌ ಸೇರಿಸಿದರು. 

ಎಂಟನೇ ಓವರ್‌ನಲ್ಲಿ ಪ್ರಭಸಿಮ್ರನ್ ವಿಕೆಟ್ ಗಳಿಸಿದ ಜಡೇಜ ಅವರು ಜೊತೆಯಾಟವನ್ನು ಮುರಿದರು. ಇಲ್ಲಿಂದ ಮುಂದೆ ಪಂಜಾಬ್ ತಂಡವು ಚೇತರಿಸಿಕೊಳ್ಳಲು ಜಡೇಜ ಮತ್ತು ಉಳಿದ ಬೌಲರ್‌ಗಳು ಅವಕಾಶ ಕೊಡಲಿಲ್ಲ. ಪಂಜಾಬ್ ನಾಯಕ ಸ್ಯಾಮ್ ಕರನ್ ಮತ್ತು ಭರವಸೆಯ ಬ್ಯಾಟರ್ ಆಷುತೋಷ್ ಶರ್ಮಾ ಅವರ ವಿಕೆಟ್‌ಗಳನ್ನು ಜಡೇಜ ಕಬಳಿಸಿದರು. 

ಅವರಿಗೆ ಉತ್ತಮ ಜೊತೆ ನೀಡಿದ ಸಿಮ್ರನ್‌ಜೀತ್ ಸಿಂಗ್ (16ಕ್ಕೆ2) ಹಾಗೂ ಶಾರ್ದೂಲ್ ಠಾಕೂರ್ (12ಕ್ಕೆ1) ಕಿಂಗ್ಸ್‌ಗೆ ಕಡಿವಾಣ ಹಾಕಿದರು. 11ನೇ ಪಂದ್ಯವಾಡಿದ ಪಂಜಾಬ್ ತಂಡಕ್ಕೆ ಇದು ಏಳನೇ ಸೋಲು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT