ಗುರುವಾರ , ಫೆಬ್ರವರಿ 25, 2021
19 °C
ವಿವಿಧ ಪಕ್ಷಗಳ ಜಿಲ್ಲಾ ಘಟಕದ ಅಧ್ಯಕ್ಷರ ಹೇಳಿಕೆ

‘ಮತ ಕೇಳಲು ಪಕ್ಷ ಸಾಧನೆಯೇ ಆಧಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮತ ಕೇಳಲು ಪಕ್ಷ ಸಾಧನೆಯೇ ಆಧಾರ’

ಮಂಡ್ಯ: ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ ಹಾಗೂ ಅಭ್ಯರ್ಥಿಯ ಉತ್ತಮ ಅಂಶಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಪ್ರತಿಪಾದಿಸಿದರು.ನಗರದ ಗಾಂಧಿ ಭವನದಲ್ಲಿ ರಾಜ್ಯ ಹಾಗೂ ಪ್ರಾದೇಶಿಕ ಪತ್ರಿಕೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ಆತ್ಮಾನಂದ ಮಾತನಾಡಿ, ಕೇಂದ್ರ ಸರ್ಕಾರದ 10 ವರ್ಷಗಳ ಸಾಧನೆ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.ಕೇಂದ್ರದ ಉಚಿತ ಕಡ್ಡಾಯ ಶಿಕ್ಷಣ ಯೋಜನೆ ಜಾರಿಗೆ ಅಡ್ಡಿ ಪಡಿಸುತ್ತಿರುವ ಪಕ್ಷದವರೇ ಆದ ಎಲ್‌.ಆರ್‌. ಶಿವರಾಮೇಗೌಡ ಅವರೊಂದಿಗೆ ಮಾತನಾಡುತ್ತೇನೆ ಎಂದರು.ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್‌ ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿನ ಸಾಧನೆ ಹಾಗೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಹೇಳುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.ಸಂಸದರ ನಿಧಿ ಬಳಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದೇವೆ. ಮುಂದಿನ ದಿನಗಳಲ್ಲಿ ಹಾಗಾಗದಂತೆ ನೋಡಿಕೊಳ್ಳುತ್ತೇವೆ. ಜಿಲ್ಲೆಗೆ ಕೃಷ್ಣ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದ ಅವರು, ಉತ್ತಮ ಅಭ್ಯರ್ಥಿಯಾಗಿರುವ ಪುಟ್ಟರಾಜು ಅವರನ್ನು ಬೆಂಬಲಿಸುವಂತೆ ರೈತ ಸಂಘದವರನ್ನು ಕೋರಿದ್ದೇವೆ ಎಂದರು.ಬಿಜೆಪಿ ಅಧ್ಯಕ್ಷ ಎಚ್‌. ಹೊನ್ನಪ್ಪ ಮಾತನಾಡಿ, ನೀರಾವರಿ, ರಸ್ತೆ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದಾಗ ನಿಮ್ಮ ಅಭ್ಯರ್ಥಿ, ಕಾವೇರಿಯ 2 ಟಿಎಂಸಿ ನೀರನ್ನು ಅಶೋಕ ಖೇಣಿ ಅವರ ಟೌನ್‌ಶಿಪ್‌ಗೆ ಬಿಡುವಂತೆ ಹೇಳಿದ್ದರಲ್ಲಾ ಎಂಬ ಪ್ರಶ್ನೆಗೆ ಹಾಗೆ ಹೇಳಿದ್ದರೆ ನಮ್ಮದೂ ವಿರೋಧವಿದೆ ಎಂದರು.ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಪ್ರಾಮಾಣಿಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಸಂಘಟನೆಯನ್ನೂ ಬಲಪಡಿಸಿದ್ದೇವೆ ಎಂದರು.ಆಮ್‌ ಆದ್ಮಿ ಪಕ್ಷದ ರಾಮಣ್ಣ ಮಾತನಾಡಿ, ಸರ್ಕಾರದ ಖರ್ಚಿನಲ್ಲಿ ಚುನಾವಣೆ ನಡೆಸುವ ಬಗ್ಗೆ ಚಿಂತನೆ ಇದೆ. ಇದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಅಭ್ಯರ್ಥಿಯ ಆಯ್ಕೆ ಒಂದೆರಡು ದಿನಗಳಲ್ಲಿ ಮಾಡಲಾಗುವುದು ಎಂದರು. ಸಿಪಿಐಎಂ ಮುಖಂಡ ಪುಟ್ಟಮಾದು ಮಾತನಾಡಿ, ದುಡಿಯುವ ವರ್ಗದ ಹಿತ ಕಾಯುವ ಪಕ್ಷ ಗೆಲ್ಲಬೇಕು ಎಂದು ಹೇಳಿದರು.ಎಸ್‌ಡಿಪಿಐ ಮುಖಂಡ ಮಹ್ಮದ್‌ ತಾಷೀರ್‌ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಚಿಂತಿಸುವವರಿಗೆ ಮತ ನೀಡಬೇಕು ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ನಮ್ಮ ಪಕ್ಷದಿಂದ ಅಭ್ಯರ್ಥಿ ಕಣಕ್ಕೆ ಇಳಿಸುವುದಿಲ್ಲ. ಯಾರಿಗೆ ಬೆಂಬಲ ನೀಡಬೇಕು ಎನ್ನುವುದನ್ನು ಒಂದೆರಡು ದಿನದಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷ  ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.