ಶನಿವಾರ, ಫೆಬ್ರವರಿ 27, 2021
28 °C

‘ಮೊಸಳೆ ಕಣ್ಣೀರು ಸಾಕು; ಕ್ರಮ ಕೈಗೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊಸಳೆ ಕಣ್ಣೀರು ಸಾಕು; ಕ್ರಮ ಕೈಗೊಳ್ಳಿ’

ನವದೆಹಲಿ (ಪಿಟಿಐ):  ‘ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮೊಸಳೆ ಕಣ್ಣೀರು ಸಾಕು, ತಪ್ಪಿತಸ್ಥರ ವಿರುದ್ದ  ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಒತ್ತಾಯಿಸಿದರು.ಪ್ರಧಾನಿ ಅವರು ದಲಿತರ ಮೇಲಿನ ಹಲ್ಲೆಯ ಬಗ್ಗೆ ಟ್ವೀಟ್ ಮಾಡುವ ಬದಲು ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಆಗ್ರಹಪಡಿಸಿದರು. ಗೋವು ರಕ್ಷಕರ ನೆಪದಲ್ಲಿ ದಲಿತರ ಮೇಲೆ ಹಲ್ಲೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರಧಾನಿ ಅವರು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ ಮಾರನೇ ದಿನವೇ ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಈ ವಿಷಯ ಪ್ರಸ್ತಾಪಿಸಿದಾಗ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್‌ ಅವರು ಚರ್ಚೆಗೆ ತಕ್ಷಣ ಅನುಮತಿ ನೀಡಲಿಲ್ಲ.ಇದರಿಂದ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದೆದುರು ಧಾವಿಸಿದರು. ಶೂನ್ಯ ವೇಳೆಯಲ್ಲಿ ಚರ್ಚೆ ಆಗಬೇಕಿರುವ ವಿಷಯಗಳು ಮುಗಿದಿಲ್ಲ ಮತ್ತು ಖರ್ಗೆ ಅವರು ನೋಟಿಸ್ ನೀಡಿಲ್ಲ. ಆದ್ದರಿಂದ  ನಂತರ ವಿಷಯ ಪ್ರಸ್ತಾಪಕ್ಕೆ ಖರ್ಗೆ ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಭಾಧ್ಯಕ್ಷರು ಹೇಳಿದರೂ ಅದಕ್ಕೆ ಕಿವಿಗೊಡದ ಕಾಂಗ್ರೆಸ್ ಸದಸ್ಯರು ಪೀಠದ ಎದುರು ಗದ್ದಲವೆಬ್ಬಿಸಿದರು.ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳಿಗೆ ಮರಳಬೇಕು ಎಂದು ಮಹಾಜನ್ ಪದೆಪದೇ ಹೇಳಿದರೂ ಗದ್ದಲ ಮುಂದುವರಿಯಿತು. ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿಲ್ಲ. ಸಣ್ಣ ರಾಜಕೀಯ ಪಕ್ಷಗಳ ಸದಸ್ಯರು ಶೂನ್ಯ ವೇಳೆಯಲ್ಲಿ ಕೆಲವು ವಿಷಯ ಪ್ರಸ್ತಾಪಿಸಲು ಅನುಮತಿ ಕೋರಿರುವುದರಿಂದ ಅವರಿಗೆ ಅವಕಾಶ ನೀಡದಿದ್ದರೆ ಅನ್ಯಾಯ ಮಾಡಿದಂತಾ ಗುತ್ತದೆ ಎಂದು ಮಹಾಜನ್ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ಚರ್ಚೆ ನಡೆಸುವುದರ ಬಗ್ಗೆ ಯಾವುದೆ ಅಭ್ಯಂತರವಿಲ್ಲ ಎಂದು ಹೇಳಿದರೂ, ಪ್ರಧಾನಿ ಅವರೇ ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.‘ದಲಿತರ ಮೇಲಿನ ದೌರ್ಜನ್ಯಕ್ಕೆ ಮೊಸಳೆ ಕಣ್ಣೀರು ಸುರಿಸುವುದು ಸಾಕು, ಕ್ರಮ ಬೇಕು’ ಎಂದು ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು.ಕುಂಭಕರ್ಣ ನಿದ್ರೆ ಮಾಯಾವತಿ ಟೀಕೆ

ನವದೆಹಲಿ:
  ‘ಮುಸ್ಲಿಮರು ಮತ್ತು ದಲಿತರ ಮೇಲೆ ‘ಗೋ ರಕ್ಷಕರು’ ಹಲ್ಲೆ ನಡೆಯುತ್ತಿದ್ದಾಗ ಪ್ರಧಾನಿ ಕುಂಭಕರ್ಣ ನಿದ್ರೆಯಲ್ಲಿದ್ದರು’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ.

ದೌರ್ಜನ್ಯದ ಬಗ್ಗೆ ತಡವಾಗಿ ಪ್ರತಿಕ್ರಿಯೆ ನೀಡಿರುವ ಮೋದಿಯ ಕ್ರಮವನ್ನು ಲೋಕಸಭೆಯಲ್ಲಿ ಟೀಕಿಸಿದ ಅವರು, ‘ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಪ್ರಧಾನಿ ಈಗ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ರಾಜಕೀಯ ಪ್ರೇರಿತ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.