ಭಾನುವಾರ, ಜೂನ್ 13, 2021
24 °C

‘ಮೋದಿ ಹೆಸರಲ್ಲಿ ಮೋಸ ಹೋಗದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ‘ಮೋದಿ ಮುಖವಾಡ ಧರಿಸಿಕೊಂಡು ಹೊರಟಿರುವ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಮೋದಿ ಅಲೆ ಇಲ್ಲವೇ ಇಲ್ಲ. ಮೋದಿ ಹೆಸರಿನಲ್ಲಿ ಮೋಸ ಹೋಗಬಾರದು. ಮೋದಿ ಮಾತಿನ ಮೋಡಿಗೆ ಮರುಳಾಗ ಬಾರದು. ಮೋದಿ ಒಂದು ಅರಿವೆ ಹಾವು’ ಎಂದು ಶಾಸಕ ಸಿದ್ದು ನ್ಯಾಮಗೌಡ ಲೇವಡಿ ಮಾಡಿದರು.ಕಾಂಗ್ರೆಸ್‌ ಪಕ್ಷದ ಜಮಖಂಡಿ ಬ್ಲಾಕ್‌ ಹಾಗೂ ಸಾವಳಗಿ ಬ್ಲಾಕ್‌ ಪರವಾಗಿ ಆಯೋಜಿಸಿದ್ದ ‘ಭಾರತ ನಿರ್ಮಾಣ ಯಾತ್ರಾ’ ಅಂಗವಾಗಿ ಇಲ್ಲಿನ ಬಸವ ಭವನ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಜಯ ಕುಮಾರ ಸರನಾಯಕ ಪರ ಮತ ಯಾಚಿಸಿ ಅವರು ಮಾತನಾಡಿದರು.ಬಿ.ಎಸ್‌. ಯಡಿಯೂರಪ್ಪ ನೇತೃ ತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ, ಅವ್ಯವಹಾರ, ಬಿಜೆಪಿಯ ಆಂತರಿಕ ಕಚ್ಚಾಟ, ಶಾಸಕರು, ಸಚಿವರು ಜೈಲಿಗೆ ಹೋಗುವುದು ಇತ್ಯಾದಿ ಕುರಿತು ದಿನನಿತ್ಯ ಟಿವಿಗಳಲ್ಲಿ ಪುಕ್ಕಟ್ಟೆ ಮನ ರಂಜನೆ ಸಿಗುತ್ತಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಟಿವಿ ಮನರಂಜನೆ ನಿಂತು ಹೋಗಿದೆ ಎಂದರು.ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ಅಜಯ ಕುಮಾರ ಸರನಾಯಕ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದ್ದಾಗ ಬಿಜೆಪಿ ಭ್ರಷ್ಟ ಮುಕ್ತವಾಗಿದೆ ಎಂದು ಬಿಜೆಪಿ ಹೇಳಿ ಕೊಂಡಿತ್ತು. ಮತ್ತೆ ಬಿಜೆಪಿಗೆ ಮರಳಿರುವ ಯಡಿಯೂರಪ್ಪ ಗಂಗಾನದಿಯಲ್ಲಿ ಮಿಂದು ಬಂದಿದ್ದಾರೆಯೇ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ರಾಜ್ಯ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದರು.ಮಾಜಿ ಶಾಸಕ ಆರ್.ಎಂ. ಕಲೂತಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಹಸೀನಾ ಅವಟಿ, ನಗರಸಭೆ ಸದಸ್ಯ ರಾದ ರಾಜು ಪಿಸಾಳ, ಸುಮಿತ್ರಾ ಗುಳಬಾಳ, ರೇಶ್ಮಾ ಖಾದ್ರಿ, ತೌಫೀಕ್‌ ಪಾರ್ಥನಳ್ಳಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅನಂತಮತಿ ಪರಮಗೊಂಡ, ಸಾವಳಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ವರ್ಧಮಾನ ನ್ಯಾಮ ಗೌಡ. ಸುಶೀಲಕುಮಾರ ಬೆಳಗಲಿ, ವಿ.ವಿ. ತುಳಸಿಗೇರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಅರ್ಜುನ ದಳವಾಯಿ, ಮಹೇಶ ಕೋಳಿ, ಸುರೇಖಾ ನಾಡಗೇರ, ಪದ್ಮಣ್ಣ ಜಕನೂರ, ಫಕೀರಸಾಬ್‌ ಬಾಗವಾನ, ಪರಗೌಡ ಬಿರಾದಾರಪಾಟೀಲ, ಬಸವ ರಾಜ ಸಬರದ, ಹನಮಂತ ಕಾತ್ರಾಳ ಮತ್ತಿತರರು ವೇದಿಕೆಯಲ್ಲಿದ್ದರು.ಜಮಖಂಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿ ಯಡಹಳ್ಳಿ ನಿರೂಪಿಸಿದರು. ನಜೀರ್‌ ಕಂಗನೊಳ್ಳಿ ವಂದಿಸಿದರು.ಇದಕ್ಕೂ ಮೊದಲು ತಾಲ್ಲೂಕಿನ ಹುನ್ನೂರ ಗ್ರಾಮದಲ್ಲಿ ಭಾರತ ನಿರ್ಮಾಣ ಯಾತ್ರೆಗೆ ಚಾಲನೆ ನೀಡಲಾಯಿತು. ನಂತರ ಹುನ್ನೂರಿ ನಿಂದ ಪಾದಯಾತ್ರೆಯಲ್ಲಿ ಕಡಪಟ್ಟಿ ಮುಖಾಂತರ ಜಮಖಂಡಿ ನಗರದ ಹನುಮಾನ ದೇವಸ್ಥಾನ ತಲುಪಲಾಗಿತ್ತು. ಅಲ್ಲಿಂದ ಬಸವ ಭವನಕ್ಕೆ ತೆರಳಿ ಬಹಿರಂಗ ಸಭೆ ನಡೆಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.