ಭಾನುವಾರ, ಜನವರಿ 19, 2020
20 °C
ಗಿರಿಜನರ ಅಭಿವೃದ್ಧಿಗಾಗಿ ಕಾನೂನು – ಡಿ.ಸಿ.ಕಚೇರಿ ಬಳಿ ಪ್ರತಿಭಟನೆ

‘ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳಿಂದಲೇ ಅಡ್ಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಗಿರಿಜನ ಅಭಿವೃದ್ಧಿಗಾಗಿ ಕಾನೂನು ರೂಪಿಸುವುದು ಮತ್ತು ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ವಿಶೇಷ ಘಟಕ ಯೋಜನೆಯನ್ನು ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಅರಣ್ಯ ಮೂಲ ಬುಡಕಟ್ಟು ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಯೋಜನೆಗಳನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳೇ ಪ್ರಮುಖ ಅಡ್ಡಿ ಆಗಿರುವುದನ್ನು ತೀವ್ರವಾಗಿ ಖಂಡಿಸಲಾಯಿತು.ಬುಡಕಟ್ಟು ಜನಾಂಗಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಇಲಾಖೆಯ ಅಧಿಕಾರಿಗಳು ತೋರುತ್ತಿರುವ ಉದಾಸೀನವನ್ನು ಖಂಡಿಸಿದ ಒಕ್ಕೂಟದ ಸದಸ್ಯೆ ಶಶಿಕಲಾ, 1974ರಲ್ಲಿ ಯೋಜನೆಯನ್ನು ರೂಪಿಸಲಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಅಗತ್ಯ ಇರುವವರಿಗೆ ಯೋಜನೆಯ ಫಲವೇ ದೊರಕುತ್ತಿಲ್ಲ.ಯೋಜನೆಯನ್ನು ಜಾರಿಗೊಳಿಸುವಾಗ ಸಮುದಾಯದ ಪ್ರತಿನಿಧಿಗಳೊಂದಿಗೆ ಚರ್ಚೆಯನ್ನೇ ನಡೆಸಿಲ್ಲ. ಅನುದಾನಗಳ ಹಣ ಬಳಕೆಯಾಗದೇ ಹಲವಾರು ಬಾರಿ ಸರ್ಕಾರಕ್ಕೆ ವಾಪಸ್ಸಾಗಿದೆ. ಮಾಹಿತಿ ಹಕ್ಕು ಕಾಯಿದೆ ಪ್ರಕಾರ ದೊರೆತ ದಾಖಲೆಗಳನ್ನು ಗಮನಿಸಿದರೆ ಬುಡಕಟ್ಟು ಜನಾಂಗದ ವಿಶೇಷ ಘಟಕ ಯೋಜನೆಯಡಿ ಕೊರಗ ಸಮುದಾಯದ ಫಲಾನುಭವಿಗಳನ್ನು ಗುರುತಿಸಿಯೇ ಇಲ್ಲ. ಆದ್ದರಿಂದ ಈ ಯೋಜನೆಯಡಿ ಎಲ್ಲ ಬುಡಕಟ್ಟು ಜನಾಂಗದವರನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಹೇಳಿದರು.ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಬಂದ ಹಣವನ್ನು ಇತರ ಅಭಿವೃದ್ಧಿ ಕಾಮಗಾರಿಗೆ ಬಳಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು, ಬುಡಕಟ್ಟು ಅಭಿವೃದ್ಧಿ ಯೋಜನೆಗಳ ಸರಿಯಾದ ಜಾರಿಗಾಗಿ ಸೂಕ್ತ ಕಾನೂನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.ಕೊರಗ ಸಂಘದ ಸದಸ್ಯರಾದ ರಮೇಶ್‌ ಮಂಚಕಲ್‌ ಮಾತನಾಡಿ, ಬುಡಕಟ್ಟು ಅಭಿವೃದ್ಧಿ ಯೋಜನೆ ಅಧಿಕಾರಿ ಪಟಾಲಪ್ಪ ಅವರು ಬುಡಕಟ್ಟು ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ರೂ 87 ಲಕ್ಷವನ್ನು ದುರ್ಬಳಕೆ ಮಾಡಿ ಅಮಾನತುಗೊಂಡಿದ್ದರೂ ಆರು ತಿಂಗಳ ಬಳಿಕ ಅವರನ್ನು ಕೃಷಿ ಇಲಾಖೆಗೆ ವರ್ಗಾಯಿಸಲಾಗಿದೆ. ಇಂತಹ ಪ್ರವೃತ್ತಿಯನ್ನು ನಿಲ್ಲಿಸಲು ಕಾನೂನಿನ ಅಗತ್ಯವಿದೆ ಎಂದು ಹೇಳಿದರು.ಸದಸ್ಯ ಪ್ರಕಾಶ್‌ ಮಾತನಾಡಿ ಆಯಾ ವರ್ಷದಲ್ಲಿ ಬಿಡುಗಡೆಯಾದ ಹಣವನ್ನು ಆಯಾ ವರ್ಷದಲ್ಲಿಯೇ ಬಳಸಿಕೊಳ್ಳಬೇಕು. ಅನುದಾನ ದುರ್ಬಳಕೆ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯೋಜನೆಗಳನ್ನು ಪಡೆಯಲು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು. ಸದಸ್ಯೆ ಕುಸುಮ ಕೂಡ ತಮ್ಮ ಆಗ್ರಹವನ್ನು ಮಂಡಿಸಿದರು.ಪ್ರತಿಭಟನೆಯ ಬಳಿಕ ಒಕ್ಕೂಟದ ದ.ಕ.ಜಿಲ್ಲಾ ಸಂಚಾಲಕ ಸಂಜೀವ ಕೋಡಿಕಲ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಕ್ರಿಯಿಸಿ (+)