ಮಂಗಳವಾರ, ಮಾರ್ಚ್ 2, 2021
28 °C

‘ಲವ್ಲಿ’ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲವ್ಲಿ’ ವಿದ್ಯಾರ್ಥಿಗಳು

ಸೃಜನಶೀಲರೆಲ್ಲಾ ತಮ್ಮ ವಿಭಿನ್ನತೆಯಿಂದ ಇಷ್ಟವಾಗುತ್ತಾರೆ ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ‘ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ’ (ಎಲ್‌ಪಿಯು) ವಿದ್ಯಾರ್ಥಿಗಳು ಭಿನ್ನತೆ ಮೆರೆದಿದ್ದಾರೆ.ಇಲ್ಲಿನ ಕೆಲ ವಿದ್ಯಾರ್ಥಿಗಳು ಸೇರಿಕೊಂಡು ವಿನ್ಯಾಸಗೊಳಿಸಿದ ವಿಶಿಷ್ಟ ವಾಹನಗಳ ಮಾದರಿಗಳು ‘ಆಟೊ ಎಕ್ಸ್‌ಪೊ- ೨೦೧೪’ರ ಪ್ರಮುಖ ಆರ್ಕಷಣೆಯಾಗಿವೆ. ವಿದ್ಯಾರ್ಥಿಗಳು ಮತ್ತು ಬೋಧಕ ತಂಡಗಳು ಸೇರಿ ತಯಾರಿಸಿದ ೧೫ ವಾಹನಗಳ ಮಾದರಿಗಳು, ಎಲ್‌ಪಿಯುನಲ್ಲಿ ಇರುವ ಜಾಗತಿಕ ಗುಣಮಟ್ಟದ ಪಠ್ಯ ವಿಷಯವನ್ನೇ ಆಧರಿಸಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ಮೆಚ್ಚುವ ಸಂಗತಿ. ಪ್ರತಿ ತಂಡದವರು ಅಭಿವೃದ್ಧಿಪಡಿಸಿರುವ ವಾಹನಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಸೃಜನಶೀಲತೆಗೆ ಸಾಕ್ಷಿಗಳಾಗಿವೆ. ವಾಹನೋದ್ಯಮದಲ್ಲೇ ಕ್ರಾಂತಿಕಾರಿ ವಿನ್ಯಾಸಗಳು ಎನ್ನಬಹುದಾದ ಈ ವಾಹನಗಳ ಮಾದರಿಗಳು, ಕಾಲದ ಮಿತಿಯನ್ನೂ ಮೀರಿದ್ದಾಗಿವೆ. ಅಂದರೆ, ಭವಿಷ್ಯದ ತಲೆಮಾರಿನ ವಾಹನಗಳೇ ಆಗಿವೆ.ಈ ವಿನೂತನ ಶೈಲಿಯ ವಾಹನಗಳ ಸಾಲಿನಲ್ಲಿ ‘ಸೌರಶಕ್ತಿ ಚಾಲಿತ ಕುಟುಂಬದ ಕಾರು’ (ಫ್ಯಾಮಿಲಿ ಕಾರ್) ಇದೆ. ಇದು ಸೌರಶಕ್ತಿ ವಾಹನಗಳ ಶ್ರೇಣಿಯಲ್ಲೇ ಪ್ರಥಮ ಎನ್ನುವಂತಹ ಮಾದರಿಯಾಗಿದೆ. ವಿಶ್ವದಲ್ಲೇ ಅತ್ಯಂತ ಚಿಕ್ಕ ಗಾತ್ರದ ಕಾರು ಸಹ ಇಲ್ಲಿದೆ. ಜೇಮ್ಸ್‌ ಬಾಂಡ್ ಸಿನಿಮಾಗಳಲ್ಲಿ ತೋರಿಸುವಂತಹ, ಮೊಬೈಲ್ ಫೋನ್‌ನಿಂದಲೇ ನಿಯಂತ್ರಿಸಬಹುದಾದ ಕಾರನ್ನೂ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ ಎಂಬುದು ಅಚ್ಚರಿ ಮೂಡಿಸುವ ಸಂಗತಿಗಳಲ್ಲೊಂದು.ಅಷ್ಟೇ ಅಲ್ಲ, ಬಹು ಬಗೆಯ ಇಂಧನಗಳನ್ನು ಬಳಸಿಕೊಂಡು ಚಲಿಸುವ ಸಾಮರ್ಥ್ಯ ಹೊಂದಿರುವ ‘ಸ್ಮಾರ್ಟ್ ಹೈಬ್ರಿಡ್ ಕಾರು’ ಕೂಡ ಇದೆ. ವಿನೂತನ ಶೈಲಿಯ ಮೋಟಾರ್ ಬೈಕ್, ಹೈಬ್ರಿಡ್ ಕ್ರಯೋಜೆನ್ ಎಂಜಿನ್, ಹೆಕ್ಸಾ ಕಾಪ್ಟರ್, ಎಲ್ಲ ಬಗೆಯ ಸ್ಥಳದಲ್ಲಿಯೂ ಚಲಿಸಬಲ್ಲಂತಹ ‘ಆಲ್ ಟೆರೇನ್ ವೆಹಿಕಲ್’ ಸಹ ಇಲ್ಲಿ ವೀಕ್ಷಣೆಗೆ ಲಭ್ಯ. ಇದೆಲ್ಲಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಕಾರಿನ ಬಿಡಿ ಭಾಗಗಳಿಂದಲೇ ನಿರ್ಮಾಣ ಗೊಂಡ ‘ಮೆಟಲ್ ಬಾಯ್ ಫ್ರಂ ಒರಿಜಿನಲ್ ಕಾರ್’.ವಿದ್ಯಾರ್ಥಿಗಳ ತಂಡ ಅಭಿವೃದ್ಧಿಪಡಿಸಿರುವ ‘ರೆಟ್ರೊ ವಾಯ್‌ಚರ್’ ವಿಶ್ವದ ಅತಿಸಣ್ಣ ಕಾರು ಎನಿಸಿಕೊಂಡಿದೆ. ಪುರಾತನ ವಾಹನಗಳ ಮಾದರಿಯಲ್ಲಿ, ಅಂದರೆ ವಿಂಟೇಜ್ ಕಾರುಗಳ ಶೈಲಿಯಲ್ಲಿರುವ ಈ ಪುಟ್ಟ ಕಾರು, ‘ಅತ್ಯಾಧುನಿಕ ತಂತ್ರಜ್ಞಾನ ಮತ್ತು ರಾಜವೈಭವ’ ಎರಡನ್ನೂ ಮೇಳೈಸಿದಂತಿದೆ. ವಿವಿಧ ಬಗೆಯ ಇಂಧನವನ್ನು ಬಳಸಿಕೊಂಡು ಚಲಿಸಬಲ್ಲಂತಹ ‘ಸ್ಮಾರ್ಟ್ ಹೈಬ್ರಿಡ್ ಕಾರ್’ ವಿಶ್ವದಲ್ಲೇ ಅತ್ಯಂತ ಇಂಧನ ಮಿತವ್ಯಯಿ ಕಾರು ಎನಿಸಿಕೊಂಡಿದೆ. ಆದರೆ, ಈ ಕಾರನ್ನು ಅಧಿಕೃತ ಮಾನ್ಯತೆ ಪಡೆದ ವ್ಯಕ್ತಿಗಳಷ್ಟೇ ಓಡಿಸಬಹುದಾಗಿದೆ.ಎರಡು ಬಗೆಯ ಇಂಧನಗಳನ್ನು ಆಧರಿಸಿ ಚಲಿಸಬಲ್ಲ ಮೋಟಾರ್ ಬೈಕ್ ಸಹ ಈ ವಿದ್ಯಾರ್ಥಿಗಳ ನಾವೀನ್ಯ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ತಂಡ ತಯಾರಿಸಿರುವ ವಾಹನ ಮಾದರಿಗಳ ಬಗ್ಗೆ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಕುಲಪತಿ ಅಶೋಕ್ ಮಿತ್ತಲ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.