ಭಾನುವಾರ, ಜೂನ್ 20, 2021
29 °C
‘ಹರ ಹರ ಮೋದಿ’ ಘೋಷಣೆಗೆ ದ್ವಾರಕಾ ಪೀಠ ತೀವ್ರ ಆಕ್ಷೇಪ

‘ವ್ಯಕ್ತಿಪೂಜೆ’ ನಿಲ್ಲಿಸಲು ಸ್ವಾಮೀಜಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌(ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ‘ಹರ ಹರ ಮೋದಿ’ ಘೋಷಣೆಗಳನ್ನು ಬಳಸುತ್ತಿರುವುದಕ್ಕೆ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಲ್ಲಿ ತಮ್ಮ ಪ್ರತಿಭಟನೆ ದಾಖಲಿಸಿ­ದ್ದಾರೆ. ಕೂಡಲೇ ‘ವ್ಯಕ್ತಿ ಪೂಜೆ’ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.ಶಿವನನ್ನು ಹೊಗಳಲು ‘ಹರ ಹರ ಮಹಾದೇವ’ ಎಂದು ಘೋಷಣೆ ಹಾಕಲಾಗುತ್ತದೆ. ಆದರೆ, ಅದನ್ನು  ‘ಹರ ಹರ ಮೋದಿ’ ಎಂದು ಬದಲಾಯಿಸಿ­ರುವುದಕ್ಕೆ ಸರಸ್ವತಿ ಅಸಮಾಧಾನಗೊಂಡಿದ್ದಾರೆ.ಮೋದಿ ಅವರು ವಾರಾಣಸಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದು, ಅವರ ಪ್ರಚಾರ ಸಭೆಗಳಲ್ಲಿ ‘ಹರ ಹರ ಮೋದಿ’ ಘೋಷಣೆ­ಗಳು ಮೊಳಗುತ್ತಿವೆ. ವಡೋದರಾ ಕ್ಷೇತ್ರದಿಂದಲೂ ಮೋದಿ ಕಣಕ್ಕಿಳಿಯಲಿದ್ದಾರೆ.‘ಈ ವಿಷಯ ನನ್ನ ಗಮನಕ್ಕೆ ಬಂದ ಬಳಿಕ ಶನಿವಾರ ಭಾಗವತ್‌ ಅವರಿಗೆ ಕರೆ ಮಾಡಿದ್ದೆ. ಶಿವನಿಗೆ ಅಪಮಾನವಾಗುವ   ರೀತಿಯಲ್ಲಿ ಘೋಷಣೆ ಕೂಗುವುದನ್ನು ಕೂಡಲೇ ನಿಲ್ಲಿಸುವಂತೆ ಹೇಳಿದ್ದೇನೆ. ದೇವರನ್ನು ಪೂಜಿಸುವ ಬದಲು ವ್ಯಕ್ತಿಯೊಬ್ಬರನ್ನು ಆರಾಧಿಸುವ ಪ್ರಯತ್ನ ಸರಿಯಲ್ಲ. ಇದು ಹಿಂದೂ ಧರ್ಮಕ್ಕೆ ವಿರುದ್ಧವಾದದ್ದು ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದಿದ್ದಾರೆ.‘ಆರ್‌ಎಸ್‌ಎಸ್‌ ಯಾವಾಗಲೂ ವ್ಯಕ್ತಿ ಪೂಜೆಗೆ ವಿರುದ್ಧವಾಗಿದೆ. ಉತ್ಸಾಹದಲ್ಲಿ ಕೆಲವರು ಈ ರೀತಿಯ ಘೋಷಣೆ ಕೂಗುತ್ತಿದ್ದಾರೆ. ಬಿಜೆಪಿ ಉದ್ದೇಶ­ಪೂರ್ವಕವಾಗಿ ಅದನ್ನು ಮಾಡುತ್ತಿಲ್ಲ’ ಎಂದು ಭಾಗವತ್‌ ಹೇಳಿದ್ದಾರೆ. ಆದರೆ, ಭಾಗವತ್‌ ಅವರ ಈ ಮಾತಿನಿಂದ ಸ್ವರೂಪಾನಂದ ಅವರು ತೃಪ್ತರಾಗಿಲ್ಲ.‘ವ್ಯಕ್ತಿ ಆರಾಧನೆಯನ್ನು ಆರ್‌ಎಸ್‌ಎಸ್‌ ಪ್ರೋತ್ಸಾಹಿಸುವುದಿಲ್ಲ ಎಂದಾದರೆ ಅದನ್ನು ತಡೆಯಲು ಅದೇಕೆ ಏನೂ ಮಾಡುತ್ತಿಲ್ಲ’ ಎಂದು ಸ್ವರೂಪಾನಂದ ಪ್ರಶ್ನಿಸಿದ್ದಾರೆ.‘ಬಿಜೆಪಿಯ ಕೆಲ ಯುವ ಮುಖಂಡರು ಛತ್ತೀಸ­ಗಡದ ದೇವಸ್ಥಾನವೊಂದರಿಂದ ಶಿವಲಿಂಗವನ್ನು ತೆಗೆದು ಅದರ ಸ್ಥಳದಲ್ಲಿ ಮೋದಿ ಅವರ ಭಾವಚಿತ್ರ­ವನ್ನು ಇಟ್ಟಿದ್ದಾರೆ. ಇವರು ವ್ಯಕ್ತಿಪೂಜೆಯಿಂದ ಹೊರಬರಬೇಕು’ ಎಂದಿದ್ದಾರೆ.‘ಆಯೋಗ ಕ್ರಮ ಕೈಗೊಳ್ಳಲಿ’

ಫರೂಕಾಬಾದ್‌/ಉತ್ತರ ಪ್ರದೇಶ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹೊಗಳಲು ‘ಹರ ಹರ ಮೋದಿ’ ಘೋಷಣೆಗಳನ್ನು  ಆ ಪಕ್ಷ ಬಳಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌, ಈ ಪ್ರಕರಣವನ್ನು ಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

‘ನಾವು ಪ್ರಜಾಪ್ರಭುತ್ವವನ್ನು ಗೌರವಿಸುತ್ತೇವೆ. ಆದರೆ, ದೇವರು ಎಲ್ಲಕ್ಕಿಂತ ಮಿಗಿಲಾದವನು. ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಬಳಸುತ್ತಿರುವ ಘೋಷಣೆಗೆ ಸಂಬಂಧಿಸಿ ಆಯೋಗ ಖುದ್ದಾಗಿ ಗಮನಹರಿಸಬೇಕು’ ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

ಮೋದಿ ಅವರ ರ್‍ಯಾಲಿ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ‘ಹರ ಹರ ಮೋದಿ, ಘರ್‌ ಘರ್‌ ಮೋದಿ’ ಘೋಷಣೆಗಳನ್ನು ಕೂಗುತ್ತಿದ್ದಾರೆ.‘ಮೋದಿ ಅವರು ಪ್ರಧಾನಿಯಾಗುವುದನ್ನು ದೇವರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಖುರ್ಷಿದ್‌, ‘ದೇವರಿಗಿಂತ ಯಾರೊಬ್ಬರು ದೊಡ್ಡವರಲ್ಲ ಎಂಬ ದೇಶದ ಸಂಪ್ರದಾಯವನ್ನು ಬಿಜೆಪಿ ಮರೆತಂತಿದೆ’ ಎಂದರು.‘ಘೋಷಣೆ ಕೂಗಬೇಡಿ’

ಅಹಮದಾಬಾದ್‌ (ಪಿಟಿಐ): ಹಿಂದೂ ಸ್ವಾಮೀಜಿಗಳು ಮತ್ತು ಪ್ರತಿಪಕ್ಷಗಳ ಆಕ್ಷೇಪಕ್ಕೆ ಮಣಿದಿರುವ ನರೇಂದ್ರ ಮೋದಿ ಅವರು ‘ಹರ ಹರ ಮೋದಿ’ ಘೋಷಣೆ ಕೂಗದಂತೆ ಬೆಂಬಲಿಗರನ್ನು ವಿನಂತಿಸಿಕೊಂಡಿದ್ದಾರೆ.

‘ಉತ್ಸಾಹಿ ಬೆಂಬಲಿಗರು ಹರ ಹರ ಮೋದಿ ಎಂದು ಘೋಷಣೆ ಕೂಗುತ್ತಿದ್ದಾರೆ. ಅವರ ಉತ್ಸಾಹವನ್ನು ನಾನು ಗೌರವಿಸುತ್ತೇನೆ. ಆದರೆ ಮುಂದೆ ಈ ಘೋಷಣೆ ಕೂಗದಂತೆ ವಿನಂತಿ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.ಹರ ಹರ ಮೋದಿ ಘೋಷಣೆಯಿಂದ ಬಿಜೆಪಿ ಕೂಡ ದೂರ ಸರಿದಿದೆ. ‘ಇದು ಪಕ್ಷದ ಘೋಷಣೆ ಅಲ್ಲ. ನಮ್ಮ ಘೋಷಣೆ ಈ ಬಾರಿ ಮೋದಿ ಸರ್ಕಾರ ಎಂದಾಗಿದೆ’ ಎಂದು ಬಿಜೆಪಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.