ಗುರುವಾರ , ಮಾರ್ಚ್ 4, 2021
19 °C
ಪದವಿ ಪೂರ್ವ ಕಾಲೇಜುಗಳ ನೌಕರರ ಭವನ ಉದ್ಘಾಟನೆ

‘ಸಮಾಜ ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಮಾಜ ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ’

ಹಾವೇರಿ: ಕವಲು ದಾರಿಯಲ್ಲಿರುವ ಸಮಾಜ ಬದಲಾಯಿಸುವ ಏಕೈಕ ಅಸ್ತ್ರ ಶಿಕ್ಷಣ. ಅಷ್ಟೇ ಅಲ್ಲದೇ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಕೂಡ ತುಂಬಾ ಮುಖ್ಯವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.ಸ್ಥಳೀಯ ದಾನೇಶ್ವರಿ ನಗರದಲ್ಲಿ ನೂತನವಾಗಿ ನಿರ್ಮಿಸಿದ ಪದವಿ ಪೂರ್ವ ಕಾಲೇಜುಗಳ ನೌಕರರ ಭವನವನ್ನು ಭಾನುವಾರ ಉದ್ಘಾಟಿಸಿದ ಅವರು ಮಾತನಾಡಿದರು.ಶಿಕ್ಷಣ ಮನುಷ್ಯನ ಅವಿಭಾಜ್ಯ ಅಂಗ. ಎಲ್ಲರೂ ಅಕ್ಷರಜ್ಞಾನ ಪಡೆದು ಸದೃಡ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಉಪನ್ಯಾಸಕರು ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿ ಮಟ್ಟದಲ್ಲಿ ಪೈಪೋಟಿ ನಡೆಸುವಂತ ವಿದ್ಯಾರ್ಥಿಗಳನ್ನು ತಯಾರಿಸಬೇಕು ಎಂದರು.ರಾಮರಾಜ್ಯದ ಕನಸು ನನಸು ಮಾಡುವ ಗುರುತರ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಆದ್ದರಿಂದ ವಿದ್ಯಾರ್ಥಿಗಳು ಯುವಕರು ಸಮಾಜದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಪ್ರತಿಯೊಬ್ಬರು ಹಿರಿದಾದ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಋಣಿಯಾಗಿರಬೇಕು ಎಂದು ತಿಳಿಸಿದರು.ಮಾಜಿ ಶಾಸಕ ನೆಹರೂ ಓಲೇಕಾರ ಮಾತನಾಡಿ, ಕತ್ತಲು ಕವಿದ ವಿದ್ಯಾರ್ಥಿಗಳ ಬಾಳಲ್ಲಿ ಉಪನ್ಯಾಸಕರು ಅಕ್ಷರ ಜ್ಞಾನ ಎಂಬ ಬೆಳಕನ್ನು ಹಚ್ಚಬೇಕು. ಸದಾ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳು ಕೂಡ ಗುರುಗಳ ಬಗ್ಗೆ, ಪ್ರೀತಿ, ಗೌರವ, ಅಭಿಮಾನ ಇಟ್ಟುಕೊಂಡು ಅವರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.ಜೀವನದಲ್ಲಿ ಎದುರಾಗುವ ಕಷ್ಟುಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಬದುಕಿಗೊಂದು ನಿಜವಾದ ಅರ್ಥ ಬರುತ್ತದೆ ಎಂದರಲ್ಲದೇ, ಸಂಘ, ಸಂಸ್ಥೆಗಳಿಗೆ ಸರ್ಕಾರ ನೀಡಿದ ಅನುದಾನವನ್ನು ಉತ್ತಮ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದರು.ಡಾ. ಆರ್‌.ಎಂ.ಕುಬೇರಪ್ಪ ಮಾತನಾಡಿ, ಭವಿಷ್ಯದ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಉಪನ್ಯಾಸಕರು ತಮ್ಮ ಜವಾಬ್ದಾರಿ ಅರಿತು ನಡೆಯಬೇಕು. ವಿದ್ಯಾರ್ಥಿಗಳ ಮನ ಓಲೈಸಿ ಫಲಿತಾಂಶ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.ಎಸ್‌ಜೆಎಂ ಕಾಲೇಜಿನ ಪ್ರಾಚಾರ್ಯ ಹಾಗೂ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಾಸ್ತಾವಿಕ ಮಾತನಾಡಿ, ಸಂಸದರ ನಿಧಿಯಿಂದ ₨ 5 ಲಕ್ಷ, ಶಾಸಕರ ನಿಧಿಯಿಂದ ₨ 5 ಲಕ್ಷ, ಎಂಎಲ್‌ಸಿ ನಿಧಿಯಿಂದ ₨ 2 ಲಕ್ಷ, ಪ್ರಾಚಾರ್ಯರ ಸಂಘದಿಂದ ₨ 10 ಲಕ್ಷ ಹಾಗೂ ಬೋಧಕರ ಸಂಘದಿಂದ ₨ 5 ಲಕ್ಷ  ವೆಚ್ಚದಲ್ಲಿ ನೌಕರರ ಭವನ ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕ ರುದ್ರಪ್ಪ ಲಾಮಾಣಿ, ಮಾಜಿ ಶಾಸಕ ನೆಹರೂ ಓಲೇಕಾರ, ನಗರಸಭೆ ಸದಸ್ಯ ಐ.ಯು.ಪಠಾಣ ಸೇರಿದಂತೆ ಅನೇಕ ಗಣ್ಯರನ್ನು ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ವಿರುಪಾಕ್ಷಪ್ಪ ಬಳ್ಳಾರಿ, ನಗರಸಭೆ ಸದಸ್ಯ ಸಚಿನ್‌ ಡಂಬಳ, ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ರವಿಂದ್ರ ರಿತ್ತಿ, ನಿವೃತ್ತ ಜಂಟಿ ನಿರ್ದೇಶಕ ಎ.ಎಚ್‌.ಮಟ್ಟೂರ, ಧಾರವಾಡ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣೇಶ ಪೂಜಾರ, ಪ್ರಭಾರ ಉಪನಿರ್ದೇಶಕ ಎಚ್‌.ಎಸ್‌.ಚಿನ್ನಿಕಟ್ಟಿ, ನೌಕರರ ಸಂಘದ ಕಾರ್ಯಾಧ್ಯಕ್ಷ ಲಿಂಗಯ್ಯಾ ಹಿರೇಮಠ ಪಾಲ್ಗೊಂಡಿದ್ದರು.ಅಮಿತ್‌ ಪ್ರಾರ್ಥಿಸಿದರು. ಯಲ್ಲಣ್ಣನವರ ಸ್ವಾಗತಿಸಿದರು. ವೈ.ಬಿ.ಆಲದಕಟ್ಟಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.