‘ಸ್ವತಂತ್ರ, ಮುಕ್ತ ವಿಮರ್ಶೆ’ ನಿರ್ಧಾರ ಪ್ರಕಟಿಸಿದ ಟೆನಿಸ್

ಮೆಲ್ಬರ್ನ್ (ಎಎಫ್ಪಿ): ಮ್ಯಾಚ್ ಫಿಕ್ಸಿಂಗ್ ಆರೋಪಗಳ ಬೆನ್ನಲ್ಲೆ ಟೆನಿಸ್ ಆಡಳಿತ ಮಂಡಳಿಗಳು ಕಠಿಣ ಕ್ರಮಕ್ಕೆ ಮುಂದಾಗಿವೆ.
ಟೆನಿಸ್ ಭ್ರಷ್ಟಾಚಾರತಡೆ ಘಟಕ ‘ಇಂಟೆಗ್ರಿಟಿ ಯೂನಿಟ್’ ಸೇರಿದಂತೆ ಕ್ರೀಡಾ ಭ್ರಷ್ಟಾಚಾರ ವಿರೋಧಿ ಕಾರ್ಯಕ್ರಮಗಳ ‘ಸ್ವತಂತ್ರ ವಿಮರ್ಶೆ’ ನಡೆಸುವುದಾಗಿ ಟೆನಿಸ್ ಆಡಳಿತ ಮಂಡಳಿಗಳು ಬುಧವಾರ ಪ್ರಕಟಿಸಿವೆ.
ಕಳೆದ ವಾರ ಬಿಬಿಸಿ ಹಾಗೂ ಬಜ್ಫೀಡ್ ಮಾಧ್ಯಮ ವರದಿಗಳು ಮತ್ತು ಆಸ್ಟ್ರೇಲಿಯಾ ಟೂರ್ನಿಯ ಮಿಶ್ರಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಫಿಕ್ಸಿಂಗ್ ಆರೋಪ ಕೇಳಿಬಂದ ಬೆನ್ನಲ್ಲೆ ಈ ನಿರ್ಧಾರ ಹೊರಬಿದ್ದಿದೆ.
ಈ ಕುರಿತು ಎಟಿಪಿ, ಡಬ್ಲ್ಯುಟಿಎ, ಐಟಿಎಫ್ ಹಾಗೂ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳ ಮುಖ್ಯಸ್ಥರು ಆಸ್ಟ್ರೇಲಿಯಾದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. ಅಲ್ಲದೇ, ಮ್ಯಾಚ್ ಫಿಕ್ಸಿಂಗ್ ಅನ್ನು ಎಲ್ಲಾ ರಾಷ್ಟ್ರಗಳು ಕ್ರಿಮಿನಲ್ ಅಪರಾಧವಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.
‘ಏಕೈಕ ಉದ್ದೇಶಕ್ಕಾಗಿ ಎಲ್ಲಾ ಏಳು ಟೆನಿಸ್ ಆಡಳಿತ ಮಂಡಳಿಗಳು ತ್ವರಿತವಾಗಿ ಒಗ್ಗಟ್ಟು ಪ್ರದರ್ಶಿಸಿರುವುದು ಅಭೂತಪೂರ್ವ ನಡೆ. ಟೆನಿಸ್ ಕ್ರೀಡೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮರಳಿ ಸ್ಥಾಪಿಸುವುದು ನಮ್ಮ ಏಕೈಕ ಗುರಿ’ ಎಂದು ಎಟಿಪಿ ಮುಖಸ್ಥರೂ ಆಗಿರುವ ಕ್ರಿಸ್ ಕೆರ್ಮೊಡ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ನುಡಿದರು.
ಈ ವಿಚಾರಣೆಯನ್ನು ‘ಸಂಪೂರ್ಣ ಮುಕ್ತ ವಿಮರ್ಶೆ‘ ಎಂದು ಕೆರ್ಮೊಡ್ ಅವರು ಬಣ್ಣಿಸಿದರು. ಈ ಆಯೋಗವನ್ನು ಬ್ರಿಟಿಷ್ ವಕೀಲ ಆ್ಯಡಮ್ ಲೆವಿಸ್ ಅವರು ಮುನ್ನಡೆಸಲಿದ್ದಾರೆ.
‘ನಮ್ಮ ಕ್ರೀಡೆಯಲ್ಲಿ ಕೇಳಿ ಬಂದ ಹಾಗೂ ವರದಿಯಾದ ಗುರುತರ ಆರೋಪಗಳ ಕುರಿತು ಸಂಪೂರ್ಣ ತನಿಖೆ ನಡೆಯಬೇಕು ಎಂದು ನಾವೆಲ್ಲರೂ ಬಯಸಿದ್ದೇವೆ. ಟೆನಿಸ್ ಮಂಡಳಿಯವರು ಬಿಟ್ಟು ಬೇರೆಯವರು ತನಿಖೆ ನಡೆಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದ್ದರಿಂದ ಸಂಪೂರ್ಣವಾಗಿ ಸ್ವತಂತ್ರ ವಿಮರ್ಶಾ ಆಯೋಗವನ್ನು ರಚಿಸುವ ನಿರ್ಧಾರ ಕೈಗೊಂಡೆವು’ ಎಂದು ಕೆರ್ಮೊಡ್ ಹೇಳಿದರು.
ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್(ಐಟಿಎಫ್) ಮುಖಸ್ಥ ಡೇವಿಡ್ ಹಗ್ಗರ್ಟಿ ಹಾಗೂ ಆಲ್ ಇಂಗ್ಲೆಂಡ್ ಕ್ಲಬ್ (ವಿಂಬಲ್ಡನ್ ಆಡಳಿತ ಮಂಡಳಿ) ಮುಖ್ಯಸ್ಥ ಫಿಲಿಪ್ ಬ್ರೂಕ್ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಬ್ರೂಕ್ ಅವರು ಟೆನಿಸ್ ಇಂಟೆಗ್ರಿಟಿ ಯೂನಿಟ್ನ ಮುಖ್ಯಸ್ಥರೂ ಹೌದು. ಲಂಡನ್ ಮೂಲದ ಲೆವಿಸ್ ಅವರು ಕ್ರೀಡಾ ಕಾನೂನುಗಳ ತಜ್ಞರು.
ಹೆಚ್ಚಿನ ಪಾರದರ್ಶಕತೆ ಸೇರಿದಂತೆ ಟೆನಿಸ್ ಇಂಟೆಗ್ರಿಟಿ ಯೂನಿಟ್ ವ್ಯವಸ್ಥೆಯನ್ನು ವಿಮರ್ಶೆಗೊಳಪಡಿಸುವುದು ಆಯೋಗದ ಪ್ರಮುಖ ಆದ್ಯತೆಯಾಗಿರಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.