ಸೋಮವಾರ, ಜೂನ್ 21, 2021
27 °C

‘ಹೊಸ ರಂಗಕ್ಕೆ ಸದ್ಯಕ್ಕೆ ನಾಮಕರಣ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸದ್ಯಕ್ಕೆ ತೃತೀಯ ರಂಗ ಇಲ್ಲ. ಅದೇನಿದ್ದರೂ ಚುನಾವಣೆ ನಂತರ ನಿರ್ಧಾರ­ವಾಗಲಿದೆ ಎಂದು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.‘ಇತ್ತೀಚೆಗೆ ದೆಹಲಿಯಲ್ಲಿ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಮಧ್ಯೆ ಮಾತುಕತೆ ನಡೆದಿತ್ತು. ಈ ಮೈತ್ರಿಕೂಟಕ್ಕೆ ಹೆಸರಿ­ಡುವ ಬಗ್ಗೆ ಸದ್ಯಕ್ಕೆ ಯೋಚಿಸು­ವುದು ಬೇಡ. ಲೋಕಸಭಾ ಚುನಾವಣೆ ನಂತರ ನಿರ್ಧರಿಸುವಂತೆ ಸಲಹೆ ನೀಡಿದ್ದೇನೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.‘ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಯಾರ ಎದುರಿಗೆ ಯಾರನ್ನು ಬೇಕಾ­ದರೂ ಕಣಕ್ಕಿಳಿಸಲಿ. ಆದರೆ ಫಲಿತಾಂಶದ ನಂತರ ಈ ಬಗ್ಗೆ ಮಾತುಕತೆ ನಡೆಸಿ ನಿರ್ಧಾ­ರಕ್ಕೆ ಬರಬಹುದು’ ಎಂದು ತಿಳಿಸಿದರು. ಪ್ರಸ್ತುತ ರಾಜಕೀಯದಲ್ಲಿ ಹಲವಾರು ಬದ­ಲಾವಣೆಗಳು ಆಗುತ್ತಿವೆ. ಎಲ್ಲ ರಾಜ್ಯ­ಗಳಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ವಿರುದ್ಧ­ವಾದ ರಾಜಕೀಯ ಶಕ್ತಿ ಬೆಳೆದು ನಿಂತಿದೆ. ಎಲ್ಲವನ್ನೂ ಗಮನದಲ್ಲಿ­ಟ್ಟುಕೊಂಡು ಈ ಚುನಾವಣೆಯಲ್ಲಿ 28 ಕ್ಷೇತ್ರ­ಗಳಲ್ಲೂ  ಪಕ್ಷ ಹೋರಾಟ ನಡೆಸ­ಲಿದೆ ಎಂದರು.ಚುನಾವಣಾ ಸಮೀಕ್ಷೆಗಳು ಆಯಾ ದಿನ­ಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಮರು ದಿನಕ್ಕೆ ಅದು ಅಪ್ರಸ್ತುತ­ವಾಗುತ್ತದೆ. ಮತದಾರರ ಮನಸ್ಸಿನ ಒಳ­ಹೊಕ್ಕು ಪರೀಕ್ಷೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಈ ವಿಷಯದಲ್ಲಿ ಹಣವೂ ಮತ­ದಾರರ ನಿರ್ಧಾರವನ್ನು ಬದಲಿ­ಸದು ಎಂದು ಹೇಳಿದರು.ಮೋದಿ ವಿರುದ್ಧ ವಾಗ್ದಾಳಿ:

‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾಜಪೇಯಿ ಹಾಗೂ ಎಲ್‌.ಕೆ.­ಅಡ್ವಾಣಿ ಅವರಿಗಿಂತ ದೊಡ್ಡ­ವರಲ್ಲ. ಅವರು ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಕೇವಲ ಶಬ್ದ ಪ್ರಯೋಗ­ದಿಂದ ಗುರಿ ಮುಟ್ಟಲು ಸಾಧ್ಯವಿಲ್ಲ. ಅವರ ವ್ಯಂಗ್ಯವಾದ ಟೀಕೆ­ಗಳು ಅವರ ಬಳಿಯೇ ಇರಲಿ ಎಂದು ವಾಗ್ದಾಳಿ ನಡೆಸಿದರು.ಷರೀಫ್‌ಗೆ ಸ್ವಾಗತ: ‘ಪಕ್ಷ ಹಾಗೂ ನನ್ನ ಬದ್ಧತೆ ಬಗ್ಗೆ ಇರುವ ವಿಶ್ವಾಸದಿಂದ ಸಿ.ಕೆ. ಜಾಫರ್‌ ಷರೀಫ್‌ ನಮ್ಮ ಪಕ್ಷಕ್ಕೆ ಸೇರುವುದಾದರೆ ನಾನು ಸ್ವಾಗತಿಸುತ್ತೇನೆ. ಪಕ್ಷಕ್ಕೆ ಸೇರಲು ಅವರಿಗೆ ಆಹ್ವಾನ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷದ ಮುಖಂಡರು ಅವರಿಗೆ ಆಹ್ವಾನ ನೀಡಿರಬಹುದು. ಆ ಮಾತನ್ನು ತಳ್ಳಿ ಹಾಕುವುದಿಲ್ಲ. ಈ ಬಗ್ಗೆ ನಾನು ಅವರೊಂದಿಗೆ ನೇರವಾಗಿ ಮಾತ­ನಾಡಿಲ್ಲ’ ಎಂದು ಸ್ಪಷ್ಟಪಡಿಸಿದರು. ಜಾಫರ್‌ ಷರೀಫ್‌ ಕಾಂಗ್ರೆಸ್‌ನ ಪ್ರಾಮಾಣಿಕ ಕಾರ್ಯಕರ್ತ. ಅವರ ನಿಷ್ಠೆಗೆ ಕಾಂಗ್ರೆಸ್‌ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನ ವರ್ತನೆಯಿಂದ ಅವರ ಮನಸ್ಸಿಗೆ ನೋವಾಗಿದೆ. ಅದಕ್ಕಾಗಿ ಅವರು ತೀರ್ಥಯಾತ್ರೆಗೆ ಹೋಗುವು­ದಾಗಿ ತಿಳಿಸಿದ್ದಾರೆ ಎಂದರು.     ಜೆಡಿಎಸ್‌ಗೆ ಧನಂಜಯ ಕುಮಾರ್‌

‘ಜೆಡಿಎಸ್‌ ಸೇರುವ ವಿಷಯಕ್ಕೆ ಸಂಬಂಧಿ­ಸಿದಂತೆ ಕೆಜೆಪಿ ಮುಖಂಡ ಧನಂಜಯ ಕುಮಾರ್‌ ಅವರು ಮೂರು ಬಾರಿ ನನ್ನನ್ನು ಭೇಟಿ ಮಾಡಿದ್ದಾರೆ. ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಸೇರ­ಬಹುದು ಎಂದು ಹೇಳಿದ್ದೇನೆ. ಅದಕ್ಕೆ ಅವರೂ ಒಪ್ಪಿಗೆ ನೀಡಿದ್ದಾರೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.