ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷದಲ್ಲಿ 30 ಉಪಗ್ರಹ ಉಡಾವಣೆ: ಇಸ್ರೊ

Last Updated 29 ಡಿಸೆಂಬರ್ 2010, 9:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಹತ್ತು ವರ್ಷಗಳಲ್ಲಿ ಕನಿಷ್ಠ 30 ಉಪಗ್ರಹಗಳನ್ನು ಹಾರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯೋಜನೆ ಹಾಕಿಕೊಂಡಿದೆ’ ಎಂದು ಸಂಸ್ಥೆಯ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರ ಸಂವೇದಿ ಕೇಂದ್ರದ ನಿರ್ದೇಶಕ ಡಾ.ವಿ.ಜಯರಾಮನ್ ಹೇಳಿದರು.

ನಗರದ ಯವನಿಕಾ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಕರ್ನಾಟಕ ಭೂದೈಶಿಕ ದತ್ತಾಂಶ ಸಮಾವೇಶ’ದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.‘ಈ ಕಾರ್ಯಕ್ರಮದ ಅಂಗವಾಗಿ ಜನವರಿ ಅಂತ್ಯದ ವೇಳೆಗೆ ಅಥವಾ ಫೆಬ್ರುವರಿಯಲ್ಲಿ ರಿಸೋರ್ಸ್‌ಸ್ಯಾಟ್-2 ಉಪಗ್ರಹವನ್ನು ಉಡಾಯಿಸಲಾಗುವುದು’ ಎಂದು ಅವರು ತಿಳಿಸಿದರು.

‘ಇಸ್ರೊ ಸಂಸ್ಥೆಯು ಹೈದರಾಬಾದ್‌ನಲ್ಲಿ ಇಂಟಿಗ್ರೇಟೆಡ್ ಮಲ್ಟಿ-ಮಿಷನ್ ಘಟಕವನ್ನು ನಿರ್ಮಿಸುತ್ತಿದ್ದು, ಇದಕ್ಕಾಗಿ ರೂ 35ರಿಂದ 40 ಕೋಟಿ ಹೂಡಿಕೆ ಮಾಡಲಾಗುತ್ತಿದೆ.ಮುಂದಿನ ವರ್ಷದ ಜೂನ್‌ನಿಂದ ಈ ಘಟಕವು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ’ ಎಂದು ಅವರು ವಿವರಣೆ ನೀಡಿದರು.ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ತಂತ್ರಜ್ಞಾನವು ಅಗಾಧ ರೀತಿಯಲ್ಲಿ ಬೆಳೆಯುತ್ತಿದೆ. ನಕ್ಷೆ ಅಥವಾ ಭೂಪಟಗಳ ರಚನೆಯ ಪ್ರಕ್ರಿಯೆಯಲ್ಲೂ ಸಾಕಷ್ಟು  ಬೆಳವಣಿಗೆಯಾಗಿದೆ. ಗೂಗಲ್ ವೆಬ್‌ಸೈಟ್ ಆರಂಭಿಸಿದ ಗೂಗಲ್ ಅರ್ಥ್, ಮೊಬೈಲ್‌ನಲ್ಲಿ ಕಾಣಲಾಗುವ ಜಿಪಿಎಸ್ ಮ್ಯಾಪಿಂಗ್ ಇದಕ್ಕೆ ಉದಾಹರಣೆ. ಇಂತಹವುಗಳನ್ನು ಸರ್ಕಾರಿ ಸಂಸ್ಥೆಗಳು ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಸೇತುವೆ, ಬೋರ್‌ವೆಲ್‌ಗಳ ಕೊರತೆ, ಭೂಗರ್ಭಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆಧುನಿಕ ನಕ್ಷೆಗಳಿಗೆ ಮಹತ್ವ ಇರುತ್ತದೆ.ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇದು ಸಹಕಾರಿಯಾಗುತ್ತದೆ’ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯದ ದೂರಸಂವೇದಿ ಅನ್ವಯಿಕ ಕೇಂದ್ರದ ಅಧ್ಯಕ್ಷ ಅಶೋಕ್ ಕುಮಾರ್ ಸಿ.ಮನೋಳಿ ಮಾತನಾಡಿ, ‘ತಂತ್ರಜ್ಞಾನ- ಸರ್ಕಾರ- ಅಧಿಕಾರಿಗಳ ನಡುವೆ ಅಂತರವಿದೆ. ಆಧುನಿಕ ತಂತ್ರಜ್ಞಾನಗಳನ್ನು ಶೀಘ್ರವಾಗಿ ಬಳಕೆ ಮಾಡುವಂತೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ರವಿ ಕುಮಾರ್, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕ ಡಾ.ಡಿ.ಕೆ. ಪ್ರಭುರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT