ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ಮಸೂದೆಗಳಿಗೆ ಅಂಗೀಕಾರ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸದಸ್ಯರ ಧರಣಿ, ಘೋಷಣೆಗಳ ನಡುವೆಯೇ ಯಾವುದೇ ಚರ್ಚೆ ಇಲ್ಲದೆ 11 ಮಸೂದೆಗಳಿಗೆ ಸದನವು ಒಪ್ಪಿಗೆ ನೀಡಿದ ಪ್ರಸಂಗ ಬುಧವಾರ ವಿಧಾನ ಸಭೆಯಲ್ಲಿ ನಡೆಯಿತು.

ಕಾರ್ಖಾನೆಗಳಲ್ಲಿ ಕೆಲಸದ ಅವಧಿ ಹೆಚ್ಚಳ: ವಾರದಲ್ಲಿ ಗರಿಷ್ಠ 48 ಗಂಟೆಗಳ ಕಾಲಮಿತಿಗೆ ಒಳಪಟ್ಟು ದಿನಕ್ಕೆ 9 ಗಂಟೆ ಕೆಲಸದ ಸಮಯವನ್ನು 10 ಗಂಟೆಗೆ ವಿಸ್ತರಿಸಲು ಅವಕಾಶ ಕಲ್ಪಿಸುವ ಕಾರ್ಖಾನೆಗಳ ತಿದ್ದುಪಡಿ ಮಸೂದೆ- 2011ಕ್ಕೆ ಸದನವು ಒಪ್ಪಿಗೆ ನೀಡಿತು.

ಕಾರ್ಖಾನೆಗಳ ಅಧಿನಿಯಮ 1948ರ ಸೆಕ್ಷನ್ 54, 56 ಮತ್ತು 65(3)ಕ್ಕೆ ತಿದ್ದುಪಡಿ ತರಲಾಗಿದ್ದು, ಸೆಕ್ಷನ್ 56ರ ಪ್ರಕಾರ ಈಗಿರುವ ದಿನಕ್ಕೆ ಹತ್ತೂವರೆ ಗಂಟೆ ಕೆಲಸದ ಸಮಯವನ್ನು ಹನ್ನೊಂದುವರೆ ಗಂಟೆಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ.

ಸೆಕ್ಷನ್ 65(3) ಪ್ರಕಾರ ಅವಧಿ ಮೀರಿದ ಕೆಲಸವೂ ಸೇರಿದಂತೆ ಒಂದು ವಾರದ ಒಟ್ಟು ಕೆಲಸದ ಅವಧಿಯನ್ನು 60ರಿಂದ 70 ಗಂಟೆಗೆ ವಿಸ್ತರಿಸಲಾಗಿದೆ. ಅಲ್ಲದೆ ಮೂರು ತಿಂಗಳಲ್ಲಿ ಅವಧಿ ಮೀರಿದ ಕೆಲಸವನ್ನು 75 ಗಂಟೆಯಿಂದ 120 ಗಂಟೆಗೆ ವಿಸ್ತರಿಸಲು ಹಾಗೂ ಸರ್ಕಾರದ ಅನುಮತಿಯೊಂದಿಗೆ 150 ಗಂಟೆವರೆಗೆ ವಿಸ್ತರಿಸಲು ನಿರ್ದೇಶಕರಿಗೆ ಅಧಿಕಾರ ನೀಡುವುದಕ್ಕೂ ಈ ತಿದ್ದುಪಡಿಯು ಅವಕಾಶ ಮಾಡಿಕೊಟ್ಟಿದೆ.

ಸೇವಾ ವಿಲೀನ: ಎರಡು ವರ್ಷಗಳ ಉದ್ಯೋಗ ಆಧಾರಿತ ಕೋರ್ಸ್‌ಗಳನ್ನು ಮುಚ್ಚಿರುವುದರಿಂದ ಅಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಸರ್ಕಾರದ ಯಾವುದೇ ಇಲಾಖೆಯಲ್ಲಿ ವಿಲೀನಗೊಳಿಸಲು ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ರೂಪಿಸಿರುವ ಕರ್ನಾಟಕ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸ್‌ಗಳ ನೌಕರರನ್ನು ವಿಲೀನಗೊಳಿಸುವ ಮಸೂದೆಗೆ ಸದನವು ಒಪ್ಪಿಗೆ ನೀಡಿತು.

ಐದು ವರ್ಷಗಳಿಗಿಂತ ಹೆಚ್ಚಾಗಿ ಸೇವೆ ಸಲ್ಲಿಸಿರುವ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಅರೆಕಾಲಿಕ ಸಿಬ್ಬಂದಿಗೆ ಇದರಿಂದ ಅನುಕೂಲವಾಗಲಿದೆ. ಈ ನೌಕರರ ಸೇವಾ ವಿಲೀನದಿಂದ ವಾರ್ಷಿಕ 47 ಕೋಟಿ ರೂಪಾಯಿ ವೆಚ್ಚವಾಗಲಿದೆ.

ವೃತ್ತಿಶಿಕ್ಷಣ: ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸಿಕೊಡುವ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಮಸೂದೆ 2011ಕ್ಕೆ ಸದನವು ಒಪ್ಪಿಗೆ ನೀಡಿತು.

2011-12ನೇ ಶೈಕ್ಷಣಿಕ ಸಾಲಿನಲ್ಲಿ ಪರಸ್ಪರ ಮಾತುಕತೆ ಮೂಲಕ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡಲು ಸರ್ಕಾರ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಮಸೂದೆಯನ್ನು ತರಲಾಗಿದ್ದು, ಇದರಿಂದಾಗಿ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಮಸೂದೆ 2006ನ್ನು ತಡೆಹಿಡಿಯಲಾಗಿದೆ.

ಮಾರುಕಟ್ಟೆ ಶುಲ್ಕದಿಂದ ವಿನಾಯಿತಿ: ಹೊಸ ಕೈಗಾರಿಕಾ ನೀತಿಗೆ ಅನುಗುಣವಾಗಿ ನೂತನ ಆಹಾರ ಸಂಸ್ಕರಣಾ ಉದ್ದಿಮೆಗಳು ಮತ್ತು ಹಾಲಿ ಇರುವ ಕೈಗಾರಿಕೆಗಳಿಗೆ ಮಾರುಕಟ್ಟೆ ಶುಲ್ಕದಿಂದ ವಿನಾಯಿತಿ ನೀಡುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2011ಕ್ಕೆ ಸದನವು ಒಪ್ಪಿಗೆ ನೀಡಿತು. 2011ರಿಂದ ಐದು ವರ್ಷಗಳ ಕಾಲ ಶುಲ್ಕ ರಿಯಾಯಿತಿ ಮುಂದುವರಿಯಲಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 8ರಿಂದ 10 ಕೋಟಿ ರೂಪಾಯಿ ನಷ್ಟವಾಗಲಿದೆ.

ಸ್ವತ್ತು ತೆರಿಗೆ ಮಂಡಳಿ ರಚನೆ: ಆಸ್ತಿ ತೆರಿಗೆ ನಿರ್ಧರಿಸಲು ಮತ್ತು ಸಂಗ್ರಹಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ನೆರವು ನೀಡುವುದಕ್ಕಾಗಿ ಸ್ವತ್ತು ತೆರಿಗೆ ಮಂಡಳಿ ರಚನೆಗೆ ಅವಕಾಶ ಮಾಡಿಕೊಡುವ ಕರ್ನಾಟಕ ಪೌರನಿಗಮಗಳ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಮಸೂದೆಗೆ ಒಪ್ಪಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT