ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

116 ಕಿ.ಮೀ. ಹೊರವರ್ತುಲ ರಸ್ತೆಗೆ ರಾಜ್ಯ ಸಚಿವ ಸಂಪುಟ

ತುಮಕೂರು ರಸ್ತೆಯಿಂದ ಬಳ್ಳಾರಿ ಮಾರ್ಗ
Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ತುಮಕೂರು ರಸ್ತೆಯಿಂದ ಬಳ್ಳಾರಿ ಮಾರ್ಗದ ಮೂಲಕ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 116 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಸೋಮವಾರ ಬೆಳಗಾವಿಯಲ್ಲಿ ನಡೆದ ಸಂಪುಟ ಸಭೆ ಅನುಮೋದನೆ ನೀಡಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ.

ಎರಡು ಹಂತಗಳಲ್ಲಿ ಒಟ್ಟು 116 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 2007ರಲ್ಲಿಯೇ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತ್ತು. ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳುವ 65 ಕಿ.ಮೀ. ರಸ್ತೆ ನಿರ್ಮಾಣಕ್ಕೆ 1,028 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಬೆಂಗಳೂರು ಮೆಟ್ರೊ ಯೋಜನೆಯ ನಂತರ, ಕೈಗೆತ್ತಿಕೊಳ್ಳುತ್ತಿರುವ ಬೃಹತ್ ಯೋಜನೆ ಇದಾಗಿದೆ.

ನಗರದಲ್ಲಿ ಹೊರ ವರ್ತುಲ ರಸ್ತೆಗಳಿದ್ದರೂ, ಅವುಗಳು ಅಂತರರಾಷ್ಟ್ರೀಯ ದರ್ಜೆಗೆ ಅನುಗುಣವಾಗಿಲ್ಲ. ವಿವಿಧ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊರ ವರ್ತುಲ ರಸ್ತೆಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಯೋಜನೆಯ ಉದ್ದೇಶ ಎಂದು ಸಚಿವ ಸಂಪುಟದ ಸಭೆಯ ಬಳಿಕ ಹಿರಿಯ ಸಚಿವರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ನಗರವು ಬೆಳೆಯುತ್ತಿರುವ ವೇಗವನ್ನು ಗಮನಿಸಿ, 60ರಿಂದ 75 ಮೀಟರ್ ಅಗಲದ ಹೊರ ವರ್ತುಲ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಈ ರಸ್ತೆಗಾಗಿ 100 ಮೀಟರ್ ಅಗಲದ ಕಾರಿಡಾರ್ ಅಭಿವೃದ್ಧಿಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿಪಡಿಸಲು ಭೂಮಿ ಕೊಟ್ಟವರಿಗೆ, ಪರಿಹಾರ ನೀಡಲು ಅನುಸರಿಸಲಾದ ಮಾದರಿಯನ್ನೇ ಇಲ್ಲಿಯೂ ಅನುಸರಿಸಲಾಗುವುದು. ಈ ಯೋಜನೆಗೆ ಭೂಮಿ ನೀಡುವವರಿಗೆ, ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇಕಡ 40ರಷ್ಟನ್ನು ನೀಡಲು ಸಂಪುಟ ಸಭೆ ತೀರ್ಮಾನಿಸಿದೆ. ಪಕ್ಕದಲ್ಲೇ ಇರುವ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಸಚಿವರೊಬ್ಬರು ತಿಳಿಸಿದರು.

ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ಅನುಷ್ಠಾನದಲ್ಲಿ ಎದುರಾದ ಸಮಸ್ಯೆಗಳು ಈ ಯೋಜನೆಯ ಜಾರಿಯಲ್ಲಿ ಉಂಟಾಗದಂತೆ ನಿಗಾವಹಿಸಲು ಬಿಡಿಎಗೆ ಸೂಚನೆ ನೀಡಲಾಗಿದೆ.
ಹಣಕಾಸು ಮತ್ತು ಯೋಜನೆಯ ಜಾರಿಗೆ ಖಾಸಗಿ ವಲಯದಿಂದಲೂ ಸಂಪನ್ಮೂಲ ಕ್ರೋಡೀಕರಿಸಬಹುದು ಅಥವಾ ಸಂಪನ್ಮೂಲ ಕೋಡೀಕರಿಸುವ ಬಗ್ಗೆ ಜಪಾನ್ ಇಂಟರ್‌ನ್ಯಾಶನಲ್ ಕೋಆಪರೇಷನ್ ಸಂಸ್ಥೆಯಿಂದ ಸಲಹೆ ಪಡೆಯಬಹುದು ಎಂದು ಬಿಡಿಎಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT