ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಗಂಟೆ... ಹೀಗೂ ಉಂಟೆ?

Last Updated 24 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಸಂತೆಯ ಹೊತ್ತಿಗೆ ಮೊಳ ನೇಯೋದು’- ಇದು ಗಾದೆ. ಹನ್ನೆರಡು ಗಂಟೆಗಳಲ್ಲೇ ಸಿನಿಮಾ ತೆಗೆಯೋದು- ಇದು ನಿರ್ದೇಶಕರ ಗುರಿ.
ಇದು ದಿಢೀರನೆ ಮೊಳ ನೇಯ್ದಂತಲ್ಲ ಎಂಬುದು ಅವರ ಸ್ಪಷ್ಟನೆ. ಬರೀ ಹನ್ನೆರಡು ಗಂಟೆಗಳಲ್ಲಿ ಚಿತ್ರೀಕರಣ ಮುಗಿಸಲು ಹೊರಟಿರುವ ನಿರ್ದೇಶಕರ ಹೆಸರು ಗುರುವೇಂದ್ರ ಶೆಟ್ಟಿ; ಬ್ರಾಕೆಟ್‌ನಲ್ಲಿ ಆಲಂದೂರು. ದಾಖಲೆಯ ಕನಸಿಟ್ಟುಕೊಂಡು ಅವರು ನಿರ್ದೇಶಿಸಲು ನಿರ್ಧರಿಸುವ ಚಿತ್ರದ ಹೆಸರು ‘ತೀರ್ಥರೂಪ’.

ಗುರುವೇಂದ್ರ ಪ್ರಕಾರ ಈಗ ಶೇ.60ರಷ್ಟು ಯುವಕರು ತಂದೆ-ತಾಯಿ ಮಾಡಿಟ್ಟ ಹಣವನ್ನೇ ತಿಂದು ಬದುಕುತ್ತಿದ್ದಾರೆ. ಅದು ಸರಿಯಲ್ಲ, ಸ್ವಾಭಿಮಾನದಿಂದಲೇ ಎಲ್ಲರೂ ಬದುಕಬೇಕು ಎಂಬ ಸಂದೇಶವನ್ನಿಟ್ಟು ಅವರು ‘ತೀರ್ಥರೂಪ’ ಚಿತ್ರದ ಕಥೆ ಹೊಸೆದಿದ್ದಾರೆ. ಚಿತ್ರಕಥೆ, ಸಂಭಾಷಣೆ ಕೂಡ ಅವರದ್ದೆ. ರಾಘವೇಂದ್ರ ಗುಂಡ್ಮಿ ಕೂಡ ಸಂಭಾಷಣೆಯಲ್ಲಿ ಅವರಿಗೆ ನೆರವು ನೀಡಿದ್ದಾರೆ.

ರಾಕ್‌ಲೈನ್ ಸ್ಟುಡಿಯೋದಲ್ಲಿ ಮಾರ್ಚ್ 9ರಂದು ಬೆಳ್ಳಂಬೆಳಿಗ್ಗೆಯೇ ಚಿತ್ರೀಕರಣ ಪ್ರಾರಂಭವಾಗಲಿದ್ದು, 12 ಗಂಟೆಗಳಲ್ಲಿ ಮುಗಿಯಲಿದೆ. ಏಳು ನಿರ್ದೇಶಕರು, ಏಳು ಕ್ಯಾಮೆರಾಮನ್‌ಗಳನ್ನು ಒಟ್ಟುಗೂಡಿಸುವ ಕೆಲಸ ನಡೆಯುತ್ತಿದೆ. ತುಷಾರ್ ರಂಗನಾಥ್, ಶಿಂಧೇಶ್ ಮೊದಲಾದವರು ಒಪ್ಪಿದ್ದೂ ಆಗಿದೆ. ಕೆ.ಎಂ.ವಿಷ್ಣುವರ್ಧನ್ ಪ್ರಧಾನ ಸಿನಿಮಟೋಗ್ರಫರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ರಾಕ್‌ಲೈನ್ ಸ್ಟುಡಿಯೋದಲ್ಲೇ ವಿವಿಧ ವಿಭಾಗಗಳನ್ನು ಮಾಡುವ ಯೋಜನೆಯನ್ನೂ ಸಿದ್ಧಪಡಿಸಿದ್ದಾರೆ. ಹಾಸ್ಯ, ಭಾವುಕ ದೃಶ್ಯಗಳು, ಎರಡು ಹಾಡು ಎಲ್ಲವೂ ಇರುವ ಈ ಚಿತ್ರ ‘ಮಾಸ್’ಗೆ ಒಪ್ಪುವಂಥದ್ದು ಅಂತಾರೆ ಗುರುವೇಂದ್ರ.

ಒಂದು ವರ್ಷ ಸ್ಕ್ರಿಪ್ಟ್ ಬರೆದಿರುವುದರಿಂದ ಇದು ಅವಸರದ ಅಡುಗೆಯೇನೂ ಆಗದೆಂಬುದು ಅವರ ವಿಶ್ವಾಸ. ನಿರ್ಮಾಪಕ ದಂಪತಿ ಜಿ.ವಿ.ನಟರಾಜ್ ಗಾಡಿಗೆರೆ-ಚಂದ್ರಿಕಾ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಬಜೆಟ್‌ನ ಸ್ಪಷ್ಟ ಪರಿಕಲ್ಪನೆ ಅವರಿಗೆ ಇಲ್ಲ. ಎ.ಟಿ.ರವೀಶ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಬಾಲನಟನಾಗಿ ಅನುಭವ ಪಡೆದಿರುವ ಮಾಸ್ಟರ್ ಸಂತೋಷ್ ಈಗ ಎಂಬಿಎ ಮುಗಿಸಿ ಮಿಸ್ಟರ್ ಸಂತೋಷ್ ಆಗಿದ್ದು, ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರೆ. ತಮಗೆ ಸಿಕ್ಕಿರುವ ಪಾತ್ರಕ್ಕೆ ನ್ಯಾಯ ಒದಗಿಸುವ ವಿಶ್ವಾಸ ಅವರದ್ದು. ಸಂತೋಷ್‌ಗೆ ಜೋಡಿಯಾಗಿ ರೂಪಿಕಾ ಇದ್ದಾರೆ. ‘ನಂದು ಪ್ರಾಕ್ಟಿಕಲ್ ಆಗಿ ಯೋಚಿಸುವ ಹುಡುಗಿಯ ಪಾತ್ರ. ಚಿತ್ರದಲ್ಲಿ ಒಳ್ಳೆ ನೀತಿ ಇದೆ. ಇದು ಉತ್ತಮ ಪ್ರಯೋಗ’ ಎಂಬುದು ಅವರ ಉಲಿ.
ಯುಗಳಗೀತೆ ಇಲ್ಲದ ಚಿತ್ರವಿದು ಎಂದವರು ಎ.ಟಿ.ರವೀಶ್. ಒಂದು ಹಾಡಿಗೆ ಯೋಗರಾಜ ಭಟ್ ಸಾಹಿತ್ಯ ಬರೆದಿದ್ದು, ಪೋಸ್ಟರ್‌ನಲ್ಲಿ ಭಟ್ಟರ ಹೆಸರು ರಾರಾಜಿಸುತ್ತಿತ್ತು.

ಇಷ್ಟು ಕಡಿಮೆ ಅವಧಿಯಲ್ಲಿ ಶೂಟಿಂಗ್ ಮುಗಿಸುವ ಯೋಚನೆ ಬಂದದ್ದಾದರೂ ಏಕೆ ಎಂಬ ಪ್ರಶ್ನೆಗೆ ಗುರವೇಂದ್ರ ಸ್ಪಷ್ಟ ಉತ್ತರ ನೀಡಲಿಲ್ಲ. ‘ಡಿಫರೆಂಟಾಗಿ ಏನೋ ಮಾಡಲು ಹೊರಟಿದ್ದೇವೆ’ ಎಂಬ ಅವರ ಡಿಫರೆಂಟಾಗಿಲ್ಲದ ಮಾತಿನೊಂದಿಗೆ ಗೋಷ್ಠಿ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT