ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ದೋಷಪೂರಿತ ಆಹಾರ ಸೇವನೆ
Last Updated 16 ಡಿಸೆಂಬರ್ 2013, 20:21 IST
ಅಕ್ಷರ ಗಾತ್ರ

ಆನೇಕಲ್‌: ದೋಷಪೂರಿತ ಆಹಾರ ಸೇವನೆಯಿಂದಾಗಿ ಎಲೆಕ್ಟ್ರಾನಿಕ್‌ ಸಿಟಿಯ ಎನ್‌ಟಿಟಿಎಫ್‌ ಕಾಲೇಜು ವಿದ್ಯಾರ್ಥಿ ನಿಲಯದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಸೋಮವಾರ ನಡೆದಿದೆ.

ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರೂ ಆಡಳಿತ ಮಂಡಳಿ ವಿದ್ಯಾರ್ಥಿಗಳ ಆರೋಗ್ಯದ ಕಡೆ ತಕ್ಷಣವೇ ಕಾಳಜಿ ತೋರಿಸಲಿಲ್ಲ ಹಾಗೂ ಚಿಕಿತ್ಸೆಗೆ ಸೂಕ್ತ ಏರ್ಪಾಡು ಮಾಡಲಿಲ್ಲ ಎಂದು ಆರೋಪಿಸಿ ಕುಪಿತ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದ ಟಿ.ವಿ, ಕಿಟಕಿ ಗಾಜು, ಕುರ್ಚಿ, ವಾಟರ್‌ ಫಿಲ್ಟರ್‌­ಗಳನ್ನು ಪುಡಿಪುಡಿ ಮಾಡಿದ್ದಾರೆ.

‘ಭಾನುವಾರ ರಾತ್ರಿ ವಿದ್ಯಾರ್ಥಿ ನಿಲಯದಲ್ಲಿ ಆಹಾರ ಸೇವಿಸಿದ ವಿದ್ಯಾರ್ಥಿಗಳು ಹೊಟ್ಟೆನೋವು, ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದರೂ ವಾರ್ಡನ್‌ ಗಮನ ಹರಿಸಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

‘ಅಸ್ವಸ್ಥರಾಗಿದ್ದವರು ಬೆಳಗಾಗುತ್ತಿ­ದ್ದಂತೆಯೇ ಸ್ನೇಹಿತರ ನೆರವಿನಿಂದ ಸಮೀಪದ ಆಸ್ಪತ್ರೆಗಳಿಗೆ ದಾಖಲಾದರು. ಇನ್ನೂ ಕೆಲವರು ವಿದ್ಯಾರ್ಥಿ ನಿಲಯ­ದಲ್ಲಿಯೇ ಅಸ್ವಸ್ಥಗೊಂಡು ಮಲಗಿದ್ದರು. ಯಾರೂ ಕೂಡಾ ಇವರ ಬಳಿ ಬಂದು ವಿಚಾರಿಸಲಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಎಲೆಕ್ಟ್ರಾನಿಕ್‌ ಸಿಟಿಯ ರಾಮಕೃಷ್ಣ ಹೆಲ್‌್ತಕೇರ್‌ನಲ್ಲಿ 35 ಹಾಗೂ ಹುಸ್ಕೂರು ಗೇಟ್‌ನ ವಿಮಲಾಲಯ­ದಲ್ಲಿ 125 ವಿದ್ಯಾರ್ಥಿಗಳು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕಳಪೆ ಆಹಾರ ಪೂರೈಕೆಯಿಂದ ಈ ಘಟನೆ ಸಂಭವಿಸಿದೆ. ಈ ಹಿಂದೆಯೇ ಕಳಪೆ ಆಹಾರದ ಬಗ್ಗೆ ಹಲವಾರು ಬಾರಿ ದೂರು ನೀಡ­ಲಾಗಿತ್ತು. ಆದರೂ ನಮ್ಮ ಮನವಿಗೆ ಆಡಳಿತ ಮಂಡಳಿ ಗಮನಹರಿಸಿರಲಿಲ್ಲ. ಅದರಿಂದಲೇ ಹೀಗಾಗಿದೆ’ ಎಂದು ವಿದ್ಯಾರ್ಥಿಗಳು ಕಿಡಿ ಕಾರಿದರು.

‘ನಿಲಯದಲ್ಲಿ ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿ­ದ್ದಾರೆ. ಆದರೂ ಇಲ್ಲಿ ಯಾವುದೇ ಅತ್ಯಾಧುನಿಕ ಆಹಾರ ತಯಾರಿಕೆಯ ಉಪಕರಣಗಳಿಲ್ಲ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT