ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಂದು ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

Last Updated 7 ಜೂನ್ 2011, 10:00 IST
ಅಕ್ಷರ ಗಾತ್ರ

ಕೋಲಾರ: ಜೂ. 15ರಂದು ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ನಡೆಯಲಿರುವ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ನಗರದ ವಿಜ್ಞಾನ ಲೇಖಕ ವಿಎಸ್‌ಎಸ್‌ಎಸ್ ಶಾಸ್ತ್ರಿ (ವಿ.ಶಿವಶಂಕರ ಶಾಸ್ತ್ರಿ) ಆಯ್ಕೆಯಾಗಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಸಮ್ಮೇಳನವನ್ನು ಶಾಸಕ ಆರ್.ವರ್ತೂರು ಪ್ರಕಾಶ್ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪ್ರಹ್ಲಾದರಾವ್ ಆಶಯ ನುಡಿಗಳನ್ನಾಡಲಿದ್ದಾರೆ.

ಶಾಸಕರಾದ ವಿ.ಆರ್.ಸುದರ್ಶನ್, ನಜೀರ್ ಅಹ್ಮದ್, ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ಡಾ.ಶಿವಯೋಗಿಸ್ವಾಮಿ, ತಹಶೀಲ್ದಾರ್ ಡಾ.ಬಿ.ಎಸ್.ದಯಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಬಿ.ಎಸ್.ವೆಂಕಟಾಚಲಪತಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.  ನಂತರ ಕೆಂಬೋಡಿ ಗ್ರಾಮಸ್ಥರ ತಂಡದಿಂದ ಕೋಲಾಟ ಕಾರ್ಯಕ್ರಮ ನಡೆಯಲಿದೆ.

ಗೋಷ್ಠಿ: ಮಧ್ಯಾಹ್ನ 12ಕ್ಕೆ ನಡೆಯುವ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಎಂ..ವಿ.ಸುಬ್ರಹ್ಮಣ್ಯಂ ವಹಿಸುತ್ತಾರೆ. ಪರಿಸರ ಪ್ರಜ್ಞೆ-ಸಾಹಿತ್ಯದ ಔಚಿತ್ಯ ಕುರಿತು ಪರಿಸರ ಲೇಖಕ ಎಚ್.ಎ.ಪುರುಷೋತ್ತಮರಾವ ವಿಷಯ ಮಂಡಿಸುತ್ತಾರೆ. `ಉದ್ಯೋಗ ಸೃಷ್ಟಿಯಲ್ಲಿ ಕೃಷಿ ವಲಯದ ಕೊಡುಗೆ~ ಕುರಿತು ಚಿಂತಾಮಣಿಯ ಕೃಷಿ ಮತ್ತು ರೇಷ್ಮೆ ಮಹಾವಿದ್ಯಾಲಯದ ಡಾ.ಹ.ಸೋಮಶೇಖರ್ ವಿಷಯ ಮಂಡಿಸುತ್ತಾರೆ. ನಂತರ ಕಲಾವಿದರಾದ ಸುಮ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ವಿದ್ಯಾರ್ಥಿ ಕವಿಗೋಷ್ಠಿ ಮತ್ತು ಪ್ರತಿಭಾ ಪ್ರೋತ್ಸಾಹ ಕಾರ್ಯಕ್ರಮದಲ್ಲಿ ಲೇಖಕ ಲಕ್ಷ್ಮಿಪತಿ ಕೋಲಾರ ಅಧ್ಯಕ್ಷತೆ ವಹಿಸುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಡಿ.ಗೋವಿಂದಯ್ಯ,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಭಟ್ ಅತಿಥಿಗಳಾಗಿರುತ್ತಾರೆ.

ಸನ್ಮಾನ: ಕನ್ನಡ ನಾಡು- ನುಡಿ ಸೇವಕರಿಗೆ ಸನ್ಮಾನ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಲಿದೆ. ಬಿಸಪ್ಪಗೌಡ, ಸುಲೇಮಾನ್‌ಖಾನ್, ಅ.ಕೃ. ಸೋಮಶೇಖರ್, ಡಾ.ರಮೇಶ್, ವರದರಾಜು, ಕಮಲಮ್ಮ ರಾಜು, ಬಿ.ಎನ್.ಶ್ರೀನಿವಾಸನ್, ಸುರಕ್ಷಿತ್‌ಗೌಡ, ಪುಷ್ಕರ ಹಾಗೂ ಪರಿಷತ್ತಿನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಕೋ.ನಾ.ಪರಮೇಶ್ವರನ್, ತೇ.ನಾ.ಗೋಪಾಲಕೃಷ್ಣ, ಬಿ.ಸುರೇಶ್, ಡಾ.ಕೆ.ನಾರಾಯಣಸ್ವಾಮಿ, ಶ್ರೀವಾಣಿ ಅವರನ್ನು ಸನ್ಮಾನಿಸಲಾಗುವುದು ಎಂದು ಘಟಕದ ಅಧ್ಯಕ್ಷೆ ಕೆ.ಆರ್.ಜಯಶ್ರೀ ತಿಳಿಸಿದ್ದಾರೆ.

ಸಮಾರೋಪ: ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ. ಸಮ್ಮೇಳನಾಧ್ಯಕ್ಷ ಶಾಸ್ತ್ರಿ ಪ್ರಧಾನ ಭಾಷಣ ಮಾಡುತ್ತಾರೆ.
 

 ಶಾಸ್ತ್ರಿ ಪರಿಚಯ
ಬಂಗಾರಪೇಟೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ವಿಶೇಷ ಸಹಾಯಕ (ಸ್ಪೆಷಲ್ ಅಸಿಸ್ಟೆಂಟ್), ಕೋಲಾರದ ಜಯನಗರದ ನಿವಾಸಿ, ಬಿಎಸ್‌ಸಿ ಪದವೀಧರರಾದ ಶಾಸ್ತ್ರಿಯವರದು ಬಹುಮುಖ ಪ್ರತಿಭೆ. ವಿಜ್ಞಾನ ಲೇಖಕ, ಓರಿಗಾಮಿ ತಜ್ಞ, ಗಣಿತ-ವಿಜ್ಞಾನ ಬೋಧಕ, ವ್ಯಂಗ್ಯಚಿತ್ರಕಾರ, ಸಂಗೀತ ಪ್ರೇಮಿ, ನಕ್ಷತ್ರ ವೀಕ್ಷಕ, ಚಾರಣ ಪ್ರಿಯ, ಶಿಲ್ಪಿ, ಗೊಂಬೆಯಾಟದಲ್ಲೂ ಆಸಕ್ತಿ, ಮೌನ ಸಾಧಕ. ಮೋಡಿ ಮಾಡುವ ಮಾತುಗಾರ. ಕನ್ನಡದ ಜೊತೆಗೆ ಇಂಗ್ಲಿಷ್, ತೆಲುಗು, ಉರ್ದು, ಸಂಸ್ಕೃತ ಬಲ್ಲ ಬಹುಭಾಷಾ ಪ್ರಯೋಗಶೀಲ.

ಪ್ರಧಾನವಾಗಿ ಗಣಿತ ಮತ್ತು ವಿಜ್ಞಾನದ ಹಲವು ಪ್ರಯೋಗಗಳಲ್ಲಿ ಅವರದು ಎತ್ತಿದ ಕೈ. ಓರಿಗಾಮಿ, (ಜಪಾನಿ ಕಾಗದ ಕಲೆ),  ಕಿರಿಗಾಮಿ (ಕಾಗದ ಕತ್ತರಿಸಿ ಚಿತ್ರ ಬಿಡಿಸುವ ಕಲೆ) ಪರಿಣಿತರಷ್ಟೆ ಅಲ್ಲದೆ, ಗಣಿತದ ಸುಲಭ ಮತ್ತು ಸರಳ ಕಲಿಕೆಯ ಬಗೆಗೆ ಅವರು ತರಬೇತಿ ಶಿಬಿರಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡುತ್ತಾರೆ. ಕೋಲಾರದ ಗಡಿ ದಾಟಿರುವ ಅವರ ಈ ಪ್ರತಿಭೆಯ ಲಾಭವನ್ನು ಸಾವಿರಾರು ಮಕ್ಕಳು ಪಡೆದಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ನವಕರ್ನಾಟಕ, ಸಪ್ನ, ಗ್ರಾಮಾಂತರ ಸಮುದಾಯ ಕೇಂದ್ರ, ಸುಭಾಷ್ ಪಬ್ಲಿಕೇಷನ್ ಸೇರಿದಂತೆ ಹಲವು ಪ್ರಕಾಶನ ಸಂಸ್ಥೆಗಳು ಶಾಸ್ತ್ರಿಯವರ ಕೃತಿಗಳನ್ನು ಪ್ರಕಟಿಸಿವೆ.
ಓರಿಗಾಮಿ ಮೂಲಕ ಗಣಿತ ಕಾರ್ಯಾಗಾರ ಕೈಪಿಡಿ, ಅಟಿಕೆಗಳ ಮೂಲಕ ವಿಜ್ಞಾನ ಬೋಧನೆ, ಗಣಿತ ಕಲಿಕೆಗೆ ಸರಳ ಚಟುವಟಿಕೆಗಳು, ಕಾಲದತ್ತ ವಾಲಿದಾಗ, ಶ್ರೀನಿವಾಸ ರಾಮಾನುಜನ್, ಓರಿಗಾಮಿ, ಫನ್ ಅಂಡ್ ಮ್ಯಾಥಮೆಟಿಕ್ಸ್, ಗೆಲಿಲಿಯೋ, ಶ್ರೀನಿವಾಸ ರಾಮಾನುಜನ್ ಸೇರಿದಂತೆ 22ಕ್ಕೂ ಹೆಚ್ಚು ಕೃತಿಗಳನ್ನು ಅವರು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT