ಭಾನುವಾರ, ಏಪ್ರಿಲ್ 18, 2021
24 °C

18,328 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾರ್ಚ್ 14 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 11ನೇ ಘಟಿಕೋತ್ಸವದಲ್ಲಿ ಒಟ್ಟು 18,328 ಅಭ್ಯರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ.  ನಗರದ ಕಲಾಮಂದಿರದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಲಹಾ ಮಂಡಳಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ.ನರೇಂದ್ರ ಜಾಧವ್ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ಹಂಸ್‌ರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ, ಯೋಜನೆ  ಮತ್ತು ಸಾಂಖ್ಯಿಕ ಸಚಿವ ಡಾ.ವಿ.ಎಸ್.ಆಚಾರ್ಯ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ತಿಳಿಸಿದರು.ಈ ಬಾರಿ ಐವರು ಗಣ್ಣರಿಗೆ ಡಾಕ್ಟರೇಟ್, 21 ಅಭ್ಯರ್ಥಿಗಳಿಗೆ ಪಿಚ್‌ಡಿ (ಪುರುಷರು-18, ಮಹಿಳೆಯರು-3), ಹಾಗೂ 18,328 ಅಭ್ಯರ್ಥಿಗಳು (ಪುರುಷರು-8541, ಮಹಿಳೆಯರು-9787) ವಿವಿಧ ಪದವಿಗಳನ್ನು ಪಡೆಯಲಿದ್ದಾರೆ. ಮಾನವಿಕ ವಿಷಯದಲ್ಲಿ-6811 ಅಭ್ಯರ್ಥಿಗಳು, ಸಮಾಜ ವಿಜ್ಞಾನ -5371, ವಾಣಿಜ್ಯ ಮತ್ತು ನಿರ್ವಹಣಶಾಸ್ತ್ರ -2304, ಶಿಕ್ಷಣ ಶಾಸ್ತ್ರ -1873, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ-1969 ಮಂದಿ ಪದವಿ ಪಡೆಯಲಿದ್ದಾರೆ.  ಜೊತೆಗೆ 39 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 22 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪ್ರದಾನ ಮಾಡಲಾಗುವುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ ಎಂದು ಹೇಳಿದರು.ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಆರಂಭಿಸಿರುವ ಕೋರ್ಸ್‌ಗಳಿಗೆ ಸೆಮಿಸ್ಟರ್ ಪದ್ಧತಿ ಅಳವಡಿಸಲಾಗಿದ್ದು, ಹಂತ ಹಂತವಾಗಿ ಇತರೆ ವಿಷಯಗಳಲ್ಲೂ ಸೆಮಿಸ್ಟರ್ ಪದ್ಧತಿ ಜಾರಿಗೆ ತರಲಾಗುವುದು. ಮುಕ್ತ ವಿವಿ ಪಠ್ಯದ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೇಯೇ ಇಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ವಿಜ್ಞಾನ ಭವನ: ರಾಜ್ಯ ಸರ್ಕಾರವು ಮುಕ್ತ ವಿಶ್ವವಿದ್ಯಾನಿಲಯಕ್ಕೆ 15 ಎಕರೆ ಜಾಗ ನೀಡಿರುವುದು ಸಂತಸವಾಗಿದೆ. ಒಟ್ಟು  30 ಎಕರೆ ಜಾಗದಲ್ಲಿ ಮುಕ್ತ ವಿವಿ ಸುಸಜ್ಜಿತ ಕ್ಯಾಂಪಸ್ ನಿರ್ಮಾಣವಾಗಲಿದೆ.ಕ್ಯಾಂಪಸ್ ಆವರಣದಲ್ಲಿರುವ  15 ಎಕರೆ ಜಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇನ್ನೂ 20 ಎಕರೆ ಜಾಗವನ್ನು  ಬೇರೆಡೆ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ. ಮಂಡಕಳ್ಳಿ ಬಳಿ ಇರುವ ವಿವಿಯ 10 ಎಕರೆ ಜಾಗದಲ್ಲಿ  ವಿಜ್ಞಾನ ಭವನ ನಿರ್ಮಿಸುವ ಉದ್ದೇಶ ಇದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಸೇರಿದಂತೆ  ವಿವಿಧ ವಿಷಯಗಳಿಗೆ  ಬೇಕಾಗಿರುವ ಪ್ರಯೋಗಾಲಯ ಹಾಗೂ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ಕುಲಸಚಿವ ಕೆ.ಆರ್.ಜಯಪ್ರಕಾಶ ರಾವ್ ಇದ್ದರು.ಆಶ್ರಮ ಸೇರುವಂತೆ ಮಾಡಬೇಡಿ: ರಂಗಪ್ಪ

ಮೈಸೂರು: ‘ಆಶ್ರಮ ಸೇರುವಂತೆ ಮಾಡಬೇಡಿ. ವಿಜ್ಞಾನ ಕ್ಷೇತ್ರದಲ್ಲಿ ಮಾಡಬೇಕಾಗಿರುವ ಕೆಲಸಗಳು ಸಾಕಷ್ಟಿವೆ’-ಹೀಗೆ ಹೇಳಿದವರು ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ. ಕೃತಿಚೌರ್ಯಕ್ಕೆ ಸಂಬಂಧಿಸಿದಂತೆ ಪ್ರಕಟ ಗೊಂಡಿರುವ ವರದಿಗೆ ಪ್ರತಿಕ್ರಿಯೆ ನೀಡಿದ ಅವರು, ‘ತಪ್ಪು  ಮಾಡಿದರೆ ಯಾವಾಗ ಬೇಕಾದರೂ ಶಿಕ್ಷ ನೀಡಲಿ. ಸಂಶೋಧನಾ ವಿದ್ಯಾರ್ಥಿಗಳು ನೀಡಿದ್ದ ಲೇಖನವನ್ನು  ವಾಪಸ್ ಪಡೆದಿರುವುದರಿಂದ ಲೇಖನ ಪ್ರಕಟಗೊಂಡೇ ಇಲ್ಲ. ಕೃತಿಚೌರ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎರಡು ವರ್ಷಗಳ ಹಿಂದೆ ನಡೆದಿದ್ದನ್ನು ಈಗ ಪ್ರಸ್ತಾಪಿಸಿ ಬೇಸರ ಮಾಡಿದ್ದಾರೆ.ನಾನು ಹೇಡಿಯಲ್ಲ. 350 ಸಂಶೋಧನಾ ಬರಹಗಳು ಪ್ರಕಟಗೊಂಡಿವೆ. ಕೃತಿ ಚೌರ್ಯ ಮಾಡುವ ಅಗತ್ಯವೂ ಇಲ್ಲ. ಕೆಲಸ ಮಾಡುವ ಆಸೆ ಇನ್ನೂ ಇದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.