ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.95 ಲಕ್ಷ ಜನರಿಗೆ ವಿಮಾ ರಕ್ಷಣೆ: ಲಾಡ್

Last Updated 4 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ಧಾರವಾಡ: `ಎಸ್.ಲಾಡ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಲಘಟಗಿ ಕ್ಷೇತ್ರದ 1.95 ಲಕ್ಷಕ್ಕೂ ಅಧಿಕ ಜನರಿಗೆ ವಿಮಾ ರಕ್ಷಣೆ ನೀಡಲಾಗಿದ್ದು, ಈ ಸಂಬಂಧ ರೂ 37 ಲಕ್ಷ ವಿಮೆಯನ್ನು ನ್ಯಾಷನಲ್ ಇನ್ಸೂರೆನ್ಸ್ ವಿಮಾ ಕಂಪೆನಿಗೆ ಪಾವತಿಸಲಾಗಿದೆ~ ಎಂದು ಟ್ರಸ್ಟ್‌ನ ಮುಖ್ಯಸ್ಥ ಹಾಗೂ ಕಲಘಟಗಿ ಶಾಸಕ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಜುಲೈನಲ್ಲಿ ಕಲಘಟಗಿ-ಹಳಿಯಾಳ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ 7 ಜನರು ಮೃತಪಟ್ಟಿದ್ದರು. ಇಂಥ ಹುದೇ ಅಪಘಾತ ಭವಿಷ್ಯದಲ್ಲಿ ಸಂಭವಿಸಿದರೂ ಅವರ ಅವಲಂಬಿತರಿಗೆ ವಿಮಾ ಹಣ ದೊರೆಯಲಿ ಎಂಬ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದೆ. ಇದರಲ್ಲಿ 82,496 ಪುರುಷರು, 72,473 ಮಹಿಳೆಯರು ಹಾಗೂ 40,717 ವಿದ್ಯಾರ್ಥಿಗಳಿಗೆ ವಿಮೆ ಮಾಡಿಸಲಾಗಿದೆ.

ವಿಮಾ ಮೊತ್ತವು 50 ಸಾವಿರದಿಂದ 1.50 ಲಕ್ಷದವರೆಗೆ ಇದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಈ ಹಿಂದೆಯೂ ಬೋರ್‌ವೆಲ್ ಕೊರೆಸುವುದು, ಸಾಮೂಹಿಕ ವಿವಾಹ ಮಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೂ ಸಹ ಆ ಯೋಜನೆಯ ಭಾಗವಷ್ಟೇ~ ಎಂದರು.

ಕಲಘಟಗಿಯಿಂದಲೇ ಸ್ಪರ್ಧಿಸುವೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಲಾಡ್ ಹೇಳಿದರು.

ಬೇಸರ ತರಿಸಿದ ರಾಜಕೀಯ: ಟ್ರಸ್ಟ್‌ನಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ತೋರುವ ಆಸಕ್ತಿ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿ ಸುವಲ್ಲಿ ವಹಿಸುತ್ತಿಲ್ಲ ಎಂಬ ಮಾಧ್ಯಮ ಪ್ರತಿನಿ ಧಿಗಳ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, `ರಾಜಕೀಯದಲ್ಲಿ ಒಂದು ವ್ಯವಸ್ಥೆ ಇದೆ. ನಾವೆಷ್ಟೇ ಪ್ರಯತ್ನಪಟ್ಟರೂ ಆ ಕೆಲಸ ಆಗುವುದಿಲ್ಲ.
ಮುಖ್ಯಮಂತ್ರಿಯಾಗಿ ಶೆಟ್ಟರ ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಅವರ ಕಚೇರಿಗೆ ಹೋಗಿ ಜಿಲ್ಲೆಗೆ 400 ಕೋಟಿ ರೂಪಾಯಿ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದೆ.
 
ಆದರೆ ಅದಕ್ಕೆ ಇನ್ನೂ ಸ್ಪಂದನೆ ದೊರೆತಿಲ್ಲ. ಶಾಸಕನಾಗಿ ಐದು ವರ್ಷ ಕಳೆಯುತ್ತಾ ಬಂದರೂ ಕೇವಲ ನಾಲ್ಕು ಕೋಟಿಯಷ್ಟೇ ಶಾಸಕರ ನಿಧಿ ಬಿಡುಗಡೆಯಾಗಿದೆ. ಇನ್ನೂ ಕೋಟಿ ರೂಪಾಯಿ ಬಿಡುಗಡೆಯೇ ಆಗಿಲ್ಲ. ಇದರಿಂದ ರಾಜಕೀಯವೇ ಬೇಸರವಾಗಿದೆ~ ಎಂದರು.

ಹಾಗಿದ್ದರೆ ರಾಜಕೀಯ ತ್ಯಜಿಸುತ್ತೀರಾ? ಎಂಬ ಪ್ರಶ್ನೆಗೆ, `ರಾಜಕೀಯ ಬೇಸರವಾಗಿದೆ ಎಂದ ಮಾತ್ರಕ್ಕೆ ಅದನ್ನು ಬಿಡಬೇಕು ಎಂದೇನಿಲ್ಲ. ಕೆಲ ವ್ಯವಸ್ಥೆಯಿಂದ ಬೇಸರವಾಗಿದೆಯಷ್ಟೇ~ ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ ವಿರುದ್ಧ ವಾಗ್ದಾಳಿ
 ಅಳ್ನಾವರ:
ಹತ್ತು ಹಲವು ಹಗರಣಗಳಲ್ಲಿ ಸಿಲುಕಿರುವ ರಾಜ್ಯ ಬಿಜೆಪಿ  ಸರಕಾರ ಅಭಿವೃದ್ದಿ ವಿಷಯದಲ್ಲಿ ಕೇಂದ್ರದ ಮೇಲೆ ಅನಗತ್ಯ ಗೊಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಸಂತೋಷ ಲಾಡ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯ ಸರಕಾರ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳದೆ ಕೇಂದ್ರದ ಮೇಲೆ ಅನಗತ್ಯ ಗೊಬೆ ಕೂರಿಸುವ ಕೆಲಸ ಮಾಡುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. 

 ಕೇಂದ್ರದ ಯುಪಿಎ  ಸರಕಾರ ಮುಖ್ಯವಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ತುರ್ತು ಆರೋಗ್ಯ ಸೇವೆ ನೀಡಲು 108 ಸೇವೆ, ಮಾಹಿತಿ ಹಕ್ಕು ಕಾಯ್ದೆ, ಕಡ್ಡಾಯ ಶಿಕ್ಷಣ, ಆರೋಗ್ಯ ಭದ್ರತೆ ಸೇರಿದಂತೆ ಹಲಾವರು ಜನಪರ ಕಾರ್ಯಗಳನ್ನು ಜಾರಿಗೊಳಿಸಿದೆ ಎಂದು ಕೇಂದ್ರ ಸರಕಾರದ ಆಭಿವೃದ್ಧಿ ಕಾರ್ಯ  ಪಟ್ಟಿ ಮುಂದಿಟ್ಟರು. 

 ರಾಜ್ಯ ಬಿಜೆಪಿ ಸರಕಾರ ಜನರ ಕಣ್ಣಿಗೆ ಮಣ್ಣು ಎರಚಿ ದಾರಿ ತಪ್ಪಿಸುವ ಮತ್ತು ಕೇವಲ ಪ್ರಚಾರ ಗಿಟ್ಟಿಸಲು ಕೇಂದ್ರ ಸರಕಾರದ ಮೇಲೆ ಆರೋಪ ಮಾಡುತ್ತಿದೆ ಎಂದು ದೂರಿದರು.  ಬಿಜೆಪಿ  ಸರಕಾರ ನೀಡಿದ ಪ್ರಣಾಳಿಕೆಯಲ್ಲಿ ಯಾವ ಕೆಲಸವು ಆಗಿಲ್ಲ. ಬಡವ, ರೈತ, ಯುವಕರ ಬಗ್ಗೆ ಕಾಳಜಿ ಇರದ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಜನತೆಯೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಮುಂಬರುವ ದಿನಗಳಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ಕೊಡಲು ಪ್ರಯತ್ನಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ಕಲಘಟಗಿ ಕೇತ್ರವನ್ನು ಅತಿ ಹಿಂದುಳಿದ ತಾಲ್ಲೂಕು ಎಂದು ನಂಜುಂಡಪ್ಪ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದರೂ ರಾಜ್ಯ ಸರಕಾರ ಈ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದೆ  ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಿತ್ರಾ ಮಂಗಜಿ, ಡಿ.ಬಿ. ಪಾಟೀಲ, ನಿಂಗಪ್ಪ ಬೇಕ್ವಾಡಕರ, ಎಂ. ಎಂ .ತೇಗೂರ, ಶಶಿಧರ ಇನಾಮದಾರ ಮುಂತಾದವರು  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT