ಶನಿವಾರ, ಜನವರಿ 25, 2020
16 °C

2ಜಿ ಹಗರಣ: ಹೈಕೋರ್ಟ್‌ನಿಂದ ಸಿಬಿಐಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದನ್ನು ಪ್ರಶ್ನಿಸಿ ಡಿಬಿ ರಿಯಾಲ್ಟಿಯ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಗೊಯೆಂಕಾ ಸಲ್ಲಿಸಿರುವ ಅರ್ಜಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಸಿಬಿಐಗೆ ಮಂಗಳವಾರ ಸೂಚಿಸಿದೆ.ನ್ಯಾಯಮೂರ್ತಿ ಎಂ.ಎಲ್. ಮೆಹ್ತಾ ಈ ಆದೇಶ ಹೊರಡಿಸಿದ್ದಾರೆ.2 ಜಿ ಹಗರಣದಲ್ಲಿ ಶಾಮೀಲಾಗಿರುವ ಆರೋಪದ ಮೇರೆಗೆ ಗೊಯೆಂಕಾ ಅವರನ್ನು 2011ರ ಏಪ್ರಿಲ್ 20ರಂದು ಬಂಧಿಸಲಾಗಿತ್ತು. 2011ರ ನವೆಂಬರ್ 23ರಂದು ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಪ್ರಕರಣದ ಸಂಬಂಧದಲ್ಲಿ ಎಲ್ಲ 17 ಆರೋಪಿಗಳ ವಿರುದ್ಧ ದೋಷಾರೋಪ ಸಿದ್ಧಪಡಿಸಿ ಕಳೆದ ಅಕ್ಟೋಬರ್ 22ರಂದು ವಿಚಾರಣಾ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹತ್ತು ಜನರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇವರಲ್ಲಿ ವಿನೋದ್ ಗೊಯೆಂಕಾ ಸೇರಿದಂತೆ ನಿವೃತ್ತ ಟೆಲಿಕಾಂ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ, ರಿಲಯನ್ಸ್ ಎಡಿಎಜಿ ಅಧಿಕಾರಿ, ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಶಿ, ಹಿರಿಯ ಉಪಾಧ್ಯಕ್ಷ ಹರಿ ನಾಯರ್ ಮತ್ತು ಸಮೂಹದ ಅಧ್ಯಕ್ಷ  ಸುರೇಂದ್ರ ಪಿಪಾರ ಮತ್ತು ಯುನಿಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ ಚಂದ್ರ  ಸೇರಿದ್ದಾರೆ. ಇವರಲ್ಲದೇ ಟೆಲಿಕಾಂ ಸಂಸ್ಥೆಗಳು, ರಿಲಯನ್ಸ್ ಟೆಲಿಕಾಂ ಲಿ. ಮತ್ತು ಯೂನಿಟೆಕ್ ಕೂಡ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಕದ ತಟ್ಟಿವೆ.ಒಳಸಂಚು, ಸಂಘಟಿತ ಅಪರಾಧ, ವಂಚನೆ ಮತ್ತು ಅಧಿಕಾರದ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಎಲ್ಲ 17 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಸಿದ್ಧಪಡಿಸಿದ್ದರು.

ಪ್ರತಿಕ್ರಿಯಿಸಿ (+)